CONNECT WITH US  

ಸಾಣೇನಹಳ್ಳಿ ಗೌರಿಗೆ 300 ವರ್ಷದ ಇತಿಹಾಸ

ಹಾಸನ: ಗೌರಿ - ಗಣೇಶ ಹಬ್ಬದಲ್ಲಿ ಸಾಮಾನ್ಯವಾಗಿ ಗಣೇಶನಮೂರ್ತಿ ಪ್ರತಿಷ್ಠಾನೆಗೆ ಪ್ರಾಧಾನ್ಯತೆ. ಗಣೇಶಮೂರ್ತಿ ಪಕ್ಕದಲ್ಲಿ ಗೌರಿಯನ್ನು ಕೂರಿಸಿ ಆಚರಿಸುವುದು ಸಾಮಾನ್ಯವಾಗಿದೆ. ಆದರೆ ಅರಸೀಕೆರೆ ತಾಲೂಕಿನ ಮಾಡಾಳು ಹಾಗೂ ಹಾಸನ ತಾಲೂಕಿನ ಸಾಣೇನಹಳ್ಳಿಯಲ್ಲಿ ಗಣೇಶನಿಗಿಂತ ಗೌರಿಗೆ ಪ್ರಾಧಾನ್ಯತೆ ನೀಡಿ ಪೂಜಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ.
ಗೌರಿಗೆ ಪ್ರಾಧಾನ್ಯತೆ ನೀಡುವ ಅರಸೀಕೆರೆಯ ಮಾಡಾಳು ಗೌರಮ್ಮ ಉತ್ಸವಕ್ಕೆ 148 ವರ್ಷಗಳ ಇತಿಹಾಸವಿದ್ದರೆ, ಹಾಸನದ ಸಾಣೇನಹಳ್ಳಿಯ ಗೌರಮ್ಮನಿಗೆ 300 ವರ್ಷಗಳ ಇತಿಹಾಸವಿದೆ. ಸಾಣೇನಹಳ್ಳಿಯಲ್ಲಿ ಪ್ರತಿವರ್ಷ ಭಾದ್ರಪದ, ಶುಕ್ಲ ಮಾಸದ ಚೌತಿಯ ಹಿಂದಿನ ದಿನ ಗೌರಮ್ಮನನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ.  ಸಂಧ್ಯಾ ಕಾಲದಲ್ಲಿ ಪೂಜೆ: ಸಾಮಾನ್ಯ ಎಲ್ಲಾ ಕಡೆ ಜೇಡಿಮಣ್ಣಿನ ಗಣಪ, ಗೌರಿ ಮಾಡಿ ಪ್ರತಿಷ್ಠಾಪನೆ ಮಾಡಿದರೆ ಸಾಣೇನಹಳ್ಳಿಯಲ್ಲಿ ಕಡಲೆಹಿಟ್ಟಿಗೆಬೆಣ್ಣೆ ಮತ್ತು ಎಳನೀರು ಬಳಸಿ ಗೌರಮ್ಮನ ಮೂರ್ತಿ ನಿರ್ಮಿಸಿ ಪ್ರತಿಷ್ಠಾಪನೆ ಮಾಡುತ್ತಾರೆ. ಗಣಪತಿಯನ್ನು ಗೌರಿ ಮೇಲೆ ಪ್ರತಿಷ್ಠಾಪನೆ ಮಾಡಿ ಪೂಜಿಸುವುದು ಈ ಗ್ರಾಮದ ವಾಡಿಕೆ. ಗೌರಮ್ಮನ ಪ್ರತಿಷ್ಠಾಪನೆಯಾದ 13 ರಿಂದ 19 ದಿನಗಳ ಕಾಲ ಪ್ರತಿನಿತ್ಯ ಸಂಧ್ಯಾ ಕಾಲದಲ್ಲಿ ಮುತ್ತೈದೆಯರು ಪೂಜೆ ಮಾಡುತ್ತಾರೆ.
ನಂಬಿಕೆ: ಬಾಗಿನ ಅರ್ಪಿಸುವ ಮೂಲಕ ಗ್ರಾಮಕ್ಕೆ ಬರಮಾಡಿಕೊಳ್ಳುವ ಗ್ರಾಮಸ್ಥರು ಗೌರಿ ಪ್ರತಿಷ್ಠಾಪನೆ ದಿನದಿಂದ ವಿಸರ್ಜನೆಯವರೆಗೂ ಗ್ರಾಮದ ಕೆರೆಯಲ್ಲಿ ಬಟ್ಟೆ ತೊಳೆಯುವುದಿಲ್ಲ, ಕಾಯಿಚಿಪ್ಪನ್ನು ಉರುವಲಾಗಿ ಬಳಸುವುದಿಲ್ಲ. ಹಾಗೇನಾದ್ರು ಬಳಸಿದ್ರೆ ಪ್ರತಿಷ್ಠಾಪನೆಗೊಂಡ ಗೌರಿಯ ಮುಖದಲ್ಲಿ ಬೊಬ್ಬೆಗಳಾಗುತ್ತವೆ ಎಂಬ ನಂಬಿಕೆಯಿದೆ. ಸೂತಕದ ಸೋಂಕು ಸಹ ತಗುಲದಂತೆ ಎಚ್ಚರ ವಹಿಸುತ್ತಾರೆ. ಹರಕೆ ಈಡೇಸುವ ಗೌರಿ: ಊರಿನಿಂದ ಬೇರೆಡೆಗೆ ಕೊಟ್ಟ ಹೆಣ್ಣು ಮಕ್ಕಳಿಂದ ಹಿಡಿದು ಸೊಸೆಯಂದಿರ ಸಮೇತ ಯಾರೊಬ್ಬರು ತಪ್ಪದೇ ಗೌರಿ ಪೂಜೆಯಲ್ಲಿ ಭಾಗವಹಿಸುತ್ತಾರೆ. ತಾಯಿ ಮತ್ತು ಮಗನ ನಡುವೆ ಬಿರುಕು ಬಿಟ್ಟಿದ್ದರೇ ಈ ದೇವಿಗೆ ಬಂದು ಹರಕೆ ಹೊತ್ತರೆ ಸಾಕು. ತಾಯಿ-ಮಗನನ್ನು ಮುಂದಿನ ವರ್ಷದೊಳಗೆ ಒಂದು ಮಾಡುತ್ತಾಳೆ ಇಲ್ಲಿನ ಗೌರಮ್ಮ ಎಂಬುದು ಇಲ್ಲಿನ ಜನಗಳ ನಂಬಿಕೆ. ಹಿಂದೆ 9 ರಿಂದ 11 ದಿನಗಳ ಕಾಲ ಪ್ರತಿಷ್ಠಾಪಿಸುತ್ತಿದ್ರು. ಹಣಕಾಸಿನ ಸಮಸ್ಯೆ ಇಲ್ಲದಿದ್ದರಿಂದ 15, 17, 19, ಹೀಗೆ ಹಲವು ದಿನಗಳ ಕಾಲ ಗೌರಿ ಪ್ರತಿಷ್ಠಾನಪನೆ ಮಾಡ್ತಾರೆ. ಕಳೆದ 3 ಶತಮಾನದದಿಂದ ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ ಎನ್ನುತ್ತಾರೆ ಗ್ರಾಮದ ಹಿರಿಯರು.

Trending videos

Back to Top