CONNECT WITH US  

ಅನಾರೋಗ್ಯಕ್ಕಿಂತಲೂ ಮಾನಸಿಕ ಕುಸಿತ ಸೃಷ್ಟಿಸುವ ತೊನ್ನು

ದೃಶ್ಯ 1:
ಶ್ರೀಮಾನ್‌ ಶಶಾಂಕ್‌ (ಹೆಸರು ಬದಲಾಯಿಸಲಾಗಿದೆ) 30 ವರ್ಷ ವಯಸ್ಸಿನ ಒಬ್ಬರು ಉದ್ಯಮಿ. ತನ್ನ ಕಾರ್ಯಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದವರು. ಭಾರೀ ಆತ್ಮವಿಶ್ವಾಸವುಳ್ಳ ಅವರು ಕಠಿನ ಪರಿಶ್ರಮದಿಂದಾಗಿ ಔದ್ಯಮಿಕ ರಂಗದಲ್ಲಿ ಉತ್ತುಂಗಕ್ಕೇರಿದ್ದರು. ಒಂದು ದಿನ ಅವರ ಕೈಗಳಲ್ಲಿ ಬಿಳಿಯ ಕಲೆಗಳು ಕಾಣಿಸಿಕೊಂಡವು, ಕ್ಷಿಪ್ರವಾಗಿ ಅವು ವ್ಯಾಪಿಸಿ ದೇಹದ ಇತರ ಭಾಗಗಳಿಗೂ ಹರಡಿದವು, ತುಟಿ ಮತ್ತು ಮುಖದಲ್ಲಿಯೂ ಕಾಣಿಸಿಕೊಂಡವು. ಶಶಾಂಕ್‌ ಅವರು ವಿಚಿತ್ರ ಕಾಯಿಲೆ ಕಾಣಿಸಿಕೊಂಡ ಈ ಬೆಳವಣಿಗೆಯಿಂದ ಸಂಪೂರ್ಣವಾಗಿ ಸೋತುಹೋದರು, ಹತಾಶರಾದರು. ಅವರಿಗೆ ಈಗ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ತನ್ನ ಉದ್ದಿಮೆ ಸಂಬಂಧಿ ಗ್ರಾಹಕರನ್ನು ಭೇಟಿಯಾಗಲು ಅಸಾಧ್ಯವಾಗಿದೆ. ಅವರು ಅಪಾರ ಒತ್ತಡಕ್ಕೆ ಒಳಗಾಗಿದ್ದು, ಅವರ ವ್ಯವಹಾರ ನಷ್ಟಕ್ಕೆ ಈಡಾಗಿದೆ.

ದೃಶ್ಯ 2: 
ಶ್ರೀಮತಿ ಹುಮಾ (ಹೆಸರು ಬದಲಾಯಿಸಲಾಗಿದೆ) 45 ವರ್ಷ ವಯಸ್ಸಿನ ಓರ್ವ ಗೃಹಿಣಿ, ಇಬ್ಬರು ಮಕ್ಕಳ ತಾಯಿ. ಆಕೆ ಬಹಳ ಉಲ್ಲಾಸದಿಂದ ಇರುವ ಮಹಿಳೆ ಮತ್ತು ಪ್ರವಾಸವನ್ನು ಇಷ್ಟಪಡುತ್ತಾ ಜನರೊಂದಿಗೆ ಬೆರೆಯುತ್ತಾ ಇರುವಾಕೆ. ಒಂದು ದಿನ ಆಕೆಗೂ ತನ್ನ ದೇಹದಲ್ಲಿ ಅಲ್ಲಲ್ಲಿ ಬಿಳಿಯ ಕಲೆಗಳು ಮೂಡಿರುವುದು ಗೊತ್ತಾಗುತ್ತದೆ. ಇದು ಆಕೆಯ ಬದುಕನ್ನಿಡೀ ಅಸ್ತವ್ಯಸ್ತಗೊಳಿಸಿದೆ. ತನ್ನ ದೈನಿಕ ಎಲ್ಲ ಕೆಲಸಕಾರ್ಯಗಳಿಂದ ಆಕೆ ಹಿಂದೆ ಸರಿಯುವಂತಾಗಿದೆ. ತನ್ನ ಚರ್ಮದ ಈ ಸ್ಥಿತಿಯಿಂದಾಗಿ ತನ್ನ ಮಕ್ಕಳಿಗೆ ಮದುವೆ ಸಂಬಂಧ ತಪ್ಪಿಹೋಗುತ್ತವೆಯೋ ಎಂಬ ಆತಂಕವವೂ ಆಕೆಯನ್ನು ಕಾಡಲು ತೊಡಗಿದೆ. 

