CONNECT WITH US  

ವಿಶ್ವಕಪ್‌ ಹಾಕಿ: ಭಾರತದ ಕಪ್‌ ಕನಸನ್ನು ಛಿದ್ರಗೊಳಿಸಿದ ನೆದರ್ಲೆಂಡ್‌

 ಕ್ವಾರ್ಟರ್‌ ಫೈನಲ್‌: ಡಚ್ಚರ ವಿರುದ್ಧ 2-1 ಗೋಲುಗಳಿಂದ ಎಡವಿದ ಆತಿಥೇಯರು

ಭುವನೇಶ್ವರ: ಆತಿಥೇಯ ಭಾರತದ ವಿಶ್ವಕಪ್‌ ಹಾಕಿ ಕನಸು ಗುರುವಾರ ರಾತ್ರಿ ಭುವನೇಶ್ವರ "ಕಳಿಂಗ ಸ್ಟೇಡಿಯಂ'ನಲ್ಲಿ ಛಿದ್ರ ಗೊಂಡಿದೆ. ರ್‍ಯಾಂಕಿಂಗ್‌ನಲ್ಲಿ ತನಗಿಂತ ಒಂದು ಸ್ಥಾನ ಮೇಲಿರುವ ನೆದರ್ಲೆಂಡ್‌ ವಿರುದ್ಧ ಭಾರತ 1-2 ಗೋಲುಗಳಿಂದ ಸೋತು ಆಘಾತ ಅನುಭವಿಸಿತು.

12ನೇ ನಿಮಿಷದಲ್ಲೇ ಆಕಾಶ್‌ದೀಪ್‌ ಸಿಂಗ್‌ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಸಿಡಿಸಿದಾಗ ಭಾರತ ಮೇಲುಗೈ ಸಾಧಿಸುವ ನಿರೀಕ್ಷೆ ದಟ್ಟ ವಾಗಿತ್ತು. ಆದರೆ ಮೂರೇ ನಿಮಿಷದಲ್ಲಿ ನೆದರ್ಲೆಂಡ್‌ನ‌ ಥಿಯರಿ ಬ್ರಿಂಕ್‌ಮ್ಯಾನ್‌ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು. 

ಈ ಸಮಬಲದ ಹೋರಾಟ 50ನೇ ನಿಮಿಷದ ತನಕ ಜಾರಿಯಲ್ಲಿತ್ತು. ಆಗ ಮಿಂಕ್‌ ವಾನ್‌ ಡರ್‌ ವೀರ್ಡೆನ್‌ ಪೆನಾಲ್ಟಿ ಕಾರ್ನರ್‌ ಮೂಲಕ ಭಾರತಕ್ಕೆ ಆಘಾತವಿಕ್ಕಿದರು. ನೆದರ್ಲೆಂಡ್‌ ಮುನ್ನಡೆಯ ಸಂಭ್ರಮ ಆಚರಿಸಿತು. 

ಕೈಕೊಟ್ಟ ಅದೃಷ್ಟ
ಕೊನೆಯ 10 ನಿಮಿಷಗಳಲ್ಲಿ ಭಾರತಕ್ಕೆ ಸಮ ಬಲದ ಅವಕಾಶವಿತ್ತಾದರೂ ಅದೃಷ್ಟ ಇರಲಿಲ್ಲ. ಪೆನಾಲ್ಟಿ ಕಾರ್ನರ್‌ ವೈಫ‌ಲ್ಯ ಭಾರತವನ್ನು ಸೋಲಿನ ಬಾಗಿಲಿಗೆ ತಂದು ನಿಲ್ಲಿಸಿತು. ದೇಶದ ಹಾಕಿ ಅಭಿಮಾನಿಗಳ ಅಷ್ಟೂ ನಿರೀಕ್ಷೆ ಕಮರಿ ಹೋಯಿತು.

ವಿಶ್ವಕಪ್‌ ಇತಿಹಾಸದಲ್ಲಿ ಈವರೆಗೆ ನೆದರ್ಲೆಂಡ್‌ ವಿರುದ್ಧ ಗೆಲ್ಲದ ಭಾರತದ ಮೇಲೆ ಈ ಸಲ ಭಾರೀ ನಿರೀಕ್ಷೆ ಇರಿಸಿಕೊಳ್ಳಲಾಗಿತ್ತು. 1975ರ ಬಳಿಕ ವಿಶ್ವಕಪ್‌ ಎತ್ತದ, ಅಂದಿನಿಂದ ಸೆಮಿಫೈನಲ್‌ ಕೂಡ ಪ್ರವೇಶಿಸದ ಭಾರತ ತವರಿನಲ್ಲಿ ಹೊಸ ಇತಿಹಾಸ ನಿರ್ಮಿಸಬಹುದೆಂಬ ಭರವಸೆ ದಟ್ಟವಾಗಿತ್ತು. 

ಶನಿವಾರದ ದ್ವಿತೀಯ ಸೆಮಿಫೈನಲ್‌ನಲ್ಲಿ ನೆದರ್ಲೆಂಡ್‌ ತಂಡ ಕಳೆದೆರಡು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯವನ್ನು ಎದುರಿಸಲಿದೆ.

ಜರ್ಮನಿಯನ್ನು  ಕೆಡವಿದ ಬೆಲ್ಜಿಯಂ
ಗುರುವಾರದ ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ "ರೆಡ್‌ ಹಾಟ್‌' ಬೆಲ್ಜಿಯಂ 2-1 ಗೋಲುಗಳಿಂದ ಎರಡು ಬಾರಿಯ ಚಾಂಪಿಯನ್‌ ಜರ್ಮನಿಯನ್ನು ಕೆಡವಿ ಮೊದಲ ಮೊದಲ ಸಲ ವಿಶ್ವಕಪ್‌ ಸೆಮಿಫೈನಲ್‌ಗೆ ಲಗ್ಗೆ ಇರಿಸಿತು. 

ಈ ಪಂದ್ಯದಲ್ಲಿ ಜರ್ಮನಿ 14ನೇ ನಿಮಿಷದಲ್ಲೇ ಡಯಟರ್‌ ಲಿನ್‌ಕೋಗೆಲ್‌ ಮೂಲಕ ಮೊದಲ ಗೋಲು ದಾಖಲಿಸಿತಾದರೂ ಬಳಿಕ ಬೆಲ್ಜಿಯಂ ಆಕ್ರಮಣದ ಮುಂದೆ ಲಯ ಕಳೆದುಕೊಂಡಿತು. ಬೆಲ್ಜಿಯಂ ಪರ ಅಲೆಕ್ಸಾಂಡರ್‌ ಹೆಂಡ್ರಿಕ್ಸ್‌ (18ನೇ ನಿಮಿಷ), ಟಾಮ್‌ ಬೂನ್‌ (50ನೇ ನಿಮಿಷ) ಗೋಲು ದಾಖಲಿಸಿದರು. 

ಶನಿವಾರದ ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ತಂಡ ಇಂಗ್ಲೆಂಡ್‌ ವಿರುದ್ಧ ಸೆಣಸಾಡಲಿದೆ.

Trending videos

Back to Top