CONNECT WITH US  

ಕೊಳಗೇರಿಯಂತಾದ ಅಫಜಲಪುರ

ಅಫಜಲಪುರ: ಸ್ಥಳೀಯ ಚುನಾವಣೆ ವೇಳೆ ಮತದಾರರ ಮನ ಗೆಲ್ಲಲು ಸಾಕಷ್ಟು ಆಮೀಷ ಒಡ್ಡುವ ರಾಜಕಾರಣಿಗಳು
ಗೆದ್ದ ಬಳಿಕ ಪ್ರತಿನಿಧಿಸಿದ ಕ್ಷೇತ್ರ ಮರೆಯುವುದು ಇಂದಿನ ರಾಜಕೀಯದ ವಿಶೇಷವಾದಂತಾಗಿದೆ. ಮತದಾರರಿಗೆ
ಕೊಟ್ಟ ಭರವಸೆ ಈಡೇರಿಸಿ ಪಟ್ಟಣವನ್ನು ಸಮಸ್ಯೆ ಮುಕ್ತ ಮಾಡುವರೇ ಈ ಬಾರಿ ಆಯ್ಕೆಯಾದ ಪುರಸಭೆಗೆ ಸದಸ್ಯರು ಎಂದು ಕಾಯ್ದುನೋಡಬೇಕಿದೆ.

ಮಾಸ್ಟರ್‌ ಪ್ಲ್ಯಾನ್‌ ಮರೀಚಿಕೆ: ಪಟ್ಟಣದ ಬಹುದಿನಗಳ ಬೇಡಿಕೆ ಮಾಸ್ಟರ್‌ ಪ್ಲ್ಯಾನ್‌. ಅನೇಕ ಬಾರಿ ಈ ಕುರಿತು
ಚರ್ಚೆಯಾಗುತ್ತದೆ. ಇನ್ನೇನು ಮಾಸ್ಟರ್‌ ಪ್ಲ್ಯಾನ್‌ ಆರಂಭವಾಗುತ್ತದೆ ಎನ್ನುವಷ್ಟರಲ್ಲಿ ಮತ್ತೆ ನನೆಗುದಿಗೆ ಬೀಳುತ್ತಿದೆ.

ಕುಡಿಯುವ ನೀರಿನ ಸಮಸ್ಯೆ: ಪಟ್ಟಣ ಭೀಮಾ ನದಿಯ ದಂಡೆ ಮೇಲಿದೆ. ಪಟ್ಟಣದ ಅಣತಿ ದೂರದಲ್ಲಿ ಮೂರು ಟಿ.ಎಂ.ಸಿ ಸಂಗ್ರಹ ಸಾಮರ್ಥ್ಯದ ಬ್ರಿಡ್ಜ್ ಕಂ ಬ್ಯಾರೇಜ್‌ ಇದೆ. ಆದರೂ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತದೆ. ವಾರಕ್ಕೊಮ್ಮೆ, ಎರಡು ಬಾರಿ ನೀರು ಸರಬರಾಜು ಮಾಡಲಾಗುತ್ತದೆ. ಮಳೆಗಾಲದಲ್ಲಿಯೂ ಸಮರ್ಪಕವಾಗಿ ನೀರು ಸರಬರಾಜು ಮಾಡದ್ದರಿಂದ ಪಟ್ಟಣದ ಜನರ ಗೋಳು ಕೇಳುವವರಿಲ್ಲದಂತೆ ಆಗಿದೆ.

ಭೀಮಾ ಬ್ಯಾರೇಜ್‌ನಿಂದ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದಾಗಿ ಹೇಳುವ ರಾಜಕಾರಣಿಗಳು
ಇನ್ನೂ ಈ ಕೆಲಸ ಮಾಡಿಲ್ಲ. ಚುನಾವಣೆ ವೇಳೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದಾಗಿ ಹೇಳುವ
ರಾಜಕಾರಣಿಗಳು ಈ ಕುರಿತು ಯಾವುದೇ ಚಕಾರವನ್ನು ಎತ್ತುತ್ತಿಲ್ಲ.

ಚರಂಡಿ, ಒಳ ರಸ್ತೆಗಳ ಸಮಸ್ಯೆ: ಪಟ್ಟಣಕ್ಕೆ ಬಹಳಷ್ಟು ಕಾಡುತ್ತಿರುವ ಸಮಸ್ಯೆಯಲ್ಲಿ ಇದೂ ಒಂದಾಗಿದೆ. ಪಟ್ಟಣದಲ್ಲಿನ ಒಳ ರಸ್ತೆಗಳು ಹಾಳಾಗಿ ಬಹಳ ಕಾಲವಾಗಿವೆ. ಚರಂಡಿಗಳು ಕಸ-ಕಡ್ಡಿಗಳಿಂದ ತುಂಬಿಕೊಂಡು ಹೊಲಸು ನೀರು ರಸ್ತೆ ಮೇಲೆ ಹರಿದಾಡುತ್ತದೆ. ಮಳೆಗಾಲದಲ್ಲಂತೂ ಇಲ್ಲಿನ ಸಮಸ್ಯೆ ಹೇಳತೀರದು. ಚರಂಡಿ ಯಾವುದು-ರಸ್ತೆ ಯಾವುದು ಎನ್ನುವುದು ಗೊತ್ತಾಗದಂತೆ ಆಗಿರುತ್ತದೆ.

