CONNECT WITH US  

ರಕ್ತ ಹಾಯಿಸುವಿಕೆ: ಸಂಭಾವ್ಯ ಅಪಾಯ; ತಡೆಗಟ್ಟುವಿಕೆ

ರಕ್ತ ಪೂರಣವು ಅನೇಕ ರೋಗಿಗಳಿಗೆ ಜೀವದಾನ ಮಾಡಬಲ್ಲುದು ಮತ್ತು ಅನೇಕ ವೈದ್ಯಕೀಯ ಪ್ರಯೋಜನಗಳನ್ನು ಒದಗಿಸಿಕೊಡಬಲ್ಲುದು ಎಂಬುದು ನಿಜವಾದರೂ ಅದು ಸಂಪೂರ್ಣ ಅಪಾಯರಹಿತವಲ್ಲ ಎನ್ನುವುದೂ ಅಷ್ಟೇ ಸತ್ಯ. ರೋಗಿಯ ರಕ್ತ ಮತ್ತು ದಾನಿಯ ರಕ್ತ ಪರಸ್ಪರ ಹೊಂದಿಕೊಳ್ಳುತ್ತವೆ ಅನ್ನುವುದನ್ನು ಹಾಯಿಸುವ ಮುನ್ನ ಪರೀಕ್ಷಿಸಲಾಗುತ್ತದೆ ಹಾಗೂ ಈ ಪ್ರಕ್ರಿಯೆಯ ಸಂದರ್ಭದಲ್ಲಿ  ಸತತವಾಗಿ ರೋಗಿಯ ಮೇಲೆ ನಿಗಾ ಇರಿಸಲಾಗುತ್ತದೆ, ಹೀಗಾಗಿ ಗಂಭೀರ ಅಡ್ಡ ಪರಿಣಾಮಗಳು ಕಡಿಮೆ. ಆದರೆ, ಅನೇಕ ವೈದ್ಯಕೀಯ ಚಿಕಿತ್ಸಾ ಪ್ರಕ್ರಿಯೆಗಳ ನಡುವೆ ಪ್ರತಿಕೂಲ ಪರಿಣಾಮಗಳನ್ನು ಸದಾ ನಿಖರವಾಗಿ ಮುಂಗಾಣುವುದಕ್ಕೆ ಸಾಧ್ಯವಾಗದು ಅಥವಾ ದೂರವಿಡಲಾಗದು. 

ರಕ್ತ ಘಟಕದ ಪೂರಣದ ಸಂದರ್ಭದಲ್ಲಿ ಅಥವಾ ರಕ್ತ ಪೂರಣ ನಡೆದ ಬಳಿಕ ಅಲ್ಪಾವಧಿಯಲ್ಲಿ ಕಾಣಿಸಿಕೊಳ್ಳುವ ಅನಿರೀಕ್ಷಿತ ಅಥವಾ ಅನಿಯಂತ್ರಿತ ಲಕ್ಷಣ ಅಥವಾ ಚಿಹ್ನೆಗಳನ್ನು ಪೂರಣದಿಂದಾಗಿರುವ ಪ್ರತಿವರ್ತನೆಗಳು ಎಂದು ಪರಿಗಣಿಸಬಹುದು.

ಇದು ಪೂರಣ ನಡೆದ 24 ತಾಸುಗಳ ಒಳಗಾಗಿ ಕಾಣಿಸಿಕೊಂಡ ಕ್ಷಿಪ್ರ ಪ್ರತಿವರ್ತನೆಯಾಗಿರಬಹುದು ಅಥವಾ ಪೂರಣದ ಬಳಿಕ ವಾರ ಯಾ ತಿಂಗಳುಗಟ್ಟಲೆ ವ್ಯಾಪಿಸಿಕೊಳ್ಳುವ ದೀರ್ಘಾವಧಿಯ ಪ್ರತಿವರ್ತನೆ ಆಗಿರಬಹುದು.

