CONNECT WITH US  

ಆರೋಗ್ಯಯುತ ಜೀವನಕ್ಕೆ ದಾರಿ: ಆರೋಗ್ಯಕರ ಜೀವನಶೈಲಿ ಕ್ರಮಗಳು

ಶಿಫಾರಸು ಮಾಡಲಾದ ದೈಹಿಕ ಚಟುವಟಿಕೆ ಪಿರಾಮಿಡ್‌

ಆರೋಗ್ಯ ಅನ್ನುವುದು ವ್ಯಕ್ತಿಗತ ಹೊಣೆಗಾರಿಕೆ. ಮನಸ್ಸು ಮತ್ತು ದೇಹ- ಎರಡರ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆಹಾರಾಭ್ಯಾಸ, ವ್ಯಾಯಾಮ ಮತ್ತು ಧನಾತ್ಮಕ ಚಿಂತನೆಗಳ ದಾರಿಯನ್ನು ಆರಿಸಿಕೊಳ್ಳುವುದು ಸದೃಢವಾಗಿ, ಆರೋಗ್ಯವಾಗಿ ಮತ್ತು ಸೌಖ್ಯವಾಗಿ ಬದುಕುವುದರ ಮೂಲ. ನಿಮ್ಮ ಜೀವನದಲ್ಲಿ ನೀವು ನಡೆಸಬಹುದಾದ ಅತಿದೊಡ್ಡ ಹೂಡಿಕೆ ಎಂದರೆ ಇದೇ. ಧನಾತ್ಮಕವಾದ ದೈಹಿಕ ಆರೋಗ್ಯ ಶೈಲಿಗಳು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತವೆ, ರೋಗಗಳಿಗೆ ತುತ್ತಾಗುವ ಅಪಾಯವನ್ನು ತಗ್ಗಿಸುತ್ತವೆ, ಶಕ್ತಿಯನ್ನು ವೃದ್ಧಿಸುತ್ತವೆ. 

