CONNECT WITH US  

ಸರಿ-ತಪ್ಪು ವಿಮರ್ಶಿಸಿ; ಸರಿಯನ್ನೇ ಆರಿಸಿ

ಸಾಂದರ್ಭಿಕ ಚಿತ್ರ.

ಮಾದಕ ವಸ್ತು ಪ್ರಪಂಚಾದ್ಯಂತ ಕಂಡುಬರುವ ಒಂದು ದೊಡ್ಡ ಪಿಡುಗು. ಇದು ಗಂಡು-ಹೆಣ್ಣು, ಬಡವ-ಶ್ರೀಮಂತ ಎನ್ನುವ ಭೇದವಿಲ್ಲದೆ ಎಲ್ಲೆಡೆಯೂ ಕಂಡುಬರುವ ತೊಂದರೆ. ಸಾಮಾನ್ಯವಾಗಿ ಉಪಯೋಗಿಸುವ ಮಾದಕ ವಸ್ತುಗಳೆಂದರೆ, ಮದ್ಯ, ತಂಬಾಕು, ಗಾಂಜಾ, ಕೋಕೇನ್‌, ಓಪಿಯಮ್‌, ಆಂಫಿಟಮೈನ್‌, ಹಿರಾಯಿನ್‌, ಎಲ್‌.ಎಸ್‌.ಡಿ., ಪಿ.ಸಿ.ಪಿ., ನಿದ್ದೆ ಮಾತ್ರೆಗಳು, ಅನಿಲಗಳು (ವೈಟ್‌ನರ್‌, ಪೆಟ್ರೋಲಿಯಮ್‌ ಉತ್ಪನ್ನಗಳು), ಇತ್ಯಾದಿ.  ಜನರಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯಿರುವುದು ಕಡಿಮೆ. ಅದರಲ್ಲೂ ನಿಜವಾದ ಮಾಹಿತಿಗಿಂತ ತಪ್ಪುನಂಬಿಕೆಗಳು ಹಾಗೂ ಮೂಢನಂಬಿಕೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಮಾದಕ ವಸ್ತುಗಳಿಗೆ ಸಂಬಂಧಪಟ್ಟ ಮಾಹಿತಿ ಬಳಸುವವರಲ್ಲಿ ಹಾಗೂ ಜನರಲ್ಲಿ ಮಾಹಿತಿಯ ಕೊರತೆ ಎದ್ದು ಕಾಣುತ್ತದೆ ಆದರೆ ಈ ಪಿಡುಗಿನ ಬಗ್ಗೆ ಹಲವಾರು ಅಪನಂಬಿಕೆಗಳು ಪ್ರಚಲಿತವಾಗಿರುವುದು ವಿಪರ್ಯಾಸ. ಹೀಗಾಗಿ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ವಿಮರ್ಶಿಸಿ ಸರಿಯಾದುದನ್ನೇ ಆಯ್ಕೆ ಮಾಡಿಕೊಳ್ಳುವುದು ಅಗತ್ಯ. 

ಪ್ರಚಲಿತ ತಪ್ಪುನಂಬಿಕೆಗಳು
1. ತಪ್ಪು: ಮಾದಕ ವಸ್ತುಗಳ ಉಪಯೋಗ ಒಂದು ಕಾಯಿಲೆಯಲ್ಲ, ಇದು ಕೇವಲ ವ್ಯಕ್ತಿಯ ಇಚ್ಛಾಶಕ್ತಿಯ ಕೊರತೆಯಷ್ಟೇ.
ಸರಿ: ಇದನ್ನು ಮೆದುಳಿನ ಕಾಯಿಲೆಯೆಂದು ಪರಿಗಣಿಸಲಾಗುತ್ತದೆ.

