CONNECT WITH US  

ಬಾಕ್ಸ್ ಆಫೀಸ್ , ಓಪನಿಂಗ್ ಲೆಕ್ಕಾಚಾರ ನನ್ನ ಬದಲಿಸಿತು; ಸುದೀಪ್ ಮಾತು

ಸುದೀಪ್‌ ಅವರ "ಹೆಬ್ಬುಲಿ' ಚಿತ್ರ ಫೆ.23ಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್‌, ಹಾಡುಗಳು ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸಿವೆ. ಈ ಸಂದರ್ಭದಲ್ಲಿ ಸುದೀಪ್‌ ಇಲ್ಲಿನ ಪ್ರಶ್ನೆಗಳಿಗೆ ಉತ್ತರವಾಗಿದ್ದಾರೆ. 

1. "ಹೆಬ್ಬುಲಿ'ಯಲ್ಲಿ ಏನು ಹೇಳಲು ಹೊರಟಿದ್ದೀರಿ?
- ಈ ಚಿತ್ರದಲ್ಲಿ ಒಂದು ಬ್ಯೂಟಿಫ‌ುಲ್‌ ಪಾಯಿಂಟ್‌ ಇದೆ. ತುಂಬಾ ಹೊಸದಾದ ಅಂಶ. ಇಲ್ಲಿವರೆಗೆ ಯಾರೂ ಅದನ್ನು ಟಚ್‌ ಮಾಡಿದಂತಿಲ್ಲ. ಅದನ್ನು ಇಲ್ಲಿ ಹೇಳಿದ್ದೇವೆ. ಒನ್‌ಲೈನ್‌ ತುಂಬಾ ಚೆನ್ನಾಗಿತ್ತು. ಅದನ್ನು ಹೇಳಲು ಒಂದು ಮಾರ್ಗ ಬೇಕಿತ್ತು. ಅದನ್ನು ಪ್ಯಾರಾ ಕಮಾಂಡೋ ಪಾತ್ರದ ಮೂಲಕ ಹೇಳಿದ್ದೇವೆ. ಹಾಗಂತ ಇದು ಆರ್ಮಿಗೆ ಸಂಬಂಧಪಟ್ಟ ಸಿನಿಮಾವಲ್ಲ. ಎಲ್ಲಾ ಕುಟುಂಬಗಳು ಚೆನ್ನಾಗಿರಲಿ ಎಂದು ಗಡಿಯಲ್ಲಿ ತನ್ನ ಜೀವ ಒತ್ತೆಯಿಟ್ಟು ಕಾಯುವ ಸೈನಿಕನ ಕುಟುಂಬಕ್ಕೆ ತೊಂದರೆಯಾದರೆ ಯಾರೂ ನಿಲ್ಲೋದಿಲ್ಲ. ಹೀಗಿರುವಾಗ ಆ ವ್ಯಕ್ತಿ ತಲೆಯಲ್ಲಿ ಏನು ಓಡಬಹುದು ಎಂಬ ಅಂಶವೂ ಇದೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ ಹಾಡಿನಲ್ಲೂ ಚಿತ್ರದ ಒನ್‌ಲೈನ್‌ ಬರುತ್ತದೆ. "ಕಾಯಲು ಹೋದೆನು ನಿನ್ನನು ನಂಬಿ ನೀ ಕಾಯದೇ ಸೋತೆಯ ನನಗೆ ಬೇಕಾದ ಒಂದು ಜೀವವ ..' ಎಂಬ ಲೈನ್‌ನಲ್ಲೇ ತುಂಬಾ ಅರ್ಥವಿದೆ. 

