CONNECT WITH US  

ಕಿಡ್ನಿ ಕ್ಯಾನ್ಸರ್‌; ಶಸ್ತ್ರಚಿಕಿತ್ಸೆಯಲ್ಲಿ  ಇತ್ತೀಚೆಗಿನ ಬೆಳವಣಿಗೆಗ

ದಶಕಗಳ ಹಿಂದೆ ಮೂತ್ರಪಿಂಡದಲ್ಲಿ ಕ್ಯಾನ್ಸರ್‌ ಗಡ್ಡೆ ಕಾಣಿಸಿಕೊಂಡರೆ, ಅದು ಯಾವ ಹಂತದಲ್ಲಿಯೇ ಇರಲಿ, ಇಡೀ ಮೂತ್ರಪಿಂಡವನ್ನು ತೆಗೆದುಹಾಕಬೇಕಾಗಿತ್ತು. ಆದರೆ ಈಗ ರೊಬ್ಯಾಟಿಕ್‌ ಸರ್ಜರಿ ಈ ಶಸ್ತ್ರಚಿಕಿತ್ಸೆಯಲ್ಲಿ ಕ್ರಾಂತಿ ಮಾಡಿದೆ. ಕ್ಯಾನ್ಸರ್‌ ಗಡ್ಡೆಯನ್ನು ಮಾತ್ರ ತೆಗೆದುಹಾಕಿ, ಮೂತ್ರಪಿಂಡದ ಆರೋಗ್ಯವಂತ ಭಾಗವನ್ನು ಉಳಿಸಿಕೊಳ್ಳುವುದು ರೊಬಾಟಿಕ್‌ ಪಾರ್ಶಿಯಲ್‌ ನೆಫ್ರೆಕ್ಟಮಿಯಿಂದ ಸಾಧ್ಯವಾಗಿದೆ. 

ಆಕೆಯೋರ್ವ ಬಾಂಗ್ಲಾದೇಶೀ ಮಹಿಳೆ. ಬೆಂಗಳೂರಿನಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ವೈದ್ಯನಾಗಿರುವ ನನ್ನ ಬಳಿಗೆ ಸಮಾಲೋಚನೆಗೆಂದು ಅಷ್ಟು ದೂರದಿಂದ ಬಂದಿದ್ದವರು. ಆಕೆ ತನ್ನೂರಿನ ಆಸ್ಪತ್ರೆಯಲ್ಲಿ ಮಾಡಿಸಿಕೊಂಡಿದ್ದ ಸಿಟಿ ಸ್ಕ್ಯಾನ್‌ ತಂದಿದ್ದರು ಮತ್ತು ಅದು ಆಕೆಯ ಎಡ ಮೂತ್ರಪಿಂಡದ ಮೂರನೇ ಒಂದು ಭಾಗವನ್ನು ಆಕ್ರಮಿಸಿದ್ದ 4 ಸೆಂ. ಮೀ. ಗಾತ್ರದ ಗಡ್ಡೆಯದಾಗಿತ್ತು. ಆಕೆಯ ಊರಿನ ವೈದ್ಯರು ಮೂತ್ರಪಿಂಡವನ್ನು ತೆಗೆದುಹಾಕಬೇಕಾಗುತ್ತದೆ ಎಂದೇ ಆಕೆಯೆ ಹೇಳಿದ್ದರಂತೆ. ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ರೊಬೋಟಿಕ್‌ ಶಸ್ತ್ರಚಿಕಿತ್ಸಾ ಸೌಲಭ್ಯ ಇರುವ ಬಗ್ಗೆ ಆ ಮಹಿಳೆ ಕೇಳಿದ್ದರು, ಹಾಗಾಗಿ ಇನ್ನೊಂದು ಸುತ್ತಿನ ಸಮಾಲೋಚನೆಗಾಗಿ ನನ್ನನ್ನು ಹುಡುಕಿ ಬಂದಿದ್ದರು. ಸಿಟಿ ಸ್ಕ್ಯಾನ್‌ ವೀಕ್ಷಿಸಿದ ನನಗೆ ಗಡ್ಡೆಗೆ ರೊಬೊಟಿಕ್‌ ಪಾರ್ಶಿಯಲ್‌ ನೆಫ್ರೆಕ್ಟಮಿ (ರೊಬಾಟಿಕ್‌ ಶಸ್ತ್ರಚಿಕಿತ್ಸೆಯ ಮೂಲಕ ಮೂತ್ರಪಿಂಡದ ಬಾಧಿತ ಭಾಗವನ್ನು ಮಾತ್ರ ತೆಗೆದುಹಾಕುವುದು) ಶಸ್ತ್ರಚಿಕಿತ್ಸೆ ನಡೆಸುವುದು  ಸಾಧ್ಯ ಎಂಬುದು ಸ್ಪಷ್ಟವಾಯಿತು. ಯಶಸ್ವೀ ಶಸ್ತ್ರಚಿಕಿತ್ಸೆ ನಡೆದು ಆಕೆಯ ಕ್ಯಾನ್ಸರ್‌ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು. ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದ ಆಕೆಯ ಮೂತ್ರಪಿಂಡದ ಮೂರನೇ ಎರಡು ಭಾಗ ಅಬಾಧಿತವಾಗಿ ಉಳಿಯಿತು. 

