CONNECT WITH US  

ಆಸ್ತಮಾ - ಪರಿಹಾರ ಸಾಧ್ಯವೇ?

ಆಸ್ತಮಾ ಎಂಬುದು ಶ್ವಾಸಕೋಶದಲ್ಲಿನ, ಶ್ವಾಸಮಾರ್ಗಗಳಿಗೆ ಅಡಚಣೆಯನ್ನು ಒಳಗೊಂಡಿರುವ ಒಂದು ದೀರ್ಘ‌ಕಾಲಿಕ ಕಾಯಿಲೆ. ಈ ಶ್ವಾಸನಾಳಗಳು ಅಥವಾ ಶ್ವಾಸಮಾರ್ಗಗಳು - ಗಾಳಿಯು ಶ್ವಾಸಕೋಶದೊಳಕ್ಕೆ ಬಂದು ಹೊರಹೋಗಲು ಅನುವು ಮಾಡಿಕೊಡುತ್ತವೆ. ಇಡೀ ಜಗತ್ತಿನಲ್ಲಿ ಇಂದು ಆಸ್ತಮಾವು ಸುಮಾರು 200 ದಶಲಕ್ಷ ಜನರನ್ನು ಬಾಧಿಸುತ್ತಿದೆ. 

ವರ್ಷದಲ್ಲಿ ಸುಮಾರು 0.2 ದಶಲಕ್ಷ ಜನರು ಆಸ್ತಮಾದಿಂದ ಮರಣ ಹೊಂದುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳು ಹೇಳುತ್ತಿವೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆಸ್ತಮಾದ ವ್ಯಾಪಕತೆಯು ಹೆಚ್ಚಾಗಿದ್ದರೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಜನಸಂಖ್ಯೆಯ ವ್ಯತ್ಯಾಸದ ಕಾರಣದಿಂದಾಗಿ ಆಸ್ತಮಾದ ಹೊರೆಯು ಹೆಚ್ಚಾಗಿದೆ. 

ಭಾರತದಲ್ಲಿ 15 ದಶಲಕ್ಷಕ್ಕೂ ಹೆಚ್ಚು ಜನರಿಗೆ ಆಸ್ತಮಾದ ತೊಂದರೆ ಇದೆ ಎಂದು ನಂಬಲಾಗುತ್ತದೆ. ಮಕ್ಕಳ ಆಸ್ತಮಾ ಹಾಗೂ ಅಲರ್ಜಿಗಳಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಅಧ್ಯಯನಗಳ ಪ್ರಕಾರ, ದಕ್ಷಿಣ ಭಾರತದಲ್ಲಿ ಸುಮಾರು ಶೇ. 12 ಮಕ್ಕಳಲ್ಲಿ ಆಸ್ತಮಾ ವ್ಯಾಪಕವಾಗಿರುವುದು ಪತ್ತೆಯಾಗಿದೆ. 

ಆಸ್ತಮಾ ಇರುವ ಜನರಲ್ಲಿ, ಪರಿಸರ ಮತ್ತು ಇತರ ಅಂಶಗಳು ಶ್ವಾಸಮಾರ್ಗದ ಉರಿಯೂತಕ್ಕೆ ಕಾರಣವಾಗುತ್ತವೆ ಅಥವಾ ಆಸ್ತಮಾವನ್ನು ಕೆರಳಿಸುತ್ತವೆ. ಈ ಅಂಶಗಳಿಗೆ ಉದಾಹರಣೆ ಕೊಡಬಹುದಾದರೆ, ರೋಗಿಯು ತನಗೆ ಬಹಳ ಸಂವೇದನ ಶೀಲವಾಗಿರುವ ಅಲರ್ಜಿಕಾರಕಗಳನ್ನು- ಅಂದರೆ ಕಿರಿಕಿರಿ ಉಂಟುಮಾಡುವ ಅಂಶಗಳನ್ನು, ವೈರಸ್‌ಗಳನ್ನು ಮೂಗಿನ ಮೂಲಕ ಒಳಗೆಳೆದುಕೊಂಡಾಗ ಉರಿಯೂತ ಉಂಟಾಗುತ್ತದೆ. ಇಂತಹ ರೋಗಿಗಳಲ್ಲಿ ಅವರ ಆಸ್ತಮಾದ ತೀವ್ರತೆ ಎಷ್ಟೇ ಇದ್ದರೂ, ಈ ಉರಿಯೂತವು ಯಾವಾಗಲೂ ಒಂದು ಮಟ್ಟದಲ್ಲಿ ಇದ್ದೇ ಇರುತ್ತದೆ. ಶ್ವಾಸಮಾರ್ಗದ ಉರಿಯೂತದಿಂದಾಗಿ, ಗಂಟಲಿನಲ್ಲಿ ಆಗಾಗ ಗೊರಗೊರ ಸದ್ದು, ಉಸಿರು ಕಟ್ಟುವಿಕೆ, ಎದೆ ಬಿಗಿಯುವುದು, ಕೆಮ್ಮು ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳಬಹುದು. 

