CONNECT WITH US  

ರೈತರ ಜತೆ ಕಾನೂನು ಬಾಹಿರ ಒಪ್ಪಂದ

ಅರಸೀಕೆರೆ: ಎತ್ತಿನಹೊಳೆ ನಾಲೆ ನಿರ್ಮಾಣ ಒಪ್ಪಂದದ ಹೆಸರಿನಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರೈತ ಸಂಘದ ಮುಖಂಡರು ಯೋಜನೆಯ ಎ.ಇ.ಇ ಸುರೇಂದ್ರಾಚಾರ್‌ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅಲ್ಲದೇ, ನಾಲಾ ಕಾಮಗಾರಿಗೂ ಬ್ರೇಕ್‌ ಹಾಕಿದ್ದಾರೆ.

ಭೂ ವಂಚಿತರ ಮನವಿ ಹಿನ್ನೆಲೆಯಲ್ಲಿ ತಾಲೂಕಿನ ರಾಮಸಾಗರ ಸರಹದ್ದಿನಲ್ಲಿ ಹಾದು ಹೋಗುತ್ತಿರುವ ನಾಲಾ ಕಾಮಗಾರಿ ಸ್ಥಳಕ್ಕೆ ರೈತ ಮುಖಂಡರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳೊಂದಿಗೆ ಸಂಘದ ತಾಲೂಕು ಅಧ್ಯಕ್ಷ ಮೇಳೆನಳ್ಳಿ ನಾಗರಾಜ್‌ ಮಾತನಾಡಿ,

ಭೂಮಿ ಸ್ವಾಧೀನಕ್ಕೆ ಪಡೆಯುವ ಸಂಬಂಧ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ. ಆದರೆ, ಯೋಜನೆ ವ್ಯಾಪ್ತಿಯ ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿಗಳು ಕೆಲ ರೈತರೊಂದಿಗೆ ನಿಯಮ ಬಾಹಿರ ಒಪ್ಪಂದ ಮಾಡಿಕೊಂಡು ಭೂಮಿ ಅಗೆಯುವ ಕೆಲಸಕ್ಕೆ ಹೇಗೆ ಕೈಹಾಕಿದ್ದೀರಿ ಎಂದು ಪ್ರಶ್ನಿಸಿದರು.

ತಮ್ಮ ಆತುರದ ನಿರ್ಧಾರದಿಂದಾಗಿ ರೈತರ ಬದುಕು ಬೀದಿಗೆ ಬೀಳುವ ಅಪಾಯವಿದೆ. ಜಿಲ್ಲಾಧಿಕಾರಿಗಳು ಇತ್ತೀಚೆಗೆ ನಡೆಸಿದ ಜನಸಂಪರ್ಕ ಸಭೆಯಲ್ಲಿಯೂ ಭೂಮಿ ನೀಡುವುದು, ಬಿಡುವುದು ರೈತರಿಗೆ ಬಿಟ್ಟ ವಿಷಯ ಎಂದು ತಿಳಿಸಿದ್ದಾರೆ.

ಹೀಗಿದ್ದರೂ ತ್ವರಿತಗತಿಯಲ್ಲಿ ಕೆಲಸ ಮುಗಿಸಲು ಮುಂದಾಗಿರುವ ಅಧಿಕಾರಿಗಳು, ಗುತ್ತಿಗೆದಾರರು ಸಮರ್ಪಕ ಮಾಹಿತಿ ನೀಡದೇ ರೈತರೊಂದಿಗೆ ಕಾನೂನು ಬಾಹಿರ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಇದೀಗ ಒಪ್ಪಂದದ ಪತ್ರ ಮುಂದಿಟ್ಟು ಭೂಮಿ ಅಗೆಯಲಾಗುತ್ತಿದೆ. ಸಕಲೇಶಪುರ, ಆಲೂರು ಸೇರಿದಂತೆ ಹಲವೆಡೆ ಪ್ರತಿ ಎಕರೆಗೆ 3 ರಿಂದ 5 ಲಕ್ಷ ರೂ. ತಾತ್ಕಾಲಿಕ ಪರಿಹಾರ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಆದರೆ, ಈ ಭಾಗದ ರೈತರಿಗೆ ಕೇವಲ ಪುಡಿಗಾಸಿನ ಆಮಿಷವೊಡ್ಡಿ ಭೂಮಿ ಕಿತ್ತುಕೊಳ್ಳಲಾಗುತ್ತಿದೆ. ಆದ್ದರಿಂದಲೇ ಕಾಮಗಾರಿ ಸ್ಥಗಿತಗೊಳಿಸಲು ಹೋರಾಟ ನಡೆಸಲಾಗುತ್ತಿದೆ. ಪರಿಹಾರ ಕುರಿತು ಪ್ರಶ್ನಿಸಿದರೆ ಗುತ್ತಿಗೆದಾರರು ತಮ್ಮನ್ನು ಏನು ಮಾಡಲಾಗುವುದಿಲ್ಲ ಎನ್ನುವ ದರ್ಪ ಪ್ರದರ್ಶಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಧರಣಿ ನಡೆಸುತ್ತೇವೆ: ಇನ್ನು ಸಮಸ್ಯೆಯ ಗಂಭೀರತೆಯ ಬಗ್ಗೆ ಗಮನ ಹರಿಸಬೇಕಾದ ಜಿಲ್ಲಾ ವಿಶೇಷ ಭೂ ಸ್ವಾಧೀನಾಧಿಕಾರಿ ಜಗದೀಶ್‌ ನಡೆ ಕೂಡ ಅನುಮಾನಕ್ಕೆ ಕಾರಣವಾಗಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಮಧ್ಯೆ ಪ್ರವೇಶಿಸಿ ಅನ್ಯಾಯ ತಡೆಯಬೇಕು. ಇಲ್ಲದಿದ್ದಲ್ಲಿ ಭೂ ಸ್ವಾಧೀನಾಧಿಕಾರಿಗಳ ಕಚೇರಿ ಎದುರು ಆಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಮುಖಂಡರಾದ ಬೋರನಕೊಪ್ಪಲು ಶಿವಲಿಂಗಪ್ಪ, ರಾಮಸಾಗರ ಸಂತೋಷ್‌, ಗ್ರಾಪಂ ಸದಸ್ಯರಾದ ಜಯಣ್ಣ, ವೇದಮೂರ್ತಿ, ಮೇಳೆನಳ್ಳಿ ರಂಗಪ್ಪ ಪಾಲ್ಗೊಂಡಿದ್ದರು. ಈ ಸಂಬಂಧ ಎಇಇ ಸುರೇಂದ್ರಾಚಾರ್‌ ಅವರನ್ನು ಸಂಪರ್ಕಿಸಲು ಪತ್ರಿಕೆ ಪ್ರಯತ್ನಿಸಿದರೂ ಸಲಹೆ ಸ್ವೀಕರಿಸಲಿಲ್ಲ. 

Trending videos

Back to Top