ರಕ್ತ ಹಾಯಿಸುವಿಕೆಯಿಂದಾಗುವ ತೊಂದರೆಗಳ ಪಟ್ಟಿ 
-ಹೀಮೊಲೈಟಿಕ್‌ ಪ್ರಕ್ರಿಯೆ .
-ಪೂರಣದ ಮೂಲಕ  ಹರಡಿದ ಸೋಂಕು.
-ಜ್ವರ ಬರುವುದು .
-ಅಲರ್ಜಿಕ್‌ ಪ್ರತಿವರ್ತನೆಗಳು.
-ಪ್ರತಿರೋಧಕಗಳ ತಯಾರಿ.
-ಶ್ವಾಸಕೋಶಕ್ಕೆ ಹಾನಿ.
-ಕಬ್ಬಿಣದಂಶದ ಆಧಿಕ್ಯ.
-ಹೃದಯಕ್ಕೆ ಹೊರೆ ಹೆಚ್ಚಳ, ಇತ್ಯಾದಿ.

ಪೂರಣ ಪ್ರತಿವರ್ತನೆಯನ್ನು 
ಸೂಚಿಸುವ ಚಿಹ್ನೆ ಮತ್ತು ಲಕ್ಷಣಗಳು:

-ಜ್ವರ: ಶರೀರ ತಾಪಮಾನದಲ್ಲಿ ಹೆಚ್ಚಳ. ಇದು ಅತ್ಯಂತ ಸಾಮಾನ್ಯ ಚಿಹ್ನೆ.
-ಚಳಿ ಮತ್ತು ನಡುಗುವಿಕೆ.
-ಉಬ್ಬಸ, ಕೆಮ್ಮು ಮತ್ತು ಕಟ್ಟುಸಿರು ಸಹಿತ ಉಸಿರಾಟ ಕಷ್ಟ.
-ಅಧಿಕ ರಕ್ತದೊತ್ತಡ ಅಥವಾ ರಕ್ತದೊತ್ತಡ ಕುಸಿತ.
-ಹೊಟ್ಟೆ, ಎದೆ, ಪಕ್ಕೆ ಅಥವಾ ಬೆನ್ನು ನೋವು.
-ರಕ್ತ ಪೂರಣ ಮಾಡಿದ ಜಾಗದಲ್ಲಿ ನೋವು.
-ಬೊಕ್ಕೆಗಳು, ದದ್ದುಗಳು, ಕೆಂಪೇರುವಿಕೆ, ತುರಿಕೆ ಮತ್ತು ಸ್ಥಳೀಯ ಬಾವಿನ ಸಹಿತ ಚರ್ಮದ ಅಸಹಜತೆಗಳು.
-ಜಾಂಡಿಸ್‌.
-ಹೊಟ್ಟೆ ತೊಳೆಸುವಿಕೆ/ ವಾಂತಿ.
-ಅಸಹಜ ರಕ್ತಸ್ರಾವ.

