CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಟ್ರಕ್‌ ಟಿಫಿನ್‌

ನಡೆದಾಡುವ ಹೋಟೆಲ್ಲು, ಇಲ್ಲಿ ಕಾಫಿಯೇ ಸ್ಪೆಷೆಲ್ಲು

ಬೆಂಗಳೂರಿಗರಿಗೆ ಫ‌ುಡ್‌ ಟ್ರಕ್‌ನ ಕಲ್ಪನೆ ಹೊಸತೇನಲ್ಲ. ಆದರೆ ಈ ಫ‌ುಡ್‌ ಟ್ರಕ್‌ ಕಳೆದ 20 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಏಕಕಾಲಕ್ಕೆ ಸರ್ಕಾರಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದ ಸಹೋದ್ಯೋಗಿಗಳು ಸೇರಿ ಶುರುಮಾಡಿದ ಫ‌ುಡ್‌ಟ್ರಕ್‌ ಇದು...

ಬೆಳ್ಳಂಬೆಳಗ್ಗೆ ಗಾಂಧಿನಗರದ ರಸ್ತೆಗಳಲ್ಲಿ ವಾಕಿಂಗ್‌ ಮಾಡುವವರು, ಹತ್ತಿರದಲ್ಲೇ ಇರುವ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಸ್ಸು ಹಿಡಿಯಲು ಧಾವಂತದಲ್ಲಿರುವವರು, ಈಗ ತಾನೇ ಊರಿಂದ ವಾಪಸ್ಸಾಗುತ್ತಿರುವವರು ಎಲ್ಲರೂ ಬೆಳಗ್ಗಿನ ಉಪಾಹಾರ ಸೇವಿಸಲು ಬರುವ ಜಾಗ ಕಾಫಿ ಬೋರ್ಡ್‌ ಫ‌ುಡ್‌ ಟ್ರಕ್‌.

ನಮಗೆ ಫ‌ುಡ್‌ ಟ್ರಕ್‌ನ ಕಲ್ಪನೆ ಹೊಸತೇನಲ್ಲ. ಆದರೆ, ಈ ಫ‌ುಡ್‌ ಟ್ರಕ್‌ ಕಳೆದ 20 ವರ್ಷಗಳಿಂದ ಹಸಿವು ತಣಿಸುತ್ತಿದೆ. ಅವೆನ್ಯೂ ರಸ್ತೆ ಕೆ.ಜಿ. ರಸ್ತೆಗೆ ಸೇರುವ ಜಾಗದಲ್ಲೊಂದು ಆಂಜನೇಯ ಸ್ವಾಮಿ ದೇವಸ್ಥಾನವಿದೆಯಲ್ಲ, ಅದರ ಹಿಂಭಾಗದಲ್ಲಿಯೇ ಈ ಫ‌ುಡ್‌ಟ್ರಕ್‌ನ ಠಿಕಾಣಿ. ಈ ಫ‌ುಡ್‌ ಟ್ರಕ್‌ ಹಿಂದೊಂದು ಕಥೆಯೇ ಇದೆ.

ಶುರುವಾಗಿದ್ದು ಹೀಗೆ...: 1995ರಲ್ಲಿ ಕಾಫಿ ಬೋರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ಗೆಳೆಯರು ಆಭದ್ರತೆಯ ಕಾರಣದಿಂದ ಕೆಲಸದಿಂದ ಸ್ವಯಂ ನಿವೃತ್ತಿ ಪಡೆಯುತ್ತಾರೆ. ಜೀವನೋಪಾಯಕ್ಕೆ ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದಾಗ ಕೈ ಹಿಡಿದಿದ್ದೇ ಈ ಫ‌ುಡ್‌ ಟ್ರಕ್‌ ಐಡಿಯಾ. ಕಾಫಿ ಮಂಡಳಿಗೇ ಸೇರಿದ್ದ ಎರಡೂ¾ರು ಟ್ರಕ್‌ಗಳು ಬಳಕೆಯಾಗದೇ ಇದ್ದ ಸಂಗತಿ ಇವರಿಗೆ ತಿಳಿದಿತ್ತು.

