ಫಾರ್ಮುಲಾ ಸಾಂಗು ಸಾರ್!
Team Udayavani, Jun 2, 2018, 12:19 PM IST
ಫಾರ್ಮುಲಾಗಳನ್ನು ಬಳಸಿ ಸಿನಿಮಾ ಮಾಡೋದನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಆದರೆ ಇಲ್ಲೊಂದು ವಿಶೇಷ ಹಾಡಿದೆ. ವಿಶೇಷ ಯಾಕೆ ಅಂದರೆ ಇದು ಫಾರ್ಮುಲಾಗಳನ್ನು ಬಳಸಿ ತಯಾರಿಸಲಾಗಿರುವ ಹಾಡು. ಅಕ್ಷರಶಃ ಫಾರ್ಮುಲಾಗಳು! ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಡಿಗೆ ಸಂಗೀತ ಸಂಯೋಜಿಸಿರುವುದಷ್ಟೇ ಅಲ್ಲದೆ ಮ್ಯೂಸಿಕ್ ವಿಡಿಯೋನಲ್ಲಿ ನಟಿಸಿದ್ದಾರೆ.
ಯಾವುದೇ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬಳಿ ಹೋಗಿ ಎಂ1, ಎಂ2 ಅಂತ ಹೇಳಿ ನೋಡಿ. ಅವರು ಬೆಚ್ಚಿ ಬೀಳ್ಳೋದು ಖಂಡಿತ. ಏಕೆಂದರೆ ಎಂ1, ಎಂ2 ಅಂದರೆ ಅದು ಗಣಿತದ ಸಬ್ಜೆಕ್ಟುಗಳು. ವಿದ್ಯಾರ್ಥಿಗಳ ಬೆವರಿಳಿಸುವ ಗಣಿತದ ಸಬ್ಜೆಕ್ಟುಗಳು ಅವು. ಅದರಲ್ಲೂ ಫಾರ್ಮುಲಾಗಳನ್ನು ನೆನಪಿಟ್ಟುಕೊಳ್ಳುವುದೇ ತ್ರಾಸದಾಯಕವಾದ ಸಂಗತಿ. ಇದೇ ಕಾರಣಕ್ಕೆ ಫಾರ್ಮುಲಾಗಳ ಭಯ ಹೋಗಲಾಡಿಸುವ ಉದ್ದೇಶದಿಂದ ಸಾಫ್ಟ್ ಸ್ಕಿಲ್ ಟ್ರೇನರ್ ಪ್ರದೀಪ್ ದೊಡ್ಡಯ್ಯ ಅವರು ಈ ಹಾಡನ್ನು ಪ್ರಸ್ತುತಪಡಿಸಿದ್ದಾರೆ. ಈ ಹಾಡಿನಲ್ಲಿ ಗಣಿತದ ಹಾಡುಗಳನ್ನು ರ್ಯಾಪ್ ಮಾದರಿಯಲ್ಲಿ ಬಳಸಿದ್ದಾರೆ. ಅಂದ ಹಾಗೆ “ದಯವಿಟ್ಟು ಗಮನಿಸಿ’, ಈ ಹಾಡನ್ನು ಹಾಡಿರುವವರು ನಟ, ಗಾಯಕ ವಸಿಷ್ಠ ಸಿಂಹ. ಈ ಎಂಜಿನಿಯರಿಂಗ್ ಹಾಡಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಜೊತೆ ಪ್ರದೀಪ್ ದೊಡ್ಡಯ್ಯ ಅವರೂ ಕಾಣಿಸಿಕೊಂಡಿದ್ದಾರೆ.