2. ಕಮಾಂಡೋ ಪಾತ್ರಕ್ಕಾಗಿ ಏನಾದರೂ ಪೂರ್ವತಯಾರಿ ಏನಾದರೂ ಮಾಡಿಕೊಂಡ್ರಾ?
- ನಾನು ತಯಾರಿ ಮಾಡಿಕೊಂಡು ಯಾವುದೇ ಪಾತ್ರ ಮಾಡಲ್ಲ.  ಸೆಟ್‌ಗೆ ಹೋಗುವಾಗ ನನಗೆ ಒಂದಿಷ್ಟು ಗೊತ್ತಿರುತ್ತೆ. ಹೋದ ಮೇಲೆ ಮತ್ತೂಂದಿಷ್ಟು ಗೊತ್ತಾಗುತ್ತೆ. ಅದನ್ನು ಮ್ಯಾನೇಜ್‌ ಮಾಡುತ್ತೇನೆ. ಪೂರ್ವತಯಾರಿ ಮಾಡಬೇಕಾದ ಅನಿವಾರ್ಯತೆ ಬರೋದು ಬಯೋಪಿಕ್‌ ಮಾಡುವಾಗ. ಆಗ ನಾವು ಸ್ಟಡಿ ಮಾಡಬೇಕು. ನಾವು ಯಾರ ಬಯೋಪಿಕ್‌ ಮಾಡುತ್ತೇವೋ ಆ ವ್ಯಕ್ತಿಯ ಮ್ಯಾನರೀಸಂ ಅನ್ನು ಸ್ಟಡಿ ಮಾಡಬೇಕು. ಆದರೆ ಇದು ಬಯೋಪಿಕ್‌ ಅಲ್ಲ. ಬೇಸಿಕ್‌ ಗೊತ್ತಿದ್ದರೆ ಸಾಕು. ಪ್ಯಾರಾ ಕಮಾಂಡೋ ಮ್ಯಾನರೀಸಂ ಹೇಗಿರುತ್ತೆ ಎಂಬುದನ್ನು ನೋಡಿಕೊಂಡು ನನಗೆ ಎಷ್ಟು ಗೊತ್ತೋ ಅಷ್ಟನ್ನು ಮಾಡಿದ್ದೇನೆ. 

*ನಿಮ್ಮ ಪ್ರಕಾರ ಸಿನಿಮಾ ಅಂದರೆ?
- ನಂಬಿಕೆ, ಹೊಂದಾಣಿಕೆ. ಸಿನಿಮಾದಲ್ಲಿ ಮುಖ್ಯವಾಗಿ ಬೇಕಾಗಿದ್ದ ಅಂಡರ್‌ಸ್ಟಾಂಡಿಂಗ್‌. ನಾನು, ನಂದು ಎಂದು ಬಂದರೆ ಸಿನಿಮಾ ಸತ್ತಂತೆ. ಮಾಡಿದ ತಪ್ಪನ್ನು ಒಪ್ಪಿಕೊಂಡರೆ ಇಡೀ ತಂಡ ಖುಷಿಯಿಂದ ಕೆಲಸ ಮಾಡಲಾಗುತ್ತದೆ. ಇಲ್ಲಿ ನಿಯತ್ತಾಗಿರಬೇಕು. ನೀವು ಯಾರಿಗಾದರೂ ಒಳ್ಳೆಯದು ಮಾಡಿದರೆ ನಿಮಗೂ    ಒಳ್ಳೆಯದಾಗುತ್ತದೆ

* ನೀವು ತುಂಬಾ ಪ್ರೀತಿಸಿದ ಸಿನಿಮಾಗಳು ಯಾರಧ್ದೋ ಸಮಸ್ಯೆಯಿಂದ ಮುಳುಗೋದನ್ನು ನೋಡಿದಾಗ ನಿಮಗೆ ಹೇಗನಿಸುತ್ತದೆ?
- ನಾನು ಎಷ್ಟು ಕೆಟ್ಟ ಕಲಾವಿದ ಅನಿಸುತ್ತೆ. ಏಕೆಂದರೆ ಅವರು ನನಗಿಂತ ಚೆನ್ನಾಗಿ ನಟಿಸಿರುತ್ತಾರೆ. ಒಂದು ಸುಳ್ಳನ್ನು ಮುಚ್ಚಲು ಏನೇನೋ ನಾಟಕವಾಡಿರುತ್ತಾರೆ. ಅದರ ಪರಿಣಾಮ ಸಿನಿಮಾ ಮೇಲಾಗಿರುತ್ತದೆ. ನಾನು ದುಡ್ಡು ಕೊಟ್ಟು ಪಾಠ ಕಲಿತಿಲ್ಲ. ಆದರೆ ಕಲಿತಿರೋ ಯಾವುದೇ ಪಾಠಕ್ಕೂ ದುಡ್ಡುಕೊಟ್ಟಿಲ್ಲ.

