CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕರಿಯನ ಸಂತೋಷದ ಕರೆಯೋಲೆ

ಬಂದವರಿಗೆ ನಿರಾಸೆ ಆಗಲ್ಲ, ಮನರಂಜನೆಗೆ ಮೋಸವಿಲ್ಲ

"ಗಣಪ' ಮೂಲಕ ಭರವಸೆ ಮೂಡಿಸಿದ್ದ ಹೀರೋ ಸಂತೋಷ್‌, ಈಗ ಮತ್ತೂಂದು ನಿರೀಕ್ಷೆ ಹುಟ್ಟಿಸಿದ್ದಾರೆ. ಅದು ಅವರು ನಟಿಸಿರುವ "ಕರಿಯ 2' ಮೂಲಕ. ಅಂದಹಾಗೆ, ಇದು ಈ ವಾರ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, "ಗಣಪ' ಎಂಬ ಸಕ್ಸಸ್‌ ಸಿನಿಮಾ ಕೊಟ್ಟಿದ್ದ ತಂಡವೇ ಪುನಃ, "ಕರಿಯ 2' ಚಿತ್ರ ಮಾಡಿದೆ. "ಗಣಪ' ಬಳಿಕ ಸಾಕಷ್ಟು ಅವಕಾಶ ಬಂದರೂ, ಅವನ್ನು ಬದಿಗೊತ್ತಿ ಸಂತೋಷ್‌ ಈ ಚಿತ್ರ ಒಪ್ಪಿಕೊಂಡಿದ್ದೇಕೆ, ಇಲ್ಲಿರುವ ವಿಶೇಷತೆಗಳೇನು ಇತ್ಯಾದಿ ಕುರಿತು "ಚಿಟ್‌ಚಾಟ್‌'ನಲ್ಲಿ ಮಾತನಾಡಿದ್ದಾರೆ.

* ಅಂದು "ಕರಿಯ' ಇಂದು "ಕರಿಯ 2' ಹೇಗನ್ನಿಸುತ್ತಿದೆ?
ನಮ್ಮ ಬ್ಯಾನರ್‌ನಲ್ಲಿ ದರ್ಶನ್‌ ಸರ್‌ "ಕರಿಯ' ಮಾಡಿದ್ದರು. ಆದರೆ, ಅದೇ ಹೆಸರ ಚಿತ್ರದಲ್ಲಿ ನಾನು ನಟಿಸ್ತೀನಿ ಅಂತಂದುಕೊಂಡಿರಲಿಲ್ಲ. ನಿಜಕ್ಕೂ ಆ ಶೀರ್ಷಿಕೆ ಇಟ್ಟುಕೊಂಡು ಮಾಡಿರುವುದರಿಂದ ಒಂದು ಕಡೆ ಖುಷಿ, ಇನ್ನೊಂದು ಕಡೆ ಭಯವಿದೆ. ಆದರೆ, ಜನರ ನಿರೀಕ್ಷೆ ಸುಳ್ಳು ಮಾಡೋದಿಲ್ಲ ಎಂಬ ಗ್ಯಾರಂಟಿ ಕೊಡ್ತೀನಿ. ಅ.13 ರಂದು ಬಿಡುಗಡೆಯಾಗಲಿರುವ "ಕರಿಯ 2' ಎಲ್ಲಾ ವರ್ಗಕ್ಕೂ ಇಷ್ಟವಾಗಲು ಕಾರಣ, ಚಿತ್ರದೊಳಗಿರುವ ಗಟ್ಟಿ ಕಥೆ. ಹಾಗಾಗಿ ನಾನು ಎಲ್ಲವನ್ನೂ ನೋಡುಗರ ಮೇಲೆ ಬಿಟ್ಟಿದ್ದೇನೆ. ಒಂದಂತೂ ನಿಜ, "ಗಣಪ' ಇಷ್ಟಪಟ್ಟವರಿಗೆ ಇದೂ ಇಷ್ಟವಾಗುತ್ತೆ.

* ಇಲ್ಲೂ ರೌಡಿಸಂ ಛಾಯೆ ಇದೆಯಾ?
ಹೌದು, ಇದೊಂದು ಪಕ್ಕಾ ರೌಡಿಸಂ ಶೇಡ್‌ ಇರುವಂತಹ ಪಕ್ಕಾ ಮಾಸ್‌ ಚಿತ್ರ. ಇದರ ನಡುವೆಯೂ ಒಂದು ಮುದ್ದಾದ ಲವ್‌ ಸ್ಟೋರಿ ಇದೆ, ಸಿನಿಮಾದುದ್ದಕ್ಕೂ ಮನರಂಜನೆಯೂ ಇದೆ. ಪ್ರೇಕ್ಷಕರಿಗೆ ಬೇಸರ ಮೂಡಿಸುವುದಿಲ್ಲ ಎಂದು ಧೈರ್ಯವಾಗಿ ಹೇಳಬಹುದು.

* ಈ ಕಥೆ ಒಪ್ಪಲು ಕಾರಣ?
ನಿಜ ಹೇಳಬೇಕಾದರೆ, ನಾನು ಮೊದಲು ಕಥೆ ಕೇಳಲೇ ಇಲ್ಲ. ಅದಕ್ಕೂ ಮುನ್ನ, "ಕರಿಯ 2' ಟೈಟಲ್‌ ಇಟ್ಟು ಚಿತ್ರ ಮಾಡುವ ಬಗ್ಗೆ ತಿಳಿದಿತ್ತು. ಅದೊಂದೇ ಕಾರಣಕ್ಕೆ ಒಪ್ಪಿಕೊಂಡೆ. ಆಮೇಲೆ ನಿರ್ದೇಶಕರು ಕಥೆ ಹೇಳಿದಾಗ, "ಗಣಪ' ಕಥೆಗಿಂತಲೂ ಭಿನ್ನವಾಗಿದೆ ಎನಿಸಿತು. ಅದರಲ್ಲೂ ಅವರು ಕಟ್ಟಿಕೊಟ್ಟಿರುವ ಪ್ರತಿ ಪಾತ್ರದಲ್ಲೂ ವಿಶೇಷತೆ ಇತ್ತು. ಹಾಗಾಗಿ ಒಪ್ಪಿದೆ.

* ಇಲ್ಲಿ ನಿಮ್ಮ ಪಾತ್ರ?
ಇದು ರೌಡಿಸಂ ಛಾಯೆಯ ಸಿನಿಮಾ ಅಂದಮೇಲೆ, ನೀವೇ ಊಹಿಸಿಕೊಳ್ಳಿ. ಆದರೆ, ಹೀರೋ ಏನಾಗಿರುತ್ತಾನೆ ಅನ್ನೋದನ್ನು ಸಿನಿಮಾದಲ್ಲೇ ನೋಡಬೇಕು. ನನ್ನೊಂದಿಗೆ ಮಯೂರಿ ಅವರು ಮೊದಲ ಬಾರಿಗೆ ವಿಭಿನ್ನ ಪಾತ್ರ ಮಾಡಿದ್ದಾರೆ. ಅವರ ಪಾತ್ರ ಸಿನಿಮಾದಲ್ಲಿ ಹೈಲೈಟ್‌ ಆಗಿದೆ.

* ಹಾಗಾದರೆ, ಇದಕ್ಕೂ ತಯಾರಿ ನಡೆಸಿದ್ದುಂಟಾ?
ಹೌದು, ನಾನು "ಗಣಪ' ಮಾಡುವಾಗಲೂ ತಯಾರಿ ಪಡೆದಿದ್ದೆ. ಇಲ್ಲೂ ವರ್ಕ್‌ಶಾಪ್‌ ಮಾಡಿದ್ದೇನೆ. ನಿರ್ದೇಶಕರು ಪಾತ್ರಕ್ಕೆ ಬೇಕಾದ ತಯಾರಿ ಕೊಡಿಸಿಯೇ ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾರೆ. ಮುಖ್ಯವಾಗಿ ಆ್ಯಕ್ಷನ್‌ ಹೈಲೈಟ್‌ ಆಗಿದೆ. ಪಾತ್ರ ಸಾಕಷ್ಟು ಬದಲಾವಣೆ ಬಯಸಿತ್ತು. ಮ್ಯಾನರಿಸಂನಿಂದ ಹಿಡಿದು, ಡೈಲಾಗ್‌ ಡಿಲವರಿ ಎಲ್ಲವೂ ಹೊಸದಾಗಿದೆ.

* ನಿಮಗಿಲ್ಲಿ ಕಷ್ಟ ಅನಿಸಿದ್ದು ಏನು?
ಕಷ್ಟ ಆಗಿದ್ದುಂಟು. ಹಾಗಂತ ತುಂಬಾ ಕಷ್ಟ ಆಗಿಲ್ಲ. ಮೊದಲೇ ಹೇಳಿದಂತೆ ಆ್ಯಕ್ಷನ್‌ ಜೋರಾಗಿರಬೇಕಿತ್ತು. ಅದಕ್ಕೆ ತಯಾರಿ ಮಾಡಿಕೊಂಡೆ. ಆ ಭಾಗ ಸ್ವಲ್ಪ ರಿಸ್ಕ್ ಇತ್ತು. ಆದರೂ, ಸಿನಿಮಾ ಚೆನ್ನಾಗಿ ಮೂಡಿಬರಬೇಕೆಂಬ ಉದ್ದೇಶದಿಂದ ಇಷ್ಟಪಟ್ಟು ಮಾಡಿದ್ದೇನೆ.

* ಮತ್ತದೇ ಟೀಮ್‌ ಜತೆ ಕೆಲಸ ಅನುಭವ ಹೇಗಿತ್ತು?
"ಗಣಪ' ಮಾಡುವಾಗ ಅವರೊಂದಿಗೆ ಸಾಕಷ್ಟು ಕಲಿತುಕೊಂಡೆ. ಫ್ರೆಂಡ್ಲಿಯಾಗಿಯೇ ಕೆಲಸ ಮಾಡಿದ್ದೆ. ಹಾಗಾಗಿ, ಇಲ್ಲೂ ಅದೇ ಗೆಳೆತನದ ಕೆಲಸವಾಯ್ತು. ಸಕ್ಸಸ್‌ ಟೀಮ್‌ ಜತೆ ಪುನಃ ಮಾಡಿದ್ದು ಖುಷಿ ಕೊಟ್ಟಿದೆ. ಎಲ್ಲರ ಜತೆ ಹೊಂದಾಣಿಕೆ ಇದ್ದಲ್ಲಿ, ಈ ರೀತಿಯ ಔಟ್‌ಪುಟ್‌ ಬರುತ್ತೆ ಎಂಬುದಕ್ಕೆ "ಕರಿಯ 2' ಸಾಕ್ಷಿ.

* ಗಣಪ ಬಳಿಕ ಅವಕಾಶ ಬರಲಿಲ್ಲವೇ?
ನಿಜ ಹೇಳಬೇಕೆಂದರೆ ತುಂಬಾ ಅವಕಾಶಗಳು ಬಂದವು. ಆದರೆ, ನಾನೇ, "ಗಣಪ' ನಂತರ ಇನ್ನೂಂದು ಹೆಜ್ಜೆ ಮುಂದೆ ಹೋಗುವಂತಹ ಕಥೆ ಬೇಕಿತ್ತು. ಅದಕ್ಕೆ ಸರಿಯಾಗಿ "ಕರಿಯ 2' ಸಿಕ್ತು. ಈಗ ನಾಲ್ಕು ಕಥೆ ಕೇಳಿದ್ದೇನೆ. ಇದಾದ ಬಳಿಕ ಆ ಬಗ್ಗೆ ಯೋಚಿಸುತ್ತೇನೆ.

* ಮತ್ತೆ ಇದೇ ಟೀಮ್‌ ಜತೆ ಕೆಲಸ ಮಾಡುವ ಯೋಚನೆ ಇದೆಯಾ?
ಗೊತ್ತಿಲ್ಲ, ಇನ್ನೊಂದು ಇನ್ನಿಂಗ್ಸ್‌ ಶುರುವಾದರೂ ಅಚ್ಚರಿ ಇಲ್ಲ. 

* "ಕರಿಯ 2' ರಿಮೇಕ್‌ ಆಗುತ್ತೆ ಎಂಬ ಸುದ್ದಿ ಇದೆಯಲ್ಲಾ?
ಹೌದು, ತಮಿಳು, ತೆಲುಗು ಮಂದಿ ಕೇಳಿದ್ದಾರೆ. ಚಿತ್ರ ಬಿಡುಗಡೆಯ ನಂತರ ಯೋಚನೆ ನಡೆಯಲಿದೆ.

Back to Top