CONNECT WITH US  

ರಂಗ-ಅಹಂಕಾರದ ವಸ್ತ್ರಾಪಹರಣ

ಅವಳು ಕೇಳುತ್ತಾಳೆ, "ಯಾಕೆ ಹೆಣ್ಮಕ್ಕಳು ಯಕ್ಷಗಾನದಲ್ಲಿ ಪಾತ್ರ ಮಾಡಬಾರದು?'ಅವನು ಮೌನವಾಗುತ್ತಾನೆ.
"ನನ್ನ ಮಾತಿಗೆ ಉತ್ತರವೇ ಕೊಡಲಿಲ್ಲ' ಅಂತ ಮತ್ತೆ ಕೇಳುತ್ತಾಳೆ.
ಅವನು ಹೇಳುತ್ತಾನೆ, "ನೀರಿನಲ್ಲಿ ನಡೆದು ನೆಲದಲ್ಲಿ ಮುಳುಗಲಿಕ್ಕಾಗೋದಿಲ್ಲ. ಗಾಳಿಯನ್ನು ಕುಡಿದು ನೀರನ್ನು ಉಸಿರಾಡಲಿಕ್ಕಾಗುವುದಿಲ್ಲ'.

ಅವಳು ಕೇಳುತ್ತಾಳೆ, "ಮೊನ್ನೆ ಜಟಾಯು ಮೋಕ್ಷ ಪ್ರಸಂಗ ನೋಡಿದೆ. ಅದರಲ್ಲಿ ಜಟಾಯು ಪಾತ್ರ ಮಾಡಿದವ ಮನುಷ್ಯ ಅಂತ ಗೊತ್ತಿದ್ದರೂ ಅವನ ರೆಕ್ಕೆಯನ್ನು ರಾವಣ ಕತ್ತರಿಸಿ ಪ್ರಸಂಗದ ಅಭಿನಯ ಕಂಡು ನನ್ನ ರೆಕ್ಕೆಯೇ ಕತ್ತರಿಸಿದಂತಾಯಿತು'.

-ಹೀಗೆ ಅವನಿಗೂ ಅವಳಿಗೂ ಮಾತುಕತೆ ನಡೆಯುತ್ತದೆ, ತುಂಡು ತುಂಡಾಗಿ. ಅವನು ಕೇಳುವುದಿಲ್ಲ, ಅವಳು ಬಿಡುವುದಿಲ್ಲ. ಅವನು ಯಕ್ಷಗಾನ ಮೇಳದ ಅನುಭವಿ ಸ್ತ್ರೀವೇಷಧಾರಿ. ಅವಳು ಆಗಷ್ಟೇ ಯಕ್ಷಗಾನಕ್ಕೆ ಬಂದ ಉದಯೋನ್ಮುಖ ಗಂಡುವೇಷಧಾರಿ. ರಂಗದ ಮೇಲೆ ಹೆಣ್ಣಾಗಿ, ನಾಜೂಕು ಪ್ರದರ್ಶಿಸುವ ಅವನಿಗೆ ರಂಗದಾಚೆ ನಾಜೂಕಿನ ಹೆಣ್ಣನ್ನು ಯಕ್ಷರಂಗದಲ್ಲಿ ಸಹಿಸಿಕೊಳ್ಳಲು ಮನಸ್ಸಿಲ್ಲ. ಒಂದು ರಂಗದಲ್ಲಿ ಗಂಡಸಿನ ಅಧಿಪತ್ಯವೇ ನಡೆಯಬೇಕು, ಅದೇ ನಡೆಯುತ್ತದೆ ಅನ್ನುವುದನ್ನು ಯಕ್ಷಗಾನ ಪ್ರಸಂಗ, ಮೇಳ, ರಾಜಕೀಯದ ಹಿನ್ನೆಲೆಯಲ್ಲಿ ಪರಿಶೋಧಿಸುವ ನಾಟಕ- ಅಕ್ಷಯಾಂಬರ.