3. ನೀವು ಕಥೆ ಕೇಳದೆಯೇ ಕೃಷ್ಣಗೆ ಡೇಟ್‌ ಕೊಟ್ಟಿದ್ದಂತೆ?
- ಕೃಷ್ಣ ಬಂದು ಕೇಳುವಾಗ ಕಥೆ ಕೇಳದೇ ಡೇಟ್‌ ಕೊಟ್ಟೆ ನಿಜ. ಆ ನಂತರ ನಾನು ಮಾತನಾಡಲಿಲ್ಲ ಎಂದು ಹೇಳಿಲ್ಲ. ಸಿನಿಮಾ ಆರಂಭವಾಗುವ ಒಂದು ತಿಂಗಳು ಮುಂಚೆ ಚರ್ಚಿಸಿದೆವು. ಈ ಕಥೆಯನ್ನು ಹೇಗೆ ಮಾಡಿದರೆ ಚೆಂದ, ಯಾವ ಮಾರ್ಗದ ಮೂಲಕ ಹೇಳಬೇಕು ಎಂಬ ಬಗ್ಗೆ ಚರ್ಚಿಸಿದೆವು. ನಾನು ಹೆಚ್ಚು ಹೊತ್ತು ಕಥೆ ಕೇಳ್ಳೋದಿಲ್ಲ. ನನಗೆ ರಾಜ್‌ಮೌಳಿಯವರು "ಈಗ' ಸಿನಿಮಾದ ಕಥೆಯನ್ನು 30 ಸೆಕೆಂಡ್‌ನ‌ಲ್ಲಿ ಹೇಳಿದ್ದರು. "ಇಬ್ಬರು ಪ್ರೇಮಿಗಳಿರುತ್ತಾರೆ. ನೀವು ಹುಡುಗನನ್ನು ಸಾಯಿಸುತ್ತೀರಿ. ಆತ ನೊಣವಾಗಿ ಬಂದು ನಿಮ್ಮನ್ನು ಕಾಡುತ್ತಾನೆ' ಎಂದಷ್ಟೇ ಹೇಳಿದ್ದು. ಅವರು ಹೇಳಿದ ಆ ಲೈನ್‌ ಇಟ್ಟುಕೊಂಡು ನನ್ನ ನಟನಾ ಸಾಧ್ಯತೆಯನ್ನು ನಾನು ಹುಡುಕಬೇಕಿತ್ತು. "ಹೆಬ್ಬುಲಿ'ಯಲ್ಲೂ ಹಾಗೆ. 

4. ನಿಮ್ಮ ಹೇರ್‌ಸ್ಟೈಲ್‌ ಟ್ರೆಂಡಿಂಗ್‌ ಆಗಿದೆ. ತುಂಬಾ ಜನ ಫಾಲೋ ಮಾಡುತ್ತಿದ್ದಾರಲ್ಲ?
- ನಿಜಕ್ಕೂ ಅದು ಗ್ರೇಟ್‌ ಫೀಲಿಂಗ್‌. ಚಿಕ್ಕ ಮಕ್ಕಳು ಕೂಡಾ ಹೇರ್‌ಸ್ಟೈಲ್‌ ಫಾಲೋ ಮಾಡುತ್ತಿದ್ದಾರೆ. ಅಭಿಮಾನಿಗಳು ಮಾಡಿದ್ದರೆ ನಾವು ಹೇಳಿ ಮಾಡಿಸಿದೆವು ಎಂದು ಯಾರಾದರೂ ಹೇಳಬಹುದು. ಆದರೆ ಆ ಪುಟ್ಟ ಮಕ್ಕಳಿಗೆ ಯಾರು ಹೇಳುತ್ತಾರೆ. ಈ ತರಹದ ಒಂದು ಪ್ರೀತಿ, ಕ್ರೇಜ್‌ ಲಂಚ ಕೊಟ್ಟು ಸಿಗುವಂಥದ್ದಲ್ಲ. ಕೆಲವು ಸಿನಿಮಾಗಳನ್ನು ನಾವು ಎಷ್ಟೇ ಪ್ರಮೋಶನ್‌ ಮಾಡಿದರೂ ಹೈಪ್‌ ಕ್ರಿಯೇಟ್‌ ಆಗೋದೇ ಇಲ್ಲ. ಆ ಸಿನಿಮಾ ಹಿಟ್‌ ಕೂಡಾ ಆಗುತ್ತದೆ. ಆದರೆ ಜನ ಆ ಸಿನಿಮಾಗಳ ಬಗ್ಗೆ ಮಾತನಾಡೋದಿಲ್ಲ. ಆದರೆ "ಹೆಬ್ಬುಲಿ' ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ನಿಜಕ್ಕೂ ಖುಷಿಯಾಗುತ್ತಿದೆ. 

