CONNECT WITH US  

ಕಾಲಿನ ಹುಣ್ಣು ವಾಸಿಯಾಗದಿರಲು ಕಾರಣಗಳೇನು?

ಯಾವುದೇ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಬರುವ ರೋಗಿಗಳಲ್ಲಿ, ಕಾಲಿನ ಹುಣ್ಣು ಅಥವಾ ಹುಣ್ಣಿನ ಶುಶ್ರೂಷೆಗಾಗಿ ಬರುವವರ ಸಂಖ್ಯೆ ಅತಿ ಹೆಚ್ಚು. ಕೆಲವು ರೋಗಿಗಳಂತೂ ಹಲವು ತಿಂಗಳಿನಿಂದ ಹುಣ್ಣಿನ ಚಿಕಿತ್ಸೆ ಪಡೆಯುತ್ತಿದ್ದರೂ ಹುಣ್ಣು ವಾಸಿಯಾಗದೇ ಮಾನಸಿಕವಾಗಿ ಖನ್ನರಾಗುವುದುಂಟು. ಸಮರ್ಪಕ ಚಿಕಿತ್ಸೆಯನ್ನು ಹುಡುಕಿಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವವರೂ ವಿರಳವೇನಲ್ಲ. ಹಲವೊಮ್ಮೆ ವೈದ್ಯರೂ ಕೂಡ ತಮ್ಮೆಲ್ಲಾ ಅನುಭವವನ್ನು ಧಾರೆಯೆರೆದು ಚಿಕಿತ್ಸೆ ಮಾಡಿದರೂ ರೋಗಿಯ ಕಾಲಿನ ಹುಣ್ಣು ವಾಸಿಯಾಗದೇ ತಲೆ ಕೆರೆದುಕೊಳ್ಳುವುದು ಉಂಟು. ಈ ರೀತಿ, ಹುಣ್ಣು ವಾಸಿಯಾಗದೇ ಇರಲು ಕಾರಣಗಳೇನು? ಶುಶ್ರೂಷೆಯ ಬಗ್ಗೆ ರೋಗಿಯ ನಿರ್ಲಕ್ಷ್ಯವೇ? ರೋಗಿಯ ದೇಹದಲ್ಲಿ ಇರಬಹುದಾದ ಇತರ ಕಾಯಿಲೆಗಳು ಇದಕ್ಕೆ ಕಾರಣವಿರಬಹುದೇ? ವೈದ್ಯರ ಅನುಭವದ ಕೊರತೆ ಯಾ ಅಸಮರ್ಪಕ ಕಾಳಜಿಯನ್ನು ಹೊಣೆಯಾಗಿಸಬಹುದೇ? ಇವೆಲ್ಲದ್ದಕ್ಕೂ ಮೀರಿದ ಮತ್ತೇನಾದರೂ ಕಾರಣವಿದೆಯೇ? ತಿಳಿಯೋಣ ಬನ್ನಿ.

