CONNECT WITH US  

ಮುಖ್ಯ ಶಿಕ್ಷಕಿ ವರ್ಗಾವಣೆಗೆ ಆಗ್ರಹ

ಕುಷ್ಟಗಿ: ಯಲಬುರ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯ ಸರ್ವಾಧಿಕಾರಿ ಧೋರಣೆಗೆ ಬೇಸತ್ತು ಕ್ಷೇತ್ರ
ಶಿಕ್ಷಣಾಧಿ ಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸೋಮವಾರ ಇಲ್ಲಿನ ಬಿಇಒ
ಕಚೇರಿಯ ಎದುರು ಧರಣಿ ನಡೆಸಿದರು.

ಮುಖ್ಯ ಶಿಕ್ಷಕಿ ವಿರುದ್ಧ ಘೋಷಣೆ ಕೂಗಿದ ಗ್ರಾಮಸ್ಥರು,ಅವರನ್ನು ಬೇರೆ ಶಾಲೆಗೆ ವರ್ಗಾಯಿಸುವ ಭರವಸೆ ಸಿಗುವವರೆಗೂ ಧರಣಿ ಮುಂದುವರಿಸುವುದಾಗಿ ಎಚ್ಚರಿಸಿದರು. ಪ್ರಭಾರಿ ಶಿಕ್ಷಣಾಧಿಕಾರಿ ಕಚೇರಿಯಲ್ಲಿಲ್ಲದ ಹಿನ್ನೆಲೆಯಲ್ಲಿ ಅಲ್ಲಿನ ಸಿಬ್ಬಂದಿಗಳು ಯಲಬುರ್ತಿ ಗ್ರಾಮಸ್ಥರ ದೂರಿನನ್ವಯ ಸದರಿ ಮುಖ್ಯ ಶಿಕ್ಷಕಿ ವಿರುದ್ಧ ಕಾರಣ ಕೇಳಿ ನೋಟಿಸ್‌ ಜಾರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬಿಇಒ ಸಹಿ ಮಾತ್ರ ಬಾಕಿ ಎಂದು ಸಮಜಾಯಿಷಿ ನೀಡಿದರೂ ಪ್ರಯೋಜನವಾಗಲಿಲ್ಲ.

ಯಲಬುರ್ತಿಯ 1ರಿಂದ 8ನೇ ತರಗತಿ ಶಾಲೆಯಲ್ಲಿ 287 ಮಕ್ಕಳಿದ್ದು, ಮಂಜೂರಾದ ಹುದ್ದೆಗಳ ಪ್ರಕಾರ 11 ಶಿಕ್ಷಕರಿರಬೇಕು. ಆದರೆ
ಸದ್ಯ 6 ಶಿಕ್ಷಕರಿದ್ದು, ಈ ಸಂದರ್ಭದಲ್ಲಿ ಶಿಕ್ಷಕ ಸಿದ್ದಪ್ಪ ಗುರುವಿನ್‌ ಅವರನ್ನು ಮುಖ್ಯ ಶಿಕ್ಷಕಿ ಏಕಪಕ್ಷೀಯವಾಗಿ ಬೇರೆ ಶಾಲೆಗೆ
ನಿಯೋಜಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ಎಸಿಎಂಸಿ ಇಲ್ಲ. ಪಾಲಕರು ಶಾಲೆಯ ಕುಂದುಕೊರತೆ ಬಗ್ಗೆ ವಿಚಾರಿಸಿದರೆ ಉದ್ಧಟತನದಿಂದ ವರ್ತಿಸುತ್ತಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

ಈ ಬೆಳವಣಿಗೆಗಳಿಂದ ಬೇಸತ್ತು ಬಿಇಒಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಧರಣಿ ಆರಂಭಿಸಿರುವುದಾಗಿ
ಗ್ರಾಮಸ್ಥರು ತಿಳಿಸಿದರು. ಪ್ರತಿಭಟನೆಯಲ್ಲಿ ಸುರೇಶ ಗೋಗೇರಿ, ಯಮನೂರಪ್ಪ ಭೋವಿ, ಗುರುರಾಜ ಬಂಡಿ, ಮಹಿಬೂಬ್‌
ಸಾಬ್‌ ಮುಧೋಳ, ಮರಿಯಪ್ಪ ಗೋತಗಿ, ಶಿವು ಹಕಾಳ, ಕರ್ನಾಟಕ ವಿದ್ಯಾರ್ಥಿ ವಿಕಾಸ ಸಂಘಟನೆಯ ದೇವರಾಜ ಹಜಾಳದರ್‌,
ಶಿವಪ್ಪ, ಸುರೇಶ, ಶರಣಪ್ಪ ಮತ್ತಿತರರಿದ್ದರು.


Trending videos

Back to Top