CONNECT WITH US  

ಭಾರತ ಬಂದ್‌ಗೆ ವ್ಯಾಪಕ ಬೆಂಬಲ

ಕಲಬುರಗಿ: ನಿರಂತರವಾಗಿ ಏರಿಕೆಯಾಗುತ್ತಿರುವ ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಸೇರಿದಂತೆ ಇತರ ವಿಪ್ಷಕಗಳು ಹಾಗೂ ವಿವಿಧ ಸಂಘಟನೆಗಳು ಸೆ. 10ರಂದು ಕರೆ ನೀಡಲಾಗಿರುವ "ಭಾರತ ಬಂದ್‌'ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಸೂಕ್ತ ಬಂದೋಬಸ್ತ್ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

ಭಾರತ ಬಂದ್‌ ಅಂಗವಾಗಿ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿ
ಆದೇಶ ಹೊರಡಿಸಿದ್ದಾರೆ. ಮತ್ತೂಂದೆಡೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ ಬಂದ್‌ಗೆ ವ್ಯಾಪಕ
ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಮನವಿ: ಸಿಪಿಐ, ಸಿಪಿಎಂ ಸೇರಿದಂತೆ ಇತರ ಎಡಪಕ್ಷಗಳು ಬಂದ್‌ ಗೆ ಬೆಂಬಲಿಸಿ-ತೈಲ ಬೆಲೆ ಏರಿಕೆ ವಿರೋಧಿಸಿ ಸೆ. 10ರಂದು ಬೈಕ್‌ ರ್ಯಾಲಿ ನಡೆಸಲು ಮುಂದಾಗಿವೆ. ಅದರ ಅಂಗವಾಗಿ ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮಾರುತಿ ಮಾನ್ಪಡೆ ರವಿವಾರ ನಗರದ ವಿವಿಧೆಡೆ ಸಂಚರಿಸಿ ಆಟೋ ಚಾಲಕರಿಗೆ, ವ್ಯಾಪಾರಿಗಳಿಗೆ ಕರ ಪತ್ರ ಹಂಚಿ ಸೋಮವಾರದ ಬಂದ್‌ಗೆ ಬೆಂಬಲಿಸುವಂತೆ ಕೋರಿದರು. ಬಂದ್‌ಗೆ ಬೆಂಬಲಿಸುವ ಮುಖಾಂತರ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕೆಂದು ಸಾರ್ವಜನಿಕರಲ್ಲೂ ಮನವಿ ಮಾಡಿದರು.

ಜೆಡಿಎಸ್‌ ಬೆಂಬಲ: ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯಾದ ಡೀಸೆಲ್‌, ಪೆಟ್ರೋಲ್‌ ಹಾಗೂ ಅಡುಗೆ ಅನೀಲ
ಬೆಲೆ ಏರಿಕೆಯಿಂದ ಜನ ಸಾಮಾನ್ಯರು, ಬಡವರು, ರೈತ ಕಾರ್ಮಿಕರ ಬದುಕಿನ ಮೇಲೆ ಬರೆ ಎಳೆಯಲು ಬಿಜೆಪಿ ಹೊರಟಿದೆ ಎಂದು ಜಿಲ್ಲಾ ಜೆಡಿಎಸ್‌ ಪ್ರತಿಕ್ರಿಯಿಸಿದೆ. ಬಂದ್‌ ಗೆ ಬೆಂಬಲಿಸಿ ಮುಷ್ಕರದಲ್ಲಿ ಜೆಡಿಎಸ್‌ ಪಾಲ್ಗೊಳ್ಳುತ್ತಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್‌ ಹಾಗೂ ಮಹಾಪ್ರಧಾನ ಕಾರ್ಯದರ್ಶಿ ದೇವೇಗೌಡ ತೆಲ್ಲೂರ ತಿಳಿಸಿದ್ದಾರೆ.

ವಿವಿ ಸಂಸ್ಥಾಪನಾ ದಿನಾಚರಣೆ ಮುಂದೂಡಿಕೆ: ಗುಲ್ಬರ್ಗ ವಿಶ್ವವಿದ್ಯಾಲಯದ 39ನೇ ಸಂಸ್ಥಾಪನಾ ದಿನಾಚರಣೆಯನ್ನು ಸೆ. 10ರಂದು ಹಮ್ಮಿಕೊಳ್ಳಲಾಗಿತ್ತು. ಅನಿವಾರ್ಯ ಕಾರಣಗಳಿಂದ ಮುಂದೂಡಿ ಸೆ. 24ರಂದು ಬೆಳಗ್ಗೆ 11ಕ್ಕೆ ವಿವಿಯ ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ವಿವಿ ಕುಲಸಚಿವರು ತಿಳಿಸಿದ್ದಾರೆ.