ಹುಣ್ಣು ವಾಸಿಯಾಗಬೇಕಾದರೆ ಮೊಟ್ಟ ಮೊದಲನೆಯದಾಗಿ ರೋಗಿ ತನ್ನ ಕಾಲಿನ ಹುಣ್ಣಿನ ಚಿಕಿತ್ಸೆಯ ಬಗ್ಗೆ ಅರಿತು ತನ್ನ ಮೇಲಿನ ಜವಾಬ್ದಾರಿಯನ್ನು ಹೊರಲು ಸಿದ್ಧನಿರಬೇಕಾಗುತ್ತದೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಲ್ಲಿ ಚಿಕಿತ್ಸೆಯ ಯಶಸ್ಸಿನ ಹೆಚ್ಚಿನ ಹೊಣೆ ವೈದ್ಯರ ಮೇಲಿರುವುದು ಸಹಜ ಆದರೆ ಹೊರ ರೋಗಿಯಾಗಿ ಚಿಕಿತ್ಸೆ ಪಡೆಯುವ ಕಾಲು ಹುಣ್ಣಿನ ರೋಗಿಗಳು ತಮ್ಮ ಚಿಕಿತ್ಸೆಯ ಜವಾಬ್ದಾರಿಯಲ್ಲಿ ವೈದ್ಯರಷ್ಟೇ ಹೊಣೆಗಾರರಾಗಿರುತ್ತಾರೆ. ಇಲ್ಲಿ, ವೈದ್ಯರ ಸೂಚನೆಯಂತೆ ನಿಯಮಿತ ಔಷಧಿ ಸೇವನೆ, ನಿಯಮಿತವಾಗಿಹುಣ್ಣುದ ಶುಶ್ರೂಷೆಗೆ ಹಾಜರಾಗುವುದು, ಶುಶ್ರೂಷೆ ಮಾಡಿಸಿಕೊಂಡು ಮನೆಗೆ ಬಂದ ಮೇಲೆ ಡ್ರೆಸಿಂಗ್‌ ಒದ್ದೆಯಾಗದೇ ಇರುವಂತೆ ನೋಡಿಕೊಳ್ಳುವುದು ಇತ್ಯಾದಿ ಸೇರುತ್ತವೆ. ಇದರಲ್ಲಿ, ಕಾಲಿನ ಹುಣ್ಣಿನ ಡ್ರೆಸಿಂಗ್‌ ಮಾಡಿಸಿಕೊಂಡ ಅನಂತರ ಟಾಯಲೆಟ್‌ಗೆ ಹೋಗುವಾಗ ಅಲ್ಲಿನ ಕಲುಷಿತ ನೀರು ಡ್ರೆಸಿಂಗ್‌ಗೆ ಸೋಕದಂತೆ ಪ್ಲಾಸ್ಟಿಕ್‌ ಕವಚ ತೊಟ್ಟುಕೊಂಡು ಹೋಗುವುದು ಬಹುಮುಖ್ಯ. ವೈದ್ಯರು ಅನುಮತಿ ಕೊಟ್ಟಿದ್ದಲ್ಲಿ, ಸ್ನಾನ ಮಾಡುವುದಕ್ಕೆ ಮೊದಲು ಡ್ರೆಸಿಂಗ್‌ ಬಟ್ಟೆ  ಬಿಡಿಸಿ ಹುಣ್ಣುವನ್ನು ಔಷಧಿಯುಕ್ತ ಸಾಬೂನಿನಿಂದ ತೊಳೆದು ಸ್ನಾನ ಮಾಡಬಹುದು. ಒಮ್ಮೆ ಮಾಡಲ್ಪಟ್ಟ ಡ್ರೆಸಿಂಗ್‌ ಒದ್ದೆಯಾಗುವುದು ಸಲ್ಲದು. ಆದರೆ ಗಾಯವನ್ನು ಶುದ್ಧ ನೀರಿನಿಂದ ತೊಳೆದುಕೊಳ್ಳುವುದು ತಪ್ಪಲ್ಲ. ಗಾಯಕ್ಕೆ ನೀರು ಸೋಕುವುದು ಅಪಾಯಕಾರಿ ಎಂಬುದು ತಪ್ಪು ನಂಬಿಕೆ. ಗಾಯ ಅಥವಾ ಹುಣ್ಣನ್ನು ಶುದ್ಧವಾದ ನೀರಿನಿಂದ ತೊಳೆದ ಅನಂತರ ನೀರಿನ ತೇವಾಂಶವನ್ನು ಶುಚಿಯಾದ ಬಟ್ಟೆಯಿಂದ ಅದ್ದಿ ತೆಗೆದು, ಔಷಧಿ ಹಚ್ಚಿ ಪುನಃ ಬ್ಯಾಂಡೇಜ್‌/ಡ್ರೆಸಿಂಗ್‌ ಮಾಡಿಕೊಳ್ಳಬಹುದು. ಹುಣ್ಣನ್ನು ಬಟ್ಟೆಯಿಂದ ಮುಚ್ಚಿ "ಡ್ರೆಸಿಂಗ್‌' ಮಾಡಿಸಿಕೊಳ್ಳುವುದರಿಂದ ಒಳಗೆ ಶಾಖವೇರಿ ಹುಣ್ಣು "ಬೆಂದು' ಹೋಗುತ್ತದೆ ಎಂಬ ಭಯ ಹಲವರಲ್ಲಿದೆ. ಇದು ಶುದ್ಧ ತಪ್ಪು, ಕಾಲಿನ ಹುಣ್ಣಿಗೆ ಡ್ರೆಸಿಂಗ್‌ ಮಾಡಿಸದೇ ತೆರೆದಿಟ್ಟಲ್ಲಿ  ಸೋಂಕಿಗೆ ಆಹ್ವಾನವಿತ್ತಂತೆಯೇ ಸರಿ. ನಿಯಮಿತವಾಗಿ ಹುಣ್ಣುವಿನ ಶುಶ್ರೂಷೆಯನ್ನು ಮಾಡಿ ಡ್ರೆಸಿಂಗ್‌ ಮಾಡಿಸಿಕೊಳ್ಳುವುದು ಬಹುಮುಖ್ಯ. ಕೆಲವು ಗಾಯಗಳು "ತೆರೆದಿಟ್ಟರೂ' ವಾಸಿಯಾಗಬಹುದಾದರೂ. "ತೆರೆದಿಟ್ಟದ್ದರಿಂದಲೇ' ವಾಸಿಯಾಗುವ ಗಾಯವೆಂಬುದಿಲ್ಲ!.

