CONNECT WITH US  

ಮಲ್ಟಿಪಲ್‌ ಸ್ಕ್ಲಿರೋಸಿಸ್‌

ಕಾರಣಗಳು, ಸಂದರ್ಭ ಹಾಗೂ ಅಪಾಯ ಪೂರಕ ಅಂಶಗಳು :
ಮಲ್ಟಿಪಲ್‌ ಸ್ಕ್ಲಿರೋಸಿಸ್‌ ಕಾಯಿಲೆಯು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ಬಾಧಿಸುತ್ತದೆ.  ಸಾಮಾನ್ಯವಾಗಿ 20 ರಿಂದ 40 ವಯಸ್ಸಿನ ಮಧ್ಯೆ ಈ ಕಾಯಿಲೆ ಪತ್ತೆಯಾಗುತ್ತದೆಯಾದರೂ, ಇದು ಯಾವ ವಯಸ್ಸಲ್ಲಾದರೂ ಬಾಧಿಸಬಹುದು.

ಈ ಕಾಯಿಲೆಯಲ್ಲಿ ನರಕೋಶಗಳನ್ನು ಆವರಿಸಿರುವ ಸುರಕ್ಷಾ ಪೊರೆಗೆ ಹಾನಿಯಾಗುತ್ತದೆ. ಈ ಪೊರೆಗಳಿಗೆ ಹಾನಿಯಾದರೆ, ನರ ಸಂದೇಶಗಳ ರವಾನೆ ನಿಧಾನವಾಗುತ್ತವೆ ಅಥವಾ ನಿಂತುಹೋಗುತ್ತವೆ.
  
ಉರಿಯೂತದ ಕಾರಣದಿಂದಲೂ ನರಗಳಿಗೆ ಹಾನಿಯಾಗಬಹುದು. ಸ್ವತಃ ದೇಹದ ಪ್ರತಿರಕ್ಷಣಾ ಕೋಶಗಳೇ ನರವ್ಯೂಹಕ್ಕೆ ಹಾನಿ ಉಂಟುಮಾಡಿದಾಗ ಉರಿಯೂತ ಉಂಟಾಗುತ್ತದೆ. ಮೆದುಳಿನ ಭಾಗಗಳಲ್ಲಿ, ಕಣ್ಣಿನ ನರಗಳಲ್ಲಿ ಹಾಗೂ ಬೆನ್ನು ಹುರಿಯಲ್ಲಿ ನರಗಳಿಗೆ ಈ ರೀತಿಯ ಹಾನಿ ಉಂಟಾಗುತ್ತದೆ.

ಈ ರೀತಿ ಆಗಲು ಏನು ಕಾರಣ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.  ವೈರಸ್‌ ಅಥವಾ ವಂಶವಾಹಿಗಳ ಅಥವಾ ಇವೆರಡರ ನ್ಯೂನತೆಯಿಂದ ಹೀಗಾಗುತ್ತದೆ ಎಂಬ ಸಾಮಾನ್ಯ ಭಾವನೆಯೊಂದು ಇದೆ. ವಾತಾವರಣದ ಪ್ರಭಾವವೂ ಇದಕ್ಕೆ ಕಾರಣವಾಗಿರಬಹುದು.
 
ಕುಟುಂಬದಲ್ಲಿ ಮಲ್ಟಿಪಲ್‌ ಸ್ಕ್ಲಿರೋಸಿಸ್‌ ಅಥವಾ ನರಕೋಶದ ಪೊರೆಗೆ ಹಾನಿಯಾಗುವ ಕಾಯಿಲೆಯ ಹಿನ್ನೆಲೆ ಇದ್ದರೆ ಆ ಕುಟುಂಬದ ಸದಸ್ಯರು ಹಾಗೂ ಈ ಕಾಯಿಲೆಯು ಸರ್ವೇ ಸಾಮಾನ್ಯವಿರುವ ಜಾಗದಲ್ಲಿ ನೆಲೆಸಿರುವವರಲ್ಲಿ ಈ ಕಾಯಿಲೆಯು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
  