2. ತಪ್ಪು: ಮಾದಕ ವಸ್ತು ದೈಹಿಕ ಅಥವಾ ಮಾನಸಿಕ ಆರೋಗ್ಯವನ್ನು ಹಾಳುಮಾಡಬೇಕಾದರೆ, ಅದನ್ನು ತುಂಬಾ ಸಮಯದ ವರೆಗೆ ಉಪಯೋಗಿಸಬೇಕು. 
ಸರಿ: ಕೆಲವೊಮ್ಮೆ ಒಂದೇ ಬಾರಿ ಉಪಯೋಗಿಸಿದರೂ ವ್ಯಕ್ತಿ  ತೀವ್ರತರ ದೈಹಿಕ, ಮಾನಸಿಕ ತೊಂದರೆಗಳಿಗೀಡಾಗುತ್ತಾನೆ.

3. ತಪ್ಪು: ಇದಕ್ಕೆ ಚಿಕಿತ್ಸೆಯೇನೂ ಬೇಕಾಗುವುದಿಲ್ಲ, ಇದನ್ನು ಮನಸ್ಸು ಗಟ್ಟಿಮಾಡಿ ಬೇಕಾದಾಗ ಬಿಡಬಹುದು.
ಸರಿ: ಮಾದಕ ವಸ್ತುಗಳ ಜಾಲದಿಂದ ಹೊರಬರಲು ಚಿಕಿತ್ಸೆ ಅತ್ಯಗತ್ಯ. ಇಚ್ಛಾಶಕ್ತಿಯಿಂದ ಬಿಡುವ ಸಾಧ್ಯತೆಗಳು ತುಂಬಾ ವಿರಳ.

4. ತಪ್ಪು: ಹದಿಹರೆಯದವರು ಮಾದಕ ವಸ್ತುವಿನ ಚಟಕ್ಕೊಳಗಾಗುವುದಿಲ್ಲ.
ಸರಿ: ಹದಿಹರೆಯದವರು ಚಟಕ್ಕೊಳಗಾಗುತ್ತಾರೆ.

5. ತಪ್ಪು: ಮಾದಕ ವಸ್ತುಗಳು ಮನಸ್ಸನ್ನು ಹಗುರವಾಗಿಸುತ್ತವೆ ಮತ್ತು ಮನಸ್ಸಿಗೆ ಶಾಂತಿ ನೀಡುತ್ತವೆ.
ಸರಿ: ಮಾದಕ ವಸ್ತುಗಳು ಸಮಸ್ಯೆಗಳ ಅವಲೋಕನ ಮತ್ತು ಪರಿಹಾರ ಹುಡುಕುವ ಶಕ್ತಿಯನ್ನು ಕದಡುತ್ತವೆ ಮತ್ತು ಮತ್ತಿನಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಭಾವನಾತ್ಮಕವಾಗಿದ್ದು ಅಹಿತಕರ ಪರಿಣಾಮಗಳನ್ನುಂಟುಮಾಡುತ್ತವೆ.

6. ತಪ್ಪು: ಮಾದಕ ವಸ್ತುಗಳ ಉಪಯೋಗದಿಂದ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ.
ಸರಿ: ಮಾದಕ ವಸ್ತುಗಳಿಂದ ತಾತ್ಕಾಲಿಕವಾಗಿ ಲೈಂಗಿಕ ಆಸಕ್ತಿ ಹೆಚ್ಚಾದ ಹಾಗೆ ಅನ್ನಿಸುತ್ತದೆ. ಆದರೆ ಲೈಂಗಿಕ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ.  ದೀರ್ಘ‌ಕಾಲದಲ್ಲಿ ವಿವಿಧ ಲೈಂಗಿಕ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ 
ಉದಾ: ಲಿಂಗ ಉದ್ರೇಕಗೊಳ್ಳದಿರುವುದು, ಶೀಘ್ರ ಸ್ಖಲನವಾಗುವುದು.

7. ತಪ್ಪು: ಮಾದಕ ವಸ್ತು ಉಪಯೋಗಿಸುವವರೆಲ್ಲ ಕೆಟ್ಟವರು.
ಸರಿ: ಇದರ ಉಪಯೋಗದಲ್ಲಿ ಒಳ್ಳೆಯವರು ಅಥವಾ ಕೆಟ್ಟವರು ಎಂಬ ಭೇದವಿಲ್ಲ. 