5. ಸಾಮಾನ್ಯವಾಗಿ ಟ್ರೇಲರ್‌ನಲ್ಲಿ ಡೈಲಾಗ್‌ಗಳಿರುತ್ತವೆ. "ಹೆಬ್ಬುಲಿ'ಯ ಒಂದೇ ಒಂದು ಡೈಲಾಗ್‌ ಕೂಡಾ ಬಿಟ್ಟಿಲ್ಲ?
- ನೋಡಿ, ಪ್ರತಿಯೊಬ್ಬರಿಗೆ ಅವರದ್ದೇ ಆದ ಶೈಲಿ, ಆಲೋಚನೆ ಇರುತ್ತದೆ. ಅದಕ್ಕೆ ತಕ್ಕಂತೆ ಮಾಡುತ್ತೇನೆ. ನನಗೆ ನನ್ನದೇ ಆದ ಆಲೋಚನೆಗಳಿವೆ. ಅದಕ್ಕಿಂತ ಹೆಚ್ಚಾಗಿ ನಾನು ಸಿನಿಮಾದಲ್ಲಿ ಮಾಡುವ ಪಾತ್ರ ನನ್ನ ನಿಜ ಜೀವನದ ಗುಣಗಳಿಗಿಂತ ಹೆಚ್ಚು ದೂರವಿರೋದಿಲ್ಲ. ಒಬ್ಬ ಸುದೀಪ್‌ ಆರ್ಮಿ ಆಫೀಸರ್‌ ಆದರೆ ಹೇಗೆ ಯೋಚಿಸಬಹುದು, ಪೊಲೀಸ್‌ ಆಫೀಸರ್‌ ಆದರೆ ಹೇಗೆ ಯೋಚಿಸಬಹುದು ಅಥವಾ ರೌಡಿಯಾದರೆ ಹೇಗೆ ವರ್ತಿಸಬಹುದು ಎಂದು ನಾನು ಆಲೋಚಿಸುತ್ತೇನೆ. ಮುಖ್ಯವಾಗಿ ನನಗಿಂತ ನನ್ನ ಕೆಲಸ ಮಾತನಾಡಬೇಕು ಎಂದು ಇಷ್ಟಪಡುವವನು ನಾನು.  ಕಥೆಗೆ ಏನು ಬೇಕೋ ಅದನ್ನು ಮಾಡಲು ಮೊದಲ ಆದ್ಯತೆ ಕೊಡುತ್ತೇನೆ. 

