CONNECT WITH US  

ಹೃದಯ ಬಡಿತದ ಲಯಕ್ಕೆ ಮಿಡಿಯುವ ಹೊತ್ತು

ಜಗತ್ತಿನಾದ್ಯಂತ ಜೂನ್‌ 5ರಿಂದ 11ರ ವರೆಗೆ ಹೃದಯ ಬಡಿತ ಲಯದ ಸಪ್ತಾಹ ಆಚರಿಸಲಾಗುತ್ತದೆ. ಈ ಸಂದರ್ಭ ಸಹಜ ಹೃದಯ ಬಡಿತದ ಲಯದ ಬಗ್ಗೆ ತಿಳಿದುಕೊಳ್ಳುವುದು ಅತೀ ಅಗತ್ಯ. ಸಹಜ ಹೃದಯ ಬಡಿತದ ಲಯವು ಮನುಷ್ಯನನ್ನು ಆರೋಗ್ಯಯುತ ವಾಗಿರುವುದರ ಜತೆಗೆ ಬದುಕನ್ನು ಆನಂದಿಸುವುದಕ್ಕೆ ಅತ್ಯಂತ ಸಹಕಾರಿ. ಆದ್ದರಿಂದ ನಾವೆಲ್ಲರೂ ಹೃದಯ ಬಡಿತದ ಲಯದೆಡೆಗೆ ಮಿಡಿಯಲು ಸ್ವಲ್ಪ ಹೊತ್ತು ಮೀಸಲಿಡುವುದು ಆವಶ್ಯಕ. ಈ ಹಿನ್ನೆಲೆಯಲ್ಲಿ  ಸಪ್ತಾಹದ ದಿನಗಳಲ್ಲಿ  ಕೆಎಂಸಿಯ ಹೊರ ರೋಗಿ ವಿಭಾಗಗಳಲ್ಲಿ  ಪಲ್ಸ್‌ ಚೆಕ್‌ ಕ್ಲಿನಿಕ್‌ನ್ನು ಸ್ಥಾಪಿಸಲಾಗಿದೆ. ನೀವು ಇದರ ಲಾಭವನ್ನು ಪಡೆದುಕೊಳ್ಳಬಹುದು.

ಹೃದಯದೊಳಗಿನ ಸಂಕೀರ್ಣ ಎಲೆಕ್ಟ್ರಿಕ್‌ ಸಂಪರ್ಕಗಳು ಹೃದಯ ಬಡಿತದ ಸಹಜ ಲಯವನ್ನು ನಿರ್ವಹಿಸುತ್ತವೆ. ಹೃದಯ ಬಡಿತದ ಲಯದ ಬಗ್ಗೆ ತಿಳಿದುಕೊಳ್ಳುವುದು ಎಷ್ಟು ಸುಲಭವೋ ಅಷ್ಟೇ ಪ್ರಾಮುಖ್ಯವೂ ಆಗಿದೆ. ಕೈಯ ಮಣಿಕಟ್ಟಿನ ಮೇಲೆ ಇನ್ನೊಂದು ಕೈಯ ಬೆರಳನ್ನು ಇರಿಸಿ ನಾಡಿ ಮಿಡಿತವನ್ನು ಗಮನಿಸುವುದನ್ನು ನೀವು ನೋಡಿರಬಹುದು. ಇದರಿಂದಲೇ ನಿಮ್ಮ ಹೃದಯ ಬಡಿತದ ಲಯ ಸಹಜವಾಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಬಹುದಾಗಿದೆ. ಸಹಜ ನಾಡಿ ಮಿಡಿತವು ನಿಮಿಷಕ್ಕೆ 50-80 ಆಗಿರುತ್ತದೆ. ನಾಡಿ ಮಿಡಿತವು ನಿಮಿಷಕ್ಕೆ 50ಕ್ಕಿಂತ ಕಡಿಮೆ ಅಥವಾ 100ಕ್ಕಿಂತ ಹೆಚ್ಚಾಗಿ ಇದ್ದರೆ ತಜ್ಞರಿಂದ ಪರಿಶೀಲಿಸಿಕೊಳ್ಳುವ ಅಗತ್ಯವಿದೆ. 