ಈ ಕಾಯಿಲೆ ಎಷ್ಟಮಟ್ಟಿಗಿನ ಮಾನಸಿಕ ಆಘಾತ ಮತ್ತು ಆತಂಕವನ್ನು ಉಂಟು ಮಾಡುತ್ತದೆ ಎಂಬುದನ್ನು ಮೇಲಿನ ಎರಡು ಉದಾಹರಣೆಗಳು ಶ್ರುತಪಡಿಸುತ್ತವೆ. ಈ ಕಾಯಿಲೆಯಿಂದ ಪೀಡಿತರಾದ ವ್ಯಕ್ತಿಗಳು ಕೌಟುಂಬಿಕ ಶುಭಸಮಾರಂಭಗಳಲ್ಲಿ ಭಾಗವಹಿಸುವುದರಿಂದ ದೂರ ಉಳಿಯಬಹುದು, ಸ್ನೇಹಿತರ ಭೇಟಿಗೆ ಹಿಂಜರಿಯಬಹುದು. ದಂಪತಿಯ ನಡುವೆ ಸಾಂಸಾರಿಕ ಸಮಸ್ಯೆಗಳು ತಲೆದೋರಬಹುದು. ಈ ರೋಗ ಸ್ಥಿತಿಯು ಬಾಧಿತ ವ್ಯಕ್ತಿಯ ಆರೋಗ್ಯದ ಮೇಲೆ ಯಾವುದೇ ಗಮನಾರ್ಹ ಪರಿಣಾಮವನ್ನು ಬೀರದೆ ಇದ್ದರೂ ಆತ/ಆಕೆಯ ಮನೋಶಾಸ್ತ್ರೀಯ ಮತ್ತು ಮಾನಸಿಕ ಸ್ಥಿತಿಗತಿಯ ಮೇಲೆ ಅಪಾರ ಪರಿಣಾಮವನ್ನು ಬೀರುವ ಮೂಲಕ ಬದುಕನ್ನು ಅಲ್ಲೋಲಕಲ್ಲೋಲಗೊಳಿಸಬಹುದು.

