CONNECT WITH US  

ಆರೋಗ್ಯಶಾಲಿ ವೃದ್ಧಾಪ್ಯ

ಹೆಚ್ಚುತ್ತಿರುವ ನಿಮ್ಮ ವಯಸ್ಸಿನ  ಜತೆಗೆ ಮಾನಸಿಕ ಆರೋಗ್ಯವನ್ನೂ ಸಂರಕ್ಷಿಸಿಕೊಳ್ಳಿ
ಈ ದಿನಗಳಲ್ಲಿ ವೃದ್ಧಾಪ್ಯ ಎನ್ನುವುದು ಘನತೆಯಿಂದ ಹಾಗೂ ಸಮಾಧಾನದಿಂದ ಕಳೆಯಬೇಕಾಗಿರುವ  ವಯೋಮಾನವಾಗುವ ಬದಲಾಗಿ, ಆಯುಷ್ಯವನ್ನು ಪ್ರಯತ್ನಪೂರ್ವಕವಾಗಿ ಕಳೆಯುವ ವಯೋಮಾನ ಎನಿಸುವಂತಾಗಿದೆ.ವಯಸ್ಸು ಹೆಚ್ಚುತ್ತಾ ಹೋದಂತೆ,ನಮ್ಮ ಕಳೆದ ಬದುಕಿಗಿಂತ ಮುಂದಿನ ಬದುಕನ್ನು ನಾವು ಹೆಚ್ಚು ಆಶಾವಾದದಿಂದ ನಿರೀಕ್ಷಿಸುತ್ತಿರುತ್ತೇವೆ.  ವೃದ್ಧಾಪ್ಯದಲ್ಲಿನ  ಒಳ್ಳೆಯ ಜೀವನಕ್ಕಾಗಿ  ಚಡಪಡಿಸುತ್ತೇವೆ.  ಆದರೆ ಇದನ್ನು ನಾವು ಸಾಧಿಸುವುದು ಹೇಗೆ?  ಪೋಷಣಾಭರಿತ ಆಹಾರಗಳನ್ನು ಸೇವಿಸಿ, ಅಲ್ಕೋಹಾಲ್‌ ಅನ್ನು ಒಂದು ಮಿತಿಯಲ್ಲಿ ಇರಿಸಿ, ದೈಹಿಕವಾಗಿ ಕ್ರಿಯಾಶೀಲರಾಗಿರುವ ಮೂಲಕ ನಾವಿದನ್ನು ಸಾಧಿಸಬಲ್ಲೆವು.ಸ್ನೇಹಿತರು ಹಾಗೂ ಸಂಬಂಧಿಗಳ ಜೊತೆಗೆ ಸೌಹಾರ್ದಯುತ - ಸಂಪರ್ಕದಿಂದ ಇರುವುದು, ಅಗತ್ಯವಿರುವಾಗಲೆಲ್ಲಾ ವೈದ್ಯಕೀಯ ಆರೈಕೆಯನ್ನು ಪಡೆಯುವುದು - ಇವೆಲ್ಲವೂ ಸಹ ವೃದ್ಧಾಪ್ಯದ ಆರೋಗ್ಯಕರ ಮುನ್ನಡೆಯ ಸಹಜ ಹೆಜ್ಜೆಗಳು.  ಉತ್ತಮ ಆರೋಗ್ಯದಿಂದ ನಾವು ಜೀವನವನ್ನು ಆನಂದಿಸಬಹುದು,  ಹೊಸ ಕನಸುಗಳನ್ನು ಕಾಣಬಹುದು.  ಹೆಚ್ಚುವ ವಯಸ್ಸಿನ ಜೊತೆ ಜೊತೆಗೆ ಹೊಸ ಹೊಸ ಗುರಿಗಳನ್ನೂ ಸಹ  ಸಾಧಿಸಬಹುದು.  

ಒಳ್ಳೆಯ ಆರೋಗ್ಯ ಅಂದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ವ್ಯಕ್ತಿಯು ಉತ್ತಮ ಸ್ಥಿತಿಯಲ್ಲಿರುವುದು, ಕ್ಷಮತೆಯಿಂದ ಇರುವುದು ಎಂದು ಅರ್ಥ. ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಗಳು, ಒಂದರ ಜೊತೆಗೆ ಒಂದು ಬೆಸೆದು ಸಾಗಬೇಕು.  ಒಂದು ಒಳ್ಳೆಯ ಮನಸ್ಸು, ಒಳ್ಳೆಯ ದೇಹವನ್ನು ನಿರ್ಮಿಸುತ್ತದೆ.  ಮನುಷ್ಯನ ಮನಸ್ಸು ಹೇಗಿರುತ್ತದೋ, ದೇಹವು ಹಾಗೆಯೇ ಇರುತ್ತದೆ.  ಸುಸ್ಥಿತಿಯಲ್ಲಿರುವ ರಕ್ತದ ಒತ್ತಡ, ಒಳ್ಳೆಯ ಮಟ್ಟದಲ್ಲಿರುವ ರಕ್ತದ ಕೊಲೆಸ್ಟ್ರಾಲ್‌ ಅಂಶ, ಪೋಷಣಾಭರಿತ ಆಹಾರ, ಒಳ್ಳೆಯ ದೇಹತೂಕ ಮತ್ತು ದೈಹಿಕವಾಗಿ ಕ್ರಿಯಾಶೀಲರಾಗಿರುವುದು - ಇವೆಲ್ಲವೂ ಸಹ ಒಂದೊಳ್ಳೆಯ ದೇಹ ನಿರ್ಮಾಣದ ಪೂರಕ ಅಂಶಗಳು.

