ಕೃಷಿ ಭೂಮಿಗೆ ನುಗ್ಗಿದ ಯಗಚಿ ಜಲಾಶಯದ ನೀರು

ಬೇಲೂರು: ತಾಲೂಕಿನ ಪ್ರಸಾದಿಹಳ್ಳಿ ಬಳಿಯ ಸೇತುವೆಗೆ ಕಸ ಕಟ್ಟಿಕೊಂಡಿದ್ದ ಯಗಚಿ ಜಲಾಶಯದಿಂದ ಹರಿಸಿದ್ದ ನೀರು ರೈತರ ಜಮೀನಿಗೆ ನುಗ್ಗಿದ್ದು, ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿರುವ ಘಟನೆ ನಡೆದಿದೆ.
ಕಳೆದ ನಾಲ್ಕು ವರ್ಷಗಳಿಂದ ಮಳೆ ಇಲ್ಲದ ಕಾರಣ ಯಗಚಿ ನದಿಯಲ್ಲಿ ನೀರು ಹರಿಯುತ್ತಿರಲಿಲ್ಲ. ಹೀಗಾಗಿ ಸಾಕಷ್ಟು ಗಿಡಗಂಟಿ ಬೆಳೆದು, ಕಸ, ಹೂಳು ತುಂಬಿಕೊಂಡಿತ್ತು. ಇದೀಗ ಯಗಚಿ ಜಲಾಶಯ ತುಂಬಿದ್ದು, ನದಿಗೆ ನೀರು ಹರಿಬಿಡಲಾಗಿದೆ.
ಇದೀಗ ನೀರಿನ ಜೊತೆ ನದಿಯಲ್ಲಿನ ಕಸ, ಗಿಡಗಂಟಿಗಳು ಕೊಚ್ಚುಕೊಂಡು ಹರಿಯುತ್ತಿದ್ದು, ಪ್ರಸಾದಿಹಳ್ಳಿ ಬಳಿಯ ಸೇತುವೆಗೆ ಕಟ್ಟಿಕೊಂಡಿವೆ. ಇದೀಗ ನದಿ ನೀರು ಅಕ್ಕಪಕ್ಕದ ರೈತರ ಜಮೀನಿಗೆ ನುಗ್ಗುತ್ತಿದೆ. ಇದರಿಂದ ಮುಸುಕಿನ ಜೋಳ, ಆಲೂಗೆಡ್ಡೆ, ಮುಂತಾದ ಬೆಳೆ ಆಪಾರ ಪ್ರಮಾಣದಲ್ಲಿ ನಾಶವಾಗಿದೆ.
ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ಜಿಪಂ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ತಾನು ಜಿಪಂ ಸದಸ್ಯನಾಗಿದ್ದಾಗ 5 ಲಕ್ಷ ರೂ. ವೆಚ್ಚದಲ್ಲಿ 100 ಅಡಿ ಉದ್ದ, 20 ಅಡಿ ಎತ್ತರದ ಸೇತುವೆ ನಿರ್ಮಾಣ ಮಾಡಿದ್ದೆ.
ಇದರಿಂದ ಈ ಭಾಗದ ರೈತರ ಸಂಚಾರಕ್ಕೆ ಅನುಕೂಲವಾಗಿತ್ತು. ಆದರೆ, ಜಲಾಶಯದಿಂದ ನೀರು ಹೆಚ್ಚಾಗಿ ಹರಿ ಬಿಟ್ಟಿರುವ ಕಾರಣ, ಸೇತುವೆ ಬಳಿ ಕಸಕಟ್ಟಿಕೊಂಡು ನೀರು ರೈತರ ಜಮೀನಿಗೆ ನುಗ್ಗುತ್ತಿದೆ ಎಂದು ದೂರಿದರು.
ಯಗಚಿ ಜಲಾಶಯದ ಅಧಿಕಾರಿಗಳಿಗೆ ವಿಚಾರ ತಿಳಿಸಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರೇ ಬೇಲೂರು ಪುರಸಭೆಗೆ ಸೇರಿದ ಜೆ.ಸಿ.ಬಿ. ಯಂತ್ರ ಬಳಸಿಕೊಂಡು ಸೇತುವೆಗೆ ಕಟ್ಟಿಕೊಂಡಿರುವ ಗಿಡಗಂಟಿ ತೆರವುಗೊಳಿಸಲಾಗುತ್ತಿದೆ. ಕೂಡಲೇ ಯಗಚಿ ನೀರಾವರಿ ನಿಗಮದ ಅಧಿಕಾರಿಗಳು ರೈತರ ಹಿತಕಾಪಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ನಿರ್ಮಿಸಿರುವ ಸೇತುವೆ ಬಹಳ ಚಿಕ್ಕದಾಗಿದೆ. ಸೇತುವೆ ಹಿಂಭಾಗದಲ್ಲಿ ನೂರಾರು ಎಕರೆ ಕೃಷಿ ಭೂಮಿ ಇದೆ. ಯಗಚಿ ನೀರಾವರಿ ನಿಗಮದ ಅಧಿಕಾರಿಗಳು ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು. ಅಲ್ಲದೆ, ಶಾಸಕರು ಈ ಬಗ್ಗೆ ಗಮನ ಹರಿಸಿ ರೈತರಿಗೆ ಅನುಕೂಲ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ತಾಪಂ ಮಾಜಿ ಅಧ್ಯಕ್ಷ ಅಬ್ದುಲ್ಸುಭಾನ್, ಸನ್ಯಾಸಿಹಳ್ಳಿ ಪಿಎಸಿಸಿ ಅಧ್ಯಕ್ಷ ಪಿ.ಎಂ.ದೇವರಾಜ್ ಇದ್ದರು.