CONNECT WITH US  

ಯೋಜನೆ ಅನುಷ್ಠಾನಕ್ಕೆ ಜಿಲ್ಲಾಡಳಿತಕ್ಕೆ ನಿರಾಸಕ್ತಿ: ಆಕ್ರೋಶ

ಹಾಸನ: ಕೇಂದ್ರ ಸರ್ಕಾರ ಹಾಸನ ಜಿಲ್ಲೆಗೆ ಮಂಜೂರು ಮಾಡಿದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಆಸಕ್ತಿ ವಹಿಸುತ್ತಿಲ್ಲ. ಜಿಲ್ಲೆಯಲ್ಲಿ ಐವರು ಜೆಡಿಎಸ್‌ ಶಾಸಕರಿದ್ದಾರೆಂಬ ಕಾರಣಕ್ಕೆ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ಪಕ್ಷಪಾತ ಮಾಡಲಾಗುತ್ತಿದೆ ಎಂದು ಜೆಡಿಎಸ್‌ ಮುಖಂಡ, ಶಾಸಕ ಎಚ್‌.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸಂಸದರೂ ಆದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ತಾರತಮ್ಯ: ಹಾಸನ - ಅರಕಲಗೂಡು - ಪಿರಿಯಾಪಟ್ಟಣ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಮೊದಲು ಜಿಲ್ಲಾ ಕೇಂದ್ರದ ಕಡೆಯಿಂದ ಆರಂಭಿಸಬೇಕಾಗಿತ್ತು. ಆದರೆ, ಕಾಮಗಾರಿ ಅರಕಲಗೂಡು - ರಾಮನಾಥಪುರ ನಡುವೆ (ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಪ್ರತಿನಿಧಿಸುವ ಅರಕಲಗೂಡು ಕ್ಷೇತ್ರ) ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರು.

ಹಾಸನದಿಂದ ಗೊರೂರು ವರೆಗೂ ಜೆಡಿಎಸ್‌ನ ಎಚ್‌.ಎಸ್‌. ಪ್ರಕಾಶ್‌ ಮತ್ತು ಎಚ್‌.ಕೆ.ಕುಮಾರಸ್ವಾಮಿ ಅವರ ಕ್ಷೇತ್ರ ವ್ಯಾಪಿÂಗೆ ಸೇರುತ್ತಿದೆ ಎಂದು ಹಾಸನದ ಕಡೆಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸುತ್ತಿಲ್ಲ. 2 ವರ್ಷದ ನಂತರ ಹಾಸನ - ಗೊರೂರು ನಡುವಿನ ಕಾಮಗಾರಿ ಆರಂಭಿಸುವುದಾಗಿ ಗುತ್ತಿಗೆದಾರ ಹೇಳುತ್ತಿದ್ದಾರೆ. ಈ ರಸ್ತೆ ಕಾಮಗಾರಿಯನ್ನು ತಾವು ಲೋಕೋಪಯೋಗಿ ಇಲಾಖೆ ಸಚಿವನಾಗಿದ್ದಾಗಲೇ ಮಂಜೂರು ಮಾಡಿದ್ದೆ.

ವಿಶ್ವಬ್ಯಾಂಕ್‌ನ ಆರ್ಥಿಕ ನೆರವಿನಲ್ಲಿ ಕೈಗೆತ್ತಿಕೊಂಡಿರುವ 260 ಕೋಟಿ ರೂ.ನ ಈ ರಸ್ತೆ ಕಾಮಗಾರಿಯಲ್ಲಿ ಪಕ್ಷಪಾತ ಮಾಡಲಾಗುತ್ತಿದೆ ಎಂದು ಆರೋಪಿಸಿ ದರು. ಈ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೆಆರ್‌ಡಿಸಿಎಲ್‌ ಎಂಜಿನಿಯರುಗಳಿಂದ ಸ್ಪಷ್ಟನೆ ಬೇಕೆಂದು ಪಟ್ಟು ಹಿಡಿದರು.