ನಮ್ಮ ದೇಹವನ್ನು ಆರೋಗ್ಯಶಾಲಿಯಾಗಿ ರಿಸಲು, ವೈಕಲ್ಯಗಳು ಮತ್ತು ರೋಗಗಳಿಂದ ಮುಕ್ತವಾಗಿರಿಸಲು ಜೀವನಶೈಲಿಯಲ್ಲಿ ಅನೇಕ ಆರೋಗ್ಯಕರ ಆಯ್ಕೆಗಳನ್ನು ಮಾಡಿಕೊಳ್ಳಬಹುದು. ಆದರೆ ನಮ್ಮ ಮನಸ್ಸಿನ  ಆರೋಗ್ಯಕ್ಕಾಗಿ  ನಾವು ಕೆಲವು  ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬೇಕಾಗುವುದು. 

ನನ್ನ ಮನಸ್ಸನ್ನು ಆರೋಗ್ಯಕರವಾಗಿ 
ಇರಿಸಿಕೊಳ್ಳಲು ನಾನು ಏನು 
ಮಾಡಬಹುದು?

ಕಳೆದ ಕೆಲವು ವರ್ಷಗಳಿಂದ ಆಗಿರುವ  ಹಲವಾರು ಸಂಶೋಧನೆಗಳು, ನಮ್ಮ ಮನಸ್ಸನ್ನು ಆರೋಗ್ಯಶಾಲಿಯಾಗಿ  ಇರಿಸಿಕೊಳ್ಳುವ ವಿವಿಧ ವಿಧಾನಗಳನ್ನು   ತೋರಿಸಿಕೊಟ್ಟಿವೆ. ನಮ್ಮ ದೇಹವನ್ನು ಆರೋಗ್ಯಶಾಲಿಯಾಗಿ ಇರಿಸಲು ನಾವು ಮಾಡಬಹುದಾದ ಪ್ರಯತ್ನಗಳು - ಅಂದರೆ   ದೈಹಿಕ ಚಟುವಟಿಕೆಗಳು ಮತ್ತು ಉತ್ತಮ ಆಹಾರಾಭ್ಯಾಸಗಳು, ಇವು ಕೊಲೆಸ್ಟ್ರಾಲ್‌ ಮಟ್ಟ ಮತ್ತು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇರಿಸಲು ನೆರವಾಗುವುದಷ್ಟೇ ಅಲ್ಲದೆ, ಮನಸ್ಸನ್ನೂ ಸಹ ಆರೋಗ್ಯಕರವಾಗಿರಿಸಲು ಸಹಾಯಮಾಡುತ್ತವೆ.  ಜೊತೆಗೆ ನಮ್ಮ ಮನಸ್ಸನ್ನು ಉಲ್ಲಸಿತಗೊಳಿಸುವಂತಹ ಕಾರ್ಯಗಳಲ್ಲಿ ತೊಡಗುವುದರಿಂದ- ಅಂದರೆ ಪದಬಂಧ ಬಿಡಿಸುವುದು, ಒಳ್ಳೆಯ ಪುಸ್ತಕಗಳನ್ನು ಓದುವುದು, ಬರವಣಿಗೆ ಮತ್ತು ಹೊಸ ವಿಚಾರಗಳ ಕಲಿಕೆಯಂತಹ ಸಂಗತಿಗಳು ನಮ್ಮ ಮೆದುಳನ್ನು  ಕ್ರಿಯಾಶೀಲವಾಗಿರಿಸುವಲ್ಲಿ ಸಹಾಯ ಮಾಡುತ್ತವೆ. ನಮ್ಮ ಸುತ್ತ ಮುತ್ತಲೂ ಇರುವ ಜನರ ಜೊತೆ, ಸಮುದಾಯದ ಜೊತೆಗೆ ಇರಿಸಿಕೊಳ್ಳುವ ಉತ್ತಮ ಸಂವಹನ, ಸಂಪರ್ಕಗಳು  ನಾವು ಮಾನಸಿಕವಾಗಿ ಕ್ಷಮತೆಯಿಂದ ಇರಲು ನೆರವಾಗುತ್ತವೆ. 

ಮಾನಸಿಕವಾಗಿ ಕ್ಷಮತೆಯಿಂದ ಇರಲು ಮತ್ತು ಮಾನಸಿಕ ಸಮಸ್ಯೆಗಳನ್ನು ದೂರವಿರಿಸಲು ಇಲ್ಲಿವೆ ಕೆಲವು ಸಹಾಯಕ ಸಲಹೆಗಳು:
ದೈಹಿಕವಾಗಿ ಕ್ರಿಯಾಶೀಲರಾಗಿರಿ: 