ರಾತ್ರಿ ಮತ್ತು ಮುಂಜಾನೆಯ ಸಮಯದಲ್ಲಿ ಈ ತೊಂದರೆಗಳು ಹೆಚ್ಚು ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ವ್ಯಾಪಕ ಮತ್ತು ವ್ಯತ್ಯಸ್ಥ ಗಾಳಿಸಂಚಾರಕ್ಕೂ ಆಸ್ತಮಾ ರೋಗಲಕ್ಷಣಗಳ ಘಟನೆಗಳಿಗೂ ಸಂಬಂಧವಿರುತ್ತದೆ. ಸಾಮಾನ್ಯವಾಗಿ ಈ ಪರಿಸ್ಥಿತಿಗಳು ಹಾಗೆಯೇ ಅಥವಾ ಚಿಕಿತ್ಸೆಯ ಮೂಲಕ ಸರಿಹೋಗುತ್ತಿರುತ್ತವೆ. ಶ್ವಾಸಮಾರ್ಗದಲ್ಲಿ ಆಗುವ ವಿವಿಧ ರೀತಿಯ ವ್ಯತ್ಯಾಸಗಳಿಂದಾಗಿ ಅಲ್ಲಿ ಅಡಚಣೆ ಉಂಟಾಗುತ್ತದೆ. ಅಡಚಣೆಗಳು ಅಂದರೆ ಶ್ವಾಸನಾಳಿಕೆ ಕಿರಿದಾಗುವುದು, ಶ್ವಾಸಮಾರ್ಗದ ಊದಿಕೊಳ್ಳುವಿಕೆ, ಬಹಳ ಸಮಯದಿಂದ ಕಫ‌ ಸಂಗ್ರಹವಾಗಿ ಗಟ್ಟಿಯಾಗುವುದು ಅಥವಾ ಶ್ವಾಸಮಾರ್ಗದ ಪುನಾರಚನೆ ಇತ್ಯಾದಿ. ವಿವಿಧ ರೀತಿಯ ಪ್ರಚೋದಕಗಳಾದ  ಅಲರ್ಜಿಕಾರಕಗಳು, ಕಿರಿಕಿರಿಗಳು, ಶೀತಗಾಳಿ ಮತ್ತು ವೈರಸ್‌ಗಳಿಂದ ಉಂಟಾದ ಉರಿಯೂತವು ಈಗಾಗಲೇ ಇರುವ ಶ್ವಾಸಮಾರ್ಗದ ಅತಿಸಂವೇದನಶೀಲತೆಯನ್ನು ಇನಷ್ಟು ನಾಜೂಕುಗೊಳಿಸುತ್ತದೆ. 

ಈ ಪ್ರಚೋದಕಗಳು ಅಥವಾ ತಡೆಗಳ ಕಾರಣದಿಂದಾಗಿ ರೋಗಿಯ ಶ್ವಾಸಾಂಗದಲ್ಲಿ ಗಾಳಿಯ ಹರಿವಿಗೆ ಅಡಚಣೆಯಾಗುತ್ತದೆ ಮತ್ತು ರೋಗಿಯಲ್ಲಿ ಅದರ ಆಸ್ತಮಾ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆಸ್ತಮಾ ಲಕ್ಷಣಗಳು ಉಬ್ಬಸ ಅಥವಾ ಗೊರಗೊರ ಸದ್ದು ಹೊರಡಿಸುವುದು ಇದು ಆಸ್ತಮಾದಲ್ಲಿ ಕಂಡುಬರುವ ಬಹಳ ಸಾಮಾನ್ಯವಾದ ರೋಗ-ಲಕ್ಷಣವಾಗಿದೆ. 