ನಮಗೆಲ್ಲಾ ಗೊತ್ತಿರುವ ದ್ರೌಪದಿಯ ಕತೆಯನ್ನು ಇಟ್ಟುಕೊಂಡು ಒಂದೂವರೆ ಗಂಟೆಗಳ ಕಾಲ ಕತೆ ಸಾಗುತ್ತದೆ. ಮಹಾಭಾರತದಲ್ಲಿ ದ್ರೌಪದಿಯ ಮುಖೇನ ನಮಗೆ ಕಂಡ ಸ್ತ್ರೀ ಶೋಷಣೆ, ಇವತ್ತಿನ ಕಾಲದಲ್ಲಿ ಬೇರೆ ಬೇರೆ ರೀತಿಯಲ್ಲಿ ತೋರುವ ಸ್ತ್ರೀಶೋಷಣೆ- ಇವೆರಡೂ ಇಲ್ಲಿ ಒಂದು "ಅಕ್ಷಯಾಂಬರ' ಪ್ರಸಂಗದ ಮೂಲಕ ಅದ್ಭುತವಾಗಿ, ಅತ್ಯಂತ ಸೂಕ್ಷ್ಮವಾಗಿ, ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ಯಕ್ಷಗಾನವನ್ನು ಅಭ್ಯಾಸ ಮಾಡಲು ಹೋದ ಶರಣ್ಯ ರಾಮಪ್ರಕಾಶ್‌, ಅವರು ಸ್ವತಃ ಯಕ್ಷಗಾನ ಕಲಿತು, ಅಲ್ಲಿನ ರಾಜಕೀಯವನ್ನು ನಾಟಕವಾಗಿಸಿ, ತಾವೇ ಆ ಪಾತ್ರವನ್ನು ವಹಿಸಿ "ಅಕ್ಷಯಾಂಬರ'ವನ್ನು ನಮ್ಮೆದುರು ತಂದಿದ್ದಾರೆ. ಒಂದು ಲೆಕ್ಕದಲ್ಲಿ ಇದು ಅವರ ಅನುಭವವೇ ನಾಟಕವಾದ ಪರಿ. ಮೊನಚು ಮಾತು, ಸಹಜ ಅಭಿನಯ ಮತ್ತು ಅಪರೂಪವೆನ್ನಿಸತಕ್ಕ ನಿರ್ದೇಶನದಿಂದ ಶರಣ್ಯ ಅವರ ಈ ಚೊಚ್ಚಲ ಕೃತಿ ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟವೆನಿಸುತ್ತದೆ.

ದ್ರೌಪದಿಯ ಬದುಕಿನ ಘಟನೆಗಳನ್ನು ಇಡೀ ನಾಟಕಕ್ಕೆ ಸಂವಾದಿಯಾಗಿಸಿ, ವಸ್ತ್ರಾಪಹರಣ ಸನ್ನಿವೇಶವನ್ನುಪುರುಷಹಂಕಾರ ಹರಣಕ್ಕೆ ರೂಪಕವಾಗಿಸಿ ಶರಣ್ಯ ಆಸಕ್ತಿಕರವಾಗಿ ರಂಗದ ಮೇಲೆ ಕತೆ ಹೇಳುತ್ತಾರೆ. ಅದಕ್ಕೋಸ್ಕರ ರಂಗವನ್ನು ಮೂರ್ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾರೆ. ಯಕ್ಷಗಾನದ ಸಾಮಗ್ರಿಗಳು, ಕನ್ನಡಿ, ವೇಷಭೂಷಣಗಳನ್ನು ಕತೆಯ ಭಾಗವಾಗಿ ಇಟ್ಟಿದ್ದಾರೆ. ಹಿಮ್ಮೇಳ, ಪದ್ಯ, ಯಕ್ಷಗಾನ ಕುಣಿತ, ವೇಷಗಾರಿಕೆ, ಬಣ್ಣಗಾರಿಕೆ, ಬೆಳಕುಗಳೆಲ್ಲಾ ಕತೆಗೊಂದು ಅಪೂರ್ವ ಪ್ರಭಾವಳಿಯನ್ನು ಒದಗಿಸಿವೆ. ಕತೆ ಕೆಲವೊಮ್ಮೆ ಹತ್ತಾರು ವರ್ಷಗಳ ಹಿಂದೆ ಜಿಗಿದು, ಮತ್ತೆ ಚೌಕಿಗೆ ನೆಗೆದು, ಮರುಕ್ಷಣ ರಂಗಸ್ಥಳಕ್ಕೆ ಬಂದು ಇಡೀ ಚಲನೆಯಿಂದಲೂ ಕತೆಯನ್ನು, ನೋಡುವಿಕೆಯನ್ನು ಇದು ರೋಚಕವಾಗಿಸಿದೆ. ಒಂದು ರಂಗಕೃತಿ, ಮಾತಿನ ಮಂಟಪವಲ್ಲ, ಅದರ ಮೌನವೂ ಅದರ ಅಭಿವ್ಯಕ್ತಿಯೇ ಎನ್ನುವುದನ್ನೆಲ್ಲಾ ಸ್ವತಃ ಶರಣ್ಯ ಸೂಕ್ಷ್ಮವಾಗಿ ಅರಿತು, ಬೆರೆಸಿರುವುದರಿಂದ ಈ ನಾಟಕ ಕನ್ನಡದ ಹೊಸ ತಲೆಮಾರಿನ ಅತ್ಯುತ್ತಮ ನಾಟಕಗಳಲ್ಲೊಂದಾಗಿ ಹೊರಹೊಮ್ಮುತ್ತದೆ.