ಉಪಯೋಗವಿಲ್ಲದೆ ಬಿದ್ದಿದ್ದ ಟ್ರಕ್‌ ತಮಗಾದರೂ ಉಪಯೋಗವಾಗಲಿ ಎಂದು ಎಲ್ಲಾ ಗೆಳೆಯರು ಹಣ ಹೂಡಿ ಟ್ರಕ್‌ ಅನ್ನು ಕೊಂಡು ಕೊಂಡರು. ಅಲ್ಲಿಂದ ಅವರ ಫ‌ುಡ್‌ ಟ್ರಕ್‌ ನಡೆಯುತ್ತಲೇ ಬಂದಿದೆ. ಈಗ ಇವರೇ ಒಂದು ಪುಟ್ಟ ಸಂಘ ಕಟ್ಟಿಕೊಂಡಿದ್ದಾರೆ. ಅಬ್ದುಲ್‌ ಶುಕೂರ್‌ ಅವರು ಈ ಸಂಘದ ಕಾರ್ಯದರ್ಶಿ.

ಫ‌ುಡ್‌ ಟ್ರಕ್‌ ಮೆನು: ಬೆಳಗ್ಗಿನ ಉಪಾಹಾರದಲ್ಲಿ ಇರೋದು ಬರಿ ಎರಡೇ ಬಗೆ. ಖಾರಾಬಾತ್‌ ಮತ್ತು ಕಾಫಿ. ಅಷ್ಟೇನಾ ಎಂದುಕೊಳ್ಳದಿರಿ. ಅದನ್ನು ತಿನ್ನಲೆಂದೇ ಕಿಕ್ಕಿರಿದು ನೆರೆಯುವ ಜನಸಂದಣಿಯನ್ನು ನೀವೊಮ್ಮೆ ನೋಡಬೇಕು! ಇಲ್ಲಿ ಸಿಗೋ ಖಾರಾಬಾತ್‌ ತುಂಬಾ ರುಚಿಯಾಗಿರುತ್ತೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಗಟ್ಟಿಯಲ್ಲದ, ನೀರು ನೀರೂ ಆಗಿರದೆ ಒಂದು ಹದವಾಗಿರುವ ಖಾರಾಬಾತ್‌ ತಿನ್ನಲು ತುಂಬಾ ಮೃದು.

ಇಲ್ಲಿಗೆ ಬರುವವರಲ್ಲಿ ಅರ್ಧಕ್ಕರ್ಧ ಮಂದಿ ಪರ್ಮನೆಂಟ್‌ ಗಿರಾಕಿಗಳೇ ಆಗಿದ್ದಾರೆ. ಬೆಳಗ್ಗೆ 10 ಗಂಟೆ ತನಕವಷ್ಟೇ ಫ‌ುಡ್‌ ಟ್ರಕ್‌ ತೆರೆದಿರುತ್ತೆ. ಒಮ್ಮೆ ಮುಚ್ಚಿದರೆ ಮತ್ತೆ ತೆರೆಯೋದು ಸಂಜೆ 6ಕ್ಕೆ. ಸಂಜೆಯ ಮೆನುವಿನಲ್ಲಿ ತಟ್ಟೆ ಇಡ್ಲಿ ಒಂದು ಎಕ್ಸ್‌ಟ್ರಾ ಇರುತ್ತೆ. ಆಗಲು ಜನರು ಸಾಲುಗಟ್ಟಿ ನಿಂತಿರುತ್ತಾರೆ. 

ಸ್ಪೆಷಲ್‌ ಕಾಫಿ: ಕಾಫಿ ಮಂಡಳಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಕಾಫಿ ಬಗ್ಗೆ ಹೇಳಿಕೊಡಬೇಕೇ? ಕಾಫಿ ಪುಡಿ ನೋಡಿಯೇ ಅದರ ಗುಣಮಟ್ಟವನ್ನು ಪತ್ತೆಹಚ್ಚಬಲ್ಲರು ಅವರು. ಫ‌ುಡ್‌ ಟ್ರಕ್‌ನಲ್ಲಿ ಸಿಗೋ ಬಿಸಿಬಿಸಿ ಕಾಫಿ ಅವರ ನೈಪುಣ್ಯಕ್ಕೆ ಸಾಕ್ಷಿ. ಕಾಫಿ ಪುಡಿಯನ್ನು ಅವರೇ ತಯಾರಿಸಿಕೊಳ್ಳುತ್ತಾರೆ. ಲಕ್ಷಿನಾರಾಯಣಪುರದಲ್ಲಿ ಅವರದ್ದೇ ಕಾಫಿ ಡಿಪೊ ಇದೆ.