8. ತಪ್ಪು: ಕಠಿನ (ಹಾರ್ಡ್‌) ಕೆಲಸ ಮಾಡುವವರಿಗೆ ಮೈ-ಕೈ ನೋವು ಕಡಿಮೆಯಾಗಲು ಮದ್ಯದಂತಹ ಮಾದಕ ವಸ್ತುಗಳು ಬೇಕೇ ಬೇಕು ಯಾಕೆಂದರೆ, ಅವುಗಳು ನೋವು ನಿವಾರಕವಾಗಿವೆ.
ಸರಿ: ಮದ್ಯಪಾನ ಮಾಡಿದಾಗ ಅಥವಾ/ ಮಾದಕ ವಸ್ತುಗಳನ್ನು ಸೇವಿಸಿದಾಗ ವ್ಯಕ್ತಿಯ ಸಂವೇದನೆ (sಛಿnsಚಠಿಜಿಟn) ಕಡಿಮೆಯಾಗುತ್ತದೆ ಹಾಗಾಗಿ ಮಾಂಸ ಖಂಡಗಳಲ್ಲಿ ಹಾನಿಯಾಗುತ್ತಿದ್ದರೂ ನೋವಿನ ಅನುಭವವಾಗುವುದಿಲ್ಲ. ಆದರೆ, ಇದೇ ರೀತಿ ಮುಂದುವರಿದಾಗ ದೇಹದ ಮಾಂಸ-ಖಂಡಗಳು ಹಾನಿಗೀಡಾಗುತ್ತವೆ ಹಾಗೂ ಯಾವಾಗಲೂ ನೋವಿನ ಅನುಭವವಾಗತೊಡಗುತ್ತದೆ. ಮದ್ಯ ಮತ್ತಿತರ ಮಾದಕ ವಸ್ತುಗಳು ಸಮಯ ಕಳೆದಂತೆ ಮಾಂಸ-ಖಂಡಗಳಿಗೆ ಹಾನಿ ಮಾಡಿ ಯಾವಾಗಲೂ ಮೈ-ಕೈ ನೋವನ್ನುಂಟುಮಾಡುತ್ತವೆ.

9. ತಪ್ಪು: ಮಾದಕ ವಸ್ತು ಉಪಯೋಗಿಗಳಿಗೆ ಅವರಿಗೆ ಗೊತ್ತಿಲ್ಲದೆ ಮಾತ್ರೆ ಅಥವಾ ಟಿ.ವಿ.ಯಲ್ಲಿ ತೋರಿಸುವಂತೆ ಯಾವುದೋ ಪುಡಿ ಕೊಟ್ಟರೆ ಅವರು ಸಂಪೂರ್ಣ ಗುಣವಾಗಿಬಿಡುತ್ತಾರೆ.
ಸರಿ: ಇದರ ಚಿಕಿತ್ಸೆ ಒಂದು ರೂಪು-ರೇಷೆಯ ಮೇಲೆ ಸಾಗುವುದು. ಇದರಲ್ಲಿ ವ್ಯಕ್ತಿಯ ಪಾತ್ರ ಮುಖ್ಯವಾಗಿದ್ದು ಅವನ ಸಮ್ಮತಿಯ ಮೇಲೆ ಚಿಕಿತ್ಸೆ ಮುಂದುವರಿಯುತ್ತದೆ. ಆವರಿಗೆ ಮಾದಕ ವಸ್ತುಗಳ ಪರಿಣಾಮಗಳ ಬಗ್ಗೆ, ಆಸೆ ನಿಯಂತ್ರಿಸಿಕೊಳ್ಳುವ ಬಗ್ಗೆ ವಿವರವಾಗಿ ಹೇಳಲಾಗುತ್ತದೆ.