ಗೈರು: ಸಭೆಯಲ್ಲಿ ಕೆಆರ್‌ಡಿಸಿಎಲ್‌ ಎಂಜಿನಿಯರುಗಳು ಹಾಜರಿರಲಿಲ್ಲ. ಹಾಗಾಗಿ ಮತ್ತಷ್ಟು ಕೆರಳಿದ ರೇವಣ್ಣ , ಕೆಆರ್‌ಡಿಸಿಎಲ್‌ನವರನ್ನು ಸಭೆಗೆ ಕರೆಸಿ ಎಂದು ಆಗ್ರಹಿಸಿದರು. ರೇವಣ್ಣ ಅವರಿಗೆ ಬೆಂಬಲ ನೀಡಿ ಮಾತನಾಡಿದ ಶಾಸಕರಾದ ಎಚ್‌.ಎಸ್‌.ಪ್ರಕಾಶ್‌, ಎಚ್‌.ಕೆ.ಕುಮಾರಸ್ವಾಮಿ, ಹಾಸನ ಸಂಚಾರದ ದಟ್ಟಣೆ ಇರುವುದು ಹಾಸನ - ಗೊರೂರು - ಅರಕಲಗೂಡು ನಡುವೆ. ಆದರೆ, ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದು ಅರಕಲಗೂಡು - ರಾಮನಾಥಪುರದ ನಡುವೆ. ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು.

ತರಾಟೆ: ಮಧ್ಯಾಹ್ನದ ಭೋಜನ ವಿರಾಮದ ವೇಳೆಗೆ ಸಭೆಗೆ ಬಂದ ಕೆಆರ್‌ಡಿಸಿಲ್‌ ಎಂಜಿನಿಯರ್‌ನ್ನು ತರಾಟೆಗೆ ತೆಗೆದುಕೊಂಡ ರೇವಣ್ಣ, ಹಾಸನದ ಕಡೆಯಿಂದ ಏಕೆ ಕಾಮಗಾರಿ ಕೈಗೆತ್ತಿಕೊಂಡಿಲ್ಲ ? ಈ ರೀತಿ ಪಕ್ಷಪಾತ ಮಾಡಿ ಎಂದು ಹೇಳಿದವರ್ಯಾರು ಎಂದು ಪ್ರಶ್ನಿಸಿದರು. ಶಾಸಕರ ಪ್ರಶ್ನೆಗಳಿಂದ ಕಂಗೆಟ್ಟ ಎಂಜಿನಿಯರ್‌ ಹಾಸನದ ಕಡೆಯಿಂದಲೂ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಈ ವಾರದಿಂದಲೇ ಆರಂಭಿಸುವುದಾಗಿ ಭರವಸೆ ನೀಡಿದರು.

ಆಲೂಗಡ್ಡೆ ಕೇಂದ್ರ: ಹಾಸನ ತಾಲೂಕು ಸೋಮನಹಳ್ಳಿಕಾವಲ್‌ನ ತೋಟಗಾರಿಕೆ ಸಸ್ಯ ಕ್ಷೇತ್ರದಲ್ಲಿ ಆಲೂಗಡ್ಡೆ ಸಂಶೋಧನಾ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಎರಡು ವರ್ಷಗಳ ಹಿಂದೆಯೇ 7.50 ಕೋಟಿ ರೂ.ಮಂಜೂರು ಮಾಡಿದೆ. ಆದರೆ ಇದುವರೆಗೂ ಆ ಯೋಜನೆಯನ್ನು ಅನುಷ್ಠಾನಗೊಳಿಸಿಲ್ಲ.