ಪೂರಣ ಪ್ರತಿವರ್ತನೆಗಳ 
ವೈದ್ಯಕೀಯ ವಿಶ್ಲೇಷಣೆ; ನಿರ್ವಹಣೆ

ರಕ್ತ ಪೂರಣದ ವೇಳೆ ಈ ಮೇಲಿನ ತೊಂದರೆಗಳು ಕಂಡು ಬಂದಲ್ಲಿ ವೈದ್ಯಕೀಯ ತಪಾಸಣೆ ಮತ್ತು ಪ್ರಯೋಗಾಲದಲ್ಲಿ ರಕ್ತದ ಪರೀಕ್ಷೆ ಮಾಡಲಾಗುತ್ತದೆ. ಕ್ಷಿಪ್ರ ಪ್ರತಿವರ್ತನೆ ಉಂಟಾಗಿರುವ ಸಂದೇಹ ಕಾಣಿಸಿಕೊಂಡಾಗ ಕೆಳಕಂಡ ಕ್ರಮಗಳನ್ನು ತತ್‌ಕ್ಷಣ ತೆಗೆದುಕೊಳ್ಳಲಾಗುತ್ತದೆ:
-ರಕ್ತ ಪೂರಣವನ್ನು ತತ್‌‌ಕ್ಷಣ ಸ್ಥಗಿತಗೊಳಿಸಲಾಗುತ್ತದೆ. 
-ರೋಗಿ ಮತ್ತು ರಕ್ತ ಘಟಕದ ನಡುವಣ ಹೊಂದಾಣಿಕೆಗಳನ್ನು ಪುನರಪಿ ಪರಿಶೀಲಿಸಲಾಗುತ್ತದೆ. ರಕ್ತ ಘಟಕದ ಲೇಬಲ್‌ಗ‌ಳು, ರೋಗಿಯ ದಾಖಲೆಗಳು ಮತ್ತು ರೋಗಿಯ ಗುರುತು ಪತ್ತೆಗಳನ್ನು ಮರುಪರಿಶೀಲಿಸಿ ಗುರುತು ಪತ್ತೆ ತಪ್ಪುಗಳಿಗಾಗಿ ಶೋಧಿಸಲಾಗುತ್ತದೆ. 
-ಕ್ಷಿಪ್ರ ಪ್ರತಿವರ್ತನೆಗೆ ಕಾರಣ ಏನಾಗಿರಬಹುದು ಎಂಬ ವಿಚಾರದಲ್ಲಿ ಶೋಧ ಆಧಾರಿತ ನಿರ್ದೇಶನಕ್ಕಾಗಿ ರಕ್ತ ಪೂರಣ ಸೇವೆಯನ್ನು ಸಂಪರ್ಕಿಸಲಾಗುತ್ತದೆ. 
-ಉಳಿದ ರಕ್ತ ಅಥವಾ ರಕ್ತ ಘಟಕವನ್ನು ಸೂಕ್ತ ರಕ್ತದ ಮಾದರಿಗಳೊಂದಿಗೆ ಪ್ರಯೋಗಾಲಯ ಪರೀಕ್ಷೆಗಳಿಗಾಗಿ ರಕ್ತ ನಿಧಿಗೆ ಹಿಂದಿರುಗಿಸಲಾಗುತ್ತದೆ. 
-ಪ್ರತಿವರ್ತನೆಯ ವಿಧವನ್ನು ಕಂಡುಕೊಳ್ಳುವುದಕ್ಕಾಗಿ ಲಕ್ಷಣ ಮತ್ತು ಚಿಹ್ನೆಗಳ ಆಧಾರದಲ್ಲಿ ಸೂಕ್ತವಾದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. 
-ಮುಂದಿನ ಪೂರಣಕ್ಕಾಗಿ ನಿರ್ದಿಷ್ಟ ಸೂಚನೆಗಳ ಸಹಿತ ಪೂರಣ ಪ್ರತಿವರ್ತನಾ ವರದಿಯನ್ನು ವೈದ್ಯಕೀಯ ವಾರ್ಡ್‌ಗೆ ಕಳುಹಿಸಿಕೊಡಲಾಗುತ್ತದೆ. 

ಕ್ಷಿಪ್ರ ಪೂರಣ ಪ್ರತಿವರ್ತನೆ
ಇದು ತೀವ್ರತೆಯಲ್ಲಿ ಅಲ್ಪಪ್ರಮಾಣದ ಜ್ವರದಂತಹ ಪ್ರತಿವರ್ತನೆಗಳಿಂದ ತೊಡಗಿ ಜೀವಾಪಾಯಕ್ಕೆ ಕಾರಣವಾಗಬಹುದಾದ ಹೀಮೋಲಿಟಿಕ್‌ (ಕೆಂಪು ರಕ್ತಕಣಗಳ ನಾಶ ಅಥವಾ ಹಾನಿ) ಪ್ರತಿವರ್ತನೆಗಳ ವರೆಗೂ ಆಗಬಹುದಾಗಿದೆ. 

