CONNECT WITH US  

ಭಾರತ ಸಾಂಸ್ಕೃತಿಕತೆಯ ಉಗಮ, ನಾಗರಿಕತೆಯ ತೊಟ್ಟಿಲು

ಚನ್ನರಾಯಪಟ್ಟಣ: ಭಾರತ ದೇಶ ಸಾಂಸ್ಕೃತಿಕತೆಯ ಉಗಮ ಹಾಗೂ ನಾಗರಿಕತೆಯ ತೊಟ್ಟಿಲು ಎಂದು ವಿದೇಶಿ ಇತಿಹಾಸಕಾರರು ಬಣ್ಣಿಸುತ್ತಾರೆ. ಆದರೆ, ನಮ್ಮಲ್ಲಿ ಇತಿಹಾಸ ಪ್ರಜ್ಞೆ ಹಾಗೂ ದಾಖಲಿಸುವ ಸಂಗತಿ ಕಡಿಮೆ ಎಂದು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ವಿಷಾದಿಸಿದರು.

ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮೈಸೂರಿನ ವಿಭಾಗೀಯ ಕಚೇರಿಯ ಪತ್ರಾಗಾರ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರಪಂಚವನ್ನು ತಿಳಿಯುವ ಮೊದಲು ನಮ್ಮ ದೇಶದ ಇತಿಹಾಸ ತಿಳಿಯಬೇಕು. ಪ್ರಪಂಚದಲ್ಲೇ ನಮ್ಮ ದೇಶವು ನಾಗರೀಕತೆಯ ತೊಟ್ಟಿಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಮ್ಮಳಗಿನ ಶಕ್ತಿ ತಿಳಿಸುವ ಇತಿಹಾಸಜ್ಞರ ಅಗತ್ಯವಿದೆ. ವಿಚಾರ ಸಂಕಿರಣಗಳು ವ್ಯಕ್ತಿಯನ್ನು ಎಚ್ಚರಗೊಳಿಸುತ್ತವೆ. ನಮ್ಮೊಳಗಿನ ವಿಶ್ವಾಸ ಕಡಿಮೆಯಾದರೆ ಋಣಾತ್ಮಕ ಅಂಶಗಳು ಹೆಚ್ಚಾಗುತ್ತವೆ ಎಂದು ತಿಳಿಸಿದರು.

ಜಗತ್ತನ್ನು ಒಟ್ಟಗೂಡಿಸುವ ಶಕ್ತಿ ಪ್ರೀತಿಗಿದೆ. ಇಂದಿನ ಡಿಜಿಟಲ್‌ ಯುಗದಲ್ಲಿ ಭಾವನೆಗಳನ್ನು ಬೆಸೆಯುವ ಕೆಲಸವಾಗುತ್ತಿಲ್ಲ. ಹಿಂದಿನ ಕಾಲದಲ್ಲಿ ಪತ್ರಗಳನ್ನು ಬರೆಯುವ ಮೂಲಕ ಸಂಬಂಧಗಳು ಗಟ್ಟಿಗೊಳ್ಳುತ್ತಿದ್ದವು. ಸಾಮಾನ್ಯ ಸಾಪೇಕ್ಷ ಸಿದ್ಧಾಂತದ ಕುರಿತು ಐನ್‌ಸ್ಟಿನ್‌ ತಮ್ಮ ಮಗಳಿಗೆ ಸಾಮಾನ್ಯ ಸಾಪೇಕ್ಷ ಸಿದ್ಧಾಂತದ ಕುರಿತು ಪತ್ರ ಬರೆದಿದ್ದನ್ನು ಅವರು ಉಲ್ಲೇಖೀಸಿದರು. 

ಸಮಾರಂಭ ಉದ್ಘಾಟಿಸಿದ ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ.ದೇವರಕೊಂಡ ರೆಡ್ಡಿ ಮಾತನಾಡಿ, ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಇತಿಹಾಸದ ಅಧ್ಯಯನ ಕ್ಷೀಣಿಸುತ್ತಿದೆ. ವಿದೇಶದಲ್ಲಿ ವೈದ್ಯಕೀಯ ಶಿಕ್ಷಣದಲ್ಲೂ ಇತಿಹಾಸವನ್ನು ಬೋಧಿಸುತ್ತಾರೆ.

ಸಂಶೋಧನೆ ಎಂದರೆ ಪ್ರಶ್ನೆಗೆ ಉತ್ತರ ಹುಡುಕುವುದಾಗಿದೆ. ಪರಂಪರೆ ಉಳಿಯಬೇಕಾದರೆ ದೇವಾಲಯಗಳು ವಾಸ್ತುಶಿಲ್ಪಗಳು, ಶಾಸನಗಳ ರಕ್ಷಣೆಯಾಗಬೇಕು. ಸಂಶೋಧನೆಗೆ ಕಾಲ ವಯಸ್ಸಿನ ಅಂತರವಿಲ್ಲ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಪತ್ರಾಗಾರ ಇಲಾಖೆಯ ಗವಿಸಿದ್ದಯ್ಯ ಆಶಯ ನುಡಿಗಳನ್ನಾಡಿದರು. ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಆದಿಹಳ್ಳಿ ಮಠದ ಶಿವಪುತ್ರನಾಥ ಸ್ವಾಮೀಜಿ  ಪ್ರಾಂಶುಪಾಲ ಪ್ರೊ›.ಕೆ ಚಂದ್ರನ್‌ ಇತರರು ಉಪಸ್ಥಿತರಿದ್ದರು.

Trending videos

Back to Top