ಕೇಂದ್ರ ಕೃಷಿ ಸಚಿವರಾಗಿದ್ದ ಶರದ್‌ಪವಾರ್‌ ಅವರ ಮೇಲೆ ಒತ್ತಡ ಹೇರಿ ಮಂಜೂರು ಮಾಡಿಸಿಕೊಂಡು ಬಂದಿದ್ದ ಆ ಯೋಜನೆಯನ್ನು ಕೈಬಿಟ್ಟು ಅನುದಾನವನ್ನು ವಾಪಸ್‌ ಕಳುಹಿಸುವ ಪ್ರಯತ್ನವನ್ನು ತೋಟಗಾರಿಕೆ ಇಲಾಖೆ ಮಾಡುತ್ತಿದೆ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.ಅರಣ್ಯ ಇಲಾಖೆಯ ಅಧಿಕಾರಿಯನ್ನು ತೋಟಗಾರಿಕೆ ಇಲಾಖೆ ಆಯುಕ್ತರನ್ನಾಗಿ ಮಾಡಲಾಗಿದೆ. ಆ ಅಧಿಕಾರಿಯಿಂದಲೇ ಯೋಜನೆ ಜಾರಿಯಾಗುತ್ತಿಲ್ಲ. ಆಯುಕ್ತರ ಕಚೇರಿ ಬಳಿ ಅಹೋರಾತ್ರಿ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದರು.

ಅಧ್ಯಯನಕ್ಕೆ ಸೂಚನೆ: ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂಜಯ್‌ ಸಭೆಗೆ ಮಾಹಿತಿ ನೀಡಿ, ಸೋಮನಹಳ್ಳಿ ಕಾವಲಿನಲ್ಲಿ ಆಲೂಗಡ್ಡೆ ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 8.40 ಕೋಟಿ ರೂ. ಅನುದಾನ ಮಂಜೂರಾಗಿ ಬಂದಿತ್ತು. ಮಹರಾಷ್ಟ್ರದ ಬಾರಾಮತಿಯಲ್ಲಿ ಇಂತಹುದೇ ಸಂಶೋಧನಾ ಕೇಂದ್ರವಿದೆ.

ಅಲ್ಲಿಗೂ ಭೇಟಿ ನೀಡಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಪರಿಷ್ಕೃತ ಅಂದಾಜ ಅನ್ನು 7.40 ಕೋಟಿ ರೂ.ಗಳಿಗೆ ಸಿದ್ಧಪಡಿಸಿ ಟೆಂಡರ್‌ ಪ್ರಕ್ರಿಯೆಗಾಗಿ ತೋಟಗಾರಿಕೆ ಇಲಾಖೆ ಆಯುಕ್ತರ ಕಚೇರಿಗೆ ಕಳುಹಿಸಲಾಗಿತ್ತು. ಈಗ ಆ ಯೋಜನೆ ಅನುಷ್ಠಾನ ಸಾಧುವೇ ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಆಯುಕ್ತರ ಕಚೇರಿಯಿಂದ ಸೂಚನೆ ಬಂದಿದೆ ಎಂದು ವಿವರಿಸಿದರು.

ಬಾರಾಮತಿಯಲ್ಲಿ ಸಾಧ್ಯವಾಗಿರುವ ಸಂಶೋಧನಾ ಕೇಂದ್ರ ಹಾಸನದಲ್ಲಿ ಸ್ಥಾಪನೆಗೆ ಏಕೆ ಸಾಧ್ಯವಿಲ್ಲ ? ತಕ್ಷಣವೇ ಟೆಂಡರ್‌ ಪ್ರಕ್ರಿಯೆ ಆರಂಭಿಸಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡದಿದ್ದರೆ ಸುಮ್ಮನಿರಲ್ಲ. ಇಂಥ ಮಹತ್ವದ ಯೋಜನೆಗಳ ಬಗ್ಗೆ ಜಿಲ್ಲಾಧಿಕಾರಿಯವರಾದರೂ ಗಮನ ಹರಿಸಬಾರದೇ ಎಂದು ರೇವಣ್ಣ ಕಿಡಿಕಾರಿದರು. ಸಮಗ್ರ ಮಾಹಿತಿ ನೀಡಿ: ಈ ವೇಳೆ ಮಧ್ಯ ಪ್ರವೇಶಿಸಿದ ಎಚ್‌.ಡಿ.ದೇವೇಗೌಡರು, ಈ ಯೋಜನೆ ಅನುಷ್ಠಾನದ ಬಗ್ಗೆ ಮುಂದಿನ ಸಭೆಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಹೇಳಿ ರೇವಣ್ಣ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

