CONNECT WITH US  

ಉನ್ನತ ಶಿಕ್ಷಣ ಪಡೆದು ದೇಶಕ್ಕೆ ಆಸ್ತಿಯಾಗಿ

ಬೇಲೂರು: ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಮತ್ತು ದೇಶಕ್ಕೆ ಅಸ್ತಿಯಾಗಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ| ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಬಿಜೆಎಸ್‌ ವಿಜ್ಞಾನ ಕಾಲೇಜು ವತಿಯಿಂದ  ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗಳು ಕಠಿಣವಾಗಿರುವ ಹಿನ್ನೆಲೆಯಲ್ಲಿ ಪಠ್ಯದ ಜೊತೆ ಇನ್ನಿತರ ಚಟುವಟಿಕೆಗಳಲ್ಲಿ ಅಭ್ಯಾಸ ಅಗತ್ಯವಾಗಿದ್ದು, ಬೌದ್ಧಿಕ, ಮಾನಸಿಕ, ದೈಹಿಕ ಸದೃಢತೆಯಿಂದ ವಿದ್ಯಾರ್ಥಿಗಳು ಪರಿಪೂರ್ಣವಾಗಲು ಸಾಧ್ಯ ಎಂದರು.

ಯಾವುದೇ ಶಿಕ್ಷಣವು ಮೊದಲ ಹಂತದಲ್ಲಿಯೇ ಪೂರ್ಣತೆ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳು ಅತಿ ಕಷ್ಟವಾಗಲಿವೆ. ಸತತ ಪ್ರಯತ್ನ ಮಾಡಿದರೆ ಮಾತ್ರ ಅಚಲ ಜ್ಞಾನವನ್ನು ಹಾಗೂ ಬದುಕಿನಲ್ಲಿ ದಡವನ್ನು ಸೇರಬಹುದು. ಹೆಚ್ಚು ಅಂಕ ಗಳಿಸಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಆತ್ಮಹತ್ಯೆ ಹಾದಿ ಹಿಡಿಯುವುದು ಮೂರ್ಖತನ. ಜೀವನದಲ್ಲಿ ಬರುವ ಕಷ್ಟಗಳನ್ನು ಮೆಟ್ಟಿ ನಿಲ್ಲಬೇಕು ಎಂದು ಸಲಹೆ ನೀಡಿದರು.

ದುಶ್ಚಟಗಳಿಂದ ದೂರ ಉಳಿದು ವಿದ್ಯಾರ್ಥಿ ಜೀವನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿ ಕಾಲಹರಣ ಮಾಡಬಾರದು. ಕಠಿಣ ಪರಿಶ್ರಮ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳ ಮುಲಕ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪಲು ಸಾಧ್ಯ.

ಸೃಜನಶೀಲತೆ ಹಾಗೂ ಅವಿಷ್ಕಾರದ ಗುಣಗಳನ್ನು ಬೆಳೆಸಿಕೊಳ್ಳಬೇಕು. ವ್ಯಾಸಂಗ ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತವಾಗಬಾರದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಹಾಸನ ಅದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಶಿವಪುತ್ರ ಸ್ವಾಮೀಜಿ, ಹಾಸನ ಮಂಜುನಾಥ ಅರ್ಯವೇದ ಸಂಸ್ಥೆಯ ಡಾ| ಗುರುಬಸವರಾಜ್‌ ಯಲಗಚ್ಚಿನ, ಪ್ರಾಂಶುಪಾಲ ಚಂದ್ರಶೇಖರ್‌ ಇತರರಿದ್ದರು.

Trending videos

Back to Top