ಚಿನ್ಹೆಗಳು ಹಾಗೂ ಪರೀಕ್ಷೆಗಳು:
ಮಲ್ಟಿಪಲ್‌ ಸ್ಕ್ಲಿರೋಸಿಸ್‌ ಕಾಯಿಲೆಯ ಲಕ್ಷಣಗಳು, ಇನ್ನಿತರ ಅನೇಕ ರೀತಿಯ ನರಸಂಬಂಧಿ ಕಾಯಿಲೆಗಳ ಲಕ್ಷಣಗಳಂತೆಯೇ ಇರಬಹುದು. ಹಾಗಾಗಿ ಈಗಿರುವ ಲಕ್ಷಣಗಳು ಬೇರೆ ನರವ್ಯಾಧಿಗಳದ್ದಲ್ಲ  ಎಂಬುದನ್ನು ತಪಾಸಣೆಯ ಮೂಲಕ ದೃಢಪಡಿಸಿಕೊಳ್ಳಬೇಕು.

ಮರುಕಳಿಸುವ-ಲಕ್ಷಣರಹಿತ ರೀತಿಯ ಮಲ್ಟಿಪಲ್‌ ಸ್ಕ್ಲಿರೋಸಿಸ್‌ ಇರುವ ಜನರಿಗೆ ಕನಿಷ್ಠ ಎರಡು ಬಾರಿ ಆಘಾತಗಳಾದ ಹಿನ್ನೆಲೆ ಇದ್ದರೆ ಇವನ್ನು ಲಕ್ಷಣಗಳು ಕಡಿಮೆಯಾದ ಅಥವಾ ರೋಗಲಕ್ಷಣಗಳೇ ಇಲ್ಲದ ಅವಧಿ ಎಂಬುದಾಗಿ ವರ್ಗೀಕರಿಸಬೇಕು.

ಬೇರೆ ಬೇರೆ ಅವಧಿಯಲ್ಲಿ, ಕೇಂದ್ರೀಯ ನರವ್ಯೂಹದ ಎರಡು ಪ್ರತ್ಯೇಕ ಭಾಗಗಳಲ್ಲಿಯ ಚಟುವಟಿಕೆ ಕುಗ್ಗಿದೆಯೇ (ಅಂದರೆ ಅಸಹಜ ಅನೈಚ್ಛಿಕ ಪ್ರತಿಕ್ರಿಯೆ ಇತ್ಯಾದಿ) ಎಂಬುದರ ಆಧಾರದಲ್ಲಿ ವೈದ್ಯರು ಮಲ್ಟಿಪಲ್‌ ಸ್ಕ್ಲಿರೋಸಿಸ್‌ ಕಾಯಿಲೆಯನ್ನು ಪತ್ತೆ ಮಾಡುತ್ತಾರೆ. 

ನರವ್ಯೂಹದ ಪರೀಕ್ಷೆಯಲ್ಲಿ ದೇಹದ ಒಂದು ಭಾಗದಲ್ಲಿ  ನರ ಚಟುವಟಿಕೆಗಳು ಕುಗ್ಗಿರುವ ಲಕ್ಷಣಗಳು ಅಥವಾ ದೇಹದ ಅನೇಕ ಭಾಗಗಳಿಗೆ ಈ ಲಕ್ಷಣಗಳು ಹರಡಿರುವುದು ಗೋಚರಿಸಬಹುದು. 
ಅಂದರೆ,