ಬಸ್‌ ಸಂಚಾರ ಬಹುತೇಕ ಹಿಂದಕ್ಕೆ: ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳಗ್ಗೆಯಿಂದ
ಮಧ್ಯಾಹ್ನವರೆಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಸಂಚಾರ ಸೇವೆ ಹಿಂದಕ್ಕೆ ಪಡೆಯಲು ಉದ್ದೇಶಿಸಿದೆ ಎಂದು ಸಂಸ್ಥೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ರವಿವಾರ ರಾತ್ರಿ ಹಾಗೂ ಸೋಮವಾರ ಬೆಳಗ್ಗೆ ಬಸ್‌ಗಳು ಹೊರಡಲಿವೆ. ಬೆಳಗ್ಗೆ ನಂತರ ನಗರಕ್ಕೆ ಬರುವ ಬಸ್‌ಗಳ ಸಂಚಾರವನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಬಿಗಿ ಭದ್ರತೆ; ಎರಡು ಸಾವಿರ ಪೊಲೀಸರ ನಿಯೋಜನೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಭಾರತ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ಕೈ ಗೊಳ್ಳಲಾಗಿದ್ದು, ಭದ್ರತೆಗೆ ಎರಡು
ಸಾವಿರ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ವಿವಿಧ ಸಂಘಟನೆಗಳು ಹಾಗೂ ಕೆಎಸ್‌ಆರ್‌ಟಿಸಿ ಬಂದ್‌ಗೆ ಬೆಂಬಲ ಸೂಚಿಸಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್‌ ಇಲಾಖೆಯಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ. ನಾಲ್ಕು ಕೆಎಸ್‌ಆರ್‌ಪಿ ತುಕುಡಿ, ಎರಡು ಸಾವಿರ ಪೊಲೀಸರು ಸೇರಿದಂತೆ ಹೋಮ್‌ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಶಾಂತಿಯುತ ಬಂದ್‌ ನಡೆಸಿದರೆ ಒಳ್ಳೆಯದು, ಒತ್ತಾಯಪೂರ್ವಕವಾಗಿ ಬಂದ್‌ ಮಾಡಿಸಲು
ಮುಂದಾದರೆ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಸ್‌ಪಿ ಎಚ್ಚರಿಕೆ ನೀಡಿದ್ದಾರೆ.

ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ವಿವಿಧ ಪಕ್ಷಗಳು ಹಾಗೂ ಸಂಘಟನೆಗಳು ಸೆಪ್ಟೆಂಬರ್‌ 10 ರಂದು ಸೋಮವಾರ ಕರೆ ನೀಡಿರುವ ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಒಂದು ದಿನದ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಹಾಗೂ ಸಿ.ಪಿ.ಐ.ಎಂ, ಸಿ..ಪಿಐ., ಎಸ್‌.ಯು.ಸಿ.ಐ., ಕೆ.ಎಸ್‌.ಆರ್‌.ಟಿ.ಸಿ. ಸ್ಟಾಫ್‌ ಮತ್ತು ವರ್ಕರ್ಸ್‌ ಫೆಡರೇಷನ್‌, ಎ.ಐ.ಟಿ.ಯು.ಸಿ., ಜೆ.ಡಿ.ಎಸ್‌ ಪಕ್ಷ, ದಲಿತ ಸಂಘಟನೆಗಳು, ಕಲಬುರ್ಗಿ ಜಿಲ್ಲಾ ಲಾರಿ ಮಾಲೀಕರ ಸಂಘ ಹಾಗೂ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಜಿಲ್ಲೆಯಾದ್ಯಂತ ಸೆಪ್ಟೆಂಬರ್‌ 10 ರಂದು ಬಂದ್‌ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ನೀಡಿರುವ ವರದಿಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯಾದ್ಯಂತ ನಾಳೆ ಆಚರಿಸುವ ಬಂದ್‌ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಕಲ್ಪಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ ಅವರಿಗೆ ತಿಳಿಸಲಾಗಿದೆ ಎಂದು ಡಿಸಿ ವಿವರಣೆ ನೀಡಿದ್ದಾರೆ.