ಆಸ್ತಮಾ ಇರುವವರು ಉಸಿರಾಡಿದಾಗ ಸಿಳ್ಳೆ ಹಾಕಿದಂತೆ ಸದ್ದು ಕೇಳಿಸುತ್ತದೆ ಅಥವಾ ಗೊರ ಗೊರ ಸದ್ದು ಹೊರಡುತ್ತದೆ. ಇನ್ನಿತರ ಲಕ್ಷಣಗಳು ಅಂದರೆ, ಉಸಿರು ಕಿರಿದಾಗುವುದು ಎದೆ ಬಿಗಿತ ಅಥವಾ ನೋವು ದೀರ್ಘ‌ಕಾಲಿಕ ಕೆಮ್ಮು ಉಬ್ಬಸ ಅಥವಾ ಕೆಮ್ಮಿನಿಂದಾಗಿ ನಿದ್ದೆ ಮಾಡಲು ಕಷ್ಟವಾಗುವುದು ಆಸ್ತಮಾ ಲಕ್ಷಣಗಳನ್ನು ಆಸ್ತಮಾದ ಕೆರಳುವಿಕೆ ಅಥವಾ ಆಸ್ತಮಾದ ಆಘಾತ ಎಂದು ಸಹ ಕರೆಯುತ್ತಾರೆ. ಅಲರ್ಜಿಗಳಿಗೆ ಅಥವಾ ಅಲರ್ಜಿಕಾರಕಗಳಿಗೆ ಒಡ್ಡಿಕೊಳ್ಳುವುದರಿಂದ ಆಸ್ತಮಾವು ಕೆರಳುತ್ತದೆ. 

ಅಲರ್ಜಿಕಾರಕಗಳು ಅಂದರೆ, ಸಾಕು ಪ್ರಾಣಿಗಳ ಹುರುಪೆಗಳು, ಧೂಳಿನ ಕಣಗಳು, ಪರಾಗದ ಕಣಗಳು ಇತ್ಯಾದಿ. ಆಸ್ತಮಾವನ್ನು ಕೆರಳಿಸುವಂತಹ ಅಲರ್ಜಿಕಾರಕವಲ್ಲದ ಅಂಶಗಳು ಅಂದರೆ, ಹೊಗೆ, ಮಾಲಿನ್ಯ, ಶೀತಗಾಳಿ, ಹವಾಮಾನದಲ್ಲಿ ಆಗುವ ವೈಪರೀತ್ಯಗಳು ಇತ್ಯಾದಿ. ಇಷ್ಟೇ ಅಲ್ಲದೆ, ವ್ಯಾಯಾಮ ಮಾಡುವಾಗ, ಶೀತ ಪದಾರ್ಥ ಸೇವಿಸಿದಾಗ, ತೀವ್ರ ಒತ್ತಡದಲ್ಲಿರುವಾಗ, ರಾತ್ರಿ ಅಥವಾ ಮುಂಜಾನೆಯ ಸಮಯದಲ್ಲಿ, ಹೊಟ್ಟೆ ತುಂಬಾ ಊಟಮಾಡಿದಾಗ ಅಥವಾ ಅಜೀರ್ಣವಾದಾಗ, ಹೊಟ್ಟೆ ಉಬ್ಬರಿಸಿದಾಗ ಅಥವಾ ಕೆಲವು ವಿಶಿಷ್ಟ ಋತುಮಾನಗಳಲ್ಲೂ ಸಹ ಕೆಲವರಲ್ಲಿ ಆಸ್ತಮಾವು ಕೆರಳಬಹುದು. 