ಪುರಸಭೆ ಇರುವ ಚರಂಡಿಗಳನ್ನು ಮುರುಮ್‌ ಹಾಕಿಸಿ ಮುಚ್ಚಿಸುತ್ತಾರೆ. ಇರುವ ಚರಂಡಿಗಳನ್ನು ಸ್ವತ್ಛಗೊಳಿಸುವುದಿಲ್ಲ. ಈ ಬಾರಿಯಾದರೂ ಗುಣಮಟ್ಟದ ಚರಂಡಿ, ಒಳ ರಸ್ತೆಗಳನ್ನು ನಿರ್ಮಿಸಿ ಸ್ವತ್ಛ ಅಫಜಲಪುರ ಮಾಡುವರೆ ಎಂದು ಕಾಯ್ದು ನೋಡಬೇಕಿದೆ. ಅಲ್ಲದೇ ಒಳ ರಸ್ತೆಗಳು ಕಿರಿದಾಗಿದ್ದು , ಬಹಳಷ್ಟು ಸಮಸ್ಯೆಯಾಗುತ್ತಿವೆ. ಕಿರಿದಾದ ರಸ್ತೆಗಳ ಅಕ್ಕಪಕ್ಕದಲ್ಲಿ ಗೂಡಂಗಡಿಗಳು ತಲೆ ಎತ್ತಿವೆ. ಸಣ್ಣ ಪುಟ್ಟ ವ್ಯಾಪಾರಸ್ಥರು ರಸ್ತೆ ಮೇಲೆ ವ್ಯಾಪಾರ ಮಾಡುತ್ತಾರೆ. ಇದರಿಂದಾಗಿ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. 

ವರ್ತುಲ ರಸ್ತೆ: ದಿನದಿಂದ ದಿನಕ್ಕೆ ಪಟ್ಟಣ ಬೆಳೆಯುತ್ತಿದೆ. ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ವರ್ತುಲ
ರಸ್ತೆಯ ಅವಶ್ಯಕತೆ ತುಂಬಾ ಇದೆ. ಇದರ ಕುರಿತು ಮಾಜಿ ಶಾಸಕರು ವರ್ತುಲ ರಸ್ತೆ ಮಾಡಿಸುತ್ತಿರುವುದಾಗಿ ಅನೇಕ ಬಾರಿ ಹೇಳಿದ್ದರು. ಆದರೆ ಆಗಿರಲಿಲ್ಲ. ಈಗಿನ ಶಾಸಕರು ಮತ್ತು ಪುರಸಭೆಯವರು ಮುತುವರ್ಜಿ ವಹಿಸಿ ಪಟ್ಟಣಕ್ಕೊಂದು ವರ್ತುಲ ರಸ್ತೆ ನಿರ್ಮಿಸಿ ವಾಹನ ದಟ್ಟಣೆ ತಡೆಗಟ್ಟಬೇಕು ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.

ಮೂಲಭೂತ ಸೌಕರ್ಯ: ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆ ಬಹಳಷ್ಟಿದೆ. ವಿಶ್ರಮಿಸಲು ಉತ್ತಮ
ಉದ್ಯಾನವನವಿಲ್ಲ. ಪಾದಚಾರಿ ರಸ್ತೆಗಳಿಲ್ಲ, ಕುಡಿಯುವ ನೀರು, ಬೀದಿ ದೀಪಗಳ ವ್ಯವಸ್ಥೆ, ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳು ಪಟ್ಟಣಕ್ಕೆ ಬೇಕಾಗಿವೆ. ಈಗ ಮತ್ತೂಮ್ಮೆ ಪುರಸಭೆ ಚುನಾವಣೆಗಳು ಮುಗಿದಿವೆ. ಅದೇ ಹಳೆಯ ಭರವಸೆಗಳನ್ನು ನೀಡಿ ಗೆದ್ದ ಅಭ್ಯರ್ಥಿಗಳು ಪಟ್ಟಣದ ಅಭಿವೃದ್ಧಿಗೊಳಿಸುವರೇ ಎಂದು ಕಾಯ್ದು ನೋಡಬೇಕಿದೆ.

„ ಮಲ್ಲಿಕಾರ್ಜುನ ಹಿರೇಮಠ

Trending videos

Back to Top