ಮೂತ್ರಪಿಂಡದ ಕ್ಯಾನ್ಸರ್‌
ಪುರುಷರು ಮತ್ತು ಮಹಿಳೆಯರಿಗೆ ಉಂಟಾಗುವ ಒಟ್ಟು ಕ್ಯಾನ್ಸರ್‌ ಪ್ರಕರಣಗಳಲ್ಲಿ ಶೇ.3ರಷ್ಟು ಭಾಗ ಮೂತ್ರಪಿಂಡಗಳಲ್ಲಿ ಉಂಟಾಗುವ ಕ್ಯಾನ್ಸರ್‌ ಆಗಿದೆ. ಭಾರತದಲ್ಲಿ ಕಿಡ್ನಿ ಕ್ಯಾನ್ಸರ್‌ಗೆ ತುತ್ತಾಗುವವರ ಸಂಖ್ಯೆ ಎಷ್ಟು ಎಂಬ ಅಂಕಿಸಂಖ್ಯೆ ದೊರಕುತ್ತಿಲ್ಲ. ಆದರೆ, ಹೆಚ್ಚುತ್ತಿರುವ ಆರೋಗ್ಯ ಅರಿವು, ಆರೋಗ್ಯ ತಪಾಸಣೆಗಳ ಕಾರಣವಾಗಿ ಮೂತ್ರಪಿಂಡಗಳಲ್ಲಿ ಗಡ್ಡೆ ಉಂಟಾಗಿರುವ ಪ್ರಕರಣಗಳ ಪತ್ತೆ, ಅದರಲ್ಲೂ ಯುವ ವಯೋಗುಂಪಿನಲ್ಲಿ, ಹೆಚ್ಚು ಹೆಚ್ಚು ವರದಿಯಾಗುತ್ತಿದೆ. ಸ್ಥೂಲವಾಗಿ ಹೇಳುವುದಾದರೆ, ಮೂತ್ರಪಿಂಡದ ಕ್ಯಾನ್ಸರ್‌ನಲ್ಲಿ ಮೂರು ಹಂತಗಳಿವೆ. ಆರಂಭಿಕ ಅಥವಾ ಪ್ರಾಥಮಿಕ ಹಂತದಲ್ಲಿ ಗಡ್ಡೆಯು ಮೂತ್ರಪಿಂಡದ ಒಳಗೆಯೇ ಇದ್ದು, ಮೂತ್ರಪಿಂಡವನ್ನು ಸಂಪೂರ್ಣವಾಗಿ ತೆಗೆದುಹಾಕಬೇಕಾಗುವುದಿಲ್ಲ. ಮಧ್ಯಮ ಅಥವಾ ದ್ವಿತೀಯ ಹಂತದಲ್ಲಿ ಮೂತ್ರಪಿಂಡದ ದೊಡ್ಡ ಭಾಗವು ಕ್ಯಾನ್ಸರ್‌ ಗಡ್ಡೆಯಿಂದ ಬಾಧಿತವಾಗಿದ್ದು, ಮೂತ್ರಪಿಂಡವನ್ನು ಪೂರ್ತಿಯಾಗಿ ತೆಗೆದುಹಾಕಬೇಕಾಗುತ್ತದೆ. ಮುಂದುವರಿದ ಅಥವಾ ತೃತೀಯ ಹಂತದಲ್ಲಿ ಕ್ಯಾನ್ಸರ್‌ ದೇಹದ ಇತರ ಭಾಗಗಳಿಗೂ ಹರಡಿರುತ್ತದೆ.  