ಕೆಲವರಿಗೆ ಮೂಗಿಗೆ ಸಂಬಂಧಿಸಿದ ಲೋಳೆಪೊರೆಯ ಅಲರ್ಜಿಯ ಉರಿಯೂತ ಅಥವಾ ಚರ್ಮದ ಉರಿಯೂತವಿರುತ್ತದೆ. ಮೂಗಿನ ಲೋಳೆಪೊರೆಯ ಉರಿಯೂತ ಅಥವಾ ಅಲರ್ಜಿಯ ಸೈನಸೈಟಿಸ್‌ನ ಉರಿಯೂತದ ಬಲವಾದ ಕೌಟುಂಬಿಕ ಹಿನ್ನೆಲೆ ಇದ್ದಾಗಲೂ, ಹತ್ತಿರದ ಸಂಬಂಧಿಗಳಲ್ಲಿ ಆಸ್ತಮಾ ಇದ್ದಾಗಲೂ ಸಹ ಆಸ್ತಮಾವು ಬಾಧಿಸುತ್ತದೆ. ಮಕ್ಕಳು ಹಾಗೂ ವಯಸ್ಕರಲ್ಲಿ ಕಂಡುಬರುವ ಆಸ್ತಮಾದಲ್ಲಿ ರೋಗಲಕ್ಷಣಗಳು ಸಮಾನವಾಗಿರುತ್ತವೆ. ಕೆಮ್ಮು, ಉಬ್ಬಸ ಹಾಗೂ ಉಸಿರು ಕಟ್ಟುವುದು ಈ ಲಕ್ಷಣಗಳು ಸಾಮಾನ್ಯವಾಗಿ ಎರಡು ವಯೋವರ್ಗದವರಲ್ಲೂ ಕಂಡು ಬರುತ್ತದೆ. 

ಕೆಲವು ಮಕ್ಕಳಲ್ಲಿ ದೀರ್ಘ‌ಕಾಲಿಕ ಕೆಮ್ಮಿನ ರೀತಿಯಲ್ಲಿ ಒಂದೇ ಒಂದು ರೋಗಲಕ್ಷಣ ಕಂಡು ಬರಬಹುದು. ನಿಮ್ಮ ಮಗುವಿನಲ್ಲಿ ಕೆಳಗೆ ಹೇಳಿದ ಒಂದು ಅಥವಾ ಒಂದಕ್ಕಿಂತ ಹೆಚ್ಚು ಸಾಮಾನ್ಯ ಲಕ್ಷಣಗಳು ಕಂಡು ಬಂದರೆ, ಮಕ್ಕಳ ತಜ್ಞರನ್ನು ಅಥವಾ ಶ್ವಾಸಕೋಶ ತಜ್ಞರನ್ನು ಕಾಣಿರಿ. ಕೆಮ್ಮು ನಿರಂತರವಾಗಿ ಬಾಧಿಸುವುದು ಅಥವಾ ವೈರಲ್‌ ಸೋಂಕುಗಳಿಂದ ಕೆಮ್ಮು ತೀವ್ರವಾಗುವುದು. 

ಮಗು ನಿದ್ದೆ ಮಾಡುವಾಗ ಕೆಮ್ಮುವುದು, ವ್ಯಾಯಾಮ ಮಾಡುವಾಗ ಹಾಗೂ ಶೀತ ಗಾಳಿಗೆ ಒಡ್ಡಿಕೊಂಡಾಗ ಕೆಮ್ಮು ಇನ್ನಷ್ಟು ಹೆಚ್ಚಾಗುವುದು. ಮಗುವು ನಿಶ್ವಾಸ ಮಾಡಿದಾಗ ಗೊರಗೊರ ಅಥವಾ ಸಿಳ್ಳೆ ಹಾಕುವಂತಹ ಸದ್ದು ಹೊರಡುವುದು ಉಸಿರಾಡಲು ಕಷ್ಟವಾಗುವುದು ಅಥವಾ ಬೇಗ ಬೇಗ ಉಸಿರಾಡುವುದು, ವ್ಯಾಯಾಮ ಮಾಡುವಾಗ ಹೆಚ್ಚಾಗಿ ಈ ರೀತಿ ಆಗುತ್ತಿರುವುದು, ಎದೆ ಬಿಗಿಯುವುದು (ಎದೆಯಲ್ಲಿ ನೋವಾಗುತ್ತದೆ ಅಥವಾ ಏನೋ ಒಂದು ರೀತಿ ಆಗುತ್ತದೆ ಎಂದು ಮಗುವು ಹೇಳಬಹುದು) ನಿಶ್ಶಕ್ತಿ (ನಿಮ್ಮ ಮಗುವು ನಿಧಾನಿಯಾಗಬಹುದು ಅಥವಾ ಆಡುವುದನ್ನು ನಿಲ್ಲಿಸಿಯೇ ಬಿಡಬಹುದು) ಆಟೋಟ ಅಥವಾ ಸಾಮಾಜಿಕ ಚಟುವಟಿಕೆಗಳನ್ನು ತಪ್ಪಿಸಿಕೊಳ್ಳುವುದು ಕೆಮ್ಮು ಹಾಗೂ ಉಸಿರಾಟದ ತೊಂದರೆಯಿಂದಾಗಿ ನಿದ್ದೆ ಮಾಡಲು ಕಷ್ಟವಾಗುವುದು ಆಸ್ತಮಾ ತಪಾಸಣೆ ಒಬ್ಬ ಅಲರ್ಜಿತಜ್ಞರು- ವ್ಯಕ್ತಿಯ ಉಸಿರಾಟದ ಪರೀಕ್ಷೆಗಳು, ಆತನ ಆರೋಗ್ಯದ ಹಿನ್ನೆಲೆ ಹಾಗೂ ಶ್ವಾಸಕೋಶದ ಚಟುವಟಿಕೆಗಳನ್ನು ವಿಶ್ಲೇಷಿಸಿಕೊಂಡು ಆಸ್ತಮಾವನ್ನು ತಪಾಸಣೆ ಮಾಡುತ್ತಾರೆ.