ಲೋಕಸಭೆ ಚುನಾವಣೆ ದೃಷ್ಟಿಕೋನದ ಬಂದ್‌ ವಾಸ್ತವ ಅಂಶ ಅರಿಯದೇ ಸೆ. 10ರಂದು ಕಾಂಗ್ರೆಸ್‌ ಬೆಂಬಲದೊಂದಿಗೆ ಕರೆ ನೀಡಲಾಗಿರುವ ಭಾರತ ಬಂದ್‌ ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಕೋನ ಹಿನ್ನೆಲೆಯಲ್ಲಿ ನೀಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕ ಆರೋಪಿಸಿದೆ. ವಾಸ್ತವ ಅಂಶ ಅರಿಯದೇ ಜನರ ದಾರಿ ತಪ್ಪಿಸಲು ಬಂದ್‌ಗೆ ಮುಂದಾಗಲಾಗಿದೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಮುಳುಗುತ್ತಿರುವ ಕಾಂಗ್ರೆಸ್‌ ದೋಣಿಯನ್ನು ಹತ್ತಲು ಅರ್ಧ ಸತ್ಯ ಹೇಳುವ ಮೂಲಕ ಎಂದಿನಂತೆ ದೇಶದ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಸುಳ್ಳು ಹೇಳುವುದನ್ನು ಬಿಡಿ, ಸತ್ಯ ಇಲ್ಲಿದೆ ನೋಡಿ. ಜನರನ್ನು ದಾರಿ ತಪ್ಪಿಸಬೇಡಿ ಎಂಬ ಅಂಕಿ-ಅಂಶಗಳುಳ್ಳ ಹೇಳಿಕೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ನಗರಾಧ್ಯಕ್ಷರು ಹಾಗೂ ಶಾಸಕರಾಗಿರುವ ಬಿ.ಜಿ. ಪಾಟೀಲ ಬಿಡುಗಡೆ ಮಾಡಿದ್ದಾರೆ. 1947ರಿಂದ 2014ರ ತನಕ 67 ವರ್ಷದ ಸ್ವತಂತ್ರ ಭಾರತದ ಆಡಳಿತದಲ್ಲಿ 57 ವರ್ಷ ಆಡಳಿತದಲ್ಲಿದ್ದ ಕಾಂಗ್ರೆಸ್‌ ಪಕ್ಷ ತೈಲ ಕ್ಷೇತ್ರದಲ್ಲಿ ಭಾರತ ದೇಶವನ್ನು ಸ್ವಾವಲಂಬಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಇಂದು ಸಹ ದೇಶ ಶೇ. 82ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದು ದೇಶದ ಭವಿಷ್ಯದ ಬಗ್ಗೆ ಕಾಳಜಿ ಹಾಗೂ ದೂರದೃಷ್ಟಿ ಇಲ್ಲದಿರುವುದನ್ನು ನಿರೂಪಿಸುತ್ತದೆ. ಜಾಗತಿಕ ಮಟ್ಟದಲ್ಲಿ ಕಳೆದ 14 ತಿಂಗಳಲ್ಲಿ ತೈಲದ ಬೆಲೆ ಶೇ. 73ರಷ್ಟು ಏರಿಕೆ ಕಂಡರೂ ಭಾರತದಲ್ಲಿ ತೈಲದ ಬೆಲೆ ಕೇವಲ 29.58ರಷ್ಟು ಏರಿಕೆಯಾಗಿದೆ. ಇದು ಕೇಂದ್ರದ ಬಿಜೆಪಿ ಸಾಧನೆಯಾಗಿದೆ. ಮುಖ್ಯವಾಗಿ ಪ್ರತಿ ಲೀಟರ್‌ ಪೆಟ್ರೋಲ್‌ ನಿಂದ ಕೇಂದ್ರ ಸರ್ಕಾರಕ್ಕೆ 6.66 ದೊರೆಯಲಿದ್ದು, ರಾಜ್ಯ ಸರ್ಕಾರಕ್ಕೆ 25 ರೂ. ದೊರೆಯಲಿದೆ. ಪರಿಸ್ಥಿತಿ ಹೀಗಿರುವಾಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ? ತೆರಿಗೆಯನ್ನು ಯಾರು ಇಳಿಸಲು ಸಹಕರಿಸಬೇಕು? ರಾಜ್ಯ ಸರ್ಕಾರವೂ ಸಹಕರಿಸಬೇಕಲ್ಲವೇ? ಎಂದು ಹೇಳಿಕೆಯಲ್ಲಿ ವಿವರಣೆ ನೀಡಿದ್ದಾರೆ.