ಕಾಲಿನ ಹುಣ್ಣು ವಾಸಿಯಾಗುವಲ್ಲಿ ತಡೆಯೊಡ್ಡುವ ಇನ್ನೊಂದು ಪ್ರಮುಖ ಕಾರಣವೆಂದರೆ ರೋಗಿಯ ಆರೋಗ್ಯ. ರೋಗಿಯನ್ನು ಭಾದಿಸುತ್ತಿರಬಹುದಾಗಿರುವ ಮಧುಮೇಹ, ರಕ್ತಹೀನತೆ, ಅಪೌಷ್ಟಿಕತೆ ಉಸಿರಾಟದ ತೊಂದರೆ ಇತ್ಯಾದಿ ಕಾಯಿಲೆಗಳು, ಹುಣ್ಣು ವಾಸಿಯಾಗುವ ಪ್ರಕ್ರಿಯೆಯನ್ನು ಕುಂಠಿತಗೊಳಿಸುತ್ತವೆ. ಅದರಲ್ಲೂ ಮಧುಮೇಹ ಅಥವಾ ಡಯಾಬಿಟೆಸ್‌ ಕಾಯಿಲೆ, ರೋಗಿಯ ರೋಗ ನಿರೋಧಕ ಶಕ್ತಿಯನ್ನೂ ಕ್ಷೀಣಿಸುವಂತೆ ಮಾಡುತ್ತದೆ. ಅದರೊಂದಿಗೆ ರಕ್ತಪರಿಚಲನೆಯಲ್ಲಿನ ಅಡಚಣೆ ಹಾಗೂ ನರದೌರ್ಬಲ್ಯವೂ ಜೊತೆಗೂಡುವುದರಿಂದ ಡಯಾಬಿಟೆಸ್‌ ಇರುವ ವ್ಯಕ್ತಿಯ ಕಾಲಿನ ಹುಣ್ಣು ವಾಸಿಯಾಗುವುದು ಒಂದು ಸವಾಲೇ ಆಗಿ ಪರಿಣಮಿಸುತ್ತದೆ. ಡಯಾಬಿಟೆಸ್‌ ರೋಗಿಗಳಲ್ಲಿ ಕಾಲಿನ ಹುಣ್ಣಿನ ಮೂಲಕ ಪ್ರವೇಶಿಸುವ ಸೋಂಕು ಇಡೀ ದೇಹಕ್ಕೆ ಪಸರಿಸಿ ಪ್ರಾಣಾಂತಿಕವಾಗುವುದೂ ಉಂಟು. ತಜ್ಞ ವೈದ್ಯರು ಈ ರೀತಿ ರೋಗಿಯ ದೇಹದಲ್ಲಿರಬಹುದಾದ ಸಂಕೀರ್ಣತೆಗಳನ್ನು ಗುರುತಿಸಿ ಸೂಕ್ತ ಪರಿಹಾರ ಸೂಚಿಸಬಲ್ಲರು. ಸಮಸ್ಯೆ ಗಂಭೀರವಾಗಿದ್ದಲ್ಲಿ ಕಾಲಿನ ಹುಣ್ಣಿನ ಚಿಕಿತ್ಸೆಗಾಗಿ ರೋಗಿಯನ್ನು ಒಳರೋಗಿಯಾಗಿ ಅಡ್ಮಿಟ್‌ ಮಾಡಿಕೊಳ್ಳಬೇಕಾಗಿ ಬರಬಹುದು. ಇಲ್ಲಿ ಹುಣ್ಣಿಗೆ ಕಾರಣವಾಗಿರಬಹುದಾದ ವೆರಿಕೋಸ್‌ ವೈನ್‌ (ಕಾಲಿನ ಅಭಿಧಮನಿಗಳ ಉಬ್ಬುವಿಕೆ), ಅಥೆರೋಸ್ಕಿ$Éàರೋಸಿಸ್‌ (ಕಾಲಿನ ಅಪಧಮನಿಗಳ ಸಂಕುಚಿತತೆ), ನ್ಯೂರೋಪತಿ (ನರದೌರ್ಬಲ್ಯ) ಮತ್ತು ಅನೀಮಿಯಾ (ರಕ್ತಹೀನತೆ) ಇತ್ಯಾದಿಗಳ ಇರುವಿಕೆಯ ಬಗ್ಗೆ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಮಾಡಲಾಗುತ್ತದೆ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಸಮಸ್ಯೆಗಳು ಇರುವುದೂ ಉಂಟು. ಚಿಕಿತ್ಸೆಯ ವಿವರಗಳು ಇಲ್ಲಿ ಅಪ್ರಸ್ತುತ.