ಹೃದಯ ಬಡಿತದ ಲಯ ಅಸಹಜವಾಗಿರುವವರಲ್ಲಿ ಹೃದಯ ಬಡಿತವು ಅನಿಯಮಿತವಾಗಿರುವುದು ಅನುಭವಕ್ಕೆ ಬರುತ್ತದೆ. ಲೈಟ್‌ ಹೆಡೆಡ್‌ನೆಸ್‌ (ತಾತ್ಕಾಲಿಕವಾಗಿ  ಮಿದುಳಿಗೆ ರಕ್ತದ ಹರಿವು ಕಡಿಮೆಯಾದಾಗ ಉಂಟಾಗುತ್ತದೆ), ಅಸಹಜ ಉಸಿರಾಟ ಇತ್ಯಾದಿಗಳು ಹೃದಯ ಬಡಿತದ ಲಯ ಸಹಜವಾಗಿರದೇ ಇರುವವರಲ್ಲಿ ಕಂಡು ಬರುತ್ತದೆ. ಈ ಲಕ್ಷಣಗಳಿರುವವರು ಕುಸಿದು ಬೀಳುವ ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ಕುಸಿದು ಪ್ರಜ್ಞೆ ತಪ್ಪುತ್ತದೆ. ಕುಸಿದು ಬೀಳುವಾಗ ಗಾಯಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಈ ಲಕ್ಷಣಗಳು ಕಂಡುಬಂದಲ್ಲಿ ಶೀಘ್ರ ತಜ್ಞರನ್ನು ಭೇಟಿಯಾಗುವುದು ಅತ್ಯವಶ್ಯಕ.

ಹೃದಯದಲ್ಲಿನ ಸಹಜ ಎಲೆಕ್ಟ್ರಿಕಲ್‌ ಸಂಪರ್ಕಗಳು ತಪ್ಪಿದಾಗ ಜನರಲ್ಲಿ ಅರಿದ್‌ಮಿಯ (ಅಸಹಜ ಹೃದಯ ಬಡಿತ ಲಯ) ಆರಂಭವಾಗುತ್ತದೆ. ಹೃದಯದ ಎಲೆಕ್ಟ್ರಿಕ್‌ ಸಂಪರ್ಕಗಳು ಎಲ್ಲಿಯಾದರೂ ಬ್ಲಾಕ್‌ ಆದಾಗ ಹೃದಯ ಬಡಿತದ ಲಯ ವ್ಯತ್ಯಾಸವಾಗುತ್ತದೆ. ಜತೆಗೆ ನಾಡಿ ಮಿಡಿತವು ನಿಮಿಷಕ್ಕೆ 50ಕ್ಕಿಂತ ಕಡಿಮೆಯಾಗುತ್ತದೆ. ಇದರಿಂದ ಉಸಿರಾಟ ಅಸಹಜತೆ ಮತ್ತು ತಲೆ ಸುತ್ತುವುದು ಇತ್ಯಾದಿಗಳು ಉಂಟಾಗಬಹುದು. 

