CONNECT WITH US  

ಸ್ಕಿಝೋಫ್ರೇನಿಯಾ

ಸಾಂದರ್ಭಿಕ ಚಿತ್ರ...

ಹಿಂದಿನ ವಾರದಿಂದ- ಹೀಗೆ ತೊಂದರೆಯಿದೆಯೆಂದು ಗುರುತಿಸಿ ಮನೋವೈದ್ಯರ ಹತ್ತಿರ ಕರೆದುಕೊಂಡು ಹೋದಾಗ ಅವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಅದಕ್ಕಾಗಿ ತೊಂದರೆಯನ್ನು ಗುರುತಿಸಲು ಈ ಕೆಳಗಿನ ಲಕ್ಷಣಗಳು ಸೂಚಕಗಳಾಗಬಹುದು.

- ವ್ಯಕ್ತಿಯು ಸಂಶಯಾಸ್ಪದವಾಗಿ ನಡೆದುಕೊಳ್ಳುತ್ತಿದ್ದು ಕ್ರಮೇಣವಾಗಿ ಸಮಾಜದಿಂದ ದೂರವಿರಲು ಬಯಸುತ್ತಿರುತ್ತಾನೆ.
- ಯಾವಾಗಲೂ ಜನ ತನ್ನ ವಿರುದ್ಧ ಹಗೆ ಸಾಧಿಸಲು ಕೂತಿದ್ದಾರೆಂದು ಹೇಳುತ್ತಾನೆ.
- ಸರಿಯಾಗಿ ಊಟ-ನಿದ್ದೆ ಮಾಡುವುದಿಲ್ಲ.
- ಹೆಚ್ಚಿನ ಸಮಯ ಹೆದರಿಕೊಂಡೇ ಇರುವುದು. ಮನೆಯಿಂದ ಹೊರಹೋಗಲು ಕೇಳುವುದಿಲ್ಲ. ಶಾಲೆ - ಕಾಲೇಜಿಗೆ - ಕೆಲಸಕ್ಕೆ ಹೋಗದೇ ಯಾವಾಗಲೂ ಮನೆಯಲ್ಲೇ/ತನ್ನ ಕೋಣೆಯಲ್ಲೇ ಕೂತಿರುವುದು.
- ಮಾಡುವ ಕೆಲಸದಲ್ಲಿ ಗಮನಕೊಡದೇ ಎಲ್ಲೋ ನೋಡುತ್ತಾ ಕೂತಿರುವುದು. ದಿಕ್ಕು ತೋಚದೇ ಕೂತಿರುವುದು.
- ಕ್ರಮೇಣವಾಗಿ ತನ್ನ ವೈಯಕ್ತಿಕ ಸ್ವತ್ಛತೆ ಹದಗೆಡುವುದು. ಹಲ್ಲುಜ್ಜದಿರುವುದು. ಸ್ನಾನ ಮಾಡದಿರುವುದು. ವಿಲಕ್ಷಣವಾದ ಉಡುಗೆ - ತೊಡುಗೆಗಳಲ್ಲಿರುವುದು.
- ಕೆಲವೊಮ್ಮೆ ದಿಕ್ಕು - ದಾರಿಯಿಲ್ಲದೇ ದಿನಗಟ್ಟಲೇ, ವಾರಗಟ್ಟಲೇ ಎಲ್ಲೆಲ್ಲೋ ಅಲೆಯುವುದು.
- ಸಣ್ಣ  ಶಬ್ದಗಳಿಗೆ, ಬೆಳಕಿಗೆ ಬೆಚ್ಚಿಬೀಳುವುದು/ಹೌಹಾರುವುದು.
- ವಿಚಿತ್ರ ನಡವಳಿಕೆ
- ಅರ್ಥವಾಗದಂತಹ ಸಂವಾದ: ಒಗಟುಗಳಲ್ಲಿ ಮಾತಾಡುವುದು, ಏನೋ ಅರ್ಥಗರ್ಭಿತ ಮಾತನ್ನಿಸಿದರೂ ಅದರಲ್ಲಿ  ಏನೂ ಹುರುಳಿರುವುದಿಲ್ಲ.
- ಒಬ್ಬನೇ ಕೂತು ತನ್ನಷ್ಟಕ್ಕೆ ತಾನೇ ಮಾತಾಡುತ್ತಾ  ಕೂತುಕೊಳ್ಳುವುದು.
- ತನ್ನ ಮೇಲೆ ಯಾರೋ ಮಾಟ-ಮಂತ್ರ ಮಾಡಿದರೆಂದು ಹೇಳುವುದು. ತನ್ನನ್ನು ಯಾರೋ ಕಂಟ್ರೋಲ್‌ ಮಾಡುತ್ತಿದ್ದಾರೆನ್ನುವುದು ಇತ್ಯಾದಿ.
- ನಿಂತಲ್ಲಿಯೇ ಗಂಟೆಗಟ್ಟಲೇ ನಿಂತಿರುವುದು. ಯಾವುದೋ ವಿಚಿತ್ರ ಭಂಗಿಯಲ್ಲಿ ನಿಂತುಕೊಂಡಿರುವುದು.