ಜಿ.ಪಂ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ ಜಿ.ಪಂ. ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ: ಸೆ. 10ರಂದು ನಿಗದಿಯಾಗಿದ್ದ ಕಲಬುರಗಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಚುನಾವಣೆಯನ್ನು ಭಾರತ ಬಂದ್‌ ಕರೆ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದೆ. ಜಿ.ಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆಗಾಗಿ ಸೆ. 10ರಂದು ಚುನಾವಣೆ ನಡೆಸಲು ವಾರದ ಹಿಂದೆಯೇ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಈಗ ಮುಂದೂಡಿ ಸೆಪ್ಟೆಂಬರ್‌ 18ರ ಮಂಗಳವಾರದಂದು ನಿಗದಿ ಮಾಡಲಾಗಿದೆ. ಚುನಾವಣೆ ನಡೆಸದೇ ಕಾಂಗ್ರೆಸ್‌ ಹಾಗೂ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಶನಿವಾರ ಎರಡು ಪಕ್ಷಗಳ ಮುಖಂಡರು ಸಭೆ ಸೇರಿ ನಿರ್ಧಾರ ಕೈಗೊಂಡಿದ್ದಾರೆ. ಎರಡು ಸ್ಥಾಯಿ ಸಮಿತಿಗೆ ಕಾಂಗ್ರೆಸ್‌ಗೆ ಹಾಗೂ ಆಡಳಿತರೂಢ ಬಿಜೆಪಿ ಒಂದು ಸ್ಥಾಯಿ ಸಮಿತಿ ಮಾತ್ರ ಪಡೆಯುವ ಕುರಿತಾಗಿ ಮಾತುಕತೆಯಾಗಿತ್ತು. ಚುನಾವಣೆ ಮಾಡುವ ಮೂಲಕ ಜೇನುಗೂಡಿಗೆ ಕಲ್ಲು ಹೊಡೆಯುವುದು ಬೇಡ ಎಂಬುದಾಗಿ ಉಭಯ ಪಕ್ಷಗಳು ನಾಯಕರು ಎಂದಿದ್ದಾರೆ ಎನ್ನಲಾಗಿದೆ.

ಬಂದ್‌ ಬೆಂಬಲಕ್ಕೆ ಮನವಿ
ಶಹಾಬಾದ: ತೈಲ ಬೆಲೆ ಏರಿಕೆ ನೀತಿ ಖಂಡಿಸಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಸೆ. 10ರಂದು ಶಹಾಬಾದ ಬಂದ್‌ಗೆ ಕರೆ ನೀಡಲಾಗಿದೆ. ಸೋಮವಾರ ನಗರದ ವ್ಯಾಪಾರಸ್ಥರಿಗೆ ಹಾಗೂ ಶಾಲಾ-ಕಾಲೇಜುಗಳಿಗೆ ತಿಳಿಸಿಲಾಗಿದ್ದು, ಬಂದ್‌ಗೆ ಬೆಂಬಲ್‌ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ| ರಶೀದ್‌ ಮರ್ಚಂಟ್‌ ತಿಳಿಸಿದ್ದಾರೆ. 