ಸಮಸ್ಯೆ ಪರಿಹರಿಸುವ 
ಸಾಧನ ಪೆಸ್‌ಮೆಕರ್‌ 

ಅಸಹಜ ಹೃದಯ ಬಡಿತದ ಲಯದ ಸಮಸ್ಯೆಯಿಂದ ಬಳಲುತ್ತಿದ್ದಿರಾ?. ನಿಮ್ಮ ಸಮಸ್ಯೆಗಿದೆ ಸಿದ್ಧ ಪರಿಹಾರ. ಅದೇ ಪೆಸ್‌ಮೆಕರ್‌. ಪೆಸ್‌ಮೆಕರ್‌ ಎಂಬ ಸಣ್ಣ ಸಾಧನವನ್ನು ಸರ್ಜರಿ ಮೂಲಕ ಚರ್ಮದ ಕೆಳಗೆ ಇರಿಸಲಾಗುತ್ತದೆ. ಈ ಪೆಸ್‌ಮೆಕರ್‌ನಿಂದ ಹೃದಯಕ್ಕೆ ಸಂಪರ್ಕಗಳು ಪ್ರವಹಿಸುತ್ತವೆ ಮತ್ತು ಎಲೆಕ್ಟ್ರಿಕಲ್‌ ಇಂಪಲ್ಸಸ್‌ಗಳು ನೀಡಲ್ಪಡುತ್ತವೆ. ಇದರಿಂದ ಹೃದಯ ಬಡಿತದ ಲಯದ ಅಸಹಜತೆಗಳು ನಿವಾರಣೆಯಾಗುತ್ತವೆ. ಪೆಸ್‌ಮೆಕರ್‌ನ ಬ್ಯಾಟರಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತದೆ. ಒಂದೊಮ್ಮೆ ಬ್ಯಾಟರಿ ಲೋ ಆದಲ್ಲಿ ಒಂದು ಸಣ್ಣ ಸರ್ಜರಿ ಮೂಲಕ ಅದನ್ನು ಬದಲಾಯಿಸಲಾಗುತ್ತದೆ. ರೋಗಿಯ ಸ್ಥಿತಿಗನುಗುಣವಾಗಿ ಹೃದ್ರೋಗ ತಜ್ಞರು ಪೆಸ್‌ಮೆಕರ್‌ನ ವಿಧವನ್ನು ನಿರ್ಧರಿಸುತ್ತಾರೆ. ಹಾಗಾಗಿ ಅವರು ಸಿಂಗಲ್‌ ಚೇಂಬರ್‌ (ಒನ್‌ ವೈರ್‌) ಅಥವಾ ಡ್ಯುಯೆಲ್‌ ಚೇಂಬರ್‌ ಪೆಸ್‌ಮೆಕರ್‌ ಅಳವಡಿಕೆಗೆ ಶಿಫಾರಸು ಮಾಡಬಹುದು. ಈ ಪೆಸ್‌ಮೆಕರ್‌ಗಳು ಎಂಆರ್‌ಐ ಕಂಡಿಷನಲ್‌ ಆಗಿರಬಹುದು ಅಥವಾ ಆಗಿರದೇ ಇರಬಹುದು.

ಕೆಲವೊಮ್ಮ ಹೃದಯ ಬಡಿತ ಅಸಹಜವಾಗಿದ್ದು ತೀವ್ರ ವೇಗದಲ್ಲಿರುತ್ತದೆ. ಇದರಿಂದ ಗಂಭೀರ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ವೆಂಟ್ರಿಕುಲರ್‌ ಟ್ಯಾಕಿಕಾರ್ಡಿಯಾ ಅಥವಾ ಹೃದಯ ಬಡಿತ ಒಮ್ಮೆಗೆ ನಿಂತು ಬಿಡಬಹುದು. ಈ ಸ್ಥಿತಿಯನ್ನು ಸಡನ್‌ ಕಾರ್ಡಿಯಾಕ್‌ ಅರೆಸ್ಟ್‌  (ಹೃದಯ ಸ್ತಂಬನ) ಎಂದು ಹೇಳುತ್ತಾರೆ. ಈ ರೀತಿಯ ಪರಿಸ್ಥಿತಿಗಳನ್ನು ನಿರ್ವಹಿಸುವುದಕ್ಕಾಗಿ ಸುಧಾರಿತ ಪೆಸ್‌ಮೆಕರ್‌ನ್ನು ಬಳಸಲಾಗುತ್ತದೆ. ಉದಾಹರಣೆಗೆ ಐಸಿಡಿ ಉಪಕರಣ (ಇಂಪ್ಲಾಂಟೇಬಲ್‌ ಕಾರ್ಡಿಯೋವರ್ಟರ್‌ ಡೆಫಿಬ್ರಿಲ್ಲೇಟರ್‌). ಈ ಉಪಕರಣವು ಹೃದಯ ಬಡಿತದ ಲಯವನ್ನು ವಿಶ್ಲೇಷಿಸಿ ಅದು ಸರಿಯಾದ ರೀತಿಯಲ್ಲಿ ಇರುವಂತೆ ಮಾಡುತ್ತದೆ. ಈ ಉಪಕರಣವು ಅತಿ ಸುಧಾರಿತ ಕಂಪ್ಯೂಟರ್‌ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. 

