CONNECT WITH US  

ಮೋಕ್ಷ-ಮೌನಿ: ಕಥೆಗಳು ಸುರುಳಿ ಸುತ್ತಿದ ರಂಗರೂಪ

ರಂಗಭೂಮಿಯ ಸೆಳೆತಕ್ಕೆ ಸಿಕ್ಕಿದವರು, ಪ್ರಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಬರವಣಿಗೆಗೂ ತಮ್ಮನ್ನು ತೆತ್ತುಕೊಂಡರೆ, ತಾವು ಯಾವುದೇ ಪ್ರಾಕಾರ ಆರಿಸಿಕೊಂಡಿರಲಿ ಅದರಲ್ಲಿ ನಾಟಕೀಯ ದೃಶ್ಯಗಳು ಹಾಸುಹೊಕ್ಕಾಗಿರುತ್ತವೆ. ಕಥೆ, ಕವಿತೆ, ಪ್ರಬಂಧ ಯಾವುದೇ ಇರಲಿ, ನಾಟಕೀಯ ದೃಶ್ಯಗಳಿಗೆ ಅದು ಪಕ್ಕಾಗಿಯೇ ಇರುತ್ತದೆ. ನಾಟಕದ ಸೋಂಕಿಲ್ಲದೆ ಬರೆಯುವ ಬರಹಗಾರರ ಕಥೆಗಳ ವಿನ್ಯಾಸ ಮತ್ತು ನಿರೂಪಣಾ ಕ್ರಮ ಬೇರೆಯಾಗಿಯೇ ಇರುತ್ತದೆ. 

   ಈ ಹಿನ್ನೆಲೆಯಲ್ಲಿ ಕಥೆಗಾರರು ಮತ್ತು ಕಿರುತೆರೆ, ರಂಗಭೂಮಿ ಕಲಾವಿದರಾದ ಸೇತುರಾಮ್‌ ಅವರ ಕಥಾಸಂಕಲನ "ನಾವಲ್ಲ' ಕಥೆಗಳನ್ನ ಅವಲೋಕಿಸಬಹುದು. ಅವರಲ್ಲೊಬ್ಬ ಬರಹಗಾರನಿದ್ದಾನೆ, ನಟನಿದ್ದಾನೆ (ಏಕತಾನತೆಗೆ ಪಕ್ಕಾಗಿದ್ದಾನೆ ಎನ್ನುವುದು ಬೇರೆ ಮಾತು), ನಿರ್ದೇಶಕನಿದ್ದಾನೆ. ಅನುಭವಗಳು ದಟ್ಟವಾಗಿಯೇನೋ ಇವೆ. ಪರಿಣಾಮವಾಗಿ ನಾಟಕ ಕೃತಿಗಳ ಜೊತೆಜೊತೆಗೆ ಕಥೆಗಳನ್ನೂ ಬರೆದಿದ್ದಾರೆ. ಫಿಲಾಸಫಿ ಮತ್ತು ವಾಚ್ಯ- ಹೆಚಾಯಿcತು ಎನ್ನುವುದನ್ನು ಬಿಟ್ಟರೆ ಎಲ್ಲವೂ ಸರಿಯೇ. ಇವರ "ನಾವಲ್ಲ' ಕಥಾಸಂಕಲನದಿಂದ "ಮೋಕ್ಷ' ಮತ್ತು "ಮೌನಿ' ಎಂಬೆರಡು ಕಥೆಗಳನ್ನು ಆರಿಸಿಕೊಂಡು ಈಚೆಗೆ ಕಲಾರಂಗ ತಂಡ ಕೆ.ಎಚ್‌. ಕಲಾಸೌಧದಲ್ಲಿ ರಂಗರೂಪವೊಂದನ್ನು ಸಿದ್ಧಗೊಳಿಸಿತ್ತು. ನಿರ್ದೇಶಕ ಭಗತ್‌ ರಾಜ್‌ ರಂಗರೂಪ ಅಣಿಗೊಳಿಸಿದ್ದರು.

