CONNECT WITH US  

ಗೆಲುವೇ ಕನಸಾಗಿದ್ದ ರಾಜೇಶ್ರಿಗೆ ಅಧ್ಯಕ್ಷ ಪಟ್ಟ!

ಆಳಂದ: ಪತ್ನಿ ಸೋಲು ನಿಶ್ಚಿತ ಎಂದು ನಿಶ್ಚಯಿಸಿದ್ದ ಪತಿ ಫಲಿತಾಂಶ ದಿನ ಮಲಗೇ ಇದ್ದ, ಅದೃಷ್ಟಾವಶಾತ್‌ ಪತ್ನಿ ಗೆದ್ದೇ ಬಿಟ್ಟಿದ್ದಳು. ಈಗ ಭಾಗ್ಯದ ಬಾಗಿಲು ಮತ್ತಷ್ಟು ತೆರೆದಿದ್ದು ಮೀಸಲಾತಿ ಪ್ರಕಾರ ಪುರಸಭೆ ಅಧ್ಯಕ್ಷ ಸ್ಥಾನವೂ ಒಲಿಯುವ ಸಂಭವ ಬಂದಿದೆ!

ವಾರ್ಡ್‌-6ರಲ್ಲಿನ ಅಭ್ಯರ್ಥಿಯಾಗಿದ್ದ ರಾಜೇಶ್ರೀ ಶ್ರೀಶೈಲ ಖಜೂರಿ ಎನ್ನುವರು ಬಡತನದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಇವರು ಪುರಸಭೆಯಲ್ಲಿ ಬಹುಮತ ಇರುವ ಬಿಜೆಪಿಯ ಬಿಸಿಬಿ ಮೀಸಲುವುಳ್ಳ ಏಕೈಕ ಮಹಿಳೆ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅನಾಯಾಸವಾಗಿ ರಾಜೇಶ್ರೀ ಅವರಿಗೆ ಅಧಿಕಾರ ಒಲಿದು ಬಂದಿದೆ. ಈ ಸಂಗತಿ ಇವರ ಪತಿ ಶ್ರೀಶೈಲ ಅವರಲ್ಲಿ ಹುಮ್ಮಸ್ಸು ಮೂಡಿಸಿದ್ದು, ಪತ್ನಿಯ ಕಾರ್ಯಕ್ಕೆ ಬೆಂಬಲ ನೀಡಲು ಸಿದ್ಧರಾಗಿದ್ದಾರೆ.

ಫಲಿತಾಂಶ ಪ್ರಕಟಗೊಳ್ಳುವ ದಿನ ಕೇಂದ್ರಕ್ಕೆ ಹೋಗಬೇಕೆಂದು ತಯಾರಾದಾಗ ಮನೆ ಎದುರು ಇನ್ನೊಂದು ವಾರ್ಡ್‌ ಸದಸ್ಯರ ಬೆಂಬಲಿಗರ ಗುಂಪೊಂದು ಘೋಷಣೆ ಕೂಗುತ್ತಾ ಸಾಗಿತ್ತು. ಇದನ್ನು ಕೇಳಿದ ರಾಜೇಶ್ರೀ ಪತಿ ಶ್ರೀಶೈಲ
ನಮಗೆ ಸೋಲಾಯಿತಲ್ಲ ಎಂದು ಅಂದುಕೊಂಡು ಮತ್ತೆ ಮಲಗಿದ್ದರು.

ಇತ್ತ ಫಲಿತಾಂಶ ಪ್ರಕಟಗೊಂಡ ನಂತರ ಅಭಿಮಾನಿಗಳು ಹಾರ ಹಿಡಿದು ಮನೆಗೆ ಬಂದು ವಿಜಯೋತ್ಸವ ಆಚರಿಸದಾಗಲೇ ತಿಳಿದಿತ್ತು ಪತ್ನಿಯೂ ಗೆದ್ದಿದ್ದಾಳೆ ಎಂದು. ಪ್ರತಿಪಕ್ಷ ಕಾಂಗ್ರೆಸ್‌ನಲ್ಲೂ ಬಿಸಿಬಿ ಮಹಿಳಾ ಸದಸ್ಯೆಯೊಬ್ಬರು ಆಯ್ಕೆಯಾಗಿದ್ದಾರೆ. ಆದರೆ ಸದ್ಯಕ್ಕೆ ಜೆಡಿಎಸ್‌ ಬಲ ಪಡೆದರೂ ಒಂದು ಮತ ಆ ಪಕ್ಷಕ್ಕೆ ಕೊರತೆಯಾಗುತ್ತದೆ.

ಪುರಸಭೆಯ ಅಧ್ಯಕ್ಷ ಸ್ಥಾನ ಬಿಸಿಬಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆ ಎಂದು ಮೀಸಲಾತಿ ಪ್ರಕಟಗೊಂಡಿದೆ. ಸದ್ಯ ಮೇಲ್ನೊಟಕ್ಕೆ ಪೂರ್ಣ ಬಹುಮತ ವಿರುವ ಬಿಜೆಪಿಗೆ ಅಧ್ಯಕ್ಷ ಪಟ್ಟ ಒಲಿದುಬರಲಿದೆ. ಹೀಗಾದಲ್ಲಿ ವಾರ್ಡ್‌-6ರಲ್ಲಿ
ಆಯ್ಕೆಯಾಗಿರುವ ಸದಸ್ಯೆ ರಾಜೆಶ್ರೀ ಶ್ರೀಶೈಲ ಖಜೂರಿ ಅವರು ಏಕೈಕ ಬಿಸಿಬಿ ಮಹಿಳೆಯಾಗಿದ್ದಾರೆ. ಹೀಗಾಗಿ ರಾಜೇಶ್ರೀ ಅವರಿಗೆ ಅಧ್ಯಕ್ಷ ಪಟ್ಟ ಅನಾಯಸವಾಗಿ ಒಲಿದು ಬರುವ ಎಲ್ಲ ಸಾಧ್ಯತೆಗಳಿವೆ.