ಮಣಿಪಾಲ್‌
ಹಾಸ್ಪಿಟಲ್‌ನಲ್ಲಿದೆ

ರೊಬಾಟಿಕ್‌ ಶಸ್ತ್ರಚಿಕಿತ್ಸಾ ಸೌಲಭ್ಯವನ್ನು ಹೊಂದಿರುವ ಕರ್ನಾಟಕದ ಆಸ್ಪತ್ರೆಗಳಲ್ಲಿ ಬೆಂಗಳೂರಿನಲ್ಲಿರುವ ಮಣಿಪಾಲ್‌ ಹಾಸ್ಪಿಟಲ್‌ ಮೊದಲಿಗ. ರೋಗಿಗಳ ಅನುಕೂಲಕ್ಕಾಗಿ ಕ್ರಾಂತಿಕಾರಿ ಶಸ್ತ್ರಚಿಕಿತ್ಸಾ ಸೌಲಭ್ಯಗಳನ್ನು ಹೊಂದಿರುವ ರಾಜ್ಯದ ಅನುಭವಿ ಆಸ್ಪತ್ರೆಯೂ ಇದಾಗಿದೆ. ರಾಜ್ಯದವರಷ್ಟೇ ಅಲ್ಲದೆ ಹೊರ ರಾಜ್ಯಗಳ ಅಷ್ಟೇ ಏಕೆ, ವಿದೇಶೀ ರೋಗಿಗಳೂ ಇಲ್ಲಿಗೆ ಬರುತ್ತಾರೆ. ಮೂತ್ರಪಿಂಡದ ಕ್ಯಾನ್ಸರ್‌ಗೆ ರೊಬಾಟಿಕ್‌ ಪಾರ್ಶಿಯಲ್‌ ನೆಫ್ರೆಕ್ಟಮಿ ಮೂಲಕ ಶಸ್ತ್ರಚಿಕಿತ್ಸೆ ನೀಡಿದ ಕರ್ನಾಟಕದ ಮೊದಲ ಆಸ್ಪತ್ರೆ ಮಣಿಪಾಲ್‌ ಹಾಸ್ಪಿಟಲ್‌, ಬೆಂಗಳೂರು ಆಗಿದೆ. 

