CONNECT WITH US  

ವಿಶೇಷ ಪ್ಯಾಕೇಜ್‌ಗಾಗಿ ಪ್ರಧಾನಿಗೆ ಪತ್ರ

ಹಾಸನ: ಅತಿವೃಷ್ಟಿ, ಪ್ರವಾಹ, ಭೂ ಕುಸಿತದಿಂದ ಹಾಸನ ಜಿಲ್ಲೆಯಲ್ಲಿ 307.16 ಕೋಟಿ ರೂ. ಪ್ರಾಥಮಿಕ ಹಾನಿಯ ಅಂದಾಜು ಮಾಡಲಾಗಿದೆ. ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್‌ ನೀಡಬೇಕು. ಈ ಸಂಬಂಧ ತಾವು ಪ್ರಧಾನಿಯವರಿಗೆ ಪತ್ರ ಬರೆಯುವೆ ಎಂದು ಕ್ಷೇತ್ರದ ಸಂಸದ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು. 

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಭಾರೀ ಮಳೆ ಹಾಗೂ ಭೂ ಕುಸಿತದಿಂದ ಸಕಲೇಶಪುರ ತಾಲೂಕಿನಲ್ಲಿ ಕಾಫಿ, ಮೆಣಸು, ಏಲಕ್ಕಿ, ಅಡಿಕೆ ಬೆಳೆ ನಾಶವಾಗಿದೆ. ಆದರೆ, ಈಗ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಳೆ ಪರಿಹಾರ ಏನೇನೂ ಸಾಲದು.

ಹೆಚ್ಚು ಪರಿಹಾರ ನೀಡಬೇಕೆಂದು ಹೋರಾಟ ಮಾಡುವ ಸಂಬಂಧ  ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಕೊಡಗು ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಆಸ್ತಿ, ಬೆಳೆ ಹಾನಿ ಸಂಭವಿಸದೆ. ಹಾಸನ ಜಿಲ್ಲೆಯಲ್ಲಿ ಅತಿಹೆಚ್ಚು ಸಕಲೇಶಪುರ ತಾಲೂಕಿನಲ್ಲಿ ಹಾನಿಯಾಗಿದ್ದರೆ, ಅರಲಕಗೂಡು, ಆಲೂರು, ಬೇಲೂರು ತಾಲೂಕಿನಲ್ಲಿಯೂ ಹಾನಿ ಆಗಿದೆ ಎಂದು ಹೇಳಿದರು. 

ತಕ್ಷಣವೇ ಪ್ರಧಾನಿಗೆ ಪತ್ರ: ನೆರೆ ಪರಿಹಾರಕ್ಕೆ ಪ್ರಧಾನಿ ಪತ್ರ ಬರೆಯುತ್ತೇನೆ. ಅಗತ್ಯವಿದ್ದರೆ ವೈಯಕ್ತಿವಾಗಿಯೂ ಭೇಟಿ ಮಾಡಿ ಪ್ರಧಾನಿಗೆ ಹಾನಿಯ ವಿವರ ನೀಡುತ್ತೇನೆ. ಅಲ್ಲದೆ, ಕೇಂದ್ರ ಕೃಷಿ ಮತ್ತು ವಾಣಿಜ್ಯ ಸಚಿವರನ್ನು ಭೇಟಿ ಮಾಡುವೆ ಎಂದು ಹೇಳಿದರು. 

ಕೇಂದ್ರ ಸರ್ಕಾರ ನೆರವು ಕೊಟ್ಟರೆ ಸಂತೋಷ. ಇಲ್ಲದಿದ್ದರೆ ರಾಜ್ಯ ಸರ್ಕಾರದಿಂದಲೇ ಪರಿಹಾರ ಕಾರ್ಯ ಕೈಗೊಳ್ಳಲಾಗುವುದು. ಸೆ.4ರಂದು ದಿಶಾ ಸಭೆಯಲ್ಲಿ ವಿವರವಾಗಿ ಚರ್ಚಿಸಿ ಪರಿಹಾರ ಕಾರ್ಯಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಸಕಲೇಶಪುರ ಕ್ಷೇತ್ರದ ಶಾಸಕ ಎಚ್‌.ಕೆ.ಕುಮಾರಸ್ವಾಮಿ, ಬೇಲೂರು ಶಾಸಕ ಕೆ.ಎಸ್‌.ಲಿಂಗೇಶ್‌, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿ.ಪಂ.ಸಿಇಒ ಜಿ.ಜಗದೀಶ್‌, ಅಪರ ಜಿಲ್ಲಾಧಿಕಾರಿ ಫ‌ೂರ್ಣಿಮಾ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ 307.16 ಕೋಟಿ ರೂ. ಹಾನಿಯ ಪ್ರಾಥಮಿಕ ಅಂದಾಜು
ತಾಲೂಕು    ನಷ್ಟ ಪ್ರಮಾಣ

-ಸಕಲೇಶಪುರ    247.17 ಕೋಟಿ ರೂ.
-ಆಲೂರು    8.78 ಕೋಟಿ ರೂ.
-ಬೇಲೂರು    13.24 ಕೋಟಿ ರೂ.
-ಅರಕಲಗೂಡು    38.49 ಕೋಟಿ ರೂ.

ಸಕಲೇಶಪುರ ತಾಲೂಕಿನಲ್ಲಿ ಸಂಭವಿಸಿರುವ ನಷ್ಟದ ಪ್ರಮಾಣ
ಇಲಾಖೆ    ನಷ್ಟದ ಪ್ರಮಾಣ

-ಪಿಡಬ್ಲೂಡಿ    150.55 ಕೋಟಿ ರೂ.
-ಜಿಲ್ಲಾ ಪಂಚಾಯ್ತಿ    29.19 ಕೋಟಿ ರೂ.
-ಬೆಳೆ, ಮನೆ    66.9 ಕೋಟಿ ರೂ.
-ಸೆಸ್ಕ್    1.36 ಕೋಟಿ ರೂ.


Trending videos

Back to Top