ಕೆಲವೊಂದು ರೋಗಿಗಳು ಎರಡೂ ರೀತಿಯ ಹೃದಯ ವೈಫ‌ಲ್ಯ ಹೊಂದಿರುತ್ತಾರೆ. ಇವರಿಗೆ ಪೆಸ್‌ಮೆಕರ್‌ ಮತ್ತು ಐಸಿಡಿ ಎರಡೂ ಉಪಕರಣಗಳ ಅಗತ್ಯವಿರುತ್ತದೆ. ಈ ರೀತಿಯ ಸಮಸ್ಯೆ ಇರುವವರಿಗಾಗಿ ಹೆಚ್ಚು ಸುಧಾರಿತ ಉಪಕರಣ ಸಿಆರ್‌ಟಿ (ಕಾರ್ಡಿಯಾಕ್‌ ರಿಸಿಂಕ್ರೊನೈಜೇಶನ್‌ ಥೆರಪಿ) ಅಳವಡಿಸಲಾಗುತ್ತದೆ. ಈ ಉಪಕರಣ ನೋಡಲು ಪೆಸ್‌ಮೆಕರ್‌ನಂತಿದ್ದರೂ ಸ್ವಲ್ಪ ದೊಡ್ಡದಾಗಿದೆ (ಅಂಗೈಗಿಂತ ಸ್ವಲ್ಪ ಸಣ್ಣದು). ತಾಂತ್ರಿಕವಾಗಿ ಇದು ಮಿನಿಯೇಚರ್‌ ಸೊಫಿಸ್ಟಿಕೇಟೆಡ್‌ ಕಂಪ್ಯೂಟರ್‌ಗಿಂತ ಹೆಚ್ಚಿನ ಕ್ಷಮತೆ ಉಳ್ಳದ್ದಾಗಿದ್ದು, ಹೃದಯ ಬಡಿತದ ಲಯ ಮತ್ತು ಹೃದಯದ ಇತರ ಕ್ರಿಯೆಗಳನ್ನು ನಿಯಂತ್ರಿಸುತ್ತದೆ.

ಕಳೆದ 5 ವರ್ಷಗಳಿಂದ ನಮ್ಮ ಆಸ್ಪತ್ರೆಯಲ್ಲಿ ಪೆಸ್‌ಮೆಕರ್‌, ಐಸಿಡಿ ಮತ್ತು ಸಿಆರ್‌ಟಿ ಸಾಧನಗಳನ್ನು ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ರೋಗಿಗಳು ಈ ಸಾಧನಗಳ ಹಾಗೂ ಪ್ರಕ್ರಿಯೆಗಳ ಉಪಯೋಗವನ್ನು ಪಡೆದಿದ್ದಾರೆ. ಹೃದಯದಲ್ಲಿ ಎಲೆಕ್ಟ್ರಿಕಲ್‌ ಸಂಪರ್ಕಗಳಲ್ಲಿ ಅಸಹಜತೆಗಳು ಇದ್ದಾಗ, ಹಾರ್ಟ್‌ ಇಂಪಲ್ಸ್‌ ಶಾರ್ಟ್‌ ಸರ್ಕ್ನೂಟ್‌ ಸಂಭವಿಸುವ ಸಾಧ್ಯತೆಗಳಿರುತ್ತವೆ. ಈ ಸಮಸ್ಯೆಯನ್ನು ರೇಡಿಯೋ ಫ್ರೀಕ್ವೆನ್ಸಿ ಅಬ್‌ಶನ್‌ ಎಂಬ ಪ್ರಕ್ರಿಯೆಯ ಮೂಲಕ ಪರಿಹರಿಸಬಹುದಾಗಿರುತ್ತದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು. 

ಹೃದಯ ಬಡಿತ ಲಯದ ಸಪ್ತಾಹ ಈ ಕುರಿತು ಕಾಳಜಿ ವಹಿಸುವ ಸಪ್ತಾಹವಾಗಲಿ. ಹೃದಯ ಬಡಿತದ ಲಯದೆಡೆಗೆ ಮಿಡಿಯಲು ನಮ್ಮ ಸಮಯವನ್ನು ಮೀಸಲಿರಿಸೋಣವೇ? 

ಸಪ್ತಾಹದ ದಿನಗಳಲ್ಲಿ   ಕೆಎಂಸಿಯ ಹೊರ ರೋಗಿ ವಿಭಾಗಗಳಲ್ಲಿ  ಪಲ್ಸ್‌ ಚೆಕ್‌ ಕ್ಲಿನಿಕ್‌ನ್ನು  ಸ್ಥಾಪಿಸಲಾಗಿದೆ. ನೀವು ಇದರ ಲಾಭವನ್ನು ಪಡೆದುಕೊಳ್ಳಬಹುದು.

- ಪ್ರೊ| ಡಾ| ಟಾಮ್‌ ದೇವಸ್ಯ,   
ಮುಖ್ಯಸ್ಥರು,ಕಾರ್ಡಿಯಾಲಜಿ ವಿಭಾಗ, 
ಕೆಎಂಸಿ, ಮಣಿಪಾಲ.


Trending videos

Back to Top