ನರಗಳ ಅಸಹಜ ಅನೈಚ್ಛಿಕ ಪ್ರತಿಕ್ರಿಯೆ

ದೇಹದ ಒಂದು ಭಾಗವನ್ನು ಅತ್ತಿತ್ತ ಆಡಿಸಲು ಅಥವಾ ಚಲಾಯಿಸಲು ಕಷ್ಟವಾಗುವುದು

ಸಂವೇದನೆಯ ಅಸಹಜತೆ ಅಥವಾ ಕುಗ್ಗುವುದು

ನರವ್ಯೂಹಕ್ಕೆ ಸಂಬಂಧಿಸಿದ ಇತರ ಚಟುವಟಿಕೆಗಳು ಕುಂದುವುದು

ಕಣ್ಣುಗಳ ಪರೀಕ್ಷೆಯಲ್ಲಿ  ಈ ರೀತಿಯಾಗಿ ಗೋಚರಿಸಬಹುದು:
ಕಣ್ಣಿನ ಪಾಪೆಯ ಅಸಹಜ ಪ್ರತಿಕ್ರಿಯೆ

ದೃಶ್ಯ ವಲಯ ಅಥವಾ ಕಣ್ಣಿನ ಚಲನೆಯಲ್ಲಿ ವ್ಯತ್ಯಾಸವಾಗುವುದು

ಕಣ್ಣಿನ ದೃಷ್ಟಿ ಮಂದವಾಗುವುದು

ಕಣ್ಣಿನ ಒಳಭಾಗಗಳಲ್ಲಿ  ಸಮಸ್ಯೆ ಕಂಡುಬರುವುದು

ಅತ್ತಿತ್ತ ನೋಡುವಾಗ ಅಸಹಜ ಕಣ್ಣು ಮಿಟುಕಿಸುವಿಕೆ ಕೆರಳುವುದು

ಮಲ್ಟಿಪಲ್‌ ಸ್ಕ್ಲಿರೋಸಿಸ್‌ ಕಂಡು ಹಿಡಿಯಲು ಮಾಡುವ ಪರೀಕ್ಷೆಗಳು:

ಸೆರೆಬ್ರೋಸ್ಪೆ ನಲ್‌ ಫ‌ುಯ್ಲಿಡ್‌ ಪರೀಕ್ಷೆಗಾಗಿ, ಲಂಬಾರ್‌ ಪಂಕ್ಚರ್‌ (ಸ್ಪೈನಲ್‌ ಟ್ಯಾಪ್‌), ಜೊತೆಗೆ ಓಲಿಗೋಕ್ಲಾನಲ್‌ ಬ್ಯಾಂಡಿಂಗ್‌ 

ಮಲ್ಟಿಪಲ್‌ ಸ್ಕ್ಲಿರೋಸಿಸ್‌ನ ತಪಾಸಣೆ ಹಾಗೂ ಚಿಕಿತ್ಸೆಯಲ್ಲಿ ತಲೆ ಹಾಗೂ ಮೆದುಳುಬಳ್ಳಿಯ MRI ಸ್ಕ್ಯಾನ್‌ ಅತ್ಯಗತ್ಯ.

ನರಗಳ ಚಟುವಟಿಕೆಯ ಪರೀಕ್ಷೆ (ಇವೋಕ್ಡ್ ಪೊಟೆನ್ಷಿಯಲ್‌ ಟೆಸ್ಟ್‌ )

ಚಿಕಿತ್ಸೆ:
ಮಲ್ಟಿಪಲ್‌ ಸ್ಕ್ಲಿರೋಸಿಸ್‌ಗೆ ಸದ್ಯಕ್ಕೆ ಯಾವುದೇ ಗುಣಕಾರಿ ಚಿಕಿತ್ಸೆ ಲಭ್ಯವಿಲ್ಲ. ಹಾಗಿದ್ದರೂ ಕಾಯಿಲೆಯನ್ನು ನಿಧಾನಗೊಳಿಸಲು ಅಥವಾ ಕಾಯಿಲೆಯ ಪ್ರಭಾವವನ್ನು ಚಿಕಿತ್ಸೆಗಳಿಂದ ತಗ್ಗಿಸಲು ಸಾಧ್ಯವಿದೆ.  ರೋಗ ಲಕ್ಷಣಗಳನ್ನು ನಿಯಂತ್ರಣದಲ್ಲಿರಿಸಿ ಸಹಜ ಜೀವನಕ್ಕೆ ಸಹಕರಿಸುವುದಷ್ಟೇ ಚಿಕಿತ್ಸೆಯ ಮೂಲ ಉದ್ದೇಶವಾಗಿರುತ್ತದೆ.

ಮಲ್ಟಿಪಲ್‌ ಸ್ಕ್ಲಿರೋಸಿಸ್‌ ಕಾಯಿಲೆಯು ಪಸರಿಸುವುದನ್ನು ತಡೆಯಲು ಔಷಧಿಯನ್ನು ದೀರ್ಘ‌ಕಾಲ ತೆಗೆದುಕೊಳ್ಳುವುದು ಅತ್ಯಾವಶ್ಯಕ. ಆ ಔಷಧಿಗಳೆಂದರೆ,