ಅಭಿನಯದ ವಿಷಯದಲ್ಲಿ ನಾಟಕವನ್ನು ಹೆಚ್ಚಿ ಆಕ್ರಮಿಸಿಕೊಳ್ಳುವುದು ಮುಖ್ಯ ಪಾತ್ರಧಾರಿ ಪ್ರಸಾದ್‌ ಚೇರ್ಕಾಡಿ. ಸ್ವತಃ ಯಕ್ಷಗಾನ ಕಲಾವಿದ ಮತ್ತು ಭಾಗವತರಾಗಿರುವುದರಿಂದ ಪ್ರಸಾದ್‌ಗೆ ಆ ಪಾತ್ರದೊಳಗೆ ಹೊಕ್ಕು ಸ್ತ್ರೀಯಾಗುವುದು, ಥಟ್ಟನೆ ಚೌಕಿಯಲ್ಲಿ ಪುರುಷಹಂಕಾರಿಯಾಗುವುದು ಲೀಲಾಜಾಲವಾಗಿಬಿಡುತ್ತದೆ. ಧ್ವನಿಯ ಏರಿಳಿತ, ನಡುಗೆಯ ಬೇರೆ ಬೇರೆ ಮಜಲುಗಳು, ಗತ್ತು, ಆವೇಶ, ಶೃಂಗಾರ, ಸುಶ್ರಾವ್ಯ ಹಾಡುಗಾರಿಕೆಗಳ ಮೂಲಕ ಆ ಪಾತ್ರವನ್ನು ಒಳಗೊಳ್ಳುವುದಕ್ಕೆ ಅವರಿಗೆ ಅಚ್ಚರಿಯ ರೀತಿಯಲ್ಲಿ ಸಾಧ್ಯವಾಗಿದೆ. ಹೊರ ಜಗತ್ತಿನಿಂದ ಬಂದು, ರಂಗದ ಒಳಹೊರಗಿನ ರಾಜಕೀಯವನ್ನು ಅರ್ಥ ಮಾಡಿಕೊಳ್ಳುತ್ತಾ ಹೋಗುವ ಪಾತ್ರವನ್ನು ಶರಣ್ಯ ನಿರ್ವಹಿಸಲು ಪ್ರಯತ್ನಿಸಿದ್ದಾರೆ. ಆದರೆ ಯಕ್ಷಗಾನದ ಕೆಲ ನಾಜೂಕುಗಳನ್ನು ರೂಢಿಸಿಕೊಂಡು ಯಕ್ಷಗಾನದ ನುರಿತ ಪಟುವಿನಂತೆ ನರ್ತನ, ಅಭಿನಯದಿಂದ ಹದಗೊಳ್ಳಲು ಕೆಲ ಪ್ರದರ್ಶನಗಳು ಬೇಕಾಗಬಹುದೇನೋ?

ರಂಗಭೂಮಿಯ ಮೂಲಕ ಯಕ್ಷರಂಗವನ್ನು ಶೋಧಿಸುವ ಈ ಅಪರೂಪದ ಪ್ರಯೋಗ, ರಂಗಭೂಮಿಯ ಹೊಸ ಸಾಧ್ಯತೆಯನ್ನು ಹೊಸ ತಲೆಮಾರಿಗೆ ತೆರೆದು ತೋರಿಸಿದೆ. ಇದು ಪ್ರಾದೇಶಿಕ ರಂಗಭೂಮಿಯ ಸದ್ಯದ ಹೊಸ ದಿಕ್ಕು. ಆ ದಿಕ್ಕನ್ನು ಶರಣ್ಯ ನಿಜವಾಗಿಯೂ ತೋರಿಸಿಕೊಟ್ಟಿದ್ದಾರೆ.

-ವಿಕಾಸ ನೇಗಿಲೋಣಿ


Trending videos

Back to Top