6. ಈ ಹಿಂದಿನ ಕೆಲವು ಸಿನಿಮಾಗಳ ನಿರ್ಮಾಣದಲ್ಲಿ ಸಮಸ್ಯೆಯಾಗಿತ್ತು. ಆ ವಿಷಯದಲ್ಲಿ "ಹೆಬ್ಬುಲಿ' ಪ್ರೊಡಕ್ಷನ್‌ ಹೌಸ್‌ ಹೇಗೆ ಭಿನ್ನ?
-  ಹಿಂದಿನ ಕೆಲವು ಸಿನಿಮಾಗಳಲ್ಲಿ ನನಗೆ ದುಡ್ಡು ಮಾತ್ರ ಹೋಗುತ್ತೆ ಅನ್ನೋದು ಕನ್‌ಫ‌ರ್ಮ್ ಇತ್ತು. ಹಾಗಾಗಿ ಬಿಟ್ಟುಬಿಡುತ್ತಿದ್ದೆ. ಆದರೆ ಇಲ್ಲಿ ಇವರು ಹಾಕಿರೋ ದುಡ್ಡಿಗೆ ಜವಾಬ್ದಾರಿ ಜಾಸ್ತಿಯಾಗಿದೆ. ಅವರು ಸಿನಿಮಾವನ್ನು ಪ್ರೀತಿಸುವ ರೀತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ. ಹಿಂದಿನ ಕೆಲವು ಸಿನಿಮಾಗಳಲ್ಲಿ ಅವರವರ ಹಣೆಬರಹ ಏನಾದರೂ ಆಗಲಿ ಎಂದು ಮೂರು ಗಂಟೆ ಜಾಸ್ತಿ ಮಲಗುತ್ತಿದ್ದೆ. ಆದರೆ "ಹೆಬ್ಬುಲಿ'ಯಿಂದ ನಿದ್ದೆ ಕಮ್ಮಿಯಾಗಿದೆ. ಅದಕ್ಕೆ ಕಾರಣ ನಿರ್ಮಾಪಕರ ಸಿನಿಮಾ ಪ್ರೀತಿ. ಇವತ್ತು ಅವರನ್ನು ಕರೆದು ಬೇರೆಯವರು ಸಿನಿಮಾ ಮಾಡಿ ಎನ್ನುತ್ತಿದ್ದರೆಂದರೆ ಅದಕ್ಕೆ ಕಾರಣ ಅವರು "ಹೆಬ್ಬುಲಿ'ಯನ್ನು ತಂದಿರುವ ರೀತಿ.