ಪ್ರತಿವರ್ತನೆಗಳಲ್ಲಿ ಅತಿ ಸಾಮಾನ್ಯವಾದವುಗಳು ಅಲರ್ಜಿ ಸಂಬಂಧಿ ಮತ್ತು ಜ್ವರ. ಹಾನಿಯ ಅಪಾಯವನ್ನು ಕಡಿಮೆಗೊಳಿಸುವುದಕ್ಕೆ ಪ್ರತಿವರ್ತನೆಯನ್ನು ಶೀಘ್ರವಾಗಿ ಗುರುತಿಸುವುದು ಮತ್ತು ಕ್ಷಿಪ್ರವಾಗಿ ವೈದ್ಯಕೀಯ ವಿಶ್ಲೇಷಣೆಗೊಳಪಡಿಸುವುದು ಅತ್ಯಂತ ಮುಖ್ಯವಾಗಿದೆ. 
ಈ ಕಾರಣದಿಂದಾಗಿಯೇ ರಕ್ತ ಪೂರಣವನ್ನು  ರಕ್ತ ಅಥವಾ ರಕ್ತದ ಘಟಕವನ್ನು ಸ್ವೀಕರಿಸುತ್ತಿರುವ ರೋಗಿಯ ಮೇಲೆ ನೇರ ನಿಗಾ ಇರಿಸಬಹುದಾದ ಹಾಗೂ ರಕ್ತದ ಘಟಕಗಳ ನೀಡಿಕೆಯಲ್ಲಿ ಮತ್ತು ಪೂರಣ ಪ್ರತಿವರ್ತನೆಗಳ ನಿರ್ವಹಣೆಯಲ್ಲಿ ತರಬೇತು ಹೊಂದಿದ ಸಿಬಂದಿಯಿರುವ ವೈದ್ಯಕೀಯ ಕೇಂದ್ರ ಅಥವಾ ಆಸ್ಪತ್ರೆಗಳಲ್ಲಿ ಮಾತ್ರ ನಡೆಸಲಾಗುತ್ತದೆ. 

ಅಲರ್ಜಿ ಪ್ರತಿವರ್ತನೆಗಳು
ರಕ್ತ ಪೂರಣದ ಅಲರ್ಜಿ ಪ್ರತಿವರ್ತನೆಗಳು ಬಹುತೇಕ ಅಲ್ಪಪ್ರಮಾಣದ್ದಾಗಿದ್ದರೂ ಅವುಗಳ ವ್ಯಾಪ್ತಿ ಸರಳವಾದ ತುರಿಕೆ, ಚರ್ಮ ಕೆಂಪೇರಿಕೆಯಂತಹ ಅಲರ್ಜಿ ಪ್ರತಿವರ್ತನೆಗಳಿಂದ ತೊಡಗಿ ಜೀವಾಪಾಯಕ್ಕೆ ಕಾರಣವಾಗಬಹುದಾದ ಅತಿ ಪ್ರತಿಸ್ಪಂದನೆ (ಆನಾಫಿಲ್ಯಾಕ್ಸಿಸ್‌)ಯ ವರೆಗೆ ಇರುವುದು ಸಾಧ್ಯ. ಇದರ ಚಿಹ್ನೆಗಳು ರಕ್ತ ಪೂರಣ ಆರಂಭವಾದ ಕೆಲವೇ ಸೆಕೆಂಡುಗಳು ಅಥವಾ ನಿಮಿಷಗಳಲ್ಲಿ ಕಾಣಿಸಿಕೊಳ್ಳುತ್ತವೆ. ರಕ್ತ ಅಥವಾ ರಕ್ತ ಘಟಕವನ್ನು ಸ್ವೀಕರಿಸುವ ರೋಗಿಯ ದೇಹದಲ್ಲಿ ಈಗಾಗಲೇ ರೂಪುಗೊಂಡಿರುವ ಆ್ಯಂಟಿಬಾಡಿಗಳು ಪೂರಣಗೊಂಡ ರಕ್ತ ಘಟಕದ ಅಲರ್ಜೆನ್‌ಗಳಿಗೆ ಅತಿ ಪ್ರತಿಸ್ಪಂದನೆ ತೋರುವುದೇ ಇದಕ್ಕೆ ಕಾರಣ. ಬಹುತೇಕ ಇಂತಹ ಪ್ರಕರಣಗಳಲ್ಲಿ ಕೆಲವು ಅಪರಿಚಿತ ಪ್ಲಾಸ್ಮಾ ಪ್ರೊಟೀನ್‌ ಈ ಅಲರ್ಜಿ ಪ್ರತಿವರ್ತನೆಗೆ ಕಾರಣವಾದ ಅಂಶವಾಗಿರುತ್ತದೆ. 

