CONNECT WITH US  

ನೋಟು ಮುದ್ರಣದಿಂದ ಎಟಿಎಂವರೆಗೆ... 

ದೇಶಾದ್ಯಂತ ಎಟಿಎಂಗಳ ಎದುರು ದೊಡ್ಡ ಸಾಲು. 500, 1000 ರೂ. ನೋಟು ನಿಷೇಧದ ಬಳಿಕ ನಗದು ಸಮಸ್ಯೆ ಕಾಡಿದ್ದು ನೋಟುಗಳನ್ನು ಪೂರೈಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅವಿರತ ಶ್ರಮ ವಹಿಸುತ್ತಿದೆ.
ನೋಟು ಮುದ್ರಣದಿಂದ ಎಟಿಎಂ/ಬ್ಯಾಂಕ್‌ ಗಳಿಗೆ ಪೂರೈಸುವಲ್ಲಿವರೆಗೆ ಅದರದ್ದೇ ಆದ ನಿಯಮಗಳು, ಪ್ರಕ್ರಿಯೆಗಳಿದ್ದು ಆ ಪ್ರಕಾರವೇ ನಡೆಯುತ್ತದೆ. ಈ ಪ್ರಕ್ರಿಯೆ ಹೇಗಿರುತ್ತೆ? ನೋಟು ಹೇಗೆ ಪ್ರಿಂಟ್‌ ಮಾಡುತ್ತಾರೆ ಎಂಬ ಕುರಿತ ಕುತೂಹಲಕರ ವಿವರಗಳು ಇಲ್ಲಿವೆ. 

ಹಣದ ಅಗತ್ಯದ ಲೆಕ್ಕಾಚಾರ
ಪ್ರತಿವರ್ಷ ಆರ್‌ಬಿಐ ನಗದಿನ ಲೆಕ್ಕಾಚಾರ ಹಾಕಿ ಅಗತ್ಯವಿರುವಷ್ಟು ನೋಟುಗಳನ್ನು ಪ್ರಿಂಟ್‌ ಮಾಡುತ್ತದೆ. ನೋಟುಗಳ ಅಗತ್ಯ ಎಷ್ಟಿದೆ ಮತ್ತು ಎಷ್ಟು ಮುದ್ರಣ ಮಾಡಬೇಕು ಎಂಬುದಕ್ಕೆ ಪ್ರತ್ಯೇಕವಾದ ಆರ್ಥಿಕ
ಮಾದರಿಯೊಂದರ ಅನ್ವಯ ಲೆಕ್ಕಾಚಾರ ಹಾಕಲಾಗುತ್ತದೆ. ಈ ವೇಳೆ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಏರಿಕೆ, ಎಲೆಕ್ಟ್ರಾನಿಕ್‌ ಪಾವತಿಗಳಲ್ಲಿ ಏರಿಕೆ ಇತ್ಯಾದಿಗಳನ್ನು ಪರಿಗಣಿಸಲಾಗುತ್ತದೆ. ಆರ್‌ಬಿಐಯ 19 ಪ್ರಾದೇಶಿಕ
ಕಚೇರಿಗಳಿಂದ ಮಾಹಿತಿಯನ್ನು ತರಿಸಿಕೊಂಡು, ಒಟ್ಟು ಲೆಕ್ಕಾಚಾರ ಹಾಕಲಾಗುತ್ತದೆ. ಬಳಿಕ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯೊಂದಿಗೆ ಚಚೆರ್ಘ‌ ನಡೆಸಿದ ನೋಟು ಪ್ರಿಂಟ್‌ಗೆ ಸೂಚಿಸಲಾಗುತ್ತದೆ. 