ದೈಹಿಕವಾಗಿ ಕ್ರಿಯಾಶೀಲರಾಗಿರುವುದರಿಂದ ಹಲವು ಪ್ರಯೋಜನಗಳಿವೆ. ದೈಹಿಕವಾಗಿ ಚಟುವಟಿಕೆಯಿಂದ ಇರುವುದರಿಂದ, ಮೂಳೆಯ ಸಾಂದ್ರತೆ ನಷ್ಟವಾಗುವುದನ್ನು ತಪ್ಪಿಸಬಹುದು, ದೇಹದ ಸಂತುಲನೆಯನ್ನು ಕಾಪಾಡಿಕೊಳ್ಳಬಹುದು.  ಕೆಲವು ಕಾಯಿಲೆಗಳನ್ನು ದೂರವಿರಿಸಬಹುದು (ಹೃದಯದ ಕಾಯಿಲೆಗಳು, ಲಕ್ವಾ ಮತ್ತು ಕೆಲವು ವಿಧದ ಕ್ಯಾನ್ಸರ್‌ಗಳು). ಕೆಲವು ಕಾಯಿಲೆಗಳು ಮತ್ತು ವೈಕಲ್ಯಗಳು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತವೆ ಅಥವಾ ಮಾನಸಿಕ ಸಮಸ್ಯೆಗಳು ಉಂಟಾಗಲು ಪ್ರೇರಣೆ ನೀಡುತ್ತವೆ. ಉದಾಹರಣೆಗೆ ಹೇಳುವುದಾದರೆ, ಮಧುಮೇಹ, ಕ್ಯಾನ್ಸರ್‌ ಮತ್ತು ಹೃದಯದ ಕಾಯಿಲೆಗಳಿಂದ ಬಳಲುತ್ತಿರುವವರು ಖನ್ನತೆಯಿಂದಲೂ ಸಹ ಬಳಲುತ್ತಿರುತ್ತಾರೆ. 

ನಿತ್ಯದ ದೈಹಿಕ ಚಟುವಟಿಕೆಗಳು ಹೀಗೆ ನೆರವಾಗುತ್ತವೆ:

ನೆನಪಿನ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಉತ್ತಮಪಡಿಸಿಕೊಳ್ಳಲು

ಮಾನಸಿಕ ಸಾಮರ್ಥ್ಯವನ್ನು  ಕಾಪಾಡಿಕೊಳ್ಳಲು ಮತ್ತು ಉತ್ತಮಪಡಿಸಿಕೊಳ್ಳಲು

ಅಲ್ಜಿಮರ್ಸ್‌ ಕಾಯಿಲೆಯೂ ಸೇರಿದಂತೆ ನೆನಪಿನ ಶಕ್ತಿ ಕುಂದುವುದನ್ನು ತಡೆಯಲು

ಖನ್ನತೆಯಿಂದ ಹೊರಬರಲು, ಖನ್ನತೆಯನ್ನು ತಡೆಯಲು ಮತ್ತು ಆನಂದದಿಂದ ಇರಲು

ದೇಹದ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳಲು
ಈಗ ನೀವು ವ್ಯಾಯಾಮ ಯೋಜನೆಯನ್ನು ಆರಂಭಿಸಲು ಯೋಚಿಸುತ್ತಿರುವಿರಾದರೆ, ಮೊದಲು ನಿಮ್ಮ ವೈದ್ಯರ ಜೊತೆಗೆ ಮಾತನಾಡಿ. ನಿಧಾನವಾಗಿ ವ್ಯಾಯಾಮ ಆರಂಭಿಸಿ, ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ (ಉದಾ: ಒಳ್ಳೆಯ ಬೆಳಕಿರುವಲ್ಲಿ , ದೃಢವಾದ ಶೂ ಧರಿಸಿ ನಡೆಯುವುದು ) ಮತ್ತು ವ್ಯಾಯಾಮವನ್ನು  ಆನಂದಿಸಿ. ಆದರೆ ನೆನಪಿಡಿ, ನೀವು ನಿತ್ಯವೂ ವ್ಯಾಯಾಮ ಮಾಡಲು  ಕ್ರೀಡಾಪಟುವೇ ಆಗಬೇಕೆಂದೇನೂ  ಇಲ್ಲ. 

ನಿಮ್ಮ ರಕ್ತದ ಒತ್ತಡವನ್ನು ಸಮಸ್ಥಿತಿಯಲ್ಲಿಡಿ:
ರಕ್ತದ ಒತ್ತಡವು 120/80 mmHg  ಗಿಂತ ಕೆಳಗಿದ್ದರೆ ಅದನ್ನು ಆರೋಗ್ಯಕರ ಅಥವಾ ಸಮಸ್ಥಿತಿಯ ರಕ್ತದ ಒತ್ತಡ ಎಂದು ಪರಿಗಣಿಸಲಾಗುವುದು. ಸಮಸ್ಥಿತಿಯಲ್ಲಿರುವ ರಕ್ತದ ಒತ್ತಡವು ಲಕ್ವಾ ಮತ್ತು ಅಲ್ಜಿಮರ್ಸ್‌ ಕಾಯಿಲೆಯೂ ಸೇರಿದಂತೆ, ಡಿಮೆನ್ಷಿಯಾ-ಅಂದರೆ ನೆನಪಿನ ಶಕ್ತಿ ಕಡಿಮೆಯಾಗುವುದನ್ನು ತಡೆಯುವಲ್ಲಿ ನೆರವಾಗುತ್ತದೆ. ಅಧಿಕ ರಕ್ತದ ಒತ್ತಡವು ರಕ್ತನಾಳಗಳಿಗೆ ಹಾನಿ ಉಂಟು ಮಾಡುತ್ತದೆ.  ಈ ಕಾರಣದಿಂದ ಲಕ್ವಾ, ಮೂತ್ರಪಿಂಡ ವೈಫ‌ಲ್ಯ, ಹೃದಯದ ಕಾಯಿಲೆಗಳು, ಹೃದಯಾಘಾತದ ಅಪಾಯಗಳು ಹೆಚ್ಚಾಗುತ್ತವೆ.  65 ವರ್ಷ ಪ್ರಾಯ ಮೀರಿದ ಸುಮಾರು ಮೂರನೇ ಎರಡು ಭಾಗದಷ್ಟು ವಯಸ್ಕರಿಗೆ 120/80 mmHg  ಕ್ಕೂ ಅಧಿಕ ರಕ್ತದ ಒತ್ತಡ ಇರುತ್ತದೆ.  ಯಾರ ರಕ್ತದ ಒತ್ತಡವು  120/80 mmHg   ಮತ್ತು  139/89 mmHg   ನಡುವೆ ಇರುವುದೋ ಅವರನ್ನು ಅಧಿಕ ರಕ್ತದ ಒತ್ತಡ ಪೂರ್ವ ಹಂತದಲ್ಲಿರುವವರು ಎಂದು ಪರಿಗಣಿಸಲಾಗುವುದು, ಅವರ ರಕ್ತದ ಒತ್ತಡವು ಅಧಿಕವಿಲ್ಲದಿದ್ದರೂ ಸಹ, ಭವಿಷ್ಯದಲ್ಲಿ ಅವರಿಗೆ ಅಧಿಕ ರಕ್ತದ ಒತ್ತಡವು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.  ರಕ್ತದ ಒತ್ತಡವನ್ನು ಇಳಿಸಬೇಕೆಂದಿದ್ದರೆ ಅಥವಾ ಸಮಸ್ಥಿತಿಯಲ್ಲಿ ಇರಿಸಿಕೊಳ್ಳಬೇಕೆಂದಿದ್ದರೆ, ನಿಮ್ಮ ದೇಹದ ತೂಕವನ್ನು ಇಳಿಸಿ,  ಧೂಮಪಾನ ಮಾಡಬೇಡಿ, ನಿತ್ಯವೂ ವ್ಯಾಯಾಮ ಮಾಡಿ, ಒಳ್ಳೆಯ ಆರೋಗ್ಯಕರ ಆಹಾರವನ್ನು ಸೇವಿಸಿ, ಉಪ್ಪು, ಆಲ್ಕೋಹಾಲ್‌ ಮತ್ತು ಕೆಫೀನ್‌ಯುಕ್ತ ಪಾನೀಯಗಳನ್ನು ಮಿತವಾಗಿ ಸೇವಿಸಿ.   

