CONNECT WITH US  

ಭಾಗ್ಯವಂತಿ ದರ್ಶನಕ್ಕೆ ಭಕ್ತ ಸಾಗರ

ಅಫಜಲಪುರ: ಇತಿಹಾಸ ಪ್ರಸಿದ್ಧ ಘತ್ತರಗಿ ಭಾಗ್ಯವಂತಿ ದೇಗುಲದಲ್ಲಿ ಶ್ರಾವಣ ಮಾಸದ ಮುಕ್ತಾಯ ಹಾಗೂ ರವಿವಾರದ ಅಮಾವಾಸ್ಯೆ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು.

ನೂರಾರು ವಾಹನಗಳು, ಲಕ್ಷಾಂತರ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಪರದಾಡುವಂತೆ ಆಯಿತು. ಪ್ರತಿ ಅಮಾವಾಸ್ಯೆ ದಿನ ಸಾವಿರಾರು ಭಕ್ತರು ಘತ್ತರಗಿಗೆ ಆಗಮಿಸಿ ಭಾಗ್ಯವಂತಿ ದೇವಿ ದರ್ಶನ ಪಡೆಯುತ್ತಾರೆ. ಆದರೆ ಇಲ್ಲಿರುವ ಕಿರಿದಾದ ರಸ್ತೆಗಳಿಂದ ವಾಹನ ನಿಲುಗಡೆಗೆ ಸಾಕಷ್ಟು ತೊಂದರೆಯಾಗಿದೆ.

ಶ್ರಾವಣ ಮಾಸದ ಮುಕ್ತಾಯ, ರವಿವಾರದ ಅಮಾವಾಸ್ಯೆ ದಿನ ನಾಡಿನ ಮೂಲೆ ಮೂಲೆಯಿಂದ ಬಂದ ಭಕ್ತರು ಕಿರಿದಾದ
ರಸ್ತೆಗಳಲ್ಲಿ ವಾಹನಗಳನ್ನು ಸಿಲುಕಿಸಿಕೊಂಡು ಪರದಾಡಿದರು. ಅದರಲ್ಲೂ ಘತ್ತರಗಿ ಬಗಲೂರ ಗ್ರಾಮಗಳ ಮಧ್ಯದ ಬ್ರಿಡ್ಜ್ ಕಂ ಬ್ಯಾರೇಜ್‌ ಮೇಲೆ ನೂರಾರು ವಾಹನಗಳು ಸಿಲುಕಿಕೊಂಡು ಕೆಲಹೊತ್ತು ಆತಂಕ ಸೃಷ್ಟಿಯಾಗಿತ್ತು. ಸಂಚಾರ ದಟ್ಟಣೆ ಕಡಿಮೆ ಮಾಡಲು ಪೊಲೀಸರು ಹರಸಾಹಸಪಟ್ಟರು.

ವಾಹನ ನಿಲುಗಡೆಗಿಲ್ಲ ಸ್ಥಳ: ಘತ್ತರಗಿಗೆ ಬರುವ ವಾಹನಗಳಿಗೆ ನಿಲ್ಲಲು ಸರಿಯಾದ ಪಾರ್ಕಿಂಗ್‌ ವ್ಯವಸ್ಥೆಯೇ ಇಲ್ಲ. ದೇವಸ್ಥಾನದ ಎದುರಿಗೆ ಇರುವ ಪಾರ್ಕಿಂಗ್‌ ಸ್ಥಳದಲ್ಲಿ ಕೆಲವು ವಾಹನ ನಿಲುಗಡೆಗೆ ಮಾಡಬಹುದು. ಆದರೆ ಒಮ್ಮೆಲೆ
ನೂರಾರು ವಾಹನಗಳು ಬಂದರೆ ಸಮಸ್ಯೆ ಉಂಟಾಗುತ್ತದೆ.

ಬೈಪಾಸ್‌ ರಸ್ತೆ: ಇಲ್ಲಿನ ಟ್ರಾಫಿಕ್‌ ಸಮಸ್ಯೆ ನಿವಾರಣೆಯಾಗಬೇಕಾದರೆ ಬೈಪಾಸ್‌ ರಸ್ತೆ ಬೇಕು. ಅಮಾವಾಸ್ಯೆ, ವಿಶೇಷ ದಿನಗಳಂದು, ಶುಕ್ರವಾರಕ್ಕೊಮ್ಮೆ ಇಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗಿರುತ್ತದೆ. ಇಲ್ಲಿಗೆ ಆಗಮಿಸುವ ನೂರಾರು ವಾಹನಗಳಿಗೆ ಸಂಚಾರಕ್ಕೆ ತೊಂದರೆಯಾಗಬಾರದೆಂದರೆ ಬೈಪಾಸ್‌ ರಸ್ತೆ ನಿರ್ಮಾಣದ ಅವಶ್ಯಕತೆ ಇದೆ ಎಂದು ಜೆಡಿಎಸ್‌ ಮುಖಂಡ ರಾಜೇಂದ್ರ ಪಾಟೀಲ ಆಗ್ರಹಿಸಿದ್ದಾರೆ.


Trending videos

Back to Top