ಬಾಧಿತ ಭಾಗಕ್ಕಷ್ಟೇ ಶಸ್ತ್ರಕ್ರಿಯೆ
ದಶಕಗಳ ಹಿಂದೆ ಸಣ್ಣ ಗಡ್ಡೆಗೂ ಇಡಿಯ ಮೂತ್ರಪಿಂಡವನ್ನೇ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕುವುದು ಏಕಮೇವ ಆಯ್ಕೆಯ ಚಿಕಿತ್ಸೆಯಾಗಿತ್ತು. ಕಾಲಾಂತರದಲ್ಲಿ, ವೈದ್ಯಕೀಯ ಜ್ಞಾನ ಬೆಳವಣಿಗೆ ಹೊಂದುತ್ತಿದ್ದಂತೆ, ಮೂತ್ರಪಿಂಡವನ್ನು ಸಂಪೂರ್ಣವಾಗಿ ತೆಗೆದುಹಾಕಬೇಕಾಗಿಲ್ಲ; ಗಡ್ಡೆಯನ್ನು ಮಾತ್ರ ಮತ್ತು ಅದಕ್ಕೆ ತಗುಲಿಕೊಂಡಿರುವ ಆರೋಗ್ಯವಂತ ಜೀವಕೋಶಗಳ ಒಂದು ವರ್ತುಲದ ಜತೆಗೆ ತೆಗೆದುಹಾಕಿದರೆ ಸಾಕು ಎಂಬ ಅರಿವು ವೈದ್ಯರಲ್ಲಿ ಉಂಟಾಯಿತು (ಪಾರ್ಶಿಯಲ್‌ ನೆಫ್ರೆಕ್ಟಮಿ - ಮೂತ್ರಪಿಂಡದ ಬಾಧಿತ ಭಾಗವನ್ನು ಮಾತ್ರ ತೆಗೆದುಹಾಕುವ ಶಸ್ತ್ರಚಿಕಿತ್ಸೆ). ಆದರೆ, ಇದರಲ್ಲಿ ಹೊಟ್ಟೆಯ ಭಾಗದಲ್ಲಿ ದೊಡ್ಡ ಗಾತ್ರದ ಗಾಯ ಮಾಡಬೇಕಾಗಿ ಬರುತ್ತಿತ್ತು ಮತ್ತು ಇದು ಮುಜುಗರ ಉಂಟುಮಾಡಬಹುದಾದಷ್ಟು ದೊಡ್ಡ ಗಾಯದ ಕುರುಹನ್ನು ಉಳಿಸುತ್ತಿತ್ತಲ್ಲದೆ ಸಂಕೀರ್ಣ ಸಮಸ್ಯೆಗಳಿಗೂ ಕಾರಣವಾಗುತ್ತಿತ್ತು. ಸುಮಾರು ಎರಡು ದಶಕಗಳ ಹಿಂದೆ, ಲ್ಯಾಪ್ರೊಸ್ಕೊಪಿಕ್‌ ಪಾರ್ಶಿಯಲ್‌ ನೆಫ್ರೆಕ್ಟಮಿ ಶಸ್ತ್ರಚಿಕಿತ್ಸೆ ಜನಪ್ರಿಯತೆ ಪಡೆಯಿತು. ಲ್ಯಾಪ್ರೊಸ್ಕೊಪಿ ಅಂದರೆ ಹೊಟ್ಟೆಯ ಭಾಗದಲ್ಲಿ ಸಣ್ಣ ರಂಧ್ರಗಳನ್ನು ಮಾಡಿ ಸಪೂರವಾದ ವೈದ್ಯಕೀಯ ಉಪಕರಣಗಳ ಸಹಾಯದಿಂದ ಶಸ್ತ್ರಚಿಕಿತ್ಸೆಯನ್ನು ನೆರವೇರಿಸುವುದು. ಇದು ಯಶಸ್ವೀ ವಿಧಾನ ಹೌದಾಗಿದ್ದರೂ ಗಡ್ಡೆಯನ್ನು ತೆಗೆದ ಪ್ರದೇಶದಲ್ಲಿ ಹೊಲಿಗೆ ಹಾಕುವುದು ಒಂದು ಸಂಕೀರ್ಣ ಸವಾಲೇ ಆಗಿತ್ತು. ಕಳೆದ ಒಂದು ದಶಕದಿಂದ ಈಚೆಗೆ ರೊಬಾಟಿಕ್‌ ಶಸ್ತ್ರಚಿಕಿತ್ಸೆಯ ಆವಿಷ್ಕಾರ ಇಂತಹ ಸಂಕೀರ್ಣ, ಸೂಕ್ಷ್ಮ ಶಸ್ತ್ರಚಿಕಿತ್ಸೆಗಳ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದೆ. ರೊಬಾಟಿಕ್‌ ಶಸ್ತ್ರಚಿಕಿತ್ಸೆಯು ಗಡ್ಡೆಯನ್ನು ಕತ್ತರಿಸುವುದು ಮತ್ತು ಗಡ್ಡೆಗೆ ಸಮೀಪದಲ್ಲಿರುವ ಮೂತ್ರಪಿಂಡದ ಆರೋಗ್ಯವಂತ ಭಾಗಗಳಿಗೆ ಹೆಚ್ಚು ಹಾನಿಯಾಗದಂತೆ ಗಡ್ಡೆಯನ್ನು ತೆಗೆದುಹಾಕುವುದಕ್ಕೆ ಸಹಾಯ ಮಾಡುತ್ತದೆ. ಶಸ್ತ್ರಚಿಕಿತ್ಸೆಯ ಬಳಿಕ ಬಹು ಸುಲಭವಾಗಿ ಹೊಲಿಗೆ ಹಾಕುವುದಕ್ಕೆ ಸಾಧ್ಯ ಅನ್ನುವ ಕಾರಣದಿಂದಲೇ ರೊಬಾಟಿಕ್‌ ಪಾರ್ಶಿಯಲ್‌ ನೆಫ‌Åಕ್ಟಮಿ ಶಸ್ತ್ರಚಿಕಿತ್ಸೆಯು ಪಾಶ್ಚಾತ್ಯ ದೇಶಗಳಲ್ಲಿ "ಅತ್ಯುನ್ನತ ದರ್ಜೆ'ಯದಾಗಿ ಪರಿಗಣಿಸಲ್ಪಟ್ಟಿದೆ. ಈಗ ಈ ಸೌಲಭ್ಯ ಭಾರತದ ಆಯ್ದ ಕೆಲವು ಆಸ್ಪತ್ರೆಗಳಲ್ಲಿಯೂ ಲಭ್ಯವಿದೆ. ಈ ಶಸ್ತ್ರಚಿಕಿತ್ಸೆಯ ಬಳಿಕ ಮೂತ್ರಪಿಂಡದ ಉಳಿದ ಭಾಗ ಸಹಜವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಮೂತ್ರಪಿಂಡ ವೈಫ‌ಲ್ಯದ ಯಾವುದೇ ದೀರ್ಘ‌ಕಾಲೀನ ಪರಿಣಾಮಗಳನ್ನು ದೂರವಿರಿಸುತ್ತದೆ. 