ನಿಮ್ಮ ಕೊಲೆಸ್ಟ್ರಾಲ್‌ ಮಟ್ಟವನ್ನು ಇಳಿಸಿಕೊಳ್ಳಿ:
ದೇಹದ ಕೊಲೆಸ್ಟ್ರಾಲ್‌ ಮಟ್ಟವು ಹೆಚ್ಚುವುದರಿಂದ ಹೃದಯದ ಕಾಯಿಲೆ ಹಾಗೂ ಡಿಮೆನ್ಷಿಯಾ ಅಂದರೆ ನೆನಪಿನ ಕೊರತೆಯುಂಟಾಗುವ ಅಪಾಯಗಳಿವೆ. ನಿಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್‌ ಮಟ್ಟವು ಹೆಚ್ಚಾಗಿದ್ದರೆ, ನಿಮಗೆ ಕಾಯಿಲೆ ಅಥವಾ ಅಸ್ವಸ್ಥತೆಗಳುಂಟಾಗುವ ಸಾಧ್ಯತೆಗಳೂ ಹೆಚ್ಚು.  ನಿಮ್ಮ ರಕ್ತದಲ್ಲಿರುವ ಅಧಿಕ ಕೊಲೆಸ್ಟ್ರಾಲ್‌ ಅಂಶವು (ಕೊಬ್ಬಿನಂತಹ ಅಂಶ) ನಿಮ್ಮ ರಕ್ತನಾಳದ ಒಳಗೋಡೆಗಳಲ್ಲಿ ಸಂಗ್ರಹಗೊಳ್ಳುತ್ತದೆ. ಇದರಿಂದಾಗಿ ರಕ್ತನಾಳಗಳು ಬಿರುಸಾಗುತ್ತವೆ ಮತ್ತು ಸಪೂರವಾಗುತ್ತವೆ. ಈ ಕಾರಣದಿಂದ ರಕ್ತ ಪರಿಚಲನೆ ನಿಧಾನವಾಗುತ್ತದೆ ಅಥವಾ ಅಡಚಣೆ ಉಂಟಾಗಲೂಬಹುದು. ಆನುವಂಶಿಕತೆ, ಪ್ರಾಯ ಮತ್ತು ಲಿಂಗ ಇವೆಲ್ಲವೂ ಸಹ ಕೊಲೆಸ್ಟ್ರಾಲ್‌ ಮಟ್ಟದ ಮೇಲೆ ಪ್ರಭಾವ ಬೀರುವ ಅಂಶಗಳು.  ವಯಸ್ಸು ಹೆಚ್ಚಾದಂತೆ ವ್ಯಕ್ತಿಯ ಕೊಲೆಸ್ಟ್ರಾಲ್‌ ಮಟ್ಟವೂ ಸಹ ಹೆಚ್ಚಾಗುತ್ತದೆ. ಮಹಿಳೆಯರಲ್ಲಿ ಋತುಬಂಧದ  ಆರಂಭದಿಂದ ಕೊಲೆಸ್ಟ್ರಾಲ್‌ ಮಟ್ಟವು ಏರಲು ಆರಂಭವಾಗುತ್ತದೆ. ಆಹಾರಾಭ್ಯಾಸಗಳು, ದೇಹದ ತೂಕ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಆರೋಗ್ಯಕರ ಬದಲಾವಣೆ ಮಾಡಿಕೊಳ್ಳುವ ಮೂಲಕ ರಕ್ತದ ಕೊಲೆಸ್ಟ್ರಾಲ್‌ ಮಟ್ಟದಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. 