ಎ: ವ್ಯಾಯಾಮ, ದೈಹಿಕ ಚಟುವಟಿಕೆಯ ಮೂಲಕ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು 
ಆರೋಗ್ಯಯುತ ಜೀವನವಿಧಾನಕ್ಕೆ ದೈಹಿಕವಾಗಿ ಸಕ್ರಿಯರಾಗಿರುವುದು, ಚಟುವಟಿಕೆಯಿಂದಿರುವುದು, ವ್ಯಾಯಾಮ ಮಾಡುವುದು ಅತೀ ಅಗತ್ಯ. ಹೃದ್ರೋಗಗಳು ಮತ್ತು ಮಧುಮೇಹದಂತಹ ತೊಂದರೆಗಳಿಂದ ದೂರ ಇರುವುದಕ್ಕೂ ಇದು ಸಹಾಯ ಮಾಡುತ್ತದೆ. ಆದರೆ, ನೀವು ನಿಮ್ಮ ವ್ಯಾಯಾಮದ ಮಟ್ಟವನ್ನು ಏರಿಸುವುದಕ್ಕೆ ಮುನ್ನ ವೈದ್ಯರ ಜತೆಗೆ ಸಮಾಲೋಚನೆ ನಡೆಸಬೇಕು. ನೀವು ಸ್ವೀಕರಿಸುವ ಶಕ್ತಿ (ನೀವು ಏನನ್ನು ತಿನ್ನುತ್ತೀರಿ ಮತ್ತು ಕುಡಿಯುತ್ತೀರೋ ಅದು) ಹಾಗೂ ನೀವು ಬಳಸುವ ಶಕ್ತಿ (ದೈಹಿಕ ಚಟುವಟಿಕೆ)ಗಳ ನಡುವಣ ಸಮತೋಲನವನ್ನು ನಿಮ್ಮ ದೇಹತೂಕ ಆಧರಿಸಿರುತ್ತದೆ. ಪ್ರತಿ ಹೆಜ್ಜೆಯೂ ಪರಿಗಣಿಸಲ್ಪಡುತ್ತದೆ. ದಿನವೊಂದಕ್ಕೆ ನೀವು ಹೆಚ್ಚು ಹೆಜ್ಜೆ ಹಾಕಿದಷ್ಟು ಒಳ್ಳೆಯದು. ದಿನಕ್ಕೆ ಕನಿಷ್ಟ 10,000 ಹೆಜ್ಜೆ ಹಾಕುವುದು ಒಳ್ಳೆಯದು ಎಂಬುದಾಗಿ ತಜ್ಞರು ಶಿಫಾರಸು ಮಾಡುತ್ತಾರೆ. ಚಟುವಟಿಕೆಯಿಂದ ಕೂಡಿದ ಜೀವನ ವಿಧಾನವನ್ನು ರೂಢಿಸಿಕೊಳ್ಳುವ ಇತರ ಸಲಹೆಗಳೆಂದರೆ:
- ಇಲೆಕ್ಟ್ರಾನಿಕ್‌-ಡಿಜಿಟಲ್‌ ತೆರೆ ವೀಕ್ಷಣೆ ಸಮಯವನ್ನು (ಟಿವಿ, ಕಂಪ್ಯೂಟರ್‌, ಸ್ಮಾರ್ಟ್‌ ಫೋನ್‌ ಮತ್ತು ವಿಡಿಯೊಗೇಮ್‌) ಮಿತಗೊಳಿಸಿ. ಪುಸ್ತಕ ಓದುವುದು, ಒಳಾಂಗಣ ಮತ್ತು ಹೊರಾಂಗಣ ಆಟಗಳನ್ನು ಪರಿಗಣಿಸಿ. 
- ಹೊರಾಂಗಣ ವೀಕ್ಷಣೆಯನ್ನು ಆನಂದಿಸಿ. ಉದ್ಯಾನವನಕ್ಕೆ ತೆರಳಿ ಅಡ್ಡಾಡಿ, ಸೈಕಲ್‌ ಸವಾರಿ ಮಾಡಿ, ಈಜಾಡಿ, ವಾಕಿಂಗ್‌ ಮಾಡಿ ಅಥವಾ ನೆರೆಹೊರೆಯಲ್ಲಿ ಓಡಾಡಿ.
- ಹಿತ್ತಿಲಲ್ಲಿ ಕೆಲಸ ಮಾಡಿ.
- ಕಾರು ತೊಳೆಯಿರಿ.
- ನೆರೆಕರೆಯ ಮನೆಗಳಿಗೆ ತೆರಳಿ ಹರಟೆ ಹೊಡೆಯಿರಿ.
- ಟಿವಿ ಆರಿಸಿ, ಯಾವುದಾದರೂ ಸಂಗೀತ ಕೇಳುತ್ತಾ ನರ್ತಿಸಿ.
- ಉದ್ಯೋಗಕ್ಕೆ ಹೋಗುವಾಗ, ಶಾಲೆಗೆ ತೆರಳುವಾಗ ಅಥವಾ ಇತರ ಕೆಲಸಕಾರ್ಯಗಳಿಗೆ ನಡೆದುಹೋಗಿ ಅಥವಾ ಸೈಕಲ್‌ ಸವಾರಿ ಮಾಡಿ. 
- ಮೆಟ್ಟಿಲು ಹತ್ತಿ, ಲಿಫ್ಟ್ ಬಳಕೆ ಕಡಿಮೆ ಮಾಡಿ.
- ಭೋಜನ ವಿರಾಮವನ್ನು ನಡಿಗೆಯ ಮೂಲಕ ಸದುಪಯೋಗಪಡಿಸಿ.
- ಕಚೇರಿಯಲ್ಲಿಯೂ ಕುಳಿತೇ ಇರಬೇಡಿ, ಆಗಾಗ ಎದ್ದು ನಡೆದಾಡಿ.
- ರಜೆಗಳನ್ನು ದೈಹಿಕವಾಗಿ ಸಕ್ರಿಯರಾಗಿದ್ದು ಕಳೆಯಿರಿ. 