ಅಲ್ಲಿ ಗುಣಮಟ್ಟದ ಕಾಫಿಬೀಜವನ್ನು ಸಂಸ್ಕರಣೆಗೊಳಪಡಿಸಿ ಕಾಫಿಪುಡಿಯನ್ನು ತಯಾರಿಸುತ್ತಾರೆ. ಅಂದಹಾಗೆ, "ಚಿಕ್ಕಪೇಟೆ ಶಾಸಕ ಆರ್‌ವಿ ದೇವರಾಜ್‌ ಅವರು ಕಾಫಿ ಕುಡಿಯೋಕೆ ಇಲ್ಲಿಗೆ ಬರುತ್ತಿರುತ್ತಾರೆ. ಆ ಸಮಯದಲ್ಲಿ ಜನರ ಕುಂದುಕೊರತೆ ಹೇಳಿಕೊಳ್ಳಲು ಸುತ್ತಮುತ್ತಲಿನ ಜನರೆಲ್ಲಾ ಅವರನ್ನು ಮುತ್ತಿಗೆ ಹಾಕುತ್ತಾರಂತೆ. ಆಗ 60- 70 ಕಾಫಿ ಲೋಟಗಳು ಒಮ್ಮೆಗೇ ಖಾಲಿಯಾಗುತ್ತೆ' ಎಂದು ನಗುತ್ತಾ ಹೇಳುತ್ತಾರೆ ಫ‌ುಡ್‌ ಟ್ರಕ್‌ನ ಡಿ. ವೆಂಕಟೇಶ್‌.

ರುಚಿ ರುಚಿ ಏನ್‌ ಸಿಗುತ್ತೆ?: ಬೆಳಗ್ಗೆ ಖಾರಾಬಾತ್‌, ಬಿಸಿಬಿಸಿ ಕಾಫಿ

ಕೇಟರಿಂಗ್‌: ಇವರು ಆರ್ಡರ್‌ಗಳನ್ನೂ ತೆಗೆದುಕೊಂಡು ಪೂರೈಸುತ್ತಾರೆ. ಬೆಂಗಳೂರಿನಲ್ಲಿ ನಡೆಯುವ ಬಹುತೇಕ ಸರ್ಕಾರಿ ಪ್ರಾಯೋಜಿತ ಮೇಳಗಳಲ್ಲೂ ಫ‌ುಡ್‌ ಟ್ರಕ್‌ ಪಾಲ್ಗೊಳ್ಳುತ್ತೆ. ನಿವೃತ್ತಿ ಹೊಂದಿದ್ದರೂ ಕಾಫಿ ಮಂಡಳಿಯೊಂದಿಗೆ ಒಳ್ಳೆಯ ಸಂಬಂಧ ಹೊಂದಿರುವ ಈ ಗೆಳೆಯರಿಗೆ ಮಂಡಳಿಯವರೇ ನಗರದಲ್ಲಿ ನಡೆಯಲಿರುವ ಮೇಳಗಳ ಕುರಿತು ಮುಂಚಿತವಾಗಿ ಮಾಹಿತಿ ನೀಡುತ್ತಾರೆ. ಅಲ್ಲದೆ ಸರ್ಕಾರಿ ಕಾರ್ಯಕ್ರಮಗಳಿದ್ದರೆ ಆಹಾರದ ಆರ್ಡರ್‌ ನೀಡುತ್ತಾರೆ.

ಎಲ್ಲಿ?: ಆಂಜನೇಯ ದೇವಸ್ಥಾನ ಹಿಂಭಾಗ, ಕೆ.ಜಿ. ರಸ್ತೆ, ಗಾಂಧಿನಗರ
ಯಾವಾಗ?: ಬೆಳಗ್ಗೆ 5- 10, ಸಂಜೆ 6- 9

* ಹವನ

Back to Top