CONNECT WITH US  

ಜಯಂತ್‌ ಕಾಯ್ಕಿಣಿ!

ಮಣಿಪಾಲದಲ್ಲಿ ಮಗಳು ಪಿ.ಎಚ್‌.ಡಿ ಮಾಡುತ್ತಿರುವುದರಿಂದ, ಅವಳ ಜೊತೆಗೊಂದಿಷ್ಟು ದಿನ. ಹುಟ್ಟೂರು ಗೋರ್ಕಣದ ಸೆಳೆತದಿಂದಾಗಿ ಅಲ್ಲೊಂದಿಷ್ಟು ದಿನ. ಇನ್ನು ಬೆಂಗಳೂರು ಕರ್ಮಭೂಮಿಯಾದ್ದರಿಂದ ಇಲ್ಲೂ ಕೆಲವು ದಿನಗಳು. ಹೀಗೆ  ಜಯಂತ್‌ ಕಾಯ್ಕಿಣಿ ಮಣಿಪಾಲ, ಗೋಕರ್ಣ, ಬೆಂಗಳೂರು ಅಂತ ಓಡಾಡಿಕೊಂಡಿದ್ದಾರೆ. ಈ ಮಧ್ಯೆ ಸಿನಿಮಾಗಾಗಿ ಹಾಡುಗಳು, ಓದು, ಪ್ರಯಾಣ ... ಹೀಗೆ ಜಯಂತ್‌ ಕಾಯ್ಕಿಣಿ ಅವರ ದಿನಚರಿ ತುಂಬಿದೆ. ಹೀಗಿರುವಾಗಲೇ ಜಯಂತ್‌ ಕಾಯ್ಕಿಣಿ ಅವರು "ಮುಗುಳು ನಗೆ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಬಹಳ ದಿನಗಳ ನಂತರ ಸಿಕ್ಕರು ...

"ಒಂದು ಕಾದಂಬರಿ ಬರೆಯಬೇಕು ಅಂತ ಬಹಳ ದಿನಗಳಾಸೆ ...' ಜಯಂತ್‌ ಕಾಯ್ಕಿಣಿ ಅವರು ಕಾದಂಬರಿ ಎನ್