ಕಾಲಿನ ಹುಣ್ಣಿನ ಶುಶ್ರೂಷೆಯಲ್ಲಿ ಗಮನಿಸಬೇಕಾದ ಮೂರನೆಯ ಅಂಶವೆಂದರೆ, ರೋಗಿಯು ಅದಾಗಲೇ ತೆಗೆದುಕೊಳ್ಳುತ್ತಿರಬಹುದಾದ ಔಷಧಗಳೂ ಕೂಡ ಕೆಲವೊಮ್ಮೆ ರೋಗಿಯ ಕಾಲಿನ ಹುಣ್ಣು ವಾಸಿಯಾಗುವಲ್ಲಿ ತಡೆಯೊಡ್ಡುತ್ತವೆ ಎಂಬುದು. ಇದರಲ್ಲಿ ಸ್ಟಿರಾಯ್ಡಯುಕ್ತ ಔಷಧಿಗಳು ಮತ್ತು ಕೆಲವೊಂದು ಗಂಭೀರ ವೈದ್ಯ ಔಷಧಿಗಳು ಪ್ರಮುಖವಾದುವು. ಕೆಲವೊಂದು ಗಂಭೀರ ವೈದ್ಯಕೀಯ ಸಮಸ್ಯೆಗಳ ಹತೋಟಿಗೆ ಸ್ಟಿರಾಯ್ಡಯುಕ್ತ ಔಷಧಿಗಳ ಬಳಕೆ ಅನಿವಾರ್ಯವಾಗಬಹುದು. ಆದರೆ ಸ್ಟಿರಾಯ್ಡ ಔಷಧಿಗಳ ಅಡ್ಡ ಪರಿಣಾಮದಿಂದ ರೋಗಿಯ ರೋಗ ನಿರೋಧಕ ಶಕ್ತಿ ಕುಗ್ಗುವುದರಿಂದ ಕಾಲಿನ ಹುಣ್ಣು ವಾಸಿಯಾಗುವಲ್ಲಿ ವಿಳಂಬ ಹಾಗೂ ಸೋಂಕಿನ ಸಾಧ್ಯತೆ ಹೆಚ್ಚುತ್ತದೆ. ಇಲ್ಲಿ ಚಿಕಿತ್ಸೆಯ ಹೊಣೆ ಹೊತ್ತಿರುವ ವೈದ್ಯರು ಸ್ಟಿರಾಯ್ಡ ಔಷಧಿಯಿಂದುಂಟಾಗುವ ಸತ್ಪರಿಣಾಮ ಹಾಗೂ ದುಷ್ಪರಿಣಾಮಗಳನ್ನು ತುಲನೆ ಮಾಡಿ ಎಚ್ಚರಿಕೆಯಿಂದ ಚಿಕಿತ್ಸೆ ಕೊಡಬೇಕಾಗುತ್ತದೆ. ಈ ರೀತಿಯ ಸಂಕೀರ್ಣತೆಯ ಬಗ್ಗೆ ರೋಗಿಯನ್ನು ಮತ್ತು ಆತನ ಮನೆಯವರನ್ನು ಎಚ್ಚರಿಸುವುದು ಒಳಿತು. ಅದಲ್ಲದೆ, ಅನಿವಾರ್ಯ ಸಂದರ್ಭಗಳಲ್ಲದೆ ಇತರೆಡೆ ಸ್ಟಿರಾಯ್ಡ ಯುಕ್ತ ಔಷಧಿಗಳನ್ನು ಲಘುವಾಗಿ ಪರಿಗಣಿಸಬಾರದು ಎಂಬುದು ಇದರಿಂದ ಶ್ರುತವಾಗುತ್ತದೆ.