ಕೊನೆಯ ಮಾತು
ಎಲ್ಲ ಮೂತ್ರಪಿಂಡ ಕ್ಯಾನ್ಸರ್‌ ಪ್ರಕರಣಗಳಲ್ಲೂ ಸಂಪೂರ್ಣ ಮೂತ್ರಪಿಂಡವನ್ನು ತೆಗೆದುಹಾಕಬೇಕಾಗಿ ಬರುವುದಿಲ್ಲ. ಮೂತ್ರಪಿಂಡ ಕ್ಯಾನ್ಸರ್‌ ಪ್ರಕರಣಗಳಲ್ಲಿ ಹಲವಕ್ಕೆ ಪಾರ್ಶಿಯಲ್‌ ನೆಫ್ರೆಕ್ಟಮಿ ಮೂಲಕ ಶಸ್ತ್ರಚಿಕಿತ್ಸೆ ನಡೆಸಬಹುದಾಗಿದ್ದು, ಗಡ್ಡೆ ಮತ್ತು ಅದಕ್ಕೆ ಸಮೀಪದಲ್ಲಿರುವ ಆರೋಗ್ಯವಂತ ಜೀವಕೋಶಗಳ ಒಂದು ವರ್ತುಲವನ್ನು ಮಾತ್ರ ತೆಗೆದುಹಾಕಲಾಗುತ್ತದೆ. ಇಂತಹ ಶಸ್ತ್ರಕ್ರಿಯೆಗಳಲ್ಲಿ ಬೆಂಗಳೂರಿನ ಮಣಿಪಾಲ್‌ ಹಾಸ್ಪಿಟಲ್‌ನ ಯುರಾಲಜಿ ವಿಭಾಗದ ವೈದ್ಯರ ತಂಡ ವಿಸ್ತೃತ ಅನುಭವವನ್ನು ಹೊಂದಿದ್ದು, ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ರೋಗಿಗಳಿಗೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದೆ.

- ಡಾ| ಅಮೃತ್‌ ರಾಜ್‌ ರಾವ್‌,   
ಕನ್ಸಲ್ಟಂಟ್‌ ಯುರಾಲಾಜಿಕಲ್‌ ಸರ್ಜನ್‌ 
ಮತ್ತು ರೊಬಾಟಿಕ್‌ ಸರ್ಜನ್‌,
ಮಣಿಪಾಲ್‌ ಹಾಸ್ಪಿಟಲ್‌, ಬೆಂಗಳೂರು.


Trending videos

Back to Top