ಪೇಪರ್‌ ಸಿದ್ಧತೆ
ವಿವಿಧ ಮೌಲ್ಯಗಳ ನೋಟುಗಳ ಅಗತ್ಯಕ್ಕೆ ಅನುಸಾರವಾಗಿ ನೋಟು ಪ್ರಿಂಟ್‌ ಮಾಡುವ ನಾಲ್ಕು ಪ್ರಸ್‌ಗಳಿಗೆ ಈ ಬಗ್ಗೆ ಸೂಚಿಸಲಾಗುತ್ತದೆ. ಇದರಲ್ಲಿ ಎರಡು ಪ್ರಸ್‌ಗಳು ನಾಸಿಕ್‌ ಮತ್ತು ದೆವಾಸ್‌ನಲ್ಲಿರುವುದು ಕೇಂದ್ರ ಸರ್ಕಾರದ ಸುಪರ್ದಿಯಲ್ಲಿದ್ದು, ಮೈಸೂರು ಮತ್ತು ಪಶ್ಚಿಮ ಮಿಡ್ನಾಪುರಲ್ಲಿನ ಸಾಲ್ಬೊನಿಯಲ್ಲಿರುವ ಘಟಕಗಳು ಆರ್‌ಬಿಐ ಸುಪರ್ದಿಯಲ್ಲಿವೆ. ಈ ಘಟಕಗಳಿಗೆ ಮೈಸೂರಿನಲ್ಲಿರುವ ಪೇಪರ್‌ ಮಿಲ್‌ ಮತ್ತು ಮಧ್ಯಪ್ರದೇಶದ 
ಹೊಸಂಗಾಬಾದ್‌ನಲ್ಲಿರುವ ಪೇಪರ್‌ಮಿಲ್‌ಗ‌ಳಿಂದ ಅತಿ ಸುರಕ್ಷತಾ ಗುಣಮಟ್ಟ ಹೊಂದಿದ ಪೇಪರ್‌ ಪೂರೈಸಲಾಗುತ್ತದೆ. ನೋಟಿನ ವಿನ್ಯಾಸ, ಸುರಕ್ಷತೆ ವಿಚಾರಕ್ಕೆ ತಕ್ಕಂತೆ ಸಿದ್ಧತೆ ಮಾಡಿಯೇ ಪ್ರಸ್‌ಗಳಿಗೆ ಕೊಡಲಾಗುತ್ತದೆ. ಮೈಸೂರು ಪೇಪರ್‌ ಮಿಲ್‌ ವಾರ್ಷಿಕ 12 ಸಾವಿರ ಮೆಟ್ರಿಕ್‌ ಟನ್‌ ಹೊಶಂಗಾಬಾದ್‌ನ ಮಿಲ್‌ 6
ಸಾವಿರ ಮೆಟ್ರಿಕ್‌ ಟನ್‌ ಪೇಪರ್‌ ಪೂರೈಸುವ ಸಾಮರ್ಥ್ಯ ಹೊಂದಿದೆ. 

