CONNECT WITH US  

ಕಾಫಿ, ಏಲಕ್ಕಿ, ಮೆಣಸು, ಭತ್ತದ ಬೆಳೆ ಶೇ.60 ಹಾನಿ

ಸಕಲೇಶಪುರ: ಅತಿವೃಷ್ಟಿಯಿಂದಾಗಿ ಕಾಫಿ, ಏಲಕ್ಕಿ, ಮೆಣಸು ಹಾಗೂ ಭತ್ತದ ಬೆಳೆಗೆ ತೀವ್ರ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರ ಒತ್ತಾಯಿಸಲಾಗುವುದು ಎಂದು ಕಾಫಿ ಮಂಡಳಿಯ ಅಧ್ಯಕ್ಷ ಎಂ.ಎಸ್‌. ಭೋಜೇಗೌಡ ಹೇಳಿದರು.

ತಾಲೂಕಿನಲ್ಲಿ ಮಳೆಯಿಂದ ಹಾನಿಗೀಡಾಗಿ ರುವ ಪಟ್ಲ, ಹಿಜ್ಜನಹಳ್ಳಿ, ಕಲ್ಲಳ್ಳಿ, ಮಾಗೇರಿ ಗ್ರಾಮಗಳಿಗೆ ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಜಿಲ್ಲೆ ಬೆಳೆಗಾರರ ಸಂಘದೊಂದಿಗೆ ಭೇಟಿ ನೀಡಿ, ಬೆಳೆ, ಆಸ್ತಿಪಾಸ್ತಿ ಹಾನಿಯಾಗಿರು ವುದನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪಶ್ಚಿಮಘಟ್ಟಗಳ ಪ್ರದೇಶಗಳ ವ್ಯಾಪ್ತಿಯಲ್ಲಿ ಈ ಬಾರಿ ಉಂಟಾಗಿರುವ ಅತಿವೃಷ್ಟಿಯಿಂದ ತಾಲೂಕಿನ ಅನೇಕ ಭಾಗಗಳಲ್ಲಿ ಶೇ.60ಕ್ಕೂ ಹೆಚ್ಚು ಪ್ರಮಾಣದ ಕಾಫಿ, ಮೆಣಸು, ಏಲಕ್ಕಿ ಬೆಳೆ ನಾಶವಾಗಿದೆ. ಕಂದಾಯ ಇಲಾಖೆ ಹಾಗೂ ಕಾಫಿ ಮಂಡಳಿ ಜಂಟಿ ಸರ್ವೆ ನಡೆಸಿ ನಷ್ಟದ ಪ್ರಮಾಣ ಅಂದಾಜಿಸಲು ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲಿ ಮತ್ತೂಮ್ಮೆ ಬೆಳೆಗಾರರ ಸಂಘಟನೆ ಗಳೊಂದಿಗೆ ಸಭೆ ನಡೆಸಿ ಕೇಂದ್ರ ಸರ್ಕಾರಕ್ಕೆ ಕಾಫಿ ಬೆಳೆಯ ನಷ್ಟದ ವರದಿ ನೀಡಲಾಗುವುದು ಎಂದು ವಿವರಿಸಿದರು.

 ಜಿಲ್ಲಾ ಬೆಳೆಗಾರರ ಸಂಘದ ಮಾಜಿ ಕಾರ್ಯದರ್ಶಿ ಹೆಬ್ಬಸಾಲೆ ಪ್ರಕಾಶ್‌ ಮಾತನಾಡಿ, ಹೆತ್ತೂರು, ವಣಗೂರು, ಹೊಂಗಡಹಳ್ಳ, ಉಚ್ಚಂಗಿ ಭಾಗಗಳಲ್ಲಿ ರಸ್ತೆಗಳು ಕುಸಿದಿವೆ. ವಿದ್ಯುತ್‌ ಸಂಪರ್ಕ ಇಲ್ಲದಂತಾಗಿದೆ. ನೂರಾರು ಎಕರೆಗೂ ಹೆಚ್ಚಿನ ಕಾಫಿ ತೋಟ ಕುಸಿದಿದೆ. ಹಿಜ್ಜನಹಳ್ಳಿ ಗ್ರಾಮದ ಸುತ್ತಮುತ್ತ ಭೂಮಿಯಲ್ಲಿ ಭಾರೀ ಪ್ರಮಾಣದ ಬಿರುಕು ಕಾಣಿಸುತ್ತಿದೆ. ಸ್ಥಳೀಯರನ್ನು ಕಳೆದ ಎರಡು ದಿನಗಳಿಂದ ಮಾಗೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ ನಿರಾಶ್ರಿತ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಹೇಳಿದರು.

ಸಂಪೂರ್ಣ ಸಾಲ ಮನ್ನಾ ಮಾಡಿ: ತಾಲೂಕಿ ನಲ್ಲಿ ಶೇ.80ಕ್ಕೂ ಹೆಚ್ಚಿನ ಆಸ್ತಿಪಾಸ್ತಿ ಬೆಳೆ ಹಾನಿ ಯಾಗಿದೆ. ಕೂಡಲೇ ಸರ್ಕಾರ ಇತ್ತ ಗಮನ ಹರಿಸಬೇಕು. ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದಿರುವ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ದೀರ್ಘ‌ ಕಾಲದ ಬೆಳೆ ಹಾನಿಯಾಗಿರುವುದರಿಂದ 10 ವರ್ಷಗಳ ಅವಧಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಬೇಕು, ಕಾಫಿ ತೋಟ, ಗದ್ದೆ ಹಾಗೂ ಹಾನಿಯಾಗಿರುವ ಆಸ್ತಿ -ಪಾಸ್ತಿಗೆ, ಸರ್ಕಾರ ಬದಲಿ ಜಮೀನನ್ನು ನೀಡಬೇಕು ಎಂದು ಮನವಿ ಮಾಡಿದರು.
 
ಬಾಳೆಹೊನ್ನೂರು ಕಾಫಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ರಘುರಾಂ, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ
ಬಿ.ಎಸ್‌.ಜೈರಾಂ, ಪ್ರಧಾನ ಕಾರ್ಯದರ್ಶಿ ಯು. ಎಂ.ತೀರ್ಥ ಮಲ್ಲೇಶ್‌, ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಎಸ್‌.ಮಹೇಶ್‌ ಉಪಸ್ಥಿತರಿದ್ದರು.


Trending videos

Back to Top