ಸ್ಟಿರಾಯ್ಡ ಔಷಧಿಗಳಲ್ಲದೆ ಇತರ ಕೆಲವು ತೀಕ್ಷ್ಣ ಔಷಧಿಗಳೂ ದೇಹದ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಿ ದೇಹದ ಯಾವುದೇ ಭಾಗದಲ್ಲಿನ ಗಾಯವನ್ನು ವಾಸಿಯಾಗದಂತೆ ಮಾಡುವುದುಂಟು. ಇವುಗಳಲ್ಲಿ ಕ್ಯಾನ್ಸರ್‌ ನಿವಾರಕ ಕಿಮೋತೆೆರಪಿ ಔಷಧಿಗಳು ಮುಖ್ಯವಾದುವು. ಕ್ಯಾನ್ಸರ್‌ನ ಜೀವಕೋಶಗಳನ್ನು ನಾಶ ಪಡಿಸಿ, ರೋಗಿಯ ಜೀವರಕ್ಷಣೆ ಮಾಡುವ ಗುಣವುಳ್ಳ  ಈ ಔಷಧಿಗಳು ತಮ್ಮ ಅಡ್ಡ ಪರಿಣಾಮದಿಂದ ಹುಣ್ಣು ವಾಸಿಯಾಗುವಲ್ಲಿ ಆವಶ್ಯಕವಾದ ಜೀವಕೋಶಗಳನ್ನೂ ಘಾಸಿಗೊಳಿಸುವುದರಿಂದ ಹುಣ್ಣು ಮಾಯುವಲ್ಲಿ ವಿಳಂಬವಾಗುತ್ತದೆ.

ಕೊನೆಯದಾಗಿ ಹೇಳಬಹುದಾದ ಮಾತೆಂದರೆ ಕಾಲಿನ ಹುಣ್ಣು ವಾಸಿಯಾಗುವಲ್ಲಿ ವೈದ್ಯ, ರೋಗಿ ಹಾಗೂ ಕಾಯಿಲೆಯ ಸಂದರ್ಭ ಇವೆಲ್ಲವೂ ಮಹತ್ವವನ್ನು ಪಡೆಯುತ್ತವೆ. ಆದ್ದರಿಂದ ವೈದ್ಯನಾದವನು ರೋಗಿಯ ದೈಹಿಕ ಆರ್ಥಿಕ ಹಾಗೂ ಸಾಮಾಜಿಕ ಸಂದರ್ಭಗಳನ್ನು ಅರಿತು ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ. ಇನ್ನೊಂದೆಡೆ ರೋಗಿಯೂ ಕೂಡ ಚಿಕಿತ್ಸೆಯ ಪೂರ್ತಿ ಹೊಣೆಯನ್ನು ವೈದ್ಯನ ಮೇಲೆ ಹೊರಿಸದೆ ತನ್ನ ಪಾಲಿನ ಹೊಣೆ ಯಾ ಕರ್ತವ್ಯವನ್ನು ಪಾಲಿಸಬೇಕಾಗುತ್ತದೆ. ರೋಗಿ ಹಾಗೂ ವೈದ್ಯ ಸಂಯುಕ್ತವಾಗಿ ಹೋರಾಡಿದ್ದೇ ಆದರೆ ಎಂತಹಾ ಹಳೆಯ ಹುಣ್ಣಾದರೂ ವಾಸಿಯಾಗುವುದು ಸಾಧ್ಯ.

- ಡಾ| ಶಿವಾನಂದ ಪ್ರಭು, 
ಪ್ರೊಫೆಸರ್‌ ಮತ್ತು  ಯೂನಿಟ್‌ ಮುಖ್ಯಸ್ಥರು
ಸರ್ಜರಿ ವಿಭಾಗ
ಕೆ.ಎಂ.ಸಿ. ಅತ್ತಾವರ

Trending videos

Back to Top