ತರಕಾರಿಗಳನ್ನು ಸೇವಿಸಿ ಯಥೇತ್ಛವಾಗಿ: 
ತರಕಾರಿ ಸೇವನೆ ಒಳ್ಳೆಯದು ಎಂಬ ಸಲಹೆಯನ್ನು  ನಾವು  ಜೀವನದ ಉದ್ದಕ್ಕೂ ಕೇಳುತ್ತಿರುತ್ತೇವೆ. ತರಕಾರಿ ಸೇವನೆಯು ನಾವು ಕ್ಷಮತೆಯಿಂದ ಮತ್ತು ಆರೋಗ್ಯಶಾಲಿಯಾಗಿರಲು ನೆರವಾಗುತ್ತವೆ, ತರಕಾರಿಗಳು ಉತ್ತಮ ಆರೋಗ್ಯಕ್ಕೆ  ಮತ್ತು ಆರೋಗ್ಯಶಾಲಿ ಮೆದುಳಿಗೆ ಆವಶ್ಯಕವಿರುವ ಪೋಷಕಾಂಶಗಳನ್ನು ಒದಗಿಸುತ್ತವೆ.  

ಆರೋಗ್ಯಶಾಲಿ ಮೆದುಳಿಗಾಗಿ ಕೆಲವು ವಿಶಿಷ್ಟ ಆಹಾರ ಸಲಹೆಗಳು:
ಫೋಲೇಟ್‌ ಎಂಬುದು ಬಸಳೆ ಮತ್ತು ಹರಿವೆಗಳಲ್ಲಿ ದೊರಕುವ ಒಂದು ರೀತಿಯ ವಿಟಾಮಿನ್‌ ಬಿ. ಪೂರಣಗಳಲ್ಲಿ ಮತ್ತು ಪೌಷ್ಟಿಕ ಆಹಾರಗಳಲ್ಲಿ ಫಾಲಿಕ್‌ ಆಸಿಡ್‌ ಅನ್ನು ಸಿಂಥೆಟಿಕ್‌ ರೂಪದಲ್ಲಿ ಬಳಸುತ್ತಾರೆ. ನಮ್ಮ ಜೀವಕೋಶಗಳ ಆರೋಗ್ಯಕ್ಕೆ ಫೋಲೆಟ್‌ ಆವಶ್ಯಕ. ಇದು ರಕ್ತಹೀನತೆಯನ್ನು ತಡೆಯಲು ಮತ್ತು ಕ್ಯಾನ್ಸರ್‌ ಉಂಟುಮಾಡಬಹುದಾದ ಡಿಎನ್‌ಎ (ಜೀವಕೋಶಗಳ ಘಟಕಗಳು) ವ್ಯತ್ಯಾಸವನ್ನು ತಡೆಯಲು ನೆರವಾಗುತ್ತದೆ.  ಫೋಲೆಟ್‌ ಮತ್ತು ಫಾಲಿಕ್‌ ಆಸಿಡ್‌ಗಳ ಉತ್ತಮ ಮೂಲಗಳು ಅಂದರೆ ಬೇಳೆ ಕಾಳುಗಳು,  ಪೌಷ್ಟಿಕ ಉಪಾಹಾರಗಳು, ದಟ್ಟ-ಹಸಿರು ಬಣ್ಣದ ಸೊಪ್ಪು$ ತರಕಾರಿಗಳು, ಹರಿವೆಸೊಪ್ಪು, ಸ್ಟ್ರಾಬೆರಿಗಳು, ಅವರೆಕಾಳು ಮತ್ತು ಬೀಫ್ ಲಿವರ್‌.   

ವಿಟಾಮಿನ್‌ ಇ ಮತ್ತು ಸಿ ಗಳು ಆಹಾರದಲ್ಲಿ ದೊರಕುವ ಬಹು ಮುಖ್ಯ ಆಂಟಿಆಕ್ಸಿಡಾಂಟ್‌ಗಳಾಗಿದ್ದು, ಇವು ಜೀವಕೋಶಗಳಿಗೆ ಹಾನಿಯಾಗುವುದರ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ ಮತ್ತು ಕ್ಯಾನ್ಸರ್‌ ಹಾಗೂ ಹೃದಯದ ಕಾಯಿಲೆಯ ಅಪಾಯವನ್ನು ತಗ್ಗಿಸುತ್ತವೆ.  

ಧೂಮಪಾನವನ್ನು ಬಿಟ್ಟು ಬಿಡಿ:  ನೀವು ಧೂಮಪಾನ ಮಾಡುತ್ತಿರುವಿರಾದರೆ, ಅದನ್ನು ಬಿಟ್ಟು ಬಿಡುವುದಕ್ಕಾಗಿ ಗಂಭೀರ ಕಾಯಿಲೆಯೊಂದಕ್ಕೆ ತುತ್ತಾಗುವುದನ್ನು ಕಾಯುತ್ತಾ ..........ಕೂರಬೇಡಿ.  ಧೂಮಪಾನದಿಂದ ಒಬ್ಬ ವ್ಯಕ್ತಿಯು ಲಕ್ವಾ ಮತ್ತು ಶ್ವಾಸಕೋಶ ಹಾಗೂ ಇತರ ಕ್ಯಾನ್ಸರ್‌, ಎಂಫೈಸೆಮಾ, ದೀರ್ಘ‌ಕಾಲಿಕ ಶ್ವಾಸಕೋಶದ ಉರಿಯೂತ, ಶ್ವಾಸಕೋಶದ ದೀರ್ಘ‌ಕಾಲಿಕ ಅಡಚಣೆಯ ಕಾಯಿಲೆಗಳಿಗೆ, ಹೃದಯಾಘಾತ ಮತ್ತು ಹೊರಎಲ್ಲೆಯ ರಕ್ತನಾಳಗಳ ಕಾಯಿಲೆಗೆ ತುತ್ತಾಗುವ  ಸಾಧ್ಯತೆಗಳು ಹೆಚ್ಚಾಗುತ್ತವೆ.  