ಒಂದೆರಡು ಇಲಾಖೆಗಳಲ್ಲ. ಬಹುತೇಕ ಇಲಾಖೆಗಳು ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಆಸಕ್ತಿ ತೋರುತ್ತಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳನ್ನು ಹಾಸನ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವುದಿಲ್ಲ. ಕೇಂದ್ರ ಸರ್ಕಾರ ಹಾಸನ ಜಿಲ್ಲೆಗೆ ಯಾವುದೇ ಯೋಜನೆ ಮಂಜೂರು ಮಾಡುವುದು ಬೇಡ ಎಂದು ನಿರ್ಣಯ ಅಂಗೀಕರಿಸಿ ಪ್ರಧಾನಮಂತ್ರಿಯವರಿಗೆ ಕಳುಹಿಸಿ ಬಿಡಿ ಎಂದು ರೇವಣ್ಣ ವ್ಯಂಗ್ಯವಾಡಿದರು.

ಡೀಸಿ, ಸಿಇಒ ಮೇಲೆ ಆಕ್ರೋಶ
ಹಾಸನ:
ಬರ ಪರಿಸ್ಥಿತಿ ಅಧ್ಯಯನ ಸೇರಿದಂತೆ ಶಾಸಕರು ನಡೆಸುವ ಗ್ರಾಮ ಸಭೆಗಳಿಗೆ ತಾಲೂಕು ಮಟ್ಟದ ಅಧಿಕಾರಿ ಗಳು ಹೋಗಬಾರದೆಂದು ಡೀಸಿ ಹಾಗೂ ಜಿಪಂ ಸಿಇಒ ಸೂಚನೆ ನೀಡಿದ್ದಾರೆ. ಅಧಿಕಾರಿಗಳ ಕ್ರಮ ಶಾಸಕರ ಹಕ್ಕುಚ್ಯುತಿ ಯಾಗಿದೆ ಎಂದು ಶಾಸಕರಾದ ಎಚ್‌.ಡಿ. ರೇವಣ್ಣ, ಕೆ.ಎಂ.ಶಿವಲಿಂಗೇಗೌಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಸಭಾಂಗಣದಲ್ಲಿ ಎಚ್‌.ಡಿ.ದೇವೇಗೌಡರ ಅಧ್ಯಕ್ಷತೆ ಯಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಗ್ರಾಮ ಸಭೆಗಳಿಗೆ ಹೋಗ ಬಾರದೆಂದರೆ ನಮ್ಮ ಕ್ಷೇತ್ರಗಳ ಕೆಲಸಗಳನ್ನು ನಾವೇ ನೋಡಿಕೊಳ್ಳುತ್ತೇವೆ. ಶಾಸಕರ ಹಕ್ಕುಗಳನ್ನು ಕಿತ್ತುಕೊಳ್ಳಲು ಡೀಸಿ, ಸಿಇಒ ಅಥವಾ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಸಾಧ್ಯವಿಲ್ಲ.  ಅಧಿಕಾರಿಗಳು ಶಾಸಕರ ಸಲಹೆಗಳನ್ನು ಕೇಳಬಾರದು ಎಂದರೆ ಸಭೆಗಳಿಗೆ ಶಾಸಕರು ಏಕೆ ಬರಬೇಕು.? ನಾವೂ ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿ ಗೊತ್ತಿದೆ ಎಂದರು.