   ಎರಡು ಕಥೆಗಳು ಒಂದೇ ರಂಗದ ಮೇಲೆ ರೂಪು ತಳೆಯುವುದು ವಿರಳ ಹೌದೋ ಅಲ್ಲವೋ ಅದು ಬೇರೆ ಸಂಗತಿ. ನಿರ್ದೇಶಕರ ಇಂಗಿತ ಇದು. ಹಾಗೆ ನೋಡಿದರೆ ತೀರ ವಿರಳವೇನಲ್ಲ ಅನಿಸುತ್ತದೆ. ಎರಡಲ್ಲ, ಮೂರು- ನಾಲ್ಕು ಕಥೆಗಳನ್ನು ಒಟ್ಟುಗೂಡಿಸಿ ಪ್ರಯೋಗಗಳೇನೋ ನಡೆಯುತ್ತಿವೆ. ವಿರಳ ಎಂದುಕೊಳ್ಳುವುದರ ಬದಲಿಗೆ ರಂಗರೂಪಗಳನ್ನು ಸಜ್ಜುಗೊಳಿಸಿರುವುದರ ಕಡೆ ನಿರ್ದೇಶಕ ಭಗತ್‌ ರಾಜ್‌ ಗಮನ ಹರಿಸಿದ್ದರೆ ಒಳಿತಿತ್ತು ಅನಿಸಿತು. ಕಾರಣ, ಎರಡು ಕಥೆಗಳನ್ನು ಅವರು ಪ್ರತ್ಯೇಕವಾಗಿ ರಂಗರೂಪದಲ್ಲಿ ಕಟ್ಟಿಕೊಡಲು ಮುಂದಾಗಿಲ್ಲ. ಎರಡೂ ಕಥೆಗಳು ಒಂದರೊಳಗೊಂದು ಹೆಣೆದುಕೊಳ್ಳುತ್ತಾ ಸಾಗುತ್ತವೆ. ಈ ಬೆಸೆಯುವಿಕೆ ಬೇಕಿತ್ತೇ ಎನ್ನುವುದು ಇಲ್ಲಿಯ ಪ್ರಶ್ನೆ. ಎರಡೂ ಕಥೆಗಳ ವಸ್ತು ವಿನ್ಯಾಸದಲ್ಲಿ ಸಾಮ್ಯತೆಯೇನೂ ಇಲ್ಲ. ಒಂದು, ಮಠಾಧಿಪತಿಯ ತೊಳಲಾಟ ಮತ್ತು ದಿಟ್ಟತೆಯನ್ನು ಅಧ್ಯಾತ್ಮದ ಜಿಜ್ಞಾಸೆಗಳಲ್ಲಿ ಹೇಳಲು ಹವಣಿಸಿದರೆ ಮತ್ತೂಂದು ಕಥೆ, ಹೆಣ್ಣಿನ ಸಂಕಟಗಳು ಮತ್ತು ಆಕೆಯ ದಿಟ್ಟ ಪ್ರಶ್ನೆಗಳ ಬಗೆಗೆ ಚಿತ್ರಿತವಾಗಿದೆ. ಎರಡೂ ಬೇರೆಬೇರೆ ಧ್ರುವಗಳ ಹಾಗೆ ಇರುವಂಥವು.
ಹೀಗಿದ್ದಾಗಿಯೂ ಕೂಡ ಭಗತ್‌ ರಾಜ್‌ ಜಡೆ ಹೆಣೆದಂತೆ ಒಂದರ ಕಥಾನಕದೊಳಗೆ ಮತ್ತೂಂದನ್ನು ಹೆಣೆದಿದ್ದರು. ಎರಡು ಬೇರೆ ಮನಸ್ಥಿತಿಯನ್ನ ನಿರ್ಮಾಣ ಮಾಡುವ ಕಥೆಗಳು ಒಂದರೊಳಗೊಂದು ಮಿಳಿತವಾಗಿ ಬೆರೆಯಲು ಸಾಕಷ್ಟು ಸಮಯ ತೆಗೆದುಕೊಂಡವು. ಎರಡೂ ಕಥೆಗಳನ್ನೂ ಪ್ರತ್ಯೇಕವಾಗಿ ಒಂದರ ನಂತರ ಕಟ್ಟಿದ್ದಿದ್ದರೆ ಬಹುಶಃ ಕಥೆಗಳ ಸಾಂದ್ರತೆ ತಟ್ಟುತ್ತಿತ್ತೇನೋ. ರಂಗಪ್ರಯೋಗ ಈ ಕೊರತೆಯನ್ನು ಎದುರಿಸಿತು. 