ಉತ್ತಮ ದೇಹ ತೂಕವನ್ನು ಕಾಪಾಡಿಕೊಳ್ಳಿ:  ಬೊಜ್ಜು ದೇಹಿಗಳಾದ ಜನರು ಅಥವಾ ಹೆಚ್ಚು ದೇಹತೂಕ ಹೊಂದಿರುವ ಜನರಿಗೆ ಹೃದಯಾಘಾತ, ಅಧಿಕ ರಕ್ತದ ಒತ್ತಡ, ಡಯಾಬೆಟಿಸ್‌, ಸಂಧಿವಾತಕ್ಕೆ ಸಂಬಂಧಿಸಿದ ವೈಕಲ್ಯಗಳು ಮತ್ತು ಕೆಲವು ವಿಧದ ಕ್ಯಾನ್ಸರ್‌ಗಳು ಬರುವ ಸಾಧ್ಯತೆಗಳು ಹೆಚ್ಚು. ಅಧಿಕ ತೂಕದಿಂದಾಗಿ ಆರೋಗ್ಯಕ್ಕೆ ಅಪಾಯಕಾರಿಯಾದ - ಅಧಿಕ ರಕ್ತದ ಒತ್ತಡ, ಅಧಿಕ ಕೊಲೆಸ್ಟ್ರಾಲ್‌, ಹೃದಯದ ಕಾಯಿಲೆಗಳು ಮತ್ತು ಲಕ್ವಾದಂತಹ ಸನ್ನಿವೇಶಗಳು ಬರಬಹುದು.  ದೇಹದ ತೂಕವು ತೀರಾ ಕಡಿಮೆ ಇರುವುದೂ ಒಳ್ಳೆಯದಲ್ಲ.  ಹೀಗಾದರೆ ದೇಹದ ರೋಗಪ್ರತಿರೋಧಕತೆ ಕಡಿಮೆಯಾಗುವ ಮತ್ತು ನೆನಪಿನ ಶಕ್ತಿ ಕಡಿಮೆಯಾಗುವ ಅಪಾಯವಿದೆ.  ನಿಮ್ಮ ದೇಹದ ತೂಕ ಎಷ್ಟಿರಬೇಕು ಎಂಬ ಬಗ್ಗೆ ನಿಮ್ಮ ವೈದ್ಯರಿಂದ ಸಲಹೆಯನ್ನು ಪಡೆಯಿರಿ ಮತ್ತು ಸರಿಯಾದ ದೇಹ ತೂಕವನ್ನು ಕಾಪಾಡಿಕೊಂಡು ಬರಲು ಪ್ರಯತ್ನಿಸಿ. ನಿಮ್ಮ ದೇಹದ ತೂಕ ಏನೇ ಆಗಿದ್ದರೂ ಸಹ ಒಳ್ಳೆಯ ಆಹಾರ ಮತ್ತು ನಿಯಮಿತ ವ್ಯಾಯಾಮಗಳಿಂದಷ್ಟೇ ನೀವು ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಾಗುವುದು.  

ಬ್ರಂಗ್‌, ಫ್ಲಾಸಿಂಗ್‌ ಮಾಡಿ ಮತ್ತು ನಿಮ್ಮ ದಂತ ವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡಿ ಮತ್ತು ನಿಮ್ಮ ಹಲ್ಲುಗಳ ಬಗ್ಗೆ ಕಾಳಜಿ ವಹಿಸಿ: ಒಸಡುಗಳ ದೀರ್ಘ‌ಕಾಲಿಕ ಕಾಯಿಲೆಗೂ, ಅಲ್ಜಿಮರ್ಸ್‌ ಕಾಯಿಲೆಯೂ ಸೇರಿದಂತೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಸಂಬಂಧವಿರುವುದು ಇತ್ತೀಚಿನ ಅನೇಕ ಸಂಶೋಧನೆಗಳಿಂದ ಸಾಬೀತಾಗಿದೆ.  ಪ್ರಸನ್ನ ನಗೆಯನ್ನು ಬೀರಲು ಮತ್ತು ನಿಮ್ಮ ಇಷ್ಟದ ತಿನಿಸುಗಳನ್ನು ತಿನ್ನಲಷ್ಟೇ ಅಲ್ಲ, ಕಾಯಿಲೆಗಳನ್ನು ದೂರವಿರಿಸಲೂ ಸಹ ನೀವು ನಿಮ್ಮ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಾವಶ್ಯಕ. 
 
ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ:
ನಾವು ನಮ್ಮ ದೇಹವು ಚಟುವಟಿಕೆಯಿಂದ ಇರಲು ಸಹಾಯವಾಗಲು ವ್ಯಾಯಾಮದಲ್ಲಿ ತೊಡಗುವಂತೆ, ನಮ್ಮ ಮನಸ್ಸು ಅಥವಾ ಬುದ್ಧಿಯೂ ಸಹ ಕ್ಷಮತೆಯಿಂದ ಇರುವಂತೆ ಮಾಡಲು ಮಾನಸಿಕ ವ್ಯಾಯಾಮದಲ್ಲಿ ತೊಡಗಿಕೊಳ್ಳಬೇಕು. ಮನಸ್ಸನ್ನು ಸ್ಫೂರ್ತಿದಾಯಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ, ನಮಗೆ ವಯಸ್ಸು ಹೆಚ್ಚುತಿದ್ದರೂ ಸಹ ನಮ್ಮ ಮೆದುಳಿನ ಚಟುವಟಿಕೆಯನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಹೊಸ ವಿಷಯಗಳನ್ನು ಕಲಿಯುವುದರಿಂದ ಲಕ್ಷಾಂತರ ಮೆದುಳಿನ ಕೋಶಗಳನ್ನು ಸಕ್ರಿಯವಾಗಿರಿಸಬಹುದು. ಈ ಚಟುವಟಿಕೆಗಳು ಅಲ್ಜಿಮರ್ಸ್‌ ಕಾಯಿಲೆಯಂತಹ ಡಿಮೆನ್ಷಿಯಾ ಅಂದರೆ ನೆನಪಿನ ಶಕ್ತಿ ಕಡಿಮೆಯಾಗುವುದನ್ನು  ತಡೆಗಟ್ಟಲು ನೆರವಾಗುತ್ತವೆ. ಪದಬಂಧಗಳನ್ನು ಬಿಡಿಸಿ, ಹೊಸ ಸಂಗೀತ ವಾದ್ಯವನ್ನು ಕಲಿಯಿರಿ,  ಸವಾಲೆನಿಸುವಂತಹ ಪುಸ್ತಕಗಳನ್ನು ಓದಿ, ಬೋರ್ಡ್‌ ಅಥವಾ ಕಾರ್ಡ್‌ ಆಟದಲ್ಲಿ ತೊಡಗಿ, ಭಾಷಣ ಕೇಳುವ ಅಥವಾ ನಾಟಕ ನೋಡುವ ಹವ್ಯಾಸ ಬೆಳೆಸಿಕೊಳ್ಳಿ, ಸಣ್ಣ , ಸಣ್ಣ ಕಥೆಗಳನ್ನು ಬರೆಯಿರಿ ಈ ಮೂಲಕ ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
 
ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ:
ಒತ್ತಡವು ನಮ್ಮ ದೇಹವನ್ನು ಕುಸಿಯುವಂತೆ ಮಾಡಿ, ಹೃದಯದ ಕಾಯಿಲೆ ಮತ್ತು ರಕ್ತದ ಒತ್ತಡದ ಅಪಾಯವನ್ನು ಹೆಚ್ಚಿಸುತ್ತದೆ, ಮಾತ್ರವಲ್ಲ ಇದು ನಮ್ಮ ಆಲೋಚನೆ, ಮನಸ್ಥಿತಿ ಮತ್ತು ನಮ್ಮ ನೆನಪಿನ ಶಕ್ತಿಗಳ ಮೇಲೆಯೂ ಪರಿಣಾಮ ಉಂಟು ಮಾಡುತ್ತದೆ.  ವಾಸ್ತವವಾಗಿ ನಾವು ಒತ್ತಡದಲ್ಲಿ ಇರುವಾಗ , ದೇಹದಲ್ಲಿ ಸ್ರವಿಸುವ ಹಾರ್ಮೋನ್‌ಗಳು ಮೆದುಳನ್ನು ಕುಗ್ಗುವಂತೆ ಮಾಡುತ್ತವೆ. ಇದರಿಂದ ನೆನಪಿನ ಶಕ್ತಿ ಮತ್ತು ಕಲಿಯುವಿಕೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಒತ್ತಡದಿಂದಾಗಿ ಖನ್ನತೆ ಮತ್ತು ಆತಂಕಗಳೂ ಸಹ ಉಂಟಾಗುತ್ತವೆ.
     
ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು, ಒತ್ತಡಕ್ಕೆ ಕಾರಣವಾಗಿರುವ ಅಂಶವನ್ನು ಮೊದಲು ಗುರುತಿಸಿ, ಇದನ್ನು ಹೋಗಲಾಡಿಸಲು ನೀವು ಏನು ಮಾಡಬಹುದು ಎಂಬುದನ್ನು   ಗಮನಿಸಿ. ಉದಾಹರಣೆಗೆ , ಒಂದುವೇಳೆ ಜನದಟ್ಟಣೆಯ ಟ್ರಾಫಿಕ್‌ ನಿಮ್ಮಲ್ಲಿ ಒತ್ತಡವನ್ನು ಉಂಟು ಮಾಡುತ್ತಿದ್ದರೆ, ನಿಮ್ಮ ಡ್ರೆ„ವಿಂಗ್‌ ಸಮಯವನ್ನು ಅಥವಾ ಮಾರ್ಗವನ್ನು ಬದಲಾಯಿಸಿಕೊಳ್ಳಿ ಮತ್ತು ಟ್ರಾಪಿಕ್‌ನ ದಟ್ಟಣೆಯಿಂದ ತಪ್ಪಿಸಿಕೊಳ್ಳಿ.  ರಜಾದಿನಗಳಲ್ಲಿ ಪಾರ್ಟಿಯನ್ನು ಯೋಜಿಸುವ ಅಥವಾ ಉಡುಗೊರೆಗಳನ್ನು ಖರೀದಿಸುವ ವಿಚಾರವು ನಿಮಗೆ ಒತ್ತಡವನ್ನು ಉಂಟು ಮಾಡುತ್ತಿದ್ದರೆ, ಆ ವಿಚಾರವನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಡಿ, ಅಥವಾ ಆ ವಿಚಾರವನ್ನು ಸರಳಗೊಳಿಸಿಕೊಳ್ಳಿ, ಅಂದರೆ ನಿಮಲ್ಲಿ ಒತ್ತಡವನ್ನು ಉಂಟು ಮಾಡುತ್ತಿರುವ ವಿಚಾರವನ್ನು ಬಗೆಹರಿಸಿಕೊಳ್ಳಲು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಸಹಾಯವನ್ನು ಪಡೆಯಿರಿ.  