ರಕ್ತ ಪೂರಣದಿಂದ 
ಪ್ರಸಾರವಾಗುವ ಸೋಂಕುಗಳು

ಎಚ್‌ಐವಿ, ಹೆಪಟೈಟಿಸ್‌ ಬಿ, ಸಿ, ಮಲೇರಿಯಾ, ಸಿಫಿಲಿಸ್‌ನಂತಹ ಸೋಂಕುಗಳು ಇವೆಯೇ ಎಂಬುದನ್ನು ತಿಳಿಯಲು ರಕ್ತ ಬ್ಯಾಂಕುಗಳು ತಪಾಸಣೆ ನಡೆಸುತ್ತವೆ. ಈ ಸೋಂಕುಗಳ ತಪಾಸಣೆಗೆ ನೆಗೆಟಿವ್‌ ಫ‌ಲಿತಾಂಶ ಕಂಡುಬಂದ ಘಟಕಗಳನ್ನು ಪೂರಣಕ್ಕೆ ಆಯ್ದುಕೊಳ್ಳಲಾಗುತ್ತದೆ. ದಾನಿ ಮೂಲದಿಂದ ತಪಾಸಣೆಗೆ ಒಳಗಾಗಿದ್ದರೂ ಕೆಲವೊಮ್ಮೆ ಸೋಕು ರೋಗಗಳು ಕಂಡು ಬರದಿರಬಹುದು. ಸೋಂಕು ಪ್ರಸರಣದ ಈ ಉಳಿಕೆ ಅಪಾಯ ದಾನಿಗಳಲ್ಲಿ ಸೋಂಕಿನ ಕಂಡುಬರುವಿಕೆ ಮತ್ತು ಅನುಸರಿಸಲಾಗಿರುವ ದಾನಿ ರಕ್ತ ತಪಾಸಣಾ ವಿಧಾನದ ವಿಧಗಳನ್ನು ಆಧರಿಸಿ ಬದಲಾಗುತ್ತದೆ. ಸೋಂಕು ಬೆಳವಣಿಗೆಯ ಪ್ರಾಥಮಿಕ ಹಂತದಲ್ಲಿದ್ದು, ಸೋಂಕು ಪರೀಕ್ಷೆಯ ಫ‌ಲಿತಾಂಶವು ಪಾಸಿಟಿವ್‌ ಆಗಿ ಕಂಡುಬರದ ಅವಧಿಯ ವ್ಯಕ್ತಿಗಳಿಂದ ರಕ್ತವನ್ನು ಸ್ವೀಕರಿಸುವುದೇ ಇಂಥ ಅಪಾಯಕ್ಕೆ ಪ್ರಾಥಮಿಕ ಕಾರಣ ಎಂದು ನಂಬಲಾಗಿದೆ. ಆರೋಗ್ಯವಂತ ರಕ್ತದಾನಿಯ ರಕ್ತದಲ್ಲಿರುವ ಆದರೆ, ದಾನಿಯ ತಪಾಸಣಾ ಪರೀಕ್ಷೆಗಳು ಲಭ್ಯವಿಲ್ಲದ ಕೆಲವು ವೈರಸ್‌ ಅಥವಾ ಬ್ಯಾಕ್ಟೀರಿಯಾದಂತಹ ಸೋಂಕುಕಾರಿಗಳು ಕೂಡ ರಕ್ತ ಪೂರಣದ ವೇಳೆ ಪ್ರಸಾರವಾಗಬಹುದಾಗಿವೆ. 