7. ರೆಗ್ಯುಲರ್‌ ಕಮರ್ಷಿಯಲ್‌ ಸಿನಿಮಾಗಳನ್ನು ಬಿಟ್ಟು ಬೇರೆ ತರಹದ ಸಿನಿಮಾ ಮಾಡೋ ಐಡಿಯಾ ಇದೆಯಾ?
- ಇವತ್ತಿನ ನನ್ನ ರೆಗ್ಯುಲರ್‌ ಕಮರ್ಷಿಯಲ್‌ ಸಿನಿಮಾಗಳಿಗೆ ನೀವುಗಳು (ಮಾಧ್ಯಮ) ಕೂಡಾ ಕಾರಣ. ಅಂದು ನಾನು ಸೆನ್ಸಿಬಲ್‌ ಸಿನಿಮಾ ಮಾಡಿದಾಗ ನೀವು ನನ್ನನ್ನು ತುಂಬಾ ಹೊಗಳಿ ಬರೆಯುತ್ತಿದ್ದರೆ ಇವತ್ತು ನನ್ನ ಮನೆ ಮುಂದೆ ಇಷ್ಟೊಂದು ಕಾರುಗಳನ್ನು ನೀವು ನೋಡುತ್ತಿರಲಿಲ್ಲ. ನಾನು ನ್ಯಾಶನಲ್‌ ಅವಾರ್ಡ್‌, ಸ್ಟೇಟ್‌ ಅವಾರ್ಡ್‌ ಹಿಂದೆ ಹೋಗುತ್ತಿದ್ದೇನೋ ಏನೋ. ಅಂದು ನೀವು ಸೆನ್ಸಿಬಲ್‌ ಸಿನಿಮಾವನ್ನು ಬೆಂಬಲಿಸದ ಕಾರಣ ನಾನು ಹಠದ ಮೇಲೆ ಈ ತರಹದ ಸಿನಿಮಾ ಮಾಡಲು ಶುರು ಮಾಡಿದೆ.  ನೀವು ಸೂಕ್ಷ್ಮವಾಗಿ ಗಮನಿಸಿದರೆ ಒಂದಂಶ ಸ್ಪಷ್ಟವಾಗುತ್ತದೆ. ಅಂದಿನ "ಶಾಂತಿ ನಿವಾಸ' ಹಾಗೂ ಇತ್ತೀಚೆಗೆ ಬಂದ "ಮಾಣಿಕ್ಯ'ದ ತಿರುಳು ಒಂದೇ. ಆದರೆ ಹೇಳುವ ರೀತಿ ಬೇರೆಯಾಗಿದೆ. ನಾನು ಇವತ್ತಿಗೂ ಒಳ್ಳೆಯ ವಿಷಯಗಳಿರುವ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಆದರೆ ಅದನ್ನು ಹೇಳುವ ರೀತಿ ಬೇರೆಯಾಗಿದೆ. ಅದಕ್ಕೆ ಕಾರಣ ಒಬ್ಬ ಕಲಾವಿದನನ್ನು ಬಾಕ್ಸ್‌ಆಫೀಸ್‌ ಕಲೆಕ್ಷನ್‌, ಓಪನಿಂಗ್‌ ಮೇಲೆ ಜಡ್ಜ್ ಮಾಡಲು ಆರಂಭಿಸಿದ್ದು. ಒಂದು ಸಮಯದಲ್ಲಿ ನಾನು ತುಂಬಾ ಸೈಡ್‌ಲೈನ್‌ ಆಗಿದ್ದೆ. ಅವೆಲ್ಲವನ್ನು ಪಾಸಿಟಿವ್‌ ಆಗಿ ತಗೊಂಡೆ. ಅದೇ ನನಗೆ ಸ್ಫೂರ್ತಿ. ಅಂದಿನಿಂದ ನನ್ನ ಲೈಫ್ ಬದಲಾಯಿತು.  ಈಗ ರಕ್ಷಿತ್‌ ಶೆಟ್ಟಿ, ರಿಷಭ್‌ ಸಿನಿಮಾ ಒಪ್ಪಿಕೊಂಡಿದ್ದೇನೆ. ಅವರಿಗೆ ಅವರದ್ದೇ ಆದ ಜಾನರ್‌ ಇದೆ. ಅದನ್ನೂ ಮಾಡುತ್ತೇನೆ. 

9. ಸಿನಿಮಾ ಬಿಟ್ಟು ನಿಮ್ಮ ಆಸಕ್ತಿ?
- ನೋಡಿ ಸಿನಿಮಾವೇ ಜೀವನಲ್ಲ. ಸಿನಿಮಾ ಜೀವನದ ಒಂದು ಭಾಗವಷ್ಟೇ. ನಾನು ಪ್ರತಿ ದಿನವನ್ನು ಖುಷಿಯಿಂದ ಬದುಕಲು ಆಸೆ ಪಡುತ್ತೇನೆ. ತುಂಬಾ ಆಲೋಚನೆ, ಲೆಕ್ಕಾಚಾರ ಮಾಡಲ್ಲ. ನನಗೆ ಏನು ಎಕ್ಸೆ„ಟ್‌ ಆಗುತ್ತ ಅದನ್ನು ಮಾಡುತ್ತೇನೆ. 