ದೇಶದ ಜನತೆ ಪರವಾಗಿ ಬಂದ್‌ಗೆ ಸಂಸದ ಖರ್ಗೆ ಕರೆ 
ಕಲಬುರಗಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಪ್ರತಿ ದಿನ ಏರಿಕೆ ಆಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಮೋದಿ ಸರ್ಕಾರ ಮುಂದಾಗುತ್ತಿಲ್ಲ. ತೈಲ ಬೆಲೆ ಹೆಚ್ಚಳದಿಂದಾಗಿ ಜನ ಸಮಾನ್ಯರ ಅವಶ್ಯಕ ವಸ್ತುಗಳ ಮೇಲೆ ದುಷ್ಪರಿಣಾಮ ಬೀರಿದ್ದರಿಂದ ದೇಶದ ಜನತೆ ಪರವಾಗಿ ಕಾಂಗ್ರೆಸ್‌ ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದೆ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಸೆ.1ರಂದು ಪಕ್ಷದ ವತಿಯಿಂದ ಕರೆ ಕೊಟ್ಟಿರುವ ಭಾರತ ಬಂದ್‌ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 120ರಿಂದ 140 ರೂ. ಆದರೂ ದೇಶದ ಜನತೆಗೆ ಆರ್ಥಿಕ ಹೊರೆ ಹಾಕದಂತೆ ಯುಪಿಎ ಸರ್ಕಾರ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 55ರಿಂದ 65 ರೂ. ಹಾಗೂ ಡೀಸೆಲ್‌ ದರ
40ರಿಂದ 45 ರೂ.ಗಳ ಗಡಿದಾಟದಂತೆ ನೋಡಿಕೊಂಡಿತ್ತು ಎಂದರು. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ
ಬೆಲೆ ಪ್ರತಿ ಬ್ಯಾರೆಲ್‌ಗೆ 80 ರೂ. ಇದೆ. ಆದರಂತೆ ಇಂದು ಪೆಟ್ರೋಲ್‌ ದರ ಕೇವಲ 40 ರೂ. ಹಾಗೂ ಡೀಸೆಲ್‌ ದರ 35 ರೂ. ಇಲ್ಲವೇ 36 ರೂ. ಇರಬೇಕಿತ್ತು. ಆದರೆ, ಇವತ್ತು ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 80 ರೂ. ಗೂ ಅಧಿಕ ಹಾಗೂ ಡೀಸೆಲ್‌ ಬೆಲೆ 70ಕ್ಕೂ ಹೆಚ್ಚಿದೆ. ಇದರಿಂದ ಸರಕು ಸಾಗಾಟ ದರ ಹೆಚ್ಚಾಗಿ ಜನಾವಶ್ಯಕ ವಸ್ತುಗಳ ಬೆಲೆ ಏರಿಕೆ ಆಗಿದ್ದು, ಇದು ನೇರವಾಗಿ ದೇಶದ ಜನ ಸಾಮಾನ್ಯರು, ರೈತರ ಮೇಲೆ ಪರಿಣಾಮ ಬೀರಿದೆ ಎಂದರು. 

ಮೋದಿ ಸರ್ಕಾರ ತೈಲದ ಮೇಲಿನ ಅಬಕಾರಿ ತೆರಿಗೆಯನ್ನು ಶೇ.214ರಷ್ಟು ಏರಿಕೆ ಮಾಡಿದ್ದು, ಇದರಿಂದ 11 ಲಕ್ಷ ಕೋಟಿ ರೂ.ಗಳ ಆದಾಯ ಸಂಗ್ರಹವಾಗಿದೆ. ಆದರೆ, ಹಣ ಎಲ್ಲಿಗೆ ಹೋಗಿದೆ? ಏನಾಗಿದೆ ಎಂಬುವುದು ಗೊತ್ತಿಲ್ಲ. ಹೋಗಲಿ ಶಿಕ್ಷಣ, ಸಮಾಜ ಕಲ್ಯಾಣ ಉದ್ಧಾರಕ್ಕಾದರೂ ಹಣವನ್ನು ಉಪಯೋಗಿಸಲಾಗಿದೆಯೇ? ಅದು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಂತಿಯುತ ಪ್ರತಿಭಟನೆ: ಇದು ದೇಶದ ಜನತೆಯ ಪರವಾದ ಪ್ರತಿಭಟನೆಯಾದ್ದರಿಂದ ಶಾಂತಿಯುತವಾಗಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3ಗಂಟೆವರೆಗೆ ಬಂದ್‌ ಆಚರಿಸಲಾಗುತ್ತಿದೆ. ಬಂದ್‌ ವೇಳೆ ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳವಂತಿಲ್ಲ ಎಂದು ಹೇಳಿದರು.

ಬಂದ್‌ಗೆ ಇತರ ಪ್ರತಿಪಕ್ಷಗಳು ಕೂಡ ಸಾಥ್‌ ನೀಡಲಿವೆ. ಈ ಸಂಬಂಧ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಸಿ, ಎಲ್ಲಾ ಪಕ್ಷಗಳ ಮುಖಂಡರಿಗೆ ಬೆಂಬಲ ಕೋರಲಾಗಿದೆ. ತೈಲ ಬೆಲೆ ಏರಿಕೆ ಬಗ್ಗೆ ದೇಶದ ಜನತೆಗೆ ಜಾಗೃತಿ ಮೂಡಿಸುವುದು ಕೂಡ ಪ್ರತಿಭಟನೆ ಉದ್ದೇಶ ಎಂದರು.

