CONNECT WITH US  

ಬರೆದೇ ಬದುಕುತ್ತೇನೆ

ತಕ್ಕಡಿಯಲ್ಲಿ ತೂಗಬೇಕೆನಿಸಿದ ಭೂತ, ವರ್ತಮಾನ

ಬರವಣಿಗೆಯನ್ನೇ ಉದ್ಯೋಗ ಮಾಡಿಕೊಂಡು ಬದುಕು ಸಾಗಿಸುತ್ತೇನೆ ಎಂದು ದೃಢವಾಗಿ ಹೇಳಲಾರದ ಕಾಲವೊಂದಿತ್ತು; ಇದು ಭೂತಕಾಲದ ಮಾತು. ಆದರೆ, ಅಂದಿನ ಅಂಥ ಅನಿಶ್ಚಯದ ದಿನಗಳಲ್ಲೂ ತುಂಬ ಮೌಲಿಕ ಕೃತಿಗಳು ಹೊರಬಂದವು. ಕೆಲವು ಲೇಖಕರು ತಮ್ಮ ಇಡೀ ಜೀವನವನ್ನು ಬರವಣಿಗೆಗೆ ಮೀಸಲಿರಿಸಿ ದುಡಿದರು ನಿಜ; ಜೊತೆಗೆ ದಣಿದರು ಎಂದರೆ ಇನ್ನೂ ಹೆಚ್ಚು ಸೂಕ್ತ.

ಆದರೆ, ಇಂದಿನ ಬರವಣಿಗೆಯ ಕುರಿತಂತೆ ಅದನ್ನು ನಂಬುವ ಬಗೆಯ ಸ್ವರೂಪ ಬದಲಾಗಿದೆ. ಅನಿಶ್ಚಿತತೆ ಇಂದಿಗೂ ಇದೆ; ಆದರೆ, ಅದೃಷ್ಟ ಯಾರಿಗೆ ಒಲಿಯುತ್ತದೆಯೋ ಆತ ತನ್ನ ಒಂದೇ ಒಂದು ಕೃತಿಯಿಂದ ಜನಪ್ರಿಯನಾಗಿ ಕೈತುಂಬ ಸಂಬಳ ಬರುವ ಉದ್ಯೋಗ ಬಿಟ್ಟು ಮುಂದಕ್ಕೆ ಕೃತಿ ರಚನೆಗೇ ತೊಡಗಿಸಿಕೊಳ್ಳುವಷ್ಟರ ಮಟ್ಟಿಗೆ ಇಂದಿನ ಮಾರುಕಟ್ಟೆ ಸುಧಾರಿಸಿದೆ.

"ಲಾಸ್ಟ್‌ ಲೆಕ್ಚರ್‌' ಪುಸ್ತಕವನ್ನು ಕನ್ನಡಕ್ಕೆ ತಂದು ಯಶಸ್ಸು ಕಂಡವರು ಮತ್ತೆ ಅಂಥದೇ ಪ್ರಯತ್ನಗಳಿಗೆ ಎಡತಾಕಲು ಆರಂಭಿಸಿದರು; ಚೇತನ್‌ ಭಗತ್‌ ಸಾಫ್ಟ್ವೇರ್‌ ಉದ್ಯಮ ಬಿಟ್ಟು ಈಗ ಪೂರ್ಣಾವಧಿ ಬರಹಗಾರರಾಗಿರುವುದು ತಿಳಿದೇ ಇದೆ. ಇವರಿಗೆ ದಕ್ಕಿದ ಒಂದು ಯಶಸ್ಸು ಇಂದಿಗೂ ಇವರನ್ನು ಮುನ್ನಡೆಸುತ್ತಲೇ ಇದೆ. ಆದರೆ, ಇವರ ಕೃತಿಗಳನ್ನು ವಿಮಾನದಲ್ಲಿ ಪಯಣಿಸುವ ವೇಳೆ ಓದಲಿಕ್ಕೆ ಮಾತ್ರ ಸೀಮಿತಮಾಡಿಕೊಂಡಿರುವ ದೊಡ್ಡ ಗುಂಪೂ ಇದೆ.