10. ಬೇರೆ ಬ್ಯಾನರ್‌ನ ಸಿನಿಮಾಗಳು ಹಿಟ್‌ ಆಗುತ್ತಿರುವ ಬಗ್ಗೆ ಏನನಿಸುತ್ತದೆ ನಿಮಗೆ?
- ನಾನು ಕೆರಿಯರ್‌ ಸ್ಟಾರ್ಟ್‌ ಮಾಡಿದಾಗಲೂ ಜನ ಏನು ನಿರೀಕ್ಷೆ ಮಾಡುತ್ತಾರೆಂದು ನನಗೆ ಗೊತ್ತಿರಲಿಲ್ಲ. ಈಗಲೂ ಗೊತ್ತಿಲ್ಲ. ಸಿನಿಮಾಗಳು ಓಡಿದ ಮೇಲಷ್ಟೇ ಓಡುತ್ತೇ ಎಂದು ಗೊತ್ತಾಗೋದು, ಸೋತ ಮೇಲಷ್ಟೇ ಓಹೋ ನಮ್‌ ಸಿನಿಮಾನೂ ಸೋಲುತ್ತೆ ಎಂದು ಗೊತ್ತಾಗೋದು. ಸಿನಿಮಾ ಅನ್ನೋದು ಒಂದು ನಂಬಿಕೆ ಅಷ್ಟೇ. ಸಿನಿಮಾದಲ್ಲಿ ದೊಡ್ಡ ಹೆಸರು ಇದ್ದ ಕೂಡಲೇ ಸಿನಿಮಾ ಹಿಟ್‌ ಆಗುತ್ತದೆ ಎಂದಲ್ಲ. ದೊಡ್ಡ ಹೆಸರು ಬರುವಾಗ ಅಲ್ಲಿ ಪರಿಗಣನೆಗೆ ಬರೋದು ಮಿನಿಮಮ್‌ ಬಿಝಿನೆಸ್‌ ಎಷ್ಟು ಆಗುತ್ತದೆ, ಅಬ್ಬಬ್ಟಾ ಅಂದರೆ ಎಷ್ಟು ಹೋಗಬಹುದು, ಆ್ಯವರೇಜ್‌ ಆದರೆ ಬಂಡವಾಳ ಬರುತ್ತದೆ ಎಂಬ ಲೆಕ್ಕಾಚಾರ. ಆ ಗ್ಯಾರಂಟಿ ಮೇಲೆ ಸಿನಿಮಾ ನಿಂತಿರುತ್ತದೆಯೋ ಹೊರತು ನಮ್ಮಂಥವರಿಗೆ ಫ್ಲಾಫ್ ಕೊಡೋಕೆ ಆಗಲ್ಲ ಅಂತಲ್ಲ. ಈಗ ಹಿಟ್‌ ಸಿನಿಮಾ ಕೊಟ್ಟವರು ಹಿಂದೆ ಒಂದಷ್ಟು ಫ್ಲಾಫ್ ಸಿನಿಮಾಗಳಿವೆ. ಒಂದು ಸಿನಿಮಾ ಹಿಟ್‌ ಆದ ಕೂಡಲೇ ಇದಪ್ಪಾ ಸಿನಿಮಾ ಮಾಡೋ ರೀತಿ ಎಂಬ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು. ಹಿಟ್‌ ಕೊಟ್ಟವರು ಕೂಡಾ ಮುಂದಿನ ಸಿನಿಮಾವನ್ನು ಎಬಿಸಿಡಿಯಿಂದಲೇ ಆರಂಭಿಸಬೇಕು. ನಾವು ಹಿಟ್‌ ಆದ ಸಿನಿಮಾಗಳ ಬಗ್ಗೆಯಷ್ಟೇ ಮಾತನಾಡುತ್ತೇವೆ. ಆದರೆ ಇತ್ತೀಚೆಗೆ ತುಂಬಾ ಒಳ್ಳೆಯ ಸಿನಿಮಾಗಳು ಬಂದಿವೆ. ಆದರೆ ಅವು ಹಿಟ್‌ ಆಗಿಲ್ಲ. ಯಾಕೆಂದರೆ ಸಿನಿಮಾ ಒಂದು ನಂಬಿಕೆಯಷ್ಟೇ. 

11. ಬಾಹುಬಲಿ -2 ಕನ್ನಡಕ್ಕೆ ಡಬ್‌ ಆಗುವ ಬಗ್ಗೆ ಚರ್ಚೆ ನಡೆಯುತ್ತಿದೆಲ್ಲ?
- ಆ ಬಗ್ಗೆ ನಾನೇನು ಮಾತನಾಡೋದಿಲ್ಲ. ನಾನು ಆ ಸಿನಿಮಾದಲ್ಲಿ ನಟಿಸಿಲ್ಲ. '

Trending videos

Back to Top