10. ತಪ್ಪು: ಒಂದು ಸಾರಿ ಚಿಕಿತ್ಸೆಗೊಳಗಾದ ವ್ಯಕ್ತಿ ಸ್ವಲ್ಪ ಸಮಯದ ಅನಂತರ ಮತ್ತೆ ಮಾದಕ ವಸ್ತು ಸೇವಿಸಲಾರಂಭಿಸಿದ್ದಾನೆ ಎಂದರೆ ಆತ ಇನ್ನು ಮುಂದೆ  ಸುಧಾರಿಸಲು ಸಾಧ್ಯವೇ ಇಲ್ಲ.
ಸರಿ: ಹಲವಾರು ಸಲ ಮಾದಕ ವಸ್ತು ಬಿಟ್ಟು  ಪುನಃ ಪ್ರಾರಂಭಿಸಿದ ವ್ಯಕ್ತಿ ಮತ್ತೆ-ಮತ್ತೆ ಚಿಕಿತ್ಸೆಗೊಳಗಾಗಿ ಅದರ ಚಟದಿಂದ ಹೊರಬರಬಲ್ಲ.

11. ತಪ್ಪು: ಮದ್ಯದಂತಹ ಮಾದಕ ವಸ್ತುವಿನ ಸೇವನೆಯ ಜತಗೆ ಹೊಟ್ಟೆ ತುಂಬ ಊಟ ಮಾಡಿದರೆ, ಮಾದಕ ವಸ್ತುವು ದೇಹಕ್ಕೆ ಯಾವುದೇ ತೊಂದರೆಯನ್ನುಂಟುಮಾಡುವುದಿಲ್ಲ.
ಸರಿ: ಊಟ ಮಾಡಿದರೂ, ಬಿಟ್ಟರೂ ಮಾದಕ ವಸ್ತುಗಳು ದೇಹಕ್ಕೆ ಹಾನಿ ಮಾಡಿಯೇ ಮಾಡುತ್ತವೆ.

12. ತಪ್ಪು: ಒಳ್ಳೆಯ ಗುಣಮಟ್ಟದ ಮಾದಕ ವಸ್ತು ಉಪಯೋಗಿಸಿದರೆ ದೇಹಕ್ಕೇನೂ ಹಾನಿಯಾಗುವುದಿಲ್ಲ. ಉದಾ: ಒಳ್ಳೆಯ ಗುಣಮಟ್ಟದ ಮದ್ಯ ಸೇವಿಸಿದರೆ, ದೇಹ ಸದೃಢಗೊಳ್ಳುತ್ತದೆ.
ಸರಿ: ಒಳ್ಳೆಯದಾಗಲಿ ಅಥವಾ ಕೀಳು ಗುಣಮಟ್ಟ¨ªಾಗಲೀ, ಮಾದಕ ವಸ್ತು ದೇಹಕ್ಕೆ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ.

13. ತಪ್ಪು: ಬೇರೆ ಜನರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತು ಸೇವಿಸಿದರೂ ಆತನಿಗೆ ಮತ್ತೇರದಿದ್ದರೆ/ ಕಿಕ್‌ ಸಿಗದಿದ್ದರೆ ಆತ ತುಂಬಾ ಸ್ಟ್ರಾಂಗ್‌ ವ್ಯಕ್ತಿ ಮತ್ತು ಆತನಿಗೆ ಮಾದಕ ವಸ್ತುವಿಂದ ಯಾವುದೇ ತೊಂದರೆಯಾಗುವುದಿಲ್ಲ.
ಸರಿ: ವ್ಯಕ್ತಿಗೆ ಸಮಯಕಳೆದಂತೆ ಮತ್ತೇರಲು ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತು ಬೇಕಾಗಿದೆಯೆಂದರೆ, ಮಾದಕ ವಸ್ತುವಿಗೆ ಆತನ ದೇಹ ಮತ್ತು ಮನಸ್ಸಿನ ಸಹನಾಶಕ್ತಿ ಹೆಚ್ಚಾಗಿದೆ ಎಂದರ್ಥ. ಅಂದರೆ, ಆ ವ್ಯಕ್ತಿಯು ನಿಜವಾಗಿಯೂ ಮಾದಕ ವಸ್ತುಗಳ ಚಟಕ್ಕೆ ಒಳಗಾದವನೂ ಮತ್ತವನಿಗೆ ಇದರಿಂದ ಹೊರಬರಲು ಸಹಾಯ ಅತ್ಯಗತ್ಯವಿದೆ ಎಂದರ್ಥ.

