CONNECT WITH US  

ಎರಡು ವರ್ಷ ವಯಸ್ಸಿನವರೆಗೆ ಶಿಶು ಮತ್ತು ಸಣ್ಣ ಮಕ್ಕಳ ಆಹಾರ

ಪ್ರತಿವರ್ಷ ರಾಷ್ಟ್ರೀಯ ಪೌಷ್ಟಿಕಾಂಶ ವಾರವನ್ನು ಸೆಪ್ಟಂಬರ್‌ 1ರಿಂದ 7ರ ವರೆಗೆ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎಳೆಯ ಶಿಶುಗಳು ಮತ್ತು ಎರಡು ವರ್ಷ ವಯಸ್ಸಿನವರೆಗೆ ಸಣ್ಣ ಮಕ್ಕಳಿಗೆ ಆಹಾರ ಕ್ರಮ ಹೇಗಿರಬೇಕು ಎಂಬುದರ ಕುರಿತಾಗಿ ಈ ಲೇಖನ.

ಭಾರತದ ಮಕ್ಕಳೂ ಜಗತ್ತಿನ ಇತರೆಲ್ಲ ಮಕ್ಕಳಂತೆಯೇ ಬೆಳವಣಿಗೆ ಮತ್ತು ಪ್ರಗತಿಯ ಸಾಧ್ಯತೆಗಳನ್ನು ಹೊಂದಿದ್ದಾರೆ. ಉತ್ತಮ ಬೆಳವಣಿಗೆ, ಆರೋಗ್ಯ, ವರ್ತನಾತ್ಮಕ ಮತ್ತು ಜ್ಞಾನ ಗ್ರಹಣ ಅಭಿವೃದ್ಧಿಯ ದೃಷ್ಟಿಯಿಂದ ಮಗು ಜನ್ಮ ತಾಳಿದಲ್ಲಿಂದ ತೊಡಗಿ ಎರಡು ವರ್ಷ ವಯಸ್ಸಿನವರೆಗಿನ ಅವಧಿ ಅತ್ಯಂತ ನಿರ್ಣಾಯಕ ಎಂಬುದು ಈಗಾಗಲೇ ಶ್ರುತಪಟ್ಟಿದೆ.

ಬದುಕು ಆರಂಭಿಸಿದ ಮೊದಲ ಎರಡು ವರ್ಷಗಳಲ್ಲಿ ಅತ್ಯುತ್ತಮವಾದ ಪೌಷ್ಟಿಕಾಂಶ ಪೂರೈಕೆ - ಆದಷ್ಟು ಬೇಗನೆ ಮತ್ತು ಸಂಪೂರ್ಣ ಎದೆಹಾಲು ಉಣ್ಣಿಸುವಿಕೆ, ಎರಡು ವರ್ಷಗಳ ವರೆಗೆ ಮತ್ತು ಆ ಬಳಿಕವೂ ಸ್ತನ್ಯಪಾನ ಮುಂದುವರಿಸುವಿಕೆ, ಇದರ ಜತೆಗೆ ಆರು ತಿಂಗಳು ವಯಸ್ಸಿನಿಂದ ಆರಂಭಿಸಿ ಪೂರಕವಾಗಿ ಸಮರ್ಪಕವಾದ, ಸುರಕ್ಷಿತವಾದ, ವಯಸ್ಸಿಗೆ ಅನುಗುಣವಾದ, ಜವಾಬ್ದಾರಿಯುತವಾದ ಆಹಾರ ಪೂರೈಕೆ- ಇವು ಶೈಶವದಲ್ಲಿ ಹಾಗೂ ಎಳೆಯ ವಯಸ್ಸಿನಲ್ಲಿ ಸಮರ್ಪಕ ಬೆಳವಣಿಗೆಯಿಂದ ವಂಚಿತರಾಗದೆ ಇರುವುದಕ್ಕೆ ಮತ್ತು ಅಪೌಷ್ಟಿಕತೆಯ ಪಾರಂಪರಿಕ ಚಕ್ರವನ್ನು ಮುರಿಯುವುದಕ್ಕೆ ಅತ್ಯಂತ ನಿರ್ಣಾಯಕವಾಗಿವೆ. ಮೊದಲ ವರ್ಷದಲ್ಲಿ ಸಂಪೂರ್ಣ ಎದೆಹಾಲು ಉಣಿಸುವಿಕೆ ಮತ್ತು ಪೂರಕ ಆಹಾರ ಒದಗಣೆಯ ಅಭ್ಯಾಸಗಳು ಜತೆಯಾದರೆ, ಐದು ವರ್ಷ ವಯಸ್ಸಿನೊಳಗಣ ಮಕ್ಕಳ ಮರಣ ಪ್ರಮಾಣವನ್ನು ಐದರಲ್ಲೊಂದರಷ್ಟು ಕಡಿಮೆ ಮಾಡಬಹುದಾಗಿದೆ.

ಸ್ತನ್ಯಪಾನ (0-6 ತಿಂಗಳು)
ಎದೆಹಾಲು ಉಣಿಸುವುದು ಅಂದರೆ ಅದಕ್ಕೆ ಪರ್ಯಾಯ ಇಲ್ಲ. ಅದು ಆಯ್ಕೆಯಲ್ಲ, ಜವಾಬ್ದಾರಿಯಾಗಿದೆ. 
ಶಿಶು ಜನಿಸಿದ ಮೊದಲ ಒಂದು ತಾಸಿನೊಳಗೆ ಎದೆಹಾಲು ಉಣಿಸುವುದು ಶಿಶು ಬದುಕುಳಿಯುವ ನಿಟ್ಟಿನಲ್ಲಿ ಅತ್ಯಂತ ನಿರ್ಣಾಯಕವಾದ ಪ್ರಕ್ರಿಯೆಗಳಲ್ಲಿ ಪ್ರಮುಖವಾದುದಾಗಿದೆ. ಆದರೂ ಭಾರತದಲ್ಲಿ ಕೇವಲ ಶೇ. 41.6 ಶಿಶುಗಳು ಮಾತ್ರ ಜನ್ಮ ಪಡೆದ ಮೊದಲ ಒಂದು ತಾಸಿನಲ್ಲಿ ಸ್ತನ್ಯಪಾನ ಆರಂಭವನ್ನು ಪಡೆಯುತ್ತಾರೆ. ಸ್ತನ್ಯಪಾನವೇ ನಿಮ್ಮ ಮಗುವಿಗೆ ಆಹಾರ ನೀಡುವ ಅತ್ಯಂತ ಪ್ರಾಕೃತಿಕವಾದ ವಿಧಾನ. ಜನಿಸಿದ ಆರು ತಿಂಗಳ ಅವಧಿಯಲ್ಲಿ ನಿಮ್ಮ ಮಗುವಿಗೆ ಅಗತ್ಯವಾದ ಎಲ್ಲ ಪೌಷ್ಟಿಕಾಂಶಗಳನ್ನು ಎದೆಹಾಲು ಒದಗಿಸುತ್ತದೆ, ಮಗುವಿನ ಹಸಿವು ಮತ್ತು ಬಾಯಾರಿಕೆಯನ್ನು ತಣಿಸುತ್ತದೆ. ಇದಲ್ಲದೆ ಸ್ತನ್ಯಪಾನವು ನಿಮ್ಮ ಮತ್ತು ನಿಮ್ಮ ಶಿಶುವಿನ ನಡುವೆ ಪ್ರೇಮಮಯ ಬಾಂಧವ್ಯವೊಂದನ್ನು ಬೆಸೆಯುತ್ತದೆ. ಹಸುಳೆಯ ಪೌಷ್ಟಿಕಾಂಶ ಮತ್ತು ಮಾನಸಿಕ, ಭಾವನಾತ್ಮಕ ಅಗತ್ಯಗಳನ್ನು ತಣಿಸಲು ಸ್ತನ್ಯಪಾನವು ಅತ್ಯಂತ ಸೂಕ್ತ ಮಾರ್ಗವಾಗಿದೆ. ತಾಯಿಯ ಹಾಲು (ಎದೆಹಾಲು, ಮಾನವ ಸ್ತನ್ಯ) ಮಗುವಿನ ಪ್ರಗತಿ ಮತ್ತು ಬೆಳವಣಿಗೆಗೆ ಅಗತ್ಯವಾಗಿರುವ ಎಲ್ಲ ಪೌಷ್ಟಿಕಾಂಶಗಳನ್ನು ಸರಿಯಾದ ಸಮತೋಲಿತ ಪ್ರಮಾಣದಲ್ಲಿ ಹೊಂದಿರುತ್ತದೆ. ಜನ್ಮ ತಳೆದಿರುವ ಶಿಶುವಿಗೆ ಪೌಷ್ಟಿಕಾಂಶಗಳ ಅತ್ಯುತ್ತಮ ಮೂಲವೆಂದರೆ ಸ್ತನ್ಯ. ಎದೆಹಾಲಿನಲ್ಲಿರುವ ಅನೇಕ ಅಂಶಗಳು ನಿಮ್ಮ ಮಗುವನ್ನು ಬಹುತೇಕ ಸೋಂಕುಗಳು ಮತ್ತು ಕಾಯಿಲೆಗಳಿಂದ ರಕ್ಷಿಸುತ್ತವೆ. ಎದೆಹಾಲಿನಲ್ಲಿರುವ ಪ್ರೊಟೀನುಗಳು ಯಾವುದೇ ಫಾರ್ಮುಲಾ ಹಾಲು ಅಥವಾ ಹಸುವಿನ ಹಾಲಿಗಿಂತ ಸುಲಭವಾಗಿ ಜೀರ್ಣಗೊಳ್ಳುತ್ತವೆ. ಎದೆಹಾಲಿನಲ್ಲಿರುವ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಕೂಡ ಸುಲಭವಾಗಿ ಜೀರ್ಣವಾಗುವಂಥದ್ದು.

- ಜೋನಿಯಾ ಗಲಾºವೊ, 
ಪಥ್ಯಾಹಾರತಜ್ಞೆ
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ.

(ಮುಂದುವರಿಯುತ್ತದೆ)
 


Trending videos

Back to Top