ಇಂಟರ್‌ಫೆರಾನ್ಸ್‌ (ಆವೊನೆಕ್ಸ್‌, ಬಿಟಾಸೆರಾನ್‌ ಅಥವಾ ರೆಬಿಫ್), ಗ್ಲಾಟಿರಾಮೆರ್‌ ಅಸಿಟೇಟ್‌ (ಕೋಪಾಕ್ಸಾನ್‌), ಮೈಟೋಕ್ಸಾಂಟ್ರಾನ್‌(ನೋವಾನ್‌ಂಟ್ರಾನ್‌) ಹಾಗೂ ನಾಟಾಲಿಝಂಬ್‌ (ಟೈಸಬ್ರಿ)

ಫಿಂಗಾಲಿಮೋಡ್‌ (ಜಿಲೆನ್ಯಾ)

ಮೆಥೋಟ್ರೆಕ್ಸೇಟ್‌, ಅಝಾಥಿಯೋಪ್ರ„ನ್‌ (ಇಮ್ಯುರಾನ್‌), ಇಂಟ್ರಾನಸ್‌ ಇಮ್ಯುನೋಗ್ಲೋಬ್ಯುಲಿನ್‌ ಹಾಗೂ ಸೈಕ್ಲೋಫಾಸ್ಪಮೈಡ್‌ (ಸೈಟಾಕ್ಸಾನ್‌) ಅನ್ನೂ ಸಹ ಮೇಲಿನ ಔಷಧಿಗಳು ಪರಿಣಾಮಕಾರಿಯಾಗದಿದ್ದರೆ ಉಪಯೋಗಿಸಬಹುದು.

ಆಘಾತದ ತೀವ್ರತೆಯನ್ನು ಕಡಿಮೆಗೊಳಿಸಲು ಸ್ಟಿರಾಯ್ಡಗಳನ್ನು ಉಪಯೋಗಿಸಬಹುದು

ರೋಗ ಲಕ್ಷಣಗಳನ್ನು  ಕಡಿಮೆ ಮಾಡುವ ಔಷಧಿಗಳು ಎಂದರೆ:
ಸ್ನಾಯು ಸೆಳೆತವನ್ನು ಕಡಿಮೆಗೊಳಿಸಲು ಲಯೋರೆಸಲ್‌ (ಬ್ಯಾಕ್ಲೋಫೆನ್‌), ಟೈಝಾನಿಡೈನ್‌ (ಝನಾಫ್ಲೆಕ್ಸ್‌) ಅಥವಾ ಬೆಂಜೋಡೈಯಾಝೆಪೈನ್‌

ಮೂತ್ರವಿಸರ್ಜನೆಯ ತೊಂದರೆಗಳನ್ನು ತಗ್ಗಿಸಲು ಕಾಲಿನೆರ್ಜಿಕ್‌ ಔಷಧಿಗಳು

ನಡವಳಿಕೆ ಹಾಗೂ ಭಾವನೆಯ ಲಕ್ಷಣಗಳನ್ನು ಕಡಿಮೆಗೊಳಿಸಲು ಖನ್ನತೆಯ ನಿರೋಧಕಗಳು

ತಲೆಸುತ್ತು ನಿವಾರಣೆಗೆ ಅಮಾಂಟಡೈನ್‌

ಮಲ್ಟಿಪಲ್‌ ಸ್ಕ್ಲಿರೋಸಿಸ್‌ ಇರುವವರಿಗೆ ಕೆಳಗಿನ ಚಿಕಿತ್ಸಾ ವಿಧಾನಗಳಿಂದ ಸಹಾಯವಾಗಬಹುದು:

ದೈಹಿಕ ಚಿಕಿತ್ಸೆ, ವಾಕ್‌ ಚಿಕಿತ್ಸೆ, ವೃತ್ತಿಪರ ಚಿಕಿತ್ಸೆ ಹಾಗೂ ಸಹಾಯಕ ಗುಂಪುಗಳು.

ಗಾಲಿಕುರ್ಚಿ, ಬೆಡ್‌ ಲಿಫ್ಟ್ , ಶವರ್‌ ಚೇರ್‌, ವಾಕರ್‌ ಹಾಗೂ ಹಿಡಿಕೆ ಅಥವಾ ವಾಲ್‌ ಬಾರ್‌ ಇತ್ಯಾದಿ ಸಹಾಯಕ ಸಾಧನಗಳು.