ಇದು ಈ ಬರಹಗಾರರನ್ನು ತಟ್ಟಿದೆಯೋ ಇಲ್ಲವೋ ಗೊತ್ತಿಲ್ಲ; ತಟ್ಟಿದ್ದರೂ ದುಡ್ಡಿನ ಎದುರು ಜನಪ್ರಿಯ, ಕಲಾತ್ಮಕ ಥಿಯರಿಗಳು ತಲೆ ಒಳಗೆ ನುಸುಳುವುದು ಕಷ್ಟಕರವಾದ ಸಂಗತಿ. ಹಿಂದಿನ ಕಾಲ ಹಾಗಿರಲಿಲ್ಲ. ಬರೆದದ್ದೆಲ್ಲವೂ ಮೌಲಿಕವಾಗಿರುತ್ತಿದ್ದವು. ಅಂದೂ ಮಾರುಕಟ್ಟೆ ಎಂಬುದೊಂದಿತ್ತು. ಇಷ್ಟಿದ್ದರೂ ಲೇಖಕರ ಬದುಕು ತತ್ತರಿಸುತ್ತಿತ್ತು. ಹೊತ್ತೂತ್ತಿನ ಚಿಂತೆ ಕಾಡುತ್ತಿತ್ತು. ಇದರ ನಡುವೆಯೂ ಅವರು ಬರೆದರು, ಬರೆದರು, ಬರೆದರು. ಬರೆದೇ ಬದುಕಿದರು ಕೂಡ.

ಐತಿಹಾಸಿಕ ಕಥನ ನಿರೂಪಣೆಗಳ ಭಾಷೆಗೆ ಹೊಸ ಓಘ ದಕ್ಕಿಸಿಕೊಟ್ಟ ತ.ರಾ. ಸುಬ್ಬರಾಯರ ಜೀವಿತ ಕಥನದ ಭಾಗಗಳನ್ನು ಅನುಕ್ರಮವಾಗಿ ಜೋಡಿಸಿಕೊಂಡು ಈಚೆಗೆ ಡ್ರಮಾಟ್ರಿಕ್ಸ್‌ ತಂಡದ ಕಲಾವಿದರು ಸೇವಾ ಸದನದಲ್ಲಿ "ಬರೆದೇ ಬದುಕುತ್ತೇನೆ' ಎಂಬ ನಾಟಕ ಪ್ರದರ್ಶಿಸಿದರು. ಈ ಪ್ರಯೋಗ, ಬರವಣಿಗೆಗೆ ಸಂಬಂಧಿಸಿದಂತೆ ಮೇಲೆ ಚಿತ್ರಿಸಿದ ಎರಡು ಕಾಲಘಟ್ಟಗಳ ಸ್ಥಿತಿಗತಿ ಮತ್ತು ಸವಾಲುಗಳನ್ನು ನೆನಪಿಗೆ ತರಿಸಿತು.

ತ.ರಾ.ಸು. ಸೃಷ್ಟಿಸುತ್ತಿದ್ದ ಕಥನಗಳು ಅವರನ್ನು ಪೂರಾ ಆವರಿಸಿಕೊಳ್ಳುತ್ತಿದ್ದವು. ಮನೆಯ ವಹಿವಾಟುಗಳಿಗೆ ಅನಿವಾರ್ಯವಾಗಿ ಓಗೊಡುತ್ತಿದ್ದರೂ ಅವರ ಮನಸ್ಸು ಮಾತ್ರ ಬರವಣಿಗೆಯಲ್ಲೇ ಲೀನ. "ಊಟ' ಕಥನವನ್ನು ನಿರೂಪಿಸುತ್ತಿರುವ ವೇಳೆ ಊಟ ಕಲಸಿ ತಂದು ಭಂಗ ತಂದಿದ್ದಕ್ಕಾಗಿ ತ.ರಾ.ಸು., ಪತ್ನಿಯ ಕೆನ್ನೆಗೆ ಬಾರಿಸುತ್ತಾರೆ. ಈ ಮಟ್ಟದ ಆವಿರ್ಭಾವವಿರುತ್ತಿತ್ತು.

ತಾವು ಅಂದುಕೊಂಡದ್ದನ್ನು ಅಂದುಕೊಂಡಂತೆ ಚಿತ್ರಿಸಿದ ಮೇಲೆ ತ.ರಾ.ಸು. ವಾಸ್ತವಕ್ಕೆ ಮರಳುತ್ತಿದ್ದರು. ಅವರಿಗೆ ತಮ್ಮ ತಪ್ಪಿನ ಅರಿವಾಗುತ್ತಿತ್ತು. ಆಗ ಸಾಂಸಾರಿಕ ತೊಡಕುಗಳಿಗೆ ಕಿವಿಗೊಡುತ್ತಿದ್ದರು. ಎಂಥ ಕಡುಕಷ್ಟದಲ್ಲೂ ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಳ್ಳುತ್ತಿರಲಿಲ್ಲ. ಇದರ ರಂಗರೂಪ- ನಿರ್ದೇಶನ ರಾಘವೇಂದ್ರ ಅವರದು; ತ.ರಾ.ಸು. ಅವರ ಜೀವಿತ ಕಥನದ ಭಾಗಗಳನ್ನು ತ.ರಾ.ಸು. ಆತ್ಮಕಥನ "ಹಿಂತಿರುಗಿ ನೋಡಿದಾಗ'ದಿಂದ ಹೆಕ್ಕಿ ಒಂದು ಆವರಣವನ್ನೇನೊ ಕಟ್ಟಿಕೊಂಡಿದ್ದರು. 