  ಮಿಗಿಲಾಗಿ ಕಥೆಗಳನ್ನು ದೃಶ್ಯಗಳನ್ನಾಗಿ ಭಾಗಿಸಿಕೊಳ್ಳುವ ಕಲೆಗಾರಿಕೆಯಲ್ಲಿ ಭಗತ್‌ ರಾಜ್‌ ಇನ್ನೂ ಮಾಗಿದಂತೆ ಕಂಡುಬರಲಿಲ್ಲ. ಸುಮ್ಮನೆ ಬೆಳಕು ಹಾಯಿಸಿ, ಬೆಳಕು ಆರಿಸಿದರೆ ದೃಶ್ಯವಾಗಲಾರದು. ನಾಟಕದ ಆರಂಭ ಹೀಗೆಯೇ ಇತ್ತು. ಇದು ಕಟ್ಟುವಿಕೆಯಲ್ಲಾಗಿರುವ ಲೋಪ. ನಂತರ ಕಥೆ ಸಾಗಿದಂತೆ ದೃಶ್ಯಗಳನ್ನು ಜೋಡಿಸಿಕೊಂಡು ನಡೆದಿರುವುದು ಕಂಡು ಬಂದಿತು. ಕಥೆ ತನ್ನ ವಾಚ್ಯದಲ್ಲಿ ಎತ್ತುವ ಬಹುಮುಖ್ಯ ಪ್ರಶ್ನೆಗಳು ಇಲ್ಲಿ ಕೇಳಿಸಿದವು ನಿಜ. ಹಾಗೆಯೇ ಅಧ್ಯಾತ್ಮ ಜಗತ್ತಿನೊಡನೆ ಹೆಣ್ಣಿನ ಬಂಡಾಯ ಬೆರೆತು ಮಿಶ್ರಣದ ಹದದ ಬಗೆಗೇ ಪ್ರಶ್ನೆಗಳು ಏಳುವಂತೆ ಮಾಡಿದವು.

ಇದು ಒಂದು ಬಗೆಯಾದರೆ, ನಾಟಕದಲ್ಲಿ ಮಾತುಗಾರಿಕೆ ಶೈಲಿ- ವಿಶೇಷವಾಗಿ ಮಠಕ್ಕೆ ಸಂಬಂಧಿಸಿದ್ದರ ಕಥೆಯಲ್ಲಿ- ಸ್ವಾಮಿಗಳ ಮಾತಿನ ಶೈಲಿ ಸೇತುರಾಮ್‌ರ ಮಾತಿನ ಏಕತಾನ ಶೈಲಿಯಂತೆಯೇ ಕೇಳಿಸಿತು. ವಿಚಾರದ ಧ್ವನಿತ ಬೇರೆ ಇತ್ತು ನಿಜ; ಆದರೆ ಶೈಲಿಯಲ್ಲಿ ಮತ್ತದೇ ಏಕತಾನತೆ. ಬೇರೆ ಬೇರೆ ಮಾತಿನ ಸ್ತರಗಳನ್ನು ಶೋಧಿಸಿ ಬರೆಯಬೇಕಾದ ಬರಹಗಾರ ಏಕತಾನತೆಗೆ ಪಕ್ಕಾದರೆ ಎದುರಿಸಬಹುದಾದ ಅಪಾಯಗಳೇನು ಎಂಬುದನ್ನು ಕಂಡುಕೊಳ್ಳಬೇಕಾದರೆ ಈ ನಾಟಕವನ್ನು ಉದಾಹರಣೆಯಾಗಿ ಪರಿಗಣಿಸಬಹುದು. ಇದು ತೀರ ಅಪರಿಚಿತರಿಗೆ ಸೇತುರಾಮ್‌ರ ಶಕ್ತಿಯಂತೆ ಕಂಡರೆ ಅವರ ನಾಟಕಗಳಲ್ಲಿ ಅವರ ಮಾತುಗಳನ್ನು ಕೇಳಿಸಿಕೊಂಡಿದ್ದರೆ ಅದೇ ಬಲಹೀನತೆಯಂತೆಯೂ ಕೇಳಿಸುತ್ತದೆ. ಇಷ್ಟರ ಆಚೆಗೆ ಕೆಲವರ ಅಭಿನಯ ನೆನಪಿನಲ್ಲಿ ಉಳಿಯುತ್ತದೆ. ಭೀಷ್ಮರಾಮಯ್ಯರ ಅಭಿನಯದಲ್ಲಿ ತೀವ್ರತೆ ಇತ್ತಾದರೂ ನಗುವನ್ನು ಲಂಬಿಸುವ ಅಗತ್ಯವಿರಲಿಲ್ಲ. ಮಂದಾಕಿನಿ, ಪರಮೇಶಿ ಪಾತ್ರಧಾರಿಗಳ ಅಭಿನಯವನ್ನು ಶ್ಲಾ ಸಬೇಕು.

ಎನ್‌.ಸಿ. ಮಹೇಶ್‌


Trending videos

Back to Top