CONNECT WITH US  

ಸಾಲ ಮನ್ನಾ ಪ್ರಕ್ರಿಯೆ ಆರಂಭ

ಕಲಬುರಗಿ: ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿದಂತೆ 30 ಸಾವಿರ ಕೋಟಿ ರೂ.ಗಳ ರೈತರ ಕೃಷಿ ಸಾಲ ಮನ್ನಾ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ರೈತರಿಗೆ ಲೇವಾದೇವಿದಾರರ ಕಾಟ ತಪ್ಪಿಸಲು ಋಣಮುಕ್ತ ಕಾಯ್ದೆಗೆ ಸರ್ಕಾರ ಅನುಮೋದನೆ ನೀಡಿದ್ದು, ಅಂಕಿತಕ್ಕಾಗಿ ರಾಷ್ಟ್ರಪತಿಗಳಿಗೆ ರವಾನಿಸಲಾಗಿದೆ. ಆದ್ದರಿಂದ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ತಿಳಿಸಿದರು.

ನಗರದ ಎಪಿಎಂಸಿ ಸಭಾಂಗಣದಲ್ಲಿ ಸಹಕಾರ ಇಲಾಖೆ ಮತ್ತು ಎಪಿಎಂಸಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ
ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ರೈತರ ಸಂಕಷ್ಟವನ್ನರಿತು ಹಿಂದಿನ ಸಿದ್ದರಾಮಯ್ಯ ಸರ್ಕಾರ 50 ಸಾವಿರ ರೂ.ಗಳ ಸಾಲ ಮನ್ನಾ ಮಾಡಿತ್ತು. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಒಂದು ಲಕ್ಷ ರೂ.ಗಳವರೆಗೆ ರೈತರ ಸಾಲ ಮನ್ನಾ ಮಾಡಿದೆ ಎಂದರು. 

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲ ಮನ್ನಾಕ್ಕೂ ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿದ್ದು, ಈಗಾಗಲೇ 30 ಸಾವಿರ ಕೋಟಿ ರೂ. ಗಳ ಸಾಲ ಮನ್ನಾ ಪ್ರಕ್ರಿಯೆ ಆರಂಭವಾಗಿದೆ. ಸಾಲ ವಸೂಲಿಗೆ ಸಂಬಂಧಿಸಿದಂತೆ ಬ್ಯಾಂಕ್‌ ಅಧಿಕಾರಿಗಳು ರೈತರಿಗೆ ಅನಗತ್ಯ ತೊಂದರೆ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಲೇವಾದೇವಿದಾರರ ಕೈಯಲ್ಲಿ ಸಿಲುಕಿದ್ದ ರೈತರ ಕಷ್ಟ ನೋಡಿ ಸರ್ಕಾರ ಋಣಮುಕ್ತ ಕಾಯ್ದೆ ಜಾರಿಗೆ ತರಲು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿದೆ. ಎರಡನೇ ಹಂತದಲ್ಲಿ ಪಿಎಲ್‌ಡಿ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಕಲಬುರಗಿ ಡಿಸಿಸಿ ಬ್ಯಾಂಕ್‌ನಡಿ ಕಳೆದ ಬಾರಿ 208 ಕೋಟಿ ರೂ. ಸಾಲ ಮನ್ನಾ ಆಗಿದ್ದರೆ, ಈ ಬಾರಿ 319 ಕೋಟಿ ರೂ. ಆಗಲಿದೆ. 1,41,035 ರೈತರಿಗೆ ಇದರ ಲಾಭ ಸಿಗಲಿದೆ. ಈ
ಬ್ಯಾಂಕಿನ ವ್ಯಾಪ್ತಿಯಲ್ಲಿ 4.71 ಲಕ್ಷ ರೈತರಿದ್ದು, ಶೇ.60ಕ್ಕೂ ಹೆಚ್ಚು ರೈತರು ಸಾಲದ ವ್ಯಾಪ್ತಿಯಲ್ಲಿಲ್ಲ. ಹೀಗಾಗಿ ಸಹಕಾರ ಸಾಲದ ಪ್ರಮಾಣ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕಿದೆ. ಮುಂದಿನ ಒಂದು ವರ್ಷದಲ್ಲಿ 15 ಲಕ್ಷ ರೈತರನ್ನು ಸಾಲದ ವ್ಯಾಪ್ತಿಗೆ ತರುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.

ಹೆಸರು ಕಾಳು ಖರೀದಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 300 ಕೇಂದ್ರ ಪ್ರಾರಂಭಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ 30 ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ಹೆಚ್ಚಿನ ಕೇಂದ್ರ ತೆರೆಯಲು ಮಂಜೂರಾತಿ ನೀಡಲು ಕೇಂದ್ರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದರು.

ಕಲಬುರಗಿ, ಬೀದರ್‌ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘದಡಿ ಒಟ್ಟು 727 ನೋಂದಾಯಿತ ಹಾಲು ಉತ್ಪಾದಕರ ಸಂಘಗಳಿದ್ದು, ಈ ಪೈಕಿ 494 ಸಂಘಗಳು ಕಾರ್ಯಾಚರಣೆಯಲ್ಲಿವೆ. ಇವುಗಳಿಂದ ಪ್ರತಿದಿನ 70,081 ಲೀಟರ್‌ ಹಾಲು ಸಂಗ್ರಹಣೆ ಮಾಡಲಾಗುತ್ತಿದೆ. ಕ್ಷೀರಧಾರೆ ಯೋಜನೆಯಡಿ ಸರ್ಕಾರದಿಂದ ಪ್ರತಿ ಲೀಟರ ಹಾಲಿಗೆ 5 ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಕಲಬುರಗಿ ವಿಭಾಗದಲ್ಲಿ ಹಾಲು ಶೇಖರಣಾ ಘಟಕ ನಿರ್ಮಿಸಲು ಸೂಕ್ತವಾದ ನಿವೇಶನ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ, ಎಪಿಎಂಸಿ ಕಾರ್ಯದರ್ಶಿ ಮಂಜುಳಾ, ಸಹಕಾರ ಸಂಘಗಳ ಉಪ
ನಿಬಂಧಕ ಗಿರೆಡ್ಡಿ, ಸಹಾಯಕ ನಿಬಂಧಕ ವಿಶ್ವನಾಥ ಮಲಕೂಡೆ, ಜೆಡಿಎಸ್‌ ಮುಖಂಡ ಕೇದಾರಲಿಂಗಯ್ಯ
ಹಿರೇಮಠ ಮತ್ತಿತರರು ಇದ್ದರು. 


Trending videos

Back to Top