ಪ್ರತಿರೋಧಕ ಉತ್ಪತ್ತಿ
ಕೆಲವೊಮ್ಮೆ ರಕ್ತ ಹಾಯಿಸುವುದರಿಂದ ರೋಗಿಯ ದೇಹದಲ್ಲಿ ಕೆಂಪು ರಕ್ತ ಕಣಕ್ಕೆ ಪ್ರತಿರೋಧಕಗಳು ಅಥವಾ ಆ್ಯಂಟಿಬಾಡಿಗಳು ತಯಾರಾಗುವ ಸಾಧ್ಯತೆಗಳಿವೆ. ಈ ಆ್ಯಂಟಿಬಾಡಿಗಳು ರೋಗಿಯು ಮತ್ತೂಮ್ಮೆ ರಕ್ತ ಪಡೆಯುವ ಸಂದರ್ಭದಲ್ಲಿ ತೊಂದರೆ ಉಂಟು ಮಾಡುವ ಸಾಧ್ಯತೆಗಳಿವೆ. 

ತಡೆಗಟ್ಟುವ ವಿಧಾನಗಳು
1. ಆರೋಗ್ಯವಂತ ದಾನಿಯ ಆಯ್ಕೆರಕ್ತದಾನಕ್ಕಾಗಿ ಆರೋಗ್ಯವಂತ, ಸಹಜ ದಾನಿಯನ್ನು ಆಯ್ಕೆ ಮಾಡುವುದಕ್ಕಾಗಿ ವೈದ್ಯರು ಮತ್ತು ತಂತ್ರಜ್ಞರು ಸರ್ವ ಪ್ರಯತ್ನಗಳನ್ನೂ ಮಾಡುತ್ತಾರೆ. ದಾನಿಯ ವೈದ್ಯಕೀಯ ಚರಿತ್ರೆಯನ್ನು ಸೂಕ್ತವಾಗಿ ಪ್ರಶ್ನಿಸಿ ತಿಳಿಯಲಾಗುತ್ತದೆ ಹಾಗೂ ದಾನಿಯ ಆಯ್ಕೆಯ ವಿಚಾರದಲ್ಲಿ ನಿಯಂತ್ರಕ ಮಂಡಳಿಗಳ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ರಕ್ತದಾನಿಗಳು ತಮ್ಮ ವೈದ್ಯಕೀಯ ಚರಿತ್ರೆಯನ್ನು ಯಾವುದೇ ಮುಚ್ಚುಮರೆ ಇಲ್ಲದೆ ರಕ್ತನಿಧಿಗಳ ಸಿಬಂದಿಗೆ ತಿಳಿಯಪಡಿಸಬೇಕಾಗುತ್ತದೆ. ದಾನಿಗಳಿಂದ ಸಂಗ್ರಹಿತವಾದ ಎಲ್ಲ ಮಾಹಿತಿಗಳನ್ನು ಗೋಪ್ಯವಾಗಿರುತ್ತದೆ.

-ಮುಂದಿನ ವಾರಕ್ಕೆ  

-ಡಾ| ಶಮೀ ಶಾಸ್ತ್ರಿ ,   
ಪ್ರೊಫೆಸರ್‌ ಮತ್ತು ವಿಭಾಗ ಮುಖ್ಯಸ್ಥೆ, 
ಡಿಪಾರ್ಟ್‌ಮೆಂಟ್‌ ಆಫ್ ಇಮ್ಯುನೊ ಹೆಮಟಾಲಜಿ ಮತ್ತು ಬ್ಲಿಡ್‌ ಟ್ರಾನ್ಸ್‌ ಫ್ಯೂಶನ್‌, ಮೆಡಿಸಿನ್‌ ವಿಭಾಗ,
ಕೆ.ಎಂ.ಸಿ., ಮಣಿಪಾಲ.


Trending videos

Back to Top