ಅಸಹಜತೆಯ ಆರಂಭಿಕ ಹಂತದಲ್ಲಿ ಮಾಡುವಂತಹ ಯೋಜಿತ ವ್ಯಾಯಾಮ ಚಟುವಟಿಕೆಗಳು.

ಪೋಷಣಾಭರಿತ ಆಹಾರ, ಸಾಕಷ್ಟು  ವಿಶ್ರಾಂತಿ, ಹಾಗೂ ಉತ್ತಮ ಜೀವನಶೈಲಿ.

ಕಾಯಿಲೆಬೀಳುವುದು, ತಲೆಸುತ್ತುವುದು, ಬಿಸಿಲಿಗೆ ಒಡ್ಡಿಕೊಳ್ಳುವುದು ಹಾಗೂ ಒತ್ತಡಕ್ಕೆ ಒಳಗಾಗುವುದರಿಂದ ತಪ್ಪಿಸಿಕೊಳ್ಳುವುದು.

ನುಂಗಲು ಕಷ್ಟವಾಗುವ ಆಹಾರ ಪಾನೀಯಗಳನ್ನು ಬದಲಾಯಿಸುವುದು.

ಬೀಳುವುದರಿಂದ ತಪ್ಪಿಸಿಕೊಳ್ಳಲು ಮನೆಯ ಸುತ್ತ ಮುತ್ತ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಥವಾ ಹಿಡಿಕೆ ಇತ್ಯಾದಿಗಳನ್ನು ಅಳವಡಿಸುವುದು.

ಅಸಹಜತೆಯನ್ನು ನಿಭಾಯಿಸಿಕೊಂಡು ಹೋಗಲು ಸಾಮಾಜಿಕ ಕಾರ್ಯಕರ್ತರ ಅಥವಾ  ಸಮಾಲೋಚಕ ತಂಡದ ಸಹಾಯ ಪಡೆಯುವುದು.

ಕಾಯಿಲೆಯ ವ್ಯಾಪಕತೆ:  
ಚಿಕಿತ್ಸೆಯ ಪರಿಣಾಮದಲ್ಲಿ ಭಿನ್ನತೆ ಇರಬಹುದು, ಹಾಗಾಗಿ ಹೀಗೆಯೇ ಆಗುತ್ತದೆ ಎಂದು ನಿರೀಕ್ಷಿಸುವಂತಿಲ್ಲ.  ಕಾಯಿಲೆಯು ದೀರ್ಘ‌ಕಾಲಿಕವಾಗಿದ್ದು, ಗುಣಕಾರಿ ಅಲ್ಲದಿದ್ದರೂ, ಸಹಜ ಜೀವನ ಅಥವಾ ತಕ್ಕ ಮಟ್ಟಿಗಿನ ಸಹಜ ಜೀವನ ಸಾಧ್ಯವಿದೆ. ಈ ಕಾಯಿಲೆ ಇರುವ ಹೆಚ್ಚಿನ ಜನರು, 20 ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳವರೆಗೆ ನಡಿಗೆ ಹಾಗೂ ಇತರ ಕೆಲಸಕಾರ್ಯಗಳನ್ನು ನಡೆಸಬಲ್ಲರು. ಸಾಮಾನ್ಯವಾಗಿ ಕೆಳಗೆ ತಿಳಿಸಿದ ವರ್ಗದವರು ಉತ್ತಮ ನಿರೀಕ್ಷೆ ಇಟ್ಟುಕೊಳ್ಳಬಹುದು.

ಸ್ತ್ರೀಯರು.

ಯುವಜನರು (ಕಾಯಿಲೆ ಆರಂಭವಾಗುವಾಗ 30ಕ್ಕಿಂತ ಕಡಿಮೆ ವಯಸ್ಸಿದ್ದವರು).

ಬಹಳ ಅಪರೂಪಕ್ಕೆ ಆಘಾತವಾದವರು.

ಕಾಯಿಲೆಯು ಲಕ್ಷಣರಹಿತ - ಮರುಕಳಿಸುವ ರೀತಿಯಲ್ಲಿರುವ ಜನರಿಗೆ.

ಬಿಂಬ ಪರೀಕ್ಷೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಕಾಯಿಲೆಯ ಲಕ್ಷಣಗಳೆಂದು ಕಂಡುಬಂದ ಜನರು ವೈಕಲ್ಯ ಹಾಗೂ ಅಸಹಜತೆಯ ಪ್ರಮಾಣವು.

