CONNECT WITH US  

ದೀರ್ಘ‌ಕಾಲಿಕವಾಗಿ ಬಾಧಿಸುವ ರಕ್ತ ಕ್ಯಾನ್ಸರ್‌

ಕ್ರಾನಿಕ್‌ ಮೇಲಾಯ್ಡ ಲ್ಯುಕೇಮಿಯಾ

ಅಸ್ತಿಮಜ್ಜೆಯಲ್ಲಿ ರಕ್ತವನ್ನು ಉತ್ಪಾದಿಸುವ ಜೀವಕೋಶಗಳಲ್ಲಿ ಆರಂಭವಾಗಿ ರಕ್ತದ ಮೇಲೆ ಆಕ್ರಮಣ ನಡೆಸುವ ಕ್ಯಾನ್ಸರ್‌ನ ಒಂದು ವಿಧ ದೀರ್ಘ‌ಕಾಲಿಕ ಮೇಲಾಯ್ಡ ಲ್ಯುಕೇಮಿಯಾ (ಸಿಎಂಎಲ್‌) ಸಿಎಂಎಲ್‌ನಲ್ಲಿ ಕ್ಯಾನ್ಸರ್‌ಪೀಡಿತ ಕೋಶಗಳು ಕಾಲಾಂತರದಲ್ಲಿ ದೇಹದಲ್ಲಿ ಪ್ರಗತಿಹೊಂದುತ್ತವೆ, ಆದರೆ ಅನೇಕ ಮಂದಿಯಲ್ಲಿ ಕನಿಷ್ಟ ಕೆಲವು ವರ್ಷಗಳ ಕಾಲ ಯಾವುದೇ ಲಕ್ಷಣಗಳು ಪ್ರಕಟವಾಗುವುದಿಲ್ಲ. ಸಿಎಂಎಲ್‌ ಕ್ರಿಪ್ರವಾಗಿ ಪ್ರಗತಿ ಹೊಂದಿ ದೇಹದ ಬಹುತೇಕ ಎಲ್ಲ ಭಾಗಗಳ ಮೇಲೂ ಆಕ್ರಮಣ ಮಾಡುವ ಕ್ಷಿಪ್ರ ಲ್ಯುಕೇಮಿಯಾ ಆಗಿ ಪರಿವರ್ತನೆ ಹೊಂದುವ ಸಾಧ್ಯತೆಗಳೂ ಇವೆ. 

ಸಿಎಂಎಲ್‌ನ ಬಹುತೇಕ ಪ್ರಕರಣಗಳು ಪ್ರೌಢರಲ್ಲಿ ಕಾಣಿಸಿಕೊಳ್ಳುತ್ತವೆ, ಆದರೆ ಅಪರೂಪವಾಗಿ ಮಕ್ಕಳಲ್ಲಿಯೂ ಉಂಟಾಗುತ್ತದೆ. ಸಾಮಾನ್ಯವಾಗಿ ರಕ್ತದಲ್ಲಿರುವ ಆರೋಗ್ಯವಂತ ಬಿಳಿ ರಕ್ತಕಣಗಳು ಡಿಎನ್‌ಎಗೆ ಉಂಟಾಗುವ ಹಾನಿಯಿಂದಾಗಿ ಕ್ಯಾನ್ಸರ್‌ ಕೋಶಗಳಾಗುತ್ತವೆ. ಸಿಎಂಎಲ್‌ನಲ್ಲಿ, ಸಾಮಾನ್ಯವಾಗಿ ಫಿಲಡೆಲ್ಫಿಯಾ ಕ್ರೊಮೊಸೋಮ್‌ಎಂದು ಕರೆಯಲಾಗುವ ಡಿಎನ್‌ಎಗೆ ಹಾನಿಯಾಗುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಬಿಸಿಆರ್‌-ಎಬಿಎಲ್‌ ಮ್ಯುಟೇಶನ್‌ ಎನ್ನಲಾಗುತ್ತದೆ. ಈ ಹಾನಿಯು ಬಿಳಿ ರಕ್ತ ಕಣಗಳು ಸಹಜವಾಗಿ ನಾಶವಾಗಲು ಬಿಡುವುದಿಲ್ಲ. ಬದಲಾಗಿ, ಅವು ದೇಹಕ್ಕೆ ಅಗತ್ಯವಿರದ ಹೊಸ ಕೋಶಗಳನ್ನು ಉತ್ಪಾದಿಸುತ್ತಾ ಹೋಗುತ್ತವೆ. ಈ ಹೊಸ ಕೋಶಗಳೆಲ್ಲವೂ ಮೂಲ ಕೋಶಗಳಂತೆಯೇ ಹಾನಿಗೊಂಡ ಡಿಎನ್‌ಎಗಳನ್ನು ಹೊಂದಿರುತ್ತವೆ. ಸಿಎಂಎಲ್‌ ವಂಶವಾಹಿ ನ್ಯೂನತೆಯಿಂದ ಉಂಟಾಗುವುದಾಗಿದ್ದರೂ, ಅದು ಬಳುವಳಿಯಾಗಿ ಬರುವಂತಹ ಸ್ಥಿತಿಯನ್ನು ಹೊಂದಿರುವುದಿಲ್ಲ ಹಾಗೂ ಕುಟುಂಬದಲ್ಲಿ ಒಬ್ಬರಿಂದ ಒಬ್ಬರಿಗೆ ಹರಿದುಬರುವುದಿಲ್ಲ.ರಕ್ತ ಕ್ಯಾನ್ಸರ್‌ನ ಹೊಸ ಪ್ರಕರಣಗಳಲ್ಲಿ ಶೇ. 10ರಷ್ಟು ಕ್ರಾನಿಕ್‌ ಮೇಲಾಯ್ಡ ಲ್ಯುಕೇಮಿಯಾ ಆಗಿರುತ್ತವೆ. ಈ ಕಾಯಿಲೆಯು ಪುರುಷರಲ್ಲಿ ಮಹಿಳೆಯರಿಗಿಂತ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ. ಸಿಎಂಎಲ್‌ ರೋಗಪತ್ತೆಯ ಹಂತದಲ್ಲಿ ಸರಾಸರಿ ವಯಸ್ಸು ಸುಮಾರು 64 ಆಗಿರುತ್ತದೆ. 

ರೋಗಪತ್ತೆಯಾದ ಪ್ರಕರಣಗಳಲ್ಲಿ ಸುಮಾರು ಅರ್ಧಾಂಶದಷ್ಟು ಪ್ರಕರಣಗಳು 65 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವುಗಳೇ ಆಗಿವೆ. ಸಿಎಂಎಲ್‌ ಉಂಟಾಗುವುದಕ್ಕೆ ಯಾವುದೇ ತಿಳಿದಿರುವಂತಹ ಅಪಾಯಾಂಶಗಳಿಲ್ಲ; ಯಾವುದೇ ಕಾರಣವೂ ತಿಳಿದುಬಂದಿಲ್ಲ. ಸಿಎಂಎಲ್‌ನ ಬಹುತೇಕ ಪ್ರಕರಣಗಳನ್ನು ತಡೆಯುವಂತಹ ಯಾವುದೇ ಮಾರ್ಗೋಪಾಯಗಳೂ ಇಲ್ಲ. ಇತರ ಕಾರಣಗಳಿಗಾಗಿ ರೂಢಿಗತ ರಕ್ತಪರೀಕ್ಷೆಯನ್ನು ನಡೆಸುವಾಗ ಸಿಎಂಎಲ್‌ ಕಂಡುಬರುವುದುಂಟು. ಉದಾಹರಣೆಗೆ, ವ್ಯಕ್ತಿಯೊಬ್ಬನಿಗೆ ಯಾವುದೇ ರೋಗಲಕ್ಷಣಗಳಿಲ್ಲದೆಯೂ ಆತನ ಬಿಳಿ ರಕ್ತಕಣಗಳ ಸಂಖ್ಯೆ ಅತ್ಯಂತ ಹೆಚ್ಚು ಇರುವುದುಂಟು. 

ಸಿಎಂಎಲ್‌ ಅನ್ನು ಸಾಮಾನ್ಯವಾಗಿ ಕೆಲವು ರಕ್ತಪರೀಕ್ಷೆಗಳ ಮೂಲಕ ಪತ್ತೆ ಮಾಡಲಾಗುತ್ತದೆ. ಇವುಗಳಲ್ಲಿ ಬ್ಲಿಡ್‌ ಕೌಂಟ್‌ ಮತ್ತು ಬಿಸಿಆರ್‌- ಎಬಿಎಲ್‌ ವಂಶವಾಹಿ ಮ್ಯುಟೇಶನ್‌ ಪತ್ತೆ ಹಚ್ಚಲು ವಿಶೇಷ ಪರೀಕ್ಷೆ ಸೇರಿವೆ. ಫಿಶ್‌ (ಫ್ಲೊರೊಸೆಂಟ್‌ ಇನ್‌ ಸಿಟು ಹೈಬ್ರಿಡೈಸೇಶನ್‌) ಮತ್ತು ಪಿಸಿಆರ್‌ (ಪಾಲಿಮರೇಸ್‌ ಚೈನ್‌ ರಿಯಾಕ್ಷನ್‌) ಎಂಬ ಎರಡು ಅತ್ಯಾಧುನಿಕ ರಕ್ತಪರೀಕ್ಷೆ ವಿಧಾನಗಳಿಂದ ರಕ್ತದಲ್ಲಿ ಈ ಮ್ಯುಟೇಶನ್‌ ಆಗಿದೆಯೇ ಎಂದು ಪತ್ತೆ ಹಚ್ಚಬಹುದು. ಇವುಗಳ ಜತೆಗೆ ರೋಗ ಪ್ರಗತಿಯ ವೇಗವನ್ನು ತಿಳಿದುಕೊಳ್ಳಲು ಅಸ್ತಿಮಜ್ಜೆಯ ಪರೀಕ್ಷೆಯನ್ನೂ ನಡೆಸಲಾಗುತ್ತದೆ. 

ಇಮಾಟಿನಿಬ್‌, ಡಾಸಾಟಿನಿಬ್‌ ಮತ್ತು ನಿಲೊಟಿನಿಬ್‌ನಂತಹ ಹೊಸ ಔಷಧಗಳ ಆವಿಷ್ಕಾರದ ಬಳಿಕ ಕ್ರಾನಿಕ್‌ ಮೇಲಾಯ್ಡ ಲ್ಯುಕೇಮಿಯಾ ಉಂಟಾದ ಬಳಿಕ ಸಾವಿನಿಂದ ಪಾರಾಗಿ ಬದುಕುಳಿಯುವ ದರವು ಕಳೆದ ದಶಕದಿಂದೀಚೆಗೆ ಹೆಚ್ಚಿದೆ. ಈ ಔಷಧಗಳು ಮೂಲತಃ ವಂಶವಾಹಿ ತೊಂದರೆಗಳ ಮೇಲೆ ಅಂದರೆ, ಬಿಸಿಆರ್‌-ಎಬಿಎಲ್‌ ಮ್ಯುಟೇಶನ್‌ಗೆ ಚಿಕಿತ್ಸೆ ಒದಗಿಸಿ ಕ್ಯಾನ್ಸರ್‌ ಪೀಡಿತ ಕೋಶಗಳು ಸಹಜವಾಗಿ ನಾಶ ಹೊಂದುವಂತೆ ಮಾಡುತ್ತವೆ. ಈ ಔಷಧಗಳನ್ನು ರೋಗಿಗೆ ದಿನಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಸೇವಿಸುವಂತೆ ಮಾತ್ರೆ ಅಥವಾ ಕ್ಯಾಪ್ಸೂಲ್‌ಗ‌ಳ ರೂಪದಲ್ಲಿ ನೀಡಲಾಗುತ್ತದೆ. ಈ ಚಿಕಿತ್ಸಾ ವಿಧಾನದ ಮೂಲಕ ರೋಗಪತ್ತೆಯಾದ ಬಳಿಕವೂ ರೋಗಿ 10ರಿಂದ 15 ವರ್ಷಗಳ ಕಾಲ ಸಹಜ ಜೀವನವನ್ನು ನಡೆಸಬಹುದಾಗಿದೆ. ಕೆಲವು ರೋಗಿಗಳು ರೋಗ ಪ್ರಗತಿ ಹೊಂದಿದ ಸ್ಥಿತಿಯಲ್ಲಿ ವೈದ್ಯರನ್ನು ಸಂಪರ್ಕಿಸುವ ಸಾಧ್ಯತೆಯಿದೆ. ಇಂತಹ ರೋಗಿಗಳಿಗೆ ತೀವ್ರ ತರಹದ ಕಿಮೋಥೆರಪಿ ಮತ್ತು ಕೆಲವೊಮ್ಮೆ ಅಸ್ತಿಮಜ್ಜೆಯ ಕಸಿಯೂ ಅಗತ್ಯವಾಗಿರುತ್ತದೆ.
 
ಕ್ರಾನಿಕ್‌ ಮೇಲಾಯ್ಡ ಲ್ಯುಕೇಮಿಯಾಕ್ಕೆ ಗುರಿ ನಿರ್ದೇಶಿತ ಔಷಧಗಳ ಆವಿಷ್ಕಾರ ಹೆಮಾಟೊ - ಓಂಕಾಲಜಿ ಕ್ಷೇತ್ರದಲ್ಲಿ ಒಂದು ಉಲ್ಲೇಖಾರ್ಹ ಯಶಸ್ಸು ಎಂಬುದಾಗಿ ಪರಿಗಣಿತವಾಗಿದೆ. ಅಲ್ಲದೆ, ಕ್ಯಾನ್ಸರ್‌ ಎದುರು ಮನುಕುಲದ ಹೋರಾಟದಲ್ಲಿ ಸಾಧನೆಯ ಒಂದು ಮೆಟ್ಟಿಲು ಎಂಬುದಾಗಿಯೂ ಪ್ರಶಂಸಿಸಲ್ಪಟ್ಟಿದೆ.

ಕ್ರಾನಿಕ್‌ ಮೇಲಾಯ್ಡ ಲ್ಯುಕೇಮಿಯಾದ ಲಕ್ಷಣಗಳು ಅನೇಕ ಬಾರಿ ತುಂಬಾ ಅನಿರ್ದಿಷ್ಟವಾಗಿರುತ್ತವೆ ಅಲ್ಲದೆ ಅನೇಕ ಬಾರಿ ಇತರ ಕಾರಣಗಳಿಂದ ಉಂಟಾಗಿರುತ್ತವೆ. ಅವುಗಳಲ್ಲಿ:ದಣಿವು ,ಕಂಗಾಲುತನ ,ರಾತ್ರಿ ಬೆವರುವಿಕೆ ,ತೂಕನಷ್ಟ ,ಜ್ವರ,ಎಲುಬು ನೋವು ,ಮೇದೋಜೀರಕ ಗ್ರಂಥಿ ಊದಿಕೊಳ್ಳುವುದು (ಎದೆಗೂಡಿನ ಕೆಳಗೆ ಗಡ್ಡೆಯಂತೆ ಅನುಭವಕ್ಕೆ ಬರುತ್ತದೆ),ಹೊಟ್ಟೆಯಲ್ಲಿ ನೋವು ಅಥವಾ ಹೊಟ್ಟೆ ತುಂಬಿಕೊಂಡಂತಹ ಅನುಭವ., ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸಿದರೂ ಹೊಟ್ಟೆ ತುಂಬಿದಂತಹ ಅನುಭವ.

ಡಾ| ಪ್ರಶಾಂತ್‌ ಬಿ., 
ಕನ್ಸಲ್ಟಂಟ್‌ ಹೆಮಟಾಲಜಿಸ್ಟ್‌
ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು.

Trending videos

Back to Top