ಈ ಪರೀಕ್ಷೆಗಳಲ್ಲಿ-ಒಂದು ಪರೀಕ್ಷೆಗೆ ಸ್ಪೈರೋಮೆಟ್ರಿ ಎಂದು ಹೆಸರು. ಈ ಪರೀಕ್ಷೆಯಲ್ಲಿ ನೀವು ದೀರ್ಘ‌ ಉಸಿರನ್ನು ಒಳಗೆಳೆದುಕೊಂಡು ಸೆನ್ಸರ್‌  ಮೇಲೆ ಅಂದರೆ ಪರೀಕ್ಷಾ ಯಂತ್ರದ ಮೇಲೆ ಉಸಿರನ್ನು ಬಿಡಬೇಕು. ಈ ಮೂಲಕ ನೀವು ಉಸಿರನ್ನು ಒಳಗೆಳೆದುಕೊಳ್ಳುವ ಹಾಗೂ ಹೊರಗೆ ಬಿಡುವ ಪ್ರಮಾಣದ ಮೂಲಕ, ನಿಮ್ಮ ಶ್ವಾಸಕೋಶವು ಎಷ್ಟು ಪ್ರಮಾಣದ ಗಾಳಿಯನ್ನು ಸರಬರಾಜು ಮಾಡುತ್ತದೆ ಎಂಬುದನ್ನು ಲೆಕ್ಕ ಹಾಕುತ್ತಾರೆ.

ಈ ಪರೀಕ್ಷೆಯಲ್ಲಿ ಆಸ್ತಮಾದ ತೀವ್ರತೆ ಹಾಗೂ ಚಿಕಿತ್ಸೆಯ ಪ್ರಗತಿಯನ್ನು ಅಂದಾಜು ಮಾಡುತ್ತಾರೆ. ಸ್ಪೆ$„ರೋಮೆಟ್ರಿಯ ಮೂಲಕ:ಆಸ್ತಮಾ ತಪಾಸಣೆಯನ್ನು ಖಚಿತಪಡಿಸಬಹುದು ಆಸ್ತಮಾದ ತೀವ್ರತೆ ಹಾಗೂ ಗಾಳಿಯ ಸಂಚಾರಕ್ಕೆ ಇರುವ ಅಡಚಣೆಯ ಮಟ್ಟವನ್ನು ಲೆಕ್ಕಹಾಕಬಹುದು. ತೀವ್ರತೆಯ ಆಧಾರದ ಮೇಲೆ ಅಗತ್ಯವಿರುವ ಚಿಕಿತ್ಸೆಯನ್ನು ಆರಂಭಿಸಬಹುದು. ಔಷಧಿಯ ಪ್ರಮಾಣವನ್ನು ನಿಗದಿಪಡಿಸಬಹುದು. 

ಚಿಕಿತ್ಸೆಗೆ ಪ್ರತಿಕ್ರಿಯೆಯನ್ನು ವಿಶ್ಲೇಷಿಸುವುದು. ಕಾಯಿಲೆಯ ಮುನ್ಸೂಚನೆಯನ್ನು ಪತ್ತೆ ಮಾಡುವುದು. ಆಸ್ತಮಾ ಇರುವ ಕೆಲವು ಜನರಿಗೆ ಅಲರ್ಜಿ ಸಹ ಇರುತ್ತದೆ. 