ಆಘಾತವಾದ ಸಂಖ್ಯೆ.

ಆಘಾತದ ಪ್ರಬಲತೆ.

ಪ್ರತಿ ಆಘಾತದಲ್ಲಿ  ಹಾನಿಯಾದ ಕೇಂದ್ರೀಯ ನರವ್ಯೂಹದ ಭಾಗದ ಪ್ರಮಾಣ, ಈ ಅಂಶಗಳನ್ನು ಅವಲಂಬಿಸಿದೆ.
ಹೆಚ್ಚಿನ ಜನರು ಆಘಾತಗಳ ಮಧ್ಯಾವಧಿಯಲ್ಲಿ  ಸಹಜ ಅಥವಾ ತಕ್ಕಮಟ್ಟಿನ ಸಹಜ ಸ್ಥಿತಿಗೆ ಮರಳಬಹುದು. ಆಘಾತಗಳ ಮಧ್ಯೆ, ಕಡಿಮೆ ಉಪಶಮನ ಕಂಡುಬಂದು, ನಿಧಾನವಾಗಿ ಚಟುವಟಿಕೆಗಳು ಹೆಚ್ಚು ಕುಂದಬಹುದು. ಕ್ರಮೇಣ ಅತ್ತಿತ್ತ ಚಲಿಸಲು ಗಾಲಿಕುರ್ಚಿಯನ್ನೇ ಅವಲಂಬಿಸಬೇಕಾಗಬಹುದು, ಗಾಲಿಕುರ್ಚಿಯ ಸಾಗಾಟವು ಬಹಳ ಕಠಿನವಾಗಬಹುದು. 
ಮನೆಯಲ್ಲಿಯೇ ನೋಡಿಕೊಳ್ಳುವ ವ್ಯವಸ್ಥೆ ಇದ್ದರೆ ರೋಗಿಯನ್ನು ಮನೆಯಲ್ಲಿಯೇ ನೋಡಿಕೊಳ್ಳಬಹುದು.

ತೊಂದರೆಗಳು:
ಖನ್ನತೆ.
ನುಂಗಲು ಕಷ್ಟವಾಗುವುದು.
ಯೋಚಿಸಲು ಕಷ್ಟವಾಗುವುದು.
ಸ್ವಯಂ ರಕ್ಷಣೆ ಕಷ್ಟವಾಗುವುದು.
ಶಾಶ್ವತ ನಳಿಕೆಗಳ ಆವಶ್ಯಕತೆ.
ಆಸ್ಟಿಯೋಪೊರೋಸಿಸ್‌ ಅಥವಾ ಮೂಳೆ ಸವೆಯುವುದು.
ಒತ್ತಡದ ಹುಣ್ಣುಗಳು.
ಅಸಹಜತೆಗೆ ಉಪಯೋಗಿಸುವ ಔಷಧಿಗಳ ಅಡ್ಡ ಪರಿಣಾಮಗಳು.
ಮೂತ್ರನಾಳದ ಸೋಂಕುಗಳು.

ನಿಮ್ಮ ವೈದ್ಯರನ್ನು ಯಾವಾಗ ಕರೆಯಬೇಕು:
ಹೀಗಾಗುತ್ತಿದ್ದರೆ ನಿಮ್ಮ ವೈದ್ಯರನ್ನು ಕರೆಯಿರಿ

ನಿಮ್ಮಲ್ಲಿ ಮಲ್ಟಿಪಲ್‌ ಸ್ಕ್ಲಿರೋಸಿಸ್‌ನ ಯಾವುದೇ ಲಕ್ಷಣಗಳು ಕಂಡುಬರುತ್ತಿದ್ದರೆ.

ಚಿಕಿತ್ಸೆ ಪಡೆದ ಬಳಿಕವೂ ಲಕ್ಷಣಗಳು ತೀವ್ರವಾಗುತ್ತಿದ್ದರೆ.

ಮನೆಯಲ್ಲೇ ಆರೈಕೆ ಮಾಡುವಂತಹ ಪರಿಸ್ಥಿತಿಯನ್ನು ಮೀರುತ್ತಿದ್ದರೆ . 