ಬಿ. ಧನಾತ್ಮಕ ನಡವಳಿಕೆಯ ಮೂಲಕ ನಿಮ್ಮ ದೈಹಿಕ ಆರೋಗ್ಯದ ಕಾಳಜಿ ವಹಿಸುವುದು
ಧನಾತ್ಮಕವಾಗಿ ಬದುಕುವುದು ಮತ್ತು ಸತ್ಪ್ರೇರಣೆಯಿಂದ ಇರುವುದು ಆರೋಗ್ಯಕರ ಜೀವನ ನಡೆಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಆರೋಗ್ಯಯುತ ಆಹಾರಾಭ್ಯಾಸವನ್ನು ಆಯ್ದುಕೊಂಡು ಸಕ್ರಿಯರಾಗಿ ಇರಲು ಸಹಾಯ ಮಾಡುತ್ತದೆ. ಧನಾತ್ಮಕ ಜೀವನಕ್ಕೆ ಕೆಲವು ಸಲಹೆಗಳು:
- ನೀವು ಸಂತೋಷಪಡುವ ಏನನ್ನಾದರೂ ಮಾಡಿ. ಹಲವರಿಗೆ ನಡಿಗೆ ಇಷ್ಟ. ನೀವು ಹೊರಾಂಗಣದಲ್ಲಿ ನಡೆದಾಡಬಹುದು, ಮನೆಯಲ್ಲಿ ಟ್ರೆಡ್‌ಮಿಲ್‌ ನಡಿಗೆ ಮಾಡಬಹುದು; ಒಬ್ಬರೇ ಮಾಡಬಹುದು ಅಥವಾ ಗೆಳೆಯರನ್ನು ಅಥವಾ ಕುಟುಂಬ ಸದಸ್ಯರನ್ನು ಜತೆ ಸೇರಿಸಿಕೊಳ್ಳಬಹುದು.
- ಉಲ್ಲಾಸದಿಂದ ಮಾಡಿ. ವಾಕಿಂಗ್‌ ಅಥವಾ ಜಾಗಿಂಗ್‌ ಮಾಡುವಾಗ ಸಂಗೀತ ಕೇಳಿ. ವ್ಯಾಯಾಮ ಮಾಡುವಾಗ ಟಿವಿ ನೋಡುತ್ತಾ ಮಾಡಿ ಅಥವಾ ವಿಡಿಯೋ ನೋಡಿ.
- ನಿಮಗೆ ನೀವೇ ಬಹುಮಾನ ಕೊಟ್ಟುಕೊಳ್ಳಿ, ಪ್ರೋತ್ಸಾಹಿಸಿಕೊಳ್ಳಿ. ಸಣ್ಣ ಸಣ್ಣ ಗುರಿಗಳನ್ನು ಹಾಕಿಕೊಂಡು ಅವುಗಳ ಸಾಧನೆಯಾದಾಗ ಅದಕ್ಕೆ ನಿಮ್ಮನ್ನು ನೀವೇ ಬಹುಮಾನಿಸಿಕೊಳ್ಳಿ.
- ನಮನೀಯವಾಗಿರಿ. ಆ ಬದುಕು ನಿಮ್ಮ ಯೋಜನೆಗೆ ಒಗ್ಗಿಕೊಂಡು ಮುನ್ನಡೆಯುತ್ತದೆ. ನಮನೀಯವಾಗಿದ್ದು ಸಮರ್ಪಕ ಜೀವನದ ಹಳಿಗೆ ಬನ್ನಿ.
- ಗೆಳೆಯ-ಗೆಳತಿಯರ ಜತೆಗೆ ಸಮಯ ಕಳೆಯಿರಿ. ಋಣಾತ್ಮಕವಾಗಿರುವ ಸ್ನೇಹಿತರನ್ನು ದೂರ ಇರಿಸಿ.
- ಕಚೇರಿ, ಶಾಲೆ ಅಥವಾ ಏಕತಾನತೆಯ ದೈನಿಕ ಬದುಕಿನಿಂದ ಒಂದಷ್ಟು ಕಾಲ ಹೊರಬಂದು ಕಿರು ಪ್ರವಾಸ ಹೋಗಿ, ಪಿಕ್ನಿಕ್‌ ಹೋಗಿ ಅಥವಾ ದೊಡ್ಡ ಟೂರ್‌ ಹಮ್ಮಿಕೊಳ್ಳಿ.
- ಸ್ಫೂರ್ತಿದಾಯಕ ಪುಸ್ತಕಗಳನ್ನು ಓದಿ.
- ಸ್ವಯಂಸೇವೆಯಲ್ಲಿ ತೊಡಗಿಕೊಳ್ಳಿ. ಇತರರಿಗೆ ಸಹಾಯ ಮಾಡುವುದು ನಿಮ್ಮನ್ನು ಭಾವನಾತ್ಮಕವಾಗಿ ಬಲಪಡಿಸುತ್ತದೆ. 

(ಮುಂದುವರಿಯುತ್ತದೆ)

- ಡಾ| ಚೈತ್ರಾ ಆರ್‌. ರಾವ್‌, 
ಅಸೊಸಿಯೇಟ್‌ ಪ್ರೊಫೆಸರ್‌,
ಸಮುದಾಯ ಆರೋಗ್ಯ ವಿಭಾಗ
ಕೆ.ಎಂ.ಸಿ., ಮಣಿಪಾಲ.


Trending videos

Back to Top