ಈ ರೋಗ ಸ್ಥಿತಿ ಯಾವುದು?
ಚರ್ಮದ ಮೇಲೆ ಬಿಳಿಯ ಕಲೆಗಳನ್ನು ಉಂಟು ಮಾಡುವ ಈ ಕಾಯಿಲೆಯನ್ನು ತೊನ್ನು (ಇಂಗ್ಲಿಷ್‌ನಲ್ಲಿ ವಿಟಿಲಿಗೊ) ಎಂದು ಕರೆಯುತ್ತಾರೆ. ಚರ್ಮದ ಬಾಧಿತ ಪ್ರದೇಶದಲ್ಲಿ ಚರ್ಮಕ್ಕೆ ಬಣ್ಣವನ್ನು ಕೊಡುವ ಪಿಗೆ¾ಂಟ್‌ ನಾಶವಾಗುವುದರಿಂದ ಉಂಟಾಗುತ್ತದೆ. ತೊನ್ನು ಉಂಟಾದ ವ್ಯಕ್ತಿಗೆ ಯಾವುದೇ ಅನಾರೋಗ್ಯದ ಅನುಭವ ಆಗುವುದಿಲ್ಲ. ಆದರೆ ತೊನ್ನಿನಿಂದ ಉಂಟಾಗುವ ವಿಕಾರ, ವಿರೂಪಗಳು ಮುಜುಗರ, ಅವಮಾನಗಳಿಗೆ ಕಾರಣವಾಗಬಹುದು. ಭಾರತೀಯರಂತಹ ಗಾಢ ವರ್ಣದ ಚರ್ಮ ಹೊಂದಿರುವ ವ್ಯಕ್ತಿಗಳಿಗೆ ಇದರಿಂದ ಉಂಟಾಗುವ ತೊಂದರೆ ಹೆಚ್ಚು; ಯಾಕೆಂದರೆ ಬಿಳಿಯ ಕಲೆಗಳು ಹೆಚ್ಚು ಗಾಢವಾಗಿ ಕಾಣಿಸಿಕೊಳ್ಳುತ್ತವೆ. 

ತೊನ್ನಿನಲ್ಲಿ  ಏನಾಗುತ್ತದೆ?
ತೊನ್ನು ಆರಂಭವಾಗುವುದಕ್ಕೆ 

ನಿರ್ದಿಷ್ಟ ಕಾರಣ ಏನು ಎಂಬುದು ಖಚಿತವಾಗಿ ಇನ್ನೂ ತಿಳಿದುಬಂದಿಲ್ಲವಾದರೂ ಮೂಲತಃ ಇದು ಉಂಟಾಗುವುದು ಅಟೊಇಮ್ಯೂನ್‌ ಕಾರಣದಿಂದ ಎಂದು ತಿಳಿಯಲಾಗಿದೆ. ಈ ತತ್ವದ ಪ್ರಕಾರ, ದೇಹವನ್ನು ರಕ್ಷಿಸುವ ಹೊಣೆಯನ್ನು ಹೊತ್ತಿರುವ ರೋಗ ನಿರೋಧಕ ಶಕ್ತಿಯು ಸ್ವಘಾತಕವಾಗಿ ವರ್ತಿಸುತ್ತ ಚರ್ಮಕ್ಕೆ ಬಣ್ಣವನ್ನು ಒದಗಿಸುವ ಪಿಗೆ¾ಂಟ್‌ ಉತ್ಮಾದಕ ಮೆಲಾನೊಸೈಟ್‌ ಜೀವಕೋಶಗಳನ್ನು ನಾಶ ಮಾಡಲು ಆರಂಭಿಸುತ್ತದೆ. ವಿವಿಧ ಆಟೊ ಇಮ್ಯೂನ್‌ ಕಾಯಿಲೆಗಳಾದ ಥೈರಾಯ್ಡ ಕಾಯಿಲೆ, ಮಧುಮೇಹಗಳ ಜತೆಗೆ ತೊನ್ನು ಸಂಬಂಧ ಹೊಂದಿರುವುದು ಈ ಸಿದ್ಧಾಂತವನ್ನು ಪುಷ್ಟೀಕರಿಸುತ್ತದೆ. ಆಟೊ ಇಮ್ಯೂನ್‌ ಸಿದ್ಧಾಂತದ ಜತೆಗೆ ತೊನ್ನು ಉಂಟಾಗುವುದಕ್ಕೆ ಏನು ಕಾರಣ ಎಂಬುದನ್ನು ವಿವರಿಸುವ ಇನ್ನೂ ಅನೇಕ ಸಿದ್ಧಾಂತಗಳು, ಊಹೆಗಳು ಇವೆ ಹಾಗೂ ಅನೇಕವುಗಳ ಬಗೆಗೆ ಸಂಶೋಧನೆ ಚಾಲ್ತಿಯಲ್ಲಿದೆ. 