ಲಕ್ಷಣಗಳು
ಪ್ರತೀ ಸಲ ಆಘಾತವಾಗುವ ಭಾಗ ಹಾಗೂ ತೀವ್ರತೆಯಲ್ಲಿ ಭಿನ್ನತೆ ಇರುವ ಕಾರಣ ಲಕ್ಷಣಗಳಲ್ಲೂ ವ್ಯತ್ಯಾಸವಾಗುತ್ತದೆ.  ಆಘಾತವು ಕೆಲವು ದಿನಗಳು, ವಾರಗಳು ಅಥವಾ ತಿಂಗಳ ಕಾಲ ಮುಂದುವರಿಯಬಹುದು.ಆಘಾತದ ಅವಧಿಯು ಕಡಿಮೆ ಇರಬಹುದು ಅಥವಾ ಲಕ್ಷಣಗಳೇ ಇಲ್ಲದಿರಬಹುದು. 

ಜ್ವರ ಬಿಸಿನೀರ ಸ್ನಾನ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಹಾಗೂ ಒತ್ತಡಗಳು ಆಘಾತವನ್ನು ಕೆರಳಿಸಬಹುದು ಅಥವಾ ತೀವ್ರವಾಗಿಸಬಹುದು.

ಈ ಕಾಯಿಲೆಯು ಮತ್ತೆ ಮತ್ತೆ ಮರುಕಳಿಸಬಹುದು. ಲಕ್ಷಣಗಳೇ ಇಲ್ಲದೇ ಕಾಯಿಲೆಯು ಮುಂದುವರಿದು ತೀವ್ರವಾಗಬಹುದು. 
ಆದರೆ ಮೆದುಳಿನ ಯಾವುದೇ ಭಾಗದಲ್ಲಿ ಅಥವಾ ಬೆನ್ನು ಹುರಿಯಲ್ಲಿ ನರಗಳಿಗೆ ಹಾನಿಯಾಗಿರುವ ಕಾರಣ ಮಲ್ಟಿಪಲ್‌ ಸ್ಕ್ಲಿರೋಸಿಸ್‌ನಿಂದ ಬಾಧಿತನಾಗುವ ರೋಗಿ ದೇಹದ ಅನೇಕ ಭಾಗಗಳಲ್ಲಿ ರೋಗ ಲಕ್ಷಣಗಳು ಗೋಚರಿಸುತ್ತವೆ. 

ಸ್ನಾಯುಗಳ ಲಕ್ಷಣ:
ದೇಹದ ಸಮತೋಲನ ತಪ್ಪುವುದು.

ಸ್ನಾಯು ಸೆಳೆತ.

ದೇಹದ ಯಾವುದೇ ಭಾಗ ಮರಗಟ್ಟುವುದು ಅಥವಾ ಅಸಹಜ ಸಂವೇದನೆ.

ಕೈಕಾಲುಗಳನ್ನು ಆಡಿಸಲು ಕಷ್ಟವಾಗುವುದು.

ನಡಿಗೆ ಕಷ್ಟವಾಗುವುದು.

ಸಂವಹನ ಹಾಗೂ ಸಣ್ಣಪುಟ್ಟ ಚಲನೆಗೂ ಕಷ್ಟವಾಗುವುದು.

ಒಂದು ಅಥವಾ ಎರಡೂ ಕೈಕಾಲುಗಳಲ್ಲಿ ನಡುಕ.

ಒಂದು ಅಥವಾ ಎರಡೂ ಕೈಕಾಲುಗಳಲ್ಲಿ ನಿಶ್ಶಕ್ತಿ.

ವಿಸರ್ಜನಾಂಗಗಳ ಲಕ್ಷಣಗಳು:
ಮಲಬದ್ಧತೆ ಹಾಗೂ ಅನಿಯಂತ್ರಿತ ಮಲವಿಸರ್ಜನೆ.

ಮೂತ್ರವಿಸರ್ಜನೆ ಆರಂಭಿಸಲು ಕಷ್ಟವಾಗುವುದು.

ಆಗಾಗ ಮೂತ್ರ ವಿಸರ್ಜಿಸಬೇಕು ಅನ್ನಿಸುವುದು.

ಮೂತ್ರ ವಿಸರ್ಜಿಸಲೇ ಬೇಕೆನ್ನುವ ತುರ್ತು.