ಆಗ ವೈದ್ಯರು ಅಲರ್ಜಿ ಪರೀಕ್ಷೆಯನ್ನೂ ಸಹ ಮಾಡಿ, ರಕ್ತದಲ್ಲಿಯ ಅಲರ್ಜಿಯ ಮಟ್ಟವನ್ನು ವಿಶ್ಲೇಷಿಸುತ್ತಾರೆ. ಉಬ್ಬಸಕ್ಕೆ ಬೇರೆ ಏನಾದರೂ ಕಾರಣಗಳಿವೆಯೇ ಎಂಬುದನ್ನು ಪತ್ತೆ ಮಾಡಲು ಎದೆಯ ಎಕ್ಸ್‌-ರೇ, ಹಾಗೂ ಆಸ್ತಮಾ ಕೆರಳುವಿಕೆಗೆ ಅಲರ್ಜಿಯ ಸೈನಸೈಟಿಸ್‌ ಅಥವಾ ಮೂಗಿನ ಪಾಲಿಪ್‌ ಗಡ್ಡೆಗಳು ಕಾರಣವಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಸೈನಸ್‌ ಎಕ್ಸ್‌-ರೇಯನ್ನು ತೆಗೆದುಕೊಳ್ಳುತ್ತಾರೆ. ಆಸ್ತಮಾ ಚಿಕಿತ್ಸೆ ಹಾಗೂ ನಿರ್ವಹಣೆ ಆಸ್ತಮಾಕ್ಕೆ ಪರಿಹಾರ ಎಂಬುದಿಲ್ಲ. ಆದರೆ ಪರಿಣಾಮಕಾರಿ ಚಿಕಿತ್ಸೆ ಹಾಗೂ ನಿರ್ವಹಣೆಯ ಮೂಲಕ ಆಸ್ತಮಾದ ರೋಗ-ಲಕ್ಷಣಗಳನ್ನು ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ, ವೈದ್ಯರು ಸೂಚಿಸಿದ ಔಷಧಿಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಹಾಗೂ ಆಸ್ತಮಾ ಲಕ್ಷಣಗಳನ್ನು ಕೆರಳಿಸುವ ಅಂಶಗಳಿಂದ ತಪ್ಪಿಸಿಕೊಳ್ಳುವುದು ಬಹುಮುಖ್ಯ. ನಿಮ್ಮ ಅಲರ್ಜಿ ತಜ್ಞರು ನಿಮ್ಮ ಪರಿಸ್ಥಿತಿಗೆ ಆವಶ್ಯಕವಿರುವ ಔಷಧಿಗಳು, ಅವುಗಳನ್ನು ಉಪಯೋಗಿಸುವ ವಿಧಾನ ಹಾಗೂ ಅಗತ್ಯರುವ-ಸಲಹೆ ಸೂಚನೆಗಳನ್ನು ಒದಗಿಸಬಲ್ಲರು.

ಆಸ್ತಮಾ ಚಿಕಿತ್ಸೆಯ
ಸಾಮಾನ್ಯ ಉದ್ದೇಶಗಳು

- ಆಸ್ತಮಾದ ದೀರ್ಘ‌ಕಾಲಿಕ ರೋಗ-ಲಕ್ಷಣಗಳನ್ನು ತಡೆಯುವುದು. ರಾತ್ರಿ ಹಾಗೂ ಹಗಲಿನ ಅವಧಿಯಲ್ಲಿ ಹೆಚ್ಚುವ ಆಸ್ತಮಾದ ರೋಗ-ಲಕ್ಷಣಗಳನ್ನು ನಿಯಂತ್ರಿಸುವುದು. ಸೂಚಕಗಳು: ಆಸ್ತಮಾದಿಂದ ನಿದ್ದೆಗೆ ಅಡಚಣೆಯಾಗದಿರುವುದು. ಆಸ್ತಮಾದ ಕಾರಣದಿಂದ ಶಾಲೆ ಹಾಗೂ ಕೆಲಸಗಳನ್ನು ತಪ್ಪಿಸಿಕೊಳ್ಳದಿರುವುದು. ಆಸ್ತಮಾದ ಕಾರಣದಿಂದ ತುರ್ತುನಿಗಾ ಘಟಕಕ್ಕೆ ಭೇಟಿಯಾಗುವ ಸಂದರ್ಭಗಳನ್ನು ಕಡಿಮೆಗೊಳಿಸುವುದು ಅಥವಾ ಇಲ್ಲವಾಗಿಸುವುದು(ಆಸ್ಪತ್ರೆಯನ್ನು ಸೇರುವಂತಹ ಪರಿಸ್ಥಿತಿ)