ಮೊದಲಿನಿಂದಲೂ ಮೂಗಿನ ತುದಿಯಲ್ಲೇ ಕೋಪವಿರಿಸಿಕೊಂಡಿರುತ್ತಿದ್ದ ತ.ರಾ.ಸು., "ನಾಗರಹಾವು' ಕಾದಂಬರಿಯಲ್ಲಿ ರಾಮಾಚಾರಿ ಪಾತ್ರ ಸೃಷ್ಟಿಸಿದ ಬಗೆ, ಅವರಲ್ಲಿದ್ದ ರಾಷ್ಟ್ರಪ್ರೇಮ, ಸಿಗರೇಟ್‌ ಬಗೆಗೆ ಅವರಿಗಿದ್ದ ತೀವ್ರತರವಾದ ವ್ಯಾಮೋಹ, ಬರವಣಿಗೆಗೆ ಸಂಬಂಧಿಸಿದಂತೆ ಅವರ ತಲ್ಲೀನತೆ, ಅವರಿಗೆ ಬೆಂಬಲವಾಗಿ ನಿಂತ ಪತ್ನಿ ಎಲ್ಲವೂ ಬಿಡಿಬಿಡಿಯಾಗಿ ಚೆಂದ ಅನಿಸಿತು.

ಆದರೆ, ಈ ಎಲ್ಲವುಗಳನ್ನು ತ.ರಾ.ಸು. ಅವರೊಂದಿಗೇ ನೇರ ಪ್ರಶ್ನೋತ್ತರ ನಡೆಸುತ್ತ ಮತ್ತು ಆ ಮೂಲಕ ದೃಶ್ಯಗಳು ತೆರೆದುಕೊಳ್ಳುವಂತೆ ಮಾಡಿದ್ದು ಬಿಗಿಬಂಧವನ್ನು ರಾಘವೇಂದ್ರ ಅವರೇ ಸಡಿಲಿಸಿದರೇನೋ ಅನಿಸಿತು. ಪ್ರಶ್ನೋತ್ತರ ಬಿಟ್ಟು ನೇರವಾಗೇ ನಿರೂಪಿಸಿದ್ದರೆ ನಾಟಕದ ಬಿಗಿಬಂಧ ಸಡಿಲವಾಗುತ್ತಿರಲಿಲ್ಲ. ಇಷ್ಟು ದೃಶ್ಯಗಳನ್ನು ಕಟ್ಟಿದ ರಾಘವೇಂದ್ರ ಕಡೆಯಲ್ಲಿ ತ.ರಾ.ಸು. ಅವರ ಅಷ್ಟೂ ಕೃತಿಗಳನ್ನು ಒಬ್ಬ ನಿರೂಪಕಕಾರರಿಂದ ಭಾಷಣದಂತೆ, ಸ್ತೋತ್ರದಂತೆ ಹೇಳಿಸಿದ್ದು ಪರಮವಾಚ್ಯ ಅನಿಸಿತು. 

 ಇಷ್ಟರ ಹೊರತಾಗಿ ನಟರು, ವಿಶೇಷವಾಗಿ ತ.ರಾ.ಸು. ಅವರ ಪಾತ್ರ ನಿರ್ವಹಿಸಿದ ಚಂದನ್‌ ಶ್ಲಾಘನೆಗೆ ಅರ್ಹರು. ಉಳಿದಂತೆ ಅ.ನ.ಕೃ. ಆಗಿ ಸಿದ್ದು ಗಮನ ಸೆಳೆದರು. ಲಕ್ಷ್ಮಣ್‌ ಪ್ರಜಾರಿ, ಚಿಕ್ಕ ಚಂದನ್‌, ಸಿಂಧು ಪಾತ್ರಳಿಗೆ ನ್ಯಾಯ ಒದಗಿಸಿದರು.

* ಎನ್‌ .ಸಿ ಮಹೇಶ್‌

Trending videos

Back to Top