ಅನಿಯಂತ್ರಿತ ಮೂತ್ರವಿಸರ್ಜನೆ.

ಕಣ್ಣಿನ ಲಕ್ಷಣಗಳು:
ದೃಶ್ಯಗಳು ಎರಡೆರಡಾಗಿ ಕಾಣಿಸುವುದು.

ಕಣ್ಣಿನಲ್ಲಿ ಕಿರಿಕಿರಿ.

ಅನಿಯಂತ್ರಿತವಾಗಿ ಕಣ್ಣಿನ ರೆಪ್ಪೆ ಮಿಟುಕಿಸುವುದು.

ದೃಷ್ಟಿ ನಾಶ ( ಒಮ್ಮಿಂದೊಮ್ಮೆಗೆ ಒಂದು ಕಣ್ಣಿನ ದೃಷ್ಟಿ ನಾಶವಾಗುವುದು).

ಮರಗಟ್ಟುವುದು, ಜುಮುಗುಡುವುದು ಅಥವಾ ನೋವು:

ಮುಖ ಭಾಗದಲ್ಲಿ ನೋವು.

ನೋವಿನಿಂದ ಕೂಡಿದ ಸ್ನಾಯು ಸೆಳೆತ.

ಕೈಕಾಲುಗಳು ಜುಮುಗುಡುವುದು, ಕೈಕಾಲುಗಳಲ್ಲಿ ಉರಿಯುವಂತಹ ನೋವು.

ಮೆದುಳು ಹಾಗೂ ನರಗಳ 
ಇನ್ನಿತರ ಲಕ್ಷಣಗಳು:

ಏಕಾಗ್ರತೆಯು ಕುಂದುವುದು, ಮರೆವು , ನಿರ್ಣಯ ತೆಗೆದುಕೊಳ್ಳುವುದರ ವೈಫ‌ಲ್ಯ.

ಸಮಸ್ಯೆಗಳಿಗೆ ಕಾರಣ ಹಾಗೂ ಪರಿಹಾರವನ್ನು ಕಂಡುಕೊಳ್ಳಲು ಕಷ್ಟವಾಗುವುದು.

ಖನ್ನತೆ ಅಥವಾ ದುಃಖದ ಭಾವನೆ.

ತಲೆತಿರುಗುವುದು ಹಾಗೂ  ದೇಹ ಸಮತೋಲನದ ತೊಂದರೆ.

ಶ್ರವಣ ಶಕ್ತಿ ಕುಂದುವುದು.

ಲೈಂಗಿಕ ಲಕ್ಷಣಗಳು:
ನಿಮಿರುವಿಕೆಯ ತೊಂದರೆ.

ಸ್ತ್ರೀಯರ ಜನನಾಂಗದಲ್ಲಿ ಸ್ರಾವದ ತೊಂದರೆ.

ಮಾತು ಹಾಗೂ 
ನುಂಗುವಿಕೆಯ ಲಕ್ಷಣಗಳು:

ಮಾತುಗಳು ಅಸ್ಪಷ್ಟವಾಗಿರುವುದು ಅಥವಾ ಅರ್ಥಮಾಡಿಕೊಳ್ಳಲು ಕಷ್ಟವಾಗುವುದು.

ಆಹಾರ ಜಗಿಯಲು ಹಾಗೂ ನುಂಗಲು ಕಷ್ಟವಾಗುವುದು.

ಕಾಯಿಲೆಯು ಹೆಚ್ಚಾದಂತೆ ನಿಶ್ಶಕ್ತಿಯು ನಿರಂತರ ಹಾಗೂ ಆತಂಕಕಾರಿ ಲಕ್ಷಣವಾಗಿ ಬಾಧಿಸುತ್ತದೆ. ಮಧ್ಯಾಹ್ನದ ನಂತರ ಈ ಲಕ್ಷಣವು ಇನ್ನಷ್ಟು ತೀವ್ರವಾಗುತ್ತದೆ.  

ಡಾ| ಶಿವಾನಂದ ಪೈ,  
ಅಸೋಸಿಯೇಟ್‌ ಪ್ರೊಫೆಸರ್‌
ನ್ಯೂರಾಲಜಿ ವಿಭಾಗ, ಕೆ.ಎಂ.ಸಿ. ಆಸ್ಪತ್ರೆ, 
ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು


Trending videos

Back to Top