ಈ ಮಧ್ಯ ಕುದುರೆ ವ್ಯಾಪಾರ ನಡೆದರೆ ಕಾಂಗ್ರೆಸ್‌ ಪಕ್ಷದಲ್ಲೂ ಸಹ ಬಿಸಿಬಿ ಸದಸ್ಯೆ ವಾರ್ಡ್‌-10ರ ಸುಜಾತಾ ಸಿದ್ರಾಮಪ್ಪ ಹತ್ತರಕಿ ಗೆಲವು ಸಾಧಿಸಿದ್ದಾರೆ. ಹೀಗಾಗಿ ಕೊನೆಗಳಿಗೆಯಲ್ಲಿ ಅಧ್ಯಕ್ಷ ಪಟ್ಟ ಯಾರ ಪಾಲಾಗುತ್ತದೆ
ಎನ್ನುವುದನ್ನು ಕಾಯ್ದು ನೋಡಬೇಕಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎ ಮಹಿಳಾ ಸ್ಥಾನವೇ ಇರುವುದರಿಂದ ಬಿಜೆಪಿಯಿಂದ ಮೂವರು ಮಹಿಳೆಯರು ಗೆಲವು ಸಾಧಿ ಸಿದ್ದರಿಂದ ಬಿಸಿಎ ವಾರ್ಡ್‌ 3ರಲ್ಲಿ ಪ್ರತಿಭಾ ಘನಾತೆ, ವಾರ್ಡ್‌-9ರಲ್ಲಿ ವಿಜಯಲಕ್ಷ್ಮೀ ಷಣ್ಮುಖ, ವಾರ್ಡ್‌-24ರಲ್ಲಿ
ಕನ್ಯಾಕುಮಾರಿ ಸಿದ್ದು ಪೂಜಾರಿ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಉಪಾಧ್ಯಕ್ಷ ಸ್ಥಾನ ಹಂಚಿಕೆಯಲ್ಲಿ ಶಾಸಕ ಸುಭಾಷ ಗುತ್ತೇದಾರ ಅವರು ಯಾರಿಗೆ ಉಪಾಧ್ಯಕ್ಷ ಹುದ್ದೆ ಕೊಟ್ಟರೆ ಹಿತವಾದಿತು ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಒಂದೊಮ್ಮೆ ಚುನಾವಣೆ ನಡೆದು ಸದಸ್ಯರ ನಡುವೆ ಕ್ರಾಸ್‌ ಮತವಾದರೆ ಲೆಕ್ಕಚಾರವೇ ಬುಡಮೇಲಾದರೂ ಆಶ್ಚರ್ಯಪಡಬೇಕಾಗಿಲ್ಲ.

ಪಡೆದ ಸ್ಥಾನಗಳು: ಪುರಸಭೆಯ 27 ಸ್ಥಾನಗಳಲ್ಲಿ ಕಾಂಗ್ರೆಸ್‌ 13, ಬಿಜೆಪಿ 13 ಹಾಗೂ ಜೆಡಿಎಸ್‌ ಒಂದು ಸ್ಥಾನ ಪಡೆದುಕೊಂಡು ಅಧಿಕಾರ ರಚನೆಗೆ ಕಸರತ್ತು ನಡೆಸಿವೆ. ಈಗಾಗಲೇ ಜೆಡಿಎಸ್‌ ಅಧ್ಯಕ್ಷ ಬಿ.ವಿ.ಚಕ್ರವರ್ತಿ ಅವರು ಅಂತಂತ್ರ ಇರುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆಯಾಗಲು ಹೈಕಮಾಂಡ್‌ ಆದೇಶ ನೀಡಿದೆ. ಹೀಗಾಗಿ ಇಲ್ಲಿನ ಪುರಸಭೆಯಲ್ಲಿ ಜೆಡಿಎಸ್‌ ಪಕ್ಷದ ಏಕೈಕ ಅಭ್ಯರ್ಥಿ ಕಾಂಗ್ರೆಸ್‌ಗೆ ಬೆಂಬಲಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ನ 13 ಸದಸ್ಯರ ಬಲಕ್ಕೆ ಜೆಡಿಎಸ್‌ನ ಒಬ್ಬರು ಸದಸ್ಯರು ಬೆಂಬಲಿಸಿದರೆ ಸಂಖ್ಯೆ 14ಕ್ಕೆ ಏರುತ್ತದೆ. ಈ ನಡೆ ಬಿಜೆಪಿಗೆ ಹಿನ್ನಡೆ ಮಾಡುವುದು. ಆದರೆ ಬಿಜೆಪಿ 13 ಸದಸ್ಯರ ಬಲಕ್ಕೆ ಶಾಸಕರು ಮತ್ತು ಸಂಸದರಿಬ್ಬರ ಎರಡು ಮತಗಳು ಸೇರಿ 15ಕ್ಕೆ ದಾಟುತ್ತಿರುವುದರಿಂದ ನೇರಾ ನೇರವಾಗಿ ಚುನಾವಣೆ ನಡೆದರೆ ಅಂದುಕೊಂಡಂತೆ ರಾಜೇಶ್ರೀ
ಅವರಿಗೆ ಅಧ್ಯಕ್ಷ ಸ್ಥಾನ ದಕ್ಕುವ ಸಾಧ್ಯತೆ ಇದೆ. 


Trending videos

Back to Top