ಮೋದಿ ಮಾತಾಡಲ್ಲ: ಬಹಿರಂಗ ಸಭೆಗಳಲ್ಲಿ ದೊಡ್ಡ ದನಿಯಲ್ಲಿ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಾತೇ ಆಡುವುದಿಲ್ಲ ಎಂದ ಖರ್ಗೆ, ಸಂಸತ್‌ಗೆ ಸರಿಯಾಗಿ ಬರೆದ ಚಕ್ಕರ್‌ ಹಾಕುತ್ತಾರೆ. ಸಂಸತ್‌ ದರ್ಶನ ಮಾಡಲ್ಲ. ಸಂಸತ್‌ನೂ ಎದುರಿಸುವುದಿಲ್ಲ ಎಂದು ಆರೋಪಿಸಿದರು.

ಹೋರಾಟದಲ್ಲಿ ಭಾಗಿ: ತೈಲ ಬೆಲೆ ಏರಿಕೆ ವಿರೋಧಿಸಿ ಸೆ. 10ರಂದು ಭಾರತ್‌ ಬಂದ್‌ ಕರೆ ಹಿನ್ನೆಲೆಯಾಗಿ ನಡೆಸಲಾಗುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಇದೇ ವೇಳೆ ತಿಳಿಸಿದರು. ಎಐಸಿಸಿ ಕಾರ್ಯದರ್ಶಿ, ಹೈದ್ರಾಬಾದ-ಕರ್ನಾಟಕದ ಕಾಂಗ್ರೆಸ್‌ ಪಕ್ಷ ಸಂಘಟನೆಯ ಉಸ್ತುವಾರಿ ಶೈಲೇಜನಾಥ ಸಾಕೆ ಮಾತನಾಡಿದರು.

ಶಾಸಕರಾದ ಎಂ.ವೈ. ಪಾಟೀಲ, ಖನೀಜಾ ಫಾತೀಮಾ, ಮಹಾನಗರ ಪಾಲಿಕೆ ಮೇಯರ್‌ ಶರಣಕುಮಾರ ಮೋದಿ,
ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಶಾಸಕ ಅಲ್ಲಮ ಪ್ರಭು ಪಾಟೀಲ, ಮುಖಂಡರಾದ ತಿಪ್ಪಣ್ಣಪ್ಪ ಕಮಕನೂರ, ವಸಂತ ಕುಮಾರ ಹಾಜರಿದ್ದರು.

ಬಂದ್‌ ರಾಜಕಾರಣ ಅಸಮರ್ಥನೀಯ ಸೋಮವಾರ ಕರೆ ನೀಡಲಾಗಿರುವ ಭಾರತ ಬಂದ್‌ ರಾಜಕಾರಣದ ಅಸಮರ್ಥನೀಯವಾಗಿದೆ. ತೈಲದಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ಹಾಗೂ ಇಂದಿನ ಬೆಲೆ ಏರಿಕೆ ಸ್ಥಿತಿಗೆ ಕಾಂಗ್ರೆಸ್‌ನ ವೈಫಲ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯ. ಹಣದುಬ್ಬರ, ಸಕ್ಕರೆ, ಬೇಳೆ, ಈರುಳ್ಳಿ ಸೇರಿದಂತೆ ಇತರೆಗಳಲ್ಲಿ ಬೆಲೆ ನಿಯಂತ್ರಣ, 4ಲಕ್ಷ ರೂ.ಗೆ ಇನ್ಸೂರೆನ್ಸ್‌ ಪ್ರಿಮಿಯಂದಲ್ಲಿ ಮಾಡಿರುವ ಸಾಧನೆಯನ್ನು ಕಾಂಗ್ರೆಸ್‌ ಒಮ್ಮೆ ಕಣ್ಣೆತ್ತಿ ನೋಡಲಿ. 
ರಾಜಕುಮಾರ ಪಾಟೀಲ್‌ ತೇಲ್ಕೂರ, ಶಾಸಕರು ಸೇಡಂ


Trending videos

Back to Top