ಸ್ಕಿಝೋಫ್ರೇನಿಯಾ
ಬರಲು ಕಾರಣಗಳೇನು?

ಸ್ಕಿಝೋಫ್ರೇನಿಯಾ ಬರಲು ಇವುಗಳೇ ನಿಖರವಾದ ಕಾರಣಗಳು ಎಂದು ಹೇಳಲಾಗುವುದಿಲ್ಲ. ಆದರೆ, ನಿರಂತರ ಸಂಶೋಧನೆಗಳಿಂದ ಸಂಭಾವ್ಯ ಕಾರಣಗಳನ್ನು ಗುರುತಿಸಲಾಗಿದೆ. ಆದರೆ, ಇವುಗಳಿಂದಾಗಿಯೇ ಸ್ಕಿಝೋಫ್ರೇನಿಯಾ ಕಾಯಿಲೆ ಬರಬಹುದು. ಕೆಲವೊಮ್ಮೆ ಹಲವಾರು ಕಾರಣಗಳು ವಿವಿಧ ಸಮ್ಮಿಷಣಗಳಲ್ಲಿ ಕಂಡುಬಂದು ಕಾಯಿಲೆಯನ್ನುಂಟುಮಾಡಬಹುದು. ಈ ಸಂಭಾವ್ಯ ಕಾರಣಗಳನ್ನು ಕೆಳಗಡೆ ವಿವರಿಸಲಾಗಿದೆ.
1. ಆನುವಂಶಿಕತೆ:
ರಕ್ತಸಂಬಂಧಿಗಳಲ್ಲಿ ಸ್ಕಿಝೋಫ್ರೇನಿಯಾ ಕಾಯಿಲೆಯಿದ್ದರೆ, ವ್ಯಕ್ತಿಗೆ ಸ್ಕಿಝೋಫ್ರೇನಿಯಾ ಕಾಯಿಲೆ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅಂದರೆ, ಸಾಮಾನ್ಯ ಜನರಿಗಿಂತ, ಈ ಕುಟುಂಬದವರಲ್ಲಿ ಅಂದಾಜು ಶೇ. 10ರಷ್ಟು  ಹೆಚ್ಚಿನ ಸಾಧ್ಯತೆಯಿರುತ್ತದೆ. ಆದರೆ, ಹೆಚ್ಚಿನ ರೋಗಿಗಳ ಕುಟುಂಬದವರಲ್ಲಿ ಈ ಕಾಯಿಲೆ ಕಂಡುಬಂದಿಲ್ಲ. ತಂದೆ - ತಾಯಿಗಿಬ್ಬರಿಗೂ ಸ್ಕಿಝೋಫ್ರೇನಿಯಾ ಕಾಯಿಲೆಯಿದ್ದರೆ, ಮಕ್ಕಳಿಗೆ ಬರುವ ಸಾಧ್ಯತೆಗಳು ಇನ್ನೂ ಹೆಚ್ಚಾಗುತ್ತವೆ. ಸ್ಕಿಝೋಫ್ರೇನಿಯಾ ಕಾಯಿಲೆಯ ಆನುವಂಶಿಕತೆಯು ಜಟಿಲವಾಗಿದ್ದು  ಇದಕ್ಕೆ ನಿಖರ ಉತ್ತರಗಳು ಇನ್ನೂ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿದ್ದು  ಇದಕ್ಕೆ ಹಲವಾರು ವರ್ಣತಂತುಗಳಿಗೆ (ಕ್ರೊಮೋಸೋಮ್‌) ಸಂಬಂಧಪಟ್ಟ  ಅಥವಾ ಜೀನ್ಸ್‌ (Genes)ಗಳಿಗೆ ಸಂಬಂಧಪಟ್ಟ ಕಾರಣಗಳಿರಬಹುದು.

- ಮುಂದಿನ ವಾರಕ್ಕೆ  

Trending videos

Back to Top