ಸಚಿವ ಮಂಜು ಧೋರಣೆಗೆ ಜಿಲ್ಲೆಯ ಅಭಿವೃದ್ಧಿ ಕುಂಠಿತ
ಹಾಸನ:
ಎ. ಮಂಜು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಜಿಲ್ಲೆಯಲ್ಲಿ ಪಕ್ಷಪಾತ ಹೆಚ್ಚಾಗಿದೆ. ಪರಿಣಾಮವಾಗಿ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಆರೋಪಿಸಿದರು.

ಪ್ರಗತಿ ಪರಿಶೀಲನೆ ನಂತರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹಿಂದೆ ಡಾ. ಎಚ್‌.ಸಿ. ಮಹದೇವಪ್ಪ ಉಸ್ತು ವಾರಿ ಸಚಿವ ರಾಗಿದ್ದಾಗ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ವಿವಾದಗಳಿರಲಿಲ್ಲ. ಆದರೆ ಮಂಜು ಜಿಲ್ಲಾ ಉಸ್ತುವಾರಿ ಮಂತ್ರಿ ಗಳಾದ ನಂತರ ಅಭಿವೃದ್ಧಿಗೆ ಹಿನ್ನಡೆ ಆಗಿದೆ ಎಂದರು.

ರಾಜಕೀಯ ಸಲ್ಲದು: ಜಿಲ್ಲೆ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ರಾಜಕೀಯ ಮಾಡಬಾರದು. ರಾಜಕೀಯ ಕಾರಣಕ್ಕಾಗಿ ಜಿಲ್ಲೆಯ ಪ್ರಗತಿ ಕುಂಠಿತವಾಗಬಾರದು. ಈ ಬಗ್ಗೆ ಮುಖ್ಯಮಂತ್ರಿಯವರ ಗಮನ ವನ್ನು ಸೆಳೆಯುವೆ. ಆದರೆ, ಸೂಕ್ತ ಕ್ರಮ ಕೈಗೊಳ್ಳುವುದು ಅವರಿಗೆ ಬಿಟ್ಟದ್ದು. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಕಾಂಗ್ರೆಸ್‌ ಸರ್ಕಾರವಿದ್ದಾಗ ಹಾಗೂ ಬಿಜೆಪಿ ಸರ್ಕಾರ ವಿದ್ದಾಗ ಸಿಎಂ ನಿವಾಸದ ಬಳಿ ಧರಣಿ ಮಾಡಿದ್ದೆ. ಮತ್ತೆ ಅಂತಹ ಪರಿಸ್ಥಿತಿ ನಿರ್ಮಾಣ ವಾಗುವುದಾದರೆ ಅದಕ್ಕೆ ಕಾರಣರ್ಯಾರು ಎಂಬುದನ್ನೂ ಜನರು ನಿರ್ಧರಿಸುವರು ಎಂದು ಸಚಿವ ಎ.ಮಂಜು ಹೆಸರು ಪ್ರಸ್ತಾಪಿಸದೆ ಅಸಮಾಧಾನ ವ್ಯಕ್ತಪಡಿಸಿದರು.

ಸ್ವಾತಂತ್ರ್ಯವಿಲ್ಲ: ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ಪಕ್ಷಪಾತದ ಬಗ್ಗೆ ಅಧಿಕಾರಿಗಳ ಮೇಲೆ ದೋಷ ಹೊರಿಸಲು ಹೋಗುವುದಿಲ್ಲ. ಅಧಿಕಾರಿಗಳು ಎಷ್ಟೇ ಒಳ್ಳೆಯವರಿದ್ದರೂ ಅವರಿಗೆ ಸ್ವಾತಂತ್ರ್ಯವಿಲ್ಲದಿದ್ದರೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ .ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿದ್ದು, ಅರಕಲಗೂಡು ತಾಲೂಕಿನಲ್ಲಿಯೇ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.


Trending videos

Back to Top