ನೋಟು ಮುದ್ರಣ ಪ್ರಕ್ರಿಯೆ
ಪೇಪರ್‌ ಮಿಲ್‌ಗ‌ಳಿಂದ ಪ್ರಿಂಟಿಂಗ್‌ ಪ್ರಸ್‌ಗೆ ಕಾಗದ ರವಾನೆಯಾಗುತ್ತದೆ. ಒಂದು ಕಾಗದದ ಶೀಟ್‌ನಲ್ಲಿ ಹೊಸ 2000 ಸಾವಿರ ನೋಟಾದರೆ 40 ಮುದ್ರಣವಾಗುತ್ತದೆ. ಮುದ್ರಣ ಬಳಿಕ ಅವುಗಳನ್ನು ಟೆಲಿಸ್ಕೋಪಿಕ್‌ ಮಾದರಿಯಲ್ಲಿ ಕತ್ತರಿಸಲಾಗುತ್ತದೆ. ನೋಟುಗಳಲ್ಲಿ ಎಲ್ಲಾ ರೀತಿಯ ಸುರಕ್ಷತಾ ಮಾದರಿ ಪರಿಶೀಲಿಸಲಾಗುತ್ತದೆ. ಮೈಸೂರು
ಮತ್ತು ಹೊಶಂಗಾಬಾದ್‌ನಲ್ಲಿ ಬೆಳ್ಳಿ ರೇಖೆಗಳನ್ನೂ ಮಾಡಲಾಗುತ್ತದೆ. ಒಂದು ನೋಟು ಪ್ಯಾಕೆಟ್‌ನಲ್ಲಿ 100 ನೋಟುಗಳು ಮತ್ತು ಅಂತಹ 10 ಪ್ಯಾಕೆಟ್‌ ಸೇರಿಸಿ ಒಂದು ಬಂಡಲ್‌ ಮಾಡಲಾಗುತ್ತದೆ. ಬೇಡಿಕೆಗೆ
ಅನುಸಾರವಾಗಿ ಪ್ರಿಂಟ್‌ ಹಾಕಲಾಗುತ್ತದೆ. ನೋಟಿನ ಸುರಕ್ಷತೆಗೆ ಕುರಿತಂತೆ ಪ್ರತ್ಯೇಕ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ಇದ್ದು ಸುರಕ್ಷತಾ ಮಾನದಂಡಗಳ ಸಂಶೋಧನೆ ಮಾಡುತ್ತಿರುತ್ತದೆ. 

ನೋಟುಗಳ ರವಾನೆ
ನೋಟುಗಳು ಪ್ರಿಂಟ್‌ ಆದ ಬಳಿಕ ನೋಟುಗಳನ್ನು ಇಡುವ ಕೇಂದ್ರಗಳಿಗೆ ಅವುಗಳನ್ನು ತಲುಪಿಸಲಾಗುತ್ತದೆ. ಇವುಗಳನ್ನು ಆರ್‌ ಬಿಐ ಮತ್ತು ಇತರ ಬ್ಯಾಂಕ್‌ಗಳ ಸುಪರ್ದಿಯಲ್ಲಿರುತ್ತವೆ. ಇದಕ್ಕೆ ರಾಜ್ಯ ಸರ್ಕಾರದ ನೆರವಿನಿಂದ ಪೊಲೀಸ್‌, ಇತರೆ ಭದ್ರತೆಗಳನ್ನು ನೀಡಲಾಗುತ್ತದೆ. ನೋಟುಗಳ ರವಾನೆ ಹೆಚ್ಚಾಗಿ ರೈಲು ವ್ಯಾಗನ್‌ಗಳಲ್ಲಿ,
ಹೆಲಿಕಾಪ್ಟರ್‌, ಲಾರಿಗಳು, ವಿಮಾನಗಳ ಮೂಲಕವೂ ಸಾಗಿಸಲಾಗುತ್ತದೆ. ಕಾನೂನಾತ್ಮಕವಾಗಿ ಇವುಗಳು ಕಾಗದದ ಬಂಡಲ್‌ಗ‌ಳು ಮಾತ್ರವೇ ಆಗಿದ್ದು, ನೋಟು ಬಿಡುಗಡೆ ಬಗ್ಗೆ ಆರ್‌ಬಿಐ ಅಧಿಕೃತ ಪ್ರಕಟಣೆ ಹೊರಡಿಸಿದ ಬಳಿಕವಷ್ಟೇ ಇವುಗಳು ಮೌಲ್ಯಯುತವಾಗಿರುತ್ತವೆ. 