- ಸಹಜ ಕ್ರಿಯಾಶೀಲ ಮಟ್ಟವನ್ನು ಕಾಪಾಡಿಕೊಳ್ಳುವುದು - ವ್ಯಾಯಾಮ ಹಾಗೂ ಇನ್ನಿತರ ದೈಹಿಕ ಚಟುವಟಿಕೆಗಳೂ ಸೇರಿದಂತೆ.

- ಶ್ವಾಸಕೋಶದ ಕ್ರಿಯಾಶೀಲತೆಯನ್ನು ಸಹಜಗೊಳಿಸುವುದು ಅಥವಾ ಸಹಜಕ್ಕೆ ಹತ್ತಿರವಾಗಿಸುವುದು.

- ಪಡೆದಂತಹ ಆಸ್ತಮಾ ಆರೈಕೆಯಿಂದ ಸಂತೃಪ್ತಿಯನ್ನು ನೀಡುವುದು.

- ಆವಶ್ಯಕ ಔಷಧಿಗಳನ್ನು ಪಡೆಯುವಾಗ, ಅಡ್ಡ ಪರಿಣಾಮ ಇಲ್ಲದಿರುವ ಅಥವಾ ಕಡಿಮೆ ಅಡ್ಡಪರಿಣಾಮಗಳನ್ನು ಹೊಂದಿರುವ ಔಷಧಿಯನ್ನು ಪಡೆಯುವುದು ಆಸ್ತಮಾ ಚಿಕಿತ್ಸೆಯಲ್ಲಿ ಎರಡು ರೀತಿಯ ಮೂಲ ಔಷಧೋಪಚಾರಗಳನ್ನು ಉಪಯೋಗಿಸಲಾಗುತ್ತದೆ

- ಆಘಾತವನ್ನು ತಡೆಯಲು ನಿಯಂತ್ರಕ ಔಷಧಿಗಳು.

- ಆಘಾತದ ಸಂದರ್ಭದಲ್ಲಿ ಬಳಸುವಂತಹ ಕ್ಷಿಪ್ರ-ಉಪಶಮನಕಾರಿ ಔಷಧಿಗಳು. ನಿಯಂತ್ರಕ ಔಷಧಿಗಳು ನಿಮಗಿರುವ ಆಸ್ತಮಾ ರೋಗ-ಲಕ್ಷಣಗಳನ್ನು ನಿಯಂತ್ರಿಸುತ್ತವೆ ಹಾಗೂ ಆಸ್ತಮಾಕ್ಕೆ ಕಾರಣವಾಗಿರುವ ಉರಿಯೂತದಂತಹ ಕಾರಣಗಳು ಮರುಕಳಿಸದಂತೆ ಹಾಗೂ ನಿರಂತರವಾಗಿರದಂತೆ ಅವನ್ನು ನಿಯಂತ್ರಿಸುತ್ತವೆ. ಆದರೆ ಇವುಗಳ ಪರಿಣಾಮಕಾರಿ ಫ‌ಲಿತಾಂಶಕ್ಕಾಗಿ ಇವನ್ನು ಪ್ರತಿನಿತ್ಯ ತೆಗೆದುಕೊಳ್ಳುವುದು ಆವಶ್ಯಕ. 

- ಮುಂದಿನ ವಾರಕ್ಕೆ  

- ಡಾ| ವಿಶಾಖ್‌ ಆಚಾರ್ಯ ಕೆ.,   
ಮುಖ್ಯಸ್ಥರು, ಪಲ್ಮನರಿ ಮೆಡಿಸಿನ್‌ ವಿಭಾಗ,
ಕೆ.ಎಂ.ಸಿ., ಅಂಬೇಡ್ಕರ್‌ ಸರ್ಕಲ್‌,
ಅತ್ತಾವರ, ಮಂಗಳೂರು.

Trending videos

Back to Top