CONNECT WITH US  

ಸುಶಿಕ್ಷಿತರಿಂದಲೇ ಜನನ ಪೂರ್ವ ಲಿಂಗಪತ್ತೆ

ಹಾಸನ: ಜನನ ಪೂರ್ವ ಲಿಂಗಪತ್ತೆ ಅಪರಾಧ. ಈ ವಿಷಯವನ್ನು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು
ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹಾಸನದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದೇವೇಂದ್ರಪ್ಪ ಯಮನಪ್ಪ ಬಸಾಪುರ ಸಲಹೆ ನೀಡಿದರು.

ನಗರದ ಜಿಲ್ಲಾ ಆಸ್ಪತ್ರೆ ಬಳಿ ಇರುವ ಸರ್ಕಾರಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ
ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನನ ಪೂರ್ವ ಲಿಂಗಪತ್ತೆ ನಿಷೇಧ ಕುರಿತು
ಕಾನೂನು ಅರಿವು ನೆರವು ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸುಶಿಕ್ಷಿತರೇ ಲಿಂಗಪತ್ತೆಯಂತಹ ಕೆಲಸಕ್ಕೆ ಕೈಹಾಕುತ್ತಿದ್ದಾರೆ. ಸ್ಕ್ಯಾನಿಂಗ್‌ ಮಾಡಿಸಿ ಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರ, ಶಿಕ್ಷಾರ್ಹ ಅಪರಾಧ ಎಂದು ಗೊತ್ತಿದ್ದರೂ ಭ್ರೂಣ ಲಿಂಗಪತ್ತೆ ಮಾಡಿಸುತ್ತಿರುವುದು ವಿಷಾದನೀಯ ಬೆಳವಣಿಗೆ. ಹೆಣ್ಣು ಮಗು ಎಂದು ಗೊತ್ತಾದ ತಕ್ಷಣ ತಾಯಿ ಗರ್ಭದಲ್ಲೇ ಭ್ರೂಣಹತ್ಯೆ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಆರ್ಥಿಕ ದುರ್ಬಲರಿಗೆ ಉಚಿತ ಕಾನೂನು ನೀಡುವ ಉದ್ದೇಶದಿಂದಲೇ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಜಾರಿಗೆ ಬಂದಿದೆ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಉಚಿತ ಕಾನೂನು ನೆರವು ನೀಡಲಾಗುತ್ತಿದೆ.

ಬಡವರಿಂದ ಹಣ ಪಡೆಯದೇ ಉಚಿತ ಪ್ರಾಧಿಕಾರವು ಕಾನೂನು ಸೇವೆ ಕೊಡುತ್ತಾ ಬಂದಿದೆ. ಇದು ಮಹಿಳೆಯರಿಗೂ ಲಭ್ಯವಿದೆ ಎಂದು ಹೇಳಿದರು. ಒಂದೂವರೆ ಲಕ್ಷ ರೂ. ಗಿಂತ ಕಡಿಮೆ ವಾರ್ಷಿಕ ಆದಾಯ ಇರುವವವರಿಗೆ, ಅಂಗಕಲರಿಗೆ, ಪರಿಶಿಷ್ಟ ಜಾತಿ, ಪಂಗಡ ದವರಿಗೆ ಹಾಗೂ ಯೋಧರಿಗೆ ಇದರ ಉಪಯೋಗ ಸಿಗಲಿದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ಡಿ. ವೆಂಕಟೇಶ್‌ ಮಾತನಾಡಿ, ಭ್ರೂಣಲಿಂಗ ಪರೀಕ್ಷೆ ಮಾಡಿಸುವ ಮತ್ತು ಮಾಡುವ ಇಬ್ಬರೂ ಅಪರಾಧಿಗಳಾಗುತ್ತಾರೆ. ಇದಕ್ಕಾಗಿ ಕಾನೂನು ಅರಿವು ಮೂಡಿಸಿ ಜನಸಾಮಾನ್ಯರಿಗೆ ತಿಳಿಸುವ ಕಾರ್ಯವನ್ನು ಮಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗತ್ತಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌, ಹಿರಿಯ ಸಿವಿಲ್‌ ನ್ಯಾಯಾಧೀಶ ಮತ್ತು
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಕೆ.ಬಸವರಾಜು, ಡಾ.ಉಮೇಶ್‌, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನಸ್ವಾಮಿ ಪಾಲ್ಗೊಂಡಿದ್ದರು. ಜೀವನ್‌ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Trending videos

Back to Top