ಎಟಿಎಂಗಳಿಗೆ ತುಂಬುವ ಸವಾಲು
ನೋಟುಗಳನ್ನು ಎಟಿಎಂಗಳಿಗೆ ತುಂಬುವ ಕೆಲಸ ಸವಾಲಿನದ್ದು. ದೇಶಾದ್ಯಂತ ಸದ್ಯ 2.2 ಲಕ್ಷ ಎಟಿಎಂಗಳಿವೆ. ಇವುಗಳಿಗೆ ನೋಟುಗಳನ್ನು ಪೂರೈಸಲು ಆರ್‌ಬಿಐನಲ್ಲಿ 7 ನೋಂದಾಯಿತ ಲಾಜಿಸ್ಟಿಕ್‌ ಕಂಪನಿಗಳಿವೆ. ಇವುಗಳಲ್ಲಿನ ಸಿಬ್ಬಂದಿಗಳು ದೇಶಾದ್ಯಂತ 8,800 ನಗದು ವ್ಯಾನ್‌ಗಳ ಮೂಲಕ ಎಟಿಎಂಗಳಿಗೆ ಹಣವನ್ನು ಪೂರೈಸುತ್ತವೆ. ಪ್ರತಿ ವಾಹನಗಳಲ್ಲಿ 5 ಮಂದಿ ಸಿಬ್ಬಂದಿ ಇತ್ತು ಇಬ್ಬರು ಸಶಸ್ತ್ರ ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ಸಿಬ್ಬಂದಿ ಇರುತ್ತಾರೆ. ಈ ವಾಹನಗಳು ಪರಿಶೀಲನೆ ಆದ ಬಳಿಕವೇ ಸೇವೆಗೆ ನಿಯುಕ್ತಿಯಾಗುತ್ತವೆ. ಪ್ರತಿ ಸಿಬ್ಬಂದಿ ಗುರುತು-ಮಾಹಿತಿ, ಹಣದ ಮೊತ್ತ ಇತ್ಯಾದಿಗಳು ದಾಖಲೆಯಾಗಿರುತ್ತವೆ. ಗ್ರಾಮಾಂತರ ಪ್ರದೇಶಗಳಲ್ಲಿ ವಾರಕ್ಕೆ 1 ಬಾರಿ ಎಟಿಎಂಗಳಿಗೆ ಹಣ ಭರ್ತಿ ಮಾಡಿದರೆ, ಉಳಿದೆಡೆಗಳಲ್ಲಿ ವಾರಕ್ಕೆ ಎರಡು, ಮೂರು ಬಾರಿ ಹಣ ಭರ್ತಿ ಮಾಡಲಾಗುತ್ತದೆ. ಇನ್ನು ಜಮ್ಮು ಮತ್ತು ಕಾಶ್ಮೀರ ಈಶಾನ್ಯ ರಾಜ್ಯಗಳಲ್ಲಿ ವಾಹನ ಹೊರತಾಗಿ ಹೆಲಿಕಾಪ್ಟರ್‌ ಗಳ ಮೂಲಕವೂ ನೋಟುಗಳನ್ನು ಸಾಗಾಟ ಮಾಡಿ ಎಟಿಎಂಗೆ ತುಂಬಲಾಗುತ್ತದೆ. 

ಎಟಿಎಂ ಹೇಗಿರುತ್ತೆ? 
ಪ್ರತಿ ಎಟಿಎಂಗಳ ಒಳಗೆ 4 ಕಂಟೇನರ್‌ಗಳು ಇರುತ್ತವೆ. ಪ್ರತಿ ಕಂಟೇನರ್‌ಗಳಲ್ಲಿ 2500 ನೋಟುಗಳನ್ನು
ತುಂಬಬಹುದು. ಒಟ್ಟಾರೆ 10 ಸಾವಿರ ನೋಟುಗಳನ್ನು ಇಡಬಹುದು. ಪ್ರತ್ಯೇಕ ಸಾಫ್ಟವೇರ್‌ ಇದಕ್ಕಿದ್ದು,
ಉಪಗ್ರಹದ ಮೂಲಕ ಬ್ಯಾಂಕಿಂಗ್‌ ವ್ಯವಸ್ಥೆಗೆ ಸಂಪರ್ಕವನ್ನು ಹೊಂದಿರುತ್ತದೆ. 


Trending videos

Back to Top