ಮನಬಿಚ್ಚಿ ಮಾತನಾಡಿ.  ಕೆಲವು ಸಲ ಇನ್ನೊಬ್ಬರ ಜೊತೆ ಮಾತನಾಡುವುದರಿಂದ, ಒತ್ತಡ ಉಂಟು ಮಾಡುವ ವಿಚಾರವನ್ನು ಸ್ನೇಹಿತರು ಅಥವಾ ಚಿಕಿತ್ಸಕರ ಜೊತೆಗೆ ಹಂಚಿಕೊಳ್ಳುವುದರಿಂದ ಅಥವಾ ಬರೆಯುವುದರಿಂದ ಆ ಒತ್ತಡದಿಂದ ಹೊರಬರಲು ಸಹಾಯವಾಗುತ್ತದೆ, ಹೀಗೆ ಮಾಡುವುದರಿಂದ ವಿಚಾರಗಳು ಇನ್ನಷ್ಟು ಸ್ಪಷ್ಟಗೊಳ್ಳುತ್ತವೆ,

ವಿರಮಿಸಿಕೊಳ್ಳಿ,  ನಡಿಗೆ, ಗಾಲ್ಫ್ ಆಟ, ಟೆನ್ನಿಸ್‌ ಬಾಲ್‌ ಎಸೆತ ಅಥವಾ ಧ್ಯಾನ ಇತ್ಯಾದಿಗಳ ಮೂಲಕ ನಿಮ್ಮ ಒತ್ತಡವನ್ನು ಹೊರಹಾಕಿ, ಒಂದು ಬ್ರೇಕ್‌ ತೆಗೆದುಕೊಳ್ಳಿ

ಸದಾ ಕ್ರಿಯಾಶೀಲರಾಗಿರಿ.  ವಾರದ ಅನೇಕ  ದಿನಗಳಲ್ಲಿ ಕ್ರಿಯಾ ಶೀಲರಾಗಿ ಇರುವುದರಿಂದ ನಮ್ಮ ದೇಹ, ಮನಸ್ಸುಗಳ  ಒತ್ತಡವನ್ನು ಸಮಸ್ಥಿತಿಯಲ್ಲಿ ಇರಿಸಿಕೊಳ್ಳಲು ಸಹಾಯವಾಗುತ್ತದೆ. 

ನಿಮಗೆ ನೀವೆ ಒಂದು ಬ್ರೇಕ್‌ ಕೊಟ್ಟುಕೊಳ್ಳಿ.  ನೀವು ಒತ್ತಡದಾಯಕ ಪರಿಸ್ಥಿತಿಯಲ್ಲಿ ಬದುಕುತ್ತಿದ್ದರೆ,  ಅಲ್ಪಾವಧಿಯ ರಜೆ  ತೆಗೆದುಕೊಳ್ಳಿ.  ವಿಶ್ರಾಂತಿಗಾಗಿ ಸಮಯವನ್ನು ತೆಗೆದುಕೊಳ್ಳಿ ಅದು 20 ನಿಮಿಷವೇ ಆಗಿರಬಹುದು ಅಥವಾ ಕೆಲವು ದಿನಗಳೆ ಆಗಿರಬಹುದು, ನಿಮಗೆ ಖುಷಿ ನೀಡುವ ವ್ಯಕ್ತಿ, ವಸ್ತು, ವಿಷಯಗಳಿಂದ ಆನಂದವನ್ನು ಪಡೆಯಿರಿ.

ನಿಮ್ಮ ಮೆದುಳನ್ನು ರಕ್ಷಿಸಿಕೊಳ್ಳಿ:
ತಲೆಗೆ ಏಟಾಗುವುದು ಅಥವಾ ಪ್ರಜ್ಞೆ ತಪ್ಪುವುದು ಇತ್ಯಾದಿಗಳು ನಿಮ್ಮ ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತವೆ.  ಬೀಳುವಿಕೆಯು ಹಿರಿಯ ವಯಸ್ಕರಲ್ಲಿ ಮೆದುಳಿಗೆ ಹಾನಿ ಉಂಟು ಮಾಡುವ ಪ್ರಮುಖ ಕಾರಣ.  ನಿಮ್ಮ ತಲೆಯ ಸುರಕ್ಷತೆಗಾಗಿ ಕ್ರಮಗಳನ್ನು ಕೈಗೊಳ್ಳಿ. 

- ಮುಂದಿನ ವಾರಕ್ಕೆ  

- ಡಾ| ಆರ್‌. ಕೇಶವ ಪೈ ಕೋಟಾ, 
ಅಸೋಸಿಯೆಟ್‌ ಪ್ರೊಫೆಸರ್‌, 
ಮಾನಸಿಕ ರೋಗಗಳ ಚಿಕಿತ್ಸಾ ವಿಭಾಗ,
ಕೆ.ಎಂ.ಸಿ. ಆಸ್ಪತ್ರೆ,  ಆತ್ತಾವರ, ಮಂಗಳೂರು

Trending videos

Back to Top