ಚರ್ಮಕ್ಕೆ ಬಣ್ಣ ಹೇಗೆ ಉಂಟಾಗುತ್ತದೆ?
ತೊನ್ನು ಹೇಗೆ ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಸಹಜ ಚರ್ಮಕ್ಕೆ ಬಣ್ಣ ಹೇಗೆ ಉಂಟಾಗುತ್ತದೆ, ಯಾವುದು ತ್ವಚೆಗೆ ಬಣ್ಣವನ್ನು ಕೊಡುತ್ತದೆ ಎಂಬುದನ್ನು ತಿಳಿಯಬೇಕಾಗುತ್ತದೆ. ಚರ್ಮದ ಅತ್ಯಂತ ಮೇಲ್ಪದರ (ಎಪಿಡರ್ಮಿಸ್‌)ದ ಕೆಳಗೆ ಮೆಲಾನೊಸೈಟ್ಸ್‌ ಎಂಬ ಜೀವಕೋಶಗಳು ಇರುತ್ತವೆ. ಇವು ಮೆಲಾನಿನ್‌ ಎಂಬ ಪಿಗೆ¾ಂಟ್‌ನ್ನು ಉತ್ಪಾದಿಸುತ್ತವೆ. ಈ ಮೆಲಾನಿನ್‌ ಸನಿಹದ ಚರ್ಮದ ಜೀವಕೋಶ (ಕೆರಾಟಿನೊಸೈಟ್‌ಗಳು) ಗಳಿಗೆ ರವಾನೆಯಾಗಿ ಚರ್ಮಕ್ಕೆ ಬಣ್ಣವನ್ನು ಕೊಡುತ್ತವೆ ಹಾಗೂ ಕೊಡೆಯಂತೆ ಚರ್ಮಕ್ಕೆ ಸೂರ್ಯನ ಕಿರಣಗಳಿಂದ ರಕ್ಷಣೆಯನ್ನು ಒದಗಿಸುತ್ತವೆ.

ಯಾರು ತೊನ್ನಿಗೆ ಒಳಗಾಗುತ್ತಾರೆ?
ನಮ್ಮ ದೇಶದಲ್ಲಿ ತೊನ್ನು ಒಂದು ಸಾಮಾನ್ಯ ಕಾಯಿಲೆಯಾಗಿದೆ. ನೂರರಲ್ಲಿ ಒಬ್ಬರು ತೊನ್ನಿಗೆ ಒಳಗಾಗುತ್ತಾರೆ. ಪುರುಷರು ಹಾಗೂ ಮಹಿಳೆಯರು ಸಮಾನವಾಗಿ ತೊನ್ನಿಗೆ ತುತ್ತಾಗುತ್ತಾರೆ. ಆದರೆ, ಅರ್ಧಾಂಶ ತೊನ್ನು ಪೀಡಿತರಲ್ಲಿ ಅದು 25-30 ವರ್ಷ ವಯಸ್ಸಿನ ಒಳಗೆ ಆರಂಭವಾಗಿರುತ್ತದೆ. ವಂಶವಾಹಿ ಕಾರಣಗಳೂ ತೊನ್ನಿನಲ್ಲಿ ಒಳಗೊಂಡಿದ್ದು, ಅದು ಕುಟುಂಬದಲ್ಲಿ ವಂಶವಾಹಿಯಾಗಿ ಹರಿದುಬರಬಹುದಾಗಿದೆ. ಆದರೆ ಬಹುತೇಕ ಇದು ಸಾಮಾನ್ಯವಲ್ಲ, ವಂಶವಾಹಿಯಾಗಿ ಎಲ್ಲರಲ್ಲೂ ಉಂಟಾಗುವುದಿಲ್ಲ; ತೊನ್ನು ಪೀಡಿತರ ಕೌಟುಂಬಿಕ ಪ್ರಕರಣಗಳು ಕಂಡುಬರುವುದು ಬಹಳ ಕಡಿಮೆ. ತೊನ್ನು ಸಂಪರ್ಕದಿಂದ ಹರಡುವುದಿಲ್ಲ; ತೊನ್ನು ಪೀಡಿತರ ಜತೆಗೆ ಊಟ ಉಪಾಹಾರ, ಹಾಸಿಗೆ ಹಂಚಿಕೊಳ್ಳುವುದರಿಂದ ಪ್ರಸಾರವಾಗುವುದಿಲ್ಲ.

ದೇಹದ ಯಾವುದೇ ಭಾಗದ ಚರ್ಮ ತೊನ್ನು ಪೀಡಿತವಾಗಬಹುದಾದರೂ ಸಾಮಾನ್ಯವಾಗಿ ತೊನ್ನಿನ ಬಿಳಿಯ ಕಲೆಗಳು ಕಾಣಿಸಿಕೊಳ್ಳುವ ಭಾಗಗಳೆಂದರೆ ಮುಖ, ಕೊರಳು, ಕೈಗಳು, ಮಣಿಕಟ್ಟು ಮತ್ತು ತಲೆಬುರುಡೆ. ಈ ಬಿಳಿಯ ಕಲೆಗಳು ಯಾವುದೇ ರೋಗಲಕ್ಷಣರಹಿತವಾಗಿರುತ್ತವೆ ಮತ್ತು ತುರಿಕೆಯನ್ನು ಹೊಂದಿರುವುದಿಲ್ಲ. ಈ ದೃಷ್ಟಿಯಿಂದ ನೋಡಿದರೆ ಇದನ್ನು ಒಂದು ಸೌಂದರ್ಯ ಸಂಬಂಧಿ ಸಮಸ್ಯೆ ಎಂದಷ್ಟೇ ವ್ಯಾಖ್ಯಾನಿಸಬಹುದು. ತುಟಿ ಮತ್ತು ಜನನಾಂಗ ಪ್ರದೇಶಗಳಂತಹ ಮ್ಯುಕೋಸಲ್‌ ಭಾಗಗಳೂ ತೊನ್ನು ಪೀಡಿತವಾಗಬಹುದು. ತಲೆಬುರುಡೆಯಲ್ಲಿ ತೊನ್ನಿನ ಬಿಳಿ ಕಲೆಗಳು ಕಾಣಿಸಿಕೊಂಡಿದ್ದರೆ ಅಲ್ಲಿನ ಕೂದಲು ಕೂಡ ಬಿಳಿಯಾಗಬಹುದು. ಚರ್ಮ ಈ ಹಿಂದೆ ಗಾಯಗೊಂಡ (ಗಾಯ, ಸುಟ್ಟಗಾಯ ಅಥವಾ ಚರ್ಮದ ಸಮಸ್ಯೆಗಳು) ಪ್ರದೇಶಗಳಲ್ಲಿ ಕೂಡ ತೊನ್ನಿನ ಕಲೆಗಳು ಉಂಟಾಗಬಹುದು. ಅಪರೂಪವಾಗಿ, ತೊನ್ನಿನ ಬಿಳಿಯ ಕಲೆಗಳು ದೇಹವಿಡೀ ವ್ಯಾಪಿಸಬಹುದು. ಇದನ್ನು ಸಂಪೂರ್ಣ ಅಥವಾ ಸಮಗ್ರ ತೊನ್ನು ಎಂದು ಕರೆಯುತ್ತಾರೆ. 

- ಮುಂದಿನ ವಾರಕ್ಕೆ  

- ಡಾ| ರಾಘವೇಂದ್ರ ರಾವ್‌ ,
ಅಡಿಶನಲ್‌ ಪ್ರೊಫೆಸರ್‌
ಕೆಎಂಸಿ, ಮಣಿಪಾಲ

Trending videos

Back to Top