14. ತಪ್ಪು: ಮಾದಕ ವಸ್ತು ಉಪಯೋಗಿಸುವವರು ಅಧೋಗತಿಗಿಳಿದಾಗಲೇ ಅವರಿಗೆ ಬುದ್ಧಿ ಬರುವುದು, ಅಲ್ಲಿಯ ವರೆಗೆ ಅವರನ್ನು ಸುಧಾರಿಸಲು ಸಾಧ್ಯವೇ ಇಲ್ಲ.
ಸರಿ: ಅವರು ಯಾವುದೇ ಹಂತದಲ್ಲಿದ್ದರೂ ಸೂಕ್ತ ಚಿಕಿತ್ಸೆಯಿಂದ ಅವರನ್ನು ಬದಲಾಯಿಸಬಹುದು.

15. ತಪ್ಪು: ಎಲ್ಲರೂ ಮಾದಕ ವಸ್ತುಗಳನ್ನು ಉಪಯೋಗಿಸುತ್ತಾರೆ ಅದಕ್ಕೆ ನಾನೂ ಕೂಡ ಮಾಡಲೇಬೇಕಾಗುತ್ತದೆ.
ಸರಿ: ಎಲ್ಲರಿಗೆ ತಿಳಿದ ಹಾಗೆ ಸಮಾಜದ ಎಲ್ಲರೂ ಮಾದಕ ವಸ್ತುಗಳನ್ನು ಬಳಸುವುದಿಲ್ಲ. ಇದು ಕೆವಲ ಒಂದು ನೆಪ.

16. ತಪ್ಪು: ಹೆಣ್ಣುಮಕ್ಕಳು ಮಾದಕ ವಸ್ತುಗಳ ಚಟಕ್ಕೊಳಗಾಗುವುದಿಲ್ಲ.
ಸರಿ: ಲಿಂಗ ಭೇದವಿಲ್ಲದೇ ಎಲ್ಲರೂ ಚಟಕ್ಕೊಳಗಾಗುತ್ತಾರೆ.

17. ತಪ್ಪು: ಬಿಯರ್‌ ಎನ್ನುವುದು ಹಾರ್ಡ್‌ ಲಿಕರ್‌ ಅಲ್ಲ, ಹಾಗಾಗಿ ಅದನ್ನು ಸುರಕ್ಷಿತವಾಗಿ ದಿನಾ ಬಳಸಬಹುದು.
ಸರಿ: ಬಿಯರ್‌ ಕೂಡ ಮದ್ಯವಾಗಿದ್ದು ಇದರಲ್ಲಿ ಇತರ ಮದ್ಯಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಮದ್ಯವಿರುತ್ತದೆ. ಹಾಗಾಗಿ ಇದೂ ಕೂಡ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ.

18. ತಪ್ಪು: ಮಾದಕ ವಸ್ತುಗಳ ಸೇವನೆಯಿಂದ ಮೆದುಳಿನ ಚುರುಕುತನ/ ರಚನಾತ್ಮಕ ಕ್ರಿಯೆ ಹೆಚ್ಚಾಗುತ್ತದೆ.
ಸರಿ: ಮಾದಕ ವಸ್ತುಗಳ ಉಪಯೋಗದಿಂದ ಗೃಹಣಶಕ್ತಿ, ಆಲೋಚನಾ ಶಕ್ತಿ, ಯೋಜನಾ ಶಕ್ತಿ ಏರುಪೇರಾಗುತ್ತವೆ, ಇದರಿಂದಾಗಿ ಎಲ್ಲ ಕೆಲಸಗಳು ಅಸ್ತವ್ಯಸ್ತವಾಗಿಬಿಡುತ್ತವೆ.

19. ತಪ್ಪು: ನಾವು ಸುಸಂಸ್ಕೃತ ಕುಟುಂಬದವರು ಮತ್ತು ತುಂಬಾ ಓದಿದವರು. ಹಾಗಾಗಿ ನಮ್ಮ ಮಕ್ಕಳಿಗೆ ಇವುಗಳ ಬಗ್ಗೆ ಎಲ್ಲ ಗೊತ್ತಿದೆ. ಇದರ ಬಗ್ಗೆ ಮಕ್ಕಳೊಂದಿಗೆ ಮಾತನಾಡುವ ಅವಶ್ಯಕತೆಯಿಲ್ಲ.
ಸರಿ: ಮಾದಕ ವಸ್ತುಗಳ ಉಪಯೋಗದ ತೊಂದರೆ, ಸಮಾಜದ ಎಲ್ಲ ಜಾತಿ, ಧರ್ಮ, ಹಣಕಾಸು ವರ್ಗದ ಕುಟುಂಬಗಳಲ್ಲಿ ಕಂಡು ಬಂದಿದೆ ಮತ್ತು ಇದರ ಬಗ್ಗೆ ಮಕ್ಕಳಿಗೆ ಮುಂಜಾಗೃತೆಯಾಗಿ ಮಾಹಿತಿ ನೀಡುವುದು ಸಹಾಯಕಾರಿಯಾಗಿದೆ.

20. ತಪ್ಪು: ಮದ್ಯದಂತಹ ಮಾದಕ ವಸ್ತುಗಳು ಚಳಿಗಾಲದಲ್ಲಿ ದೇಹಕ್ಕೆ ಬಿಸಿ ನೀಡುತ್ತವೆ.
ಸರಿ: ಈ ನಂಬಿಕೆಗೆ ವ್ಯತಿರಿಕ್ತವಾಗಿ ಮದ್ಯವು ದೇಹದ ಉಷ್ಣತೆಯನ್ನು ಹೊರಹಾಕುವುದರಿಂದ, ಚಳಿಗಾಲದಲ್ಲಿ ಇದರ ಉಪಯೋಗ ಕೆಲವೊಮ್ಮೆ ದೇಹದ ಉಷ್ಣಾಂಶ ಕಡಿಮೆಯಾಗಿ ಗಂಭೀರ ಸಮಸ್ಯೆಗಳುಂಟಾಗಬಹುದು.

21. ತಪ್ಪು: ಎಲ್ಲ ಮಾದಕ ವಸ್ತುಗಳ ಉಪಯೋಗಕ್ಕೆ ಒಂದೇ ಚಿಕಿತ್ಸೆಯಿರುತ್ತದೆ.
ಸರಿ: ಬೇರೆ-ಬೇರೆ ಮಾದಕ ವಸ್ತುಗಳಿಗೆ ಬೇರೆ-ಬೇರೆ ತರಹದ ಚಿಕಿತ್ಸೆಗಳು ಲಭ್ಯವಿವೆ.

ಇದೇ ರೀತಿ ಇನ್ನು ಹಲವಾರು ಆಧಾರ ರಹಿತ ತಪ್ಪು ಕಲ್ಪನೆಗಳು ಸಮಾಜದಲ್ಲಿ ಗಟ್ಟಿಯಾಗಿ ಬೇರೂರಿವೆ. ಇವುಗಳೆಲ್ಲ ವ್ಯಕ್ತಿಯ ಚಿಕಿತ್ಸೆಗೆ ಅಡ್ಡಗೋಲಾಗಿವೆ. ಹಾಗಾಗಿ ಮಾದಕ ವಸ್ತುಗಳ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳುವುದು ಅತ್ಯಗತ್ಯ. ಪ್ರಚಲಿತವಾಗಿರುವ ಅಪನಂಬಿಕೆಗಳಿಗೆ ಬಲಿಯಾಗಿ ಹಲವಾರು ಜನ ವ್ಯಸನಿಗಳಾಗಿದ್ದಾರೆ ಹಾಗೂ ಹಲವಾರು ಕುಟುಂಬದವರು ಇವರನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಲಿಲ್ಲ. ಮನೋರೋಗ ತಜ°ರನ್ನು ಕಂಡು ಸೂಕ್ತ ಮಾಹಿತಿಯನ್ನು ಪಡೆದು ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಇದನ್ನು ಮರುಕಳಿಸದಂತೆ ಸರಿಯಾದ ಮಾಹಿತಿ ಪಡೆದು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು.

- ಡಾ| ರವೀಂದ್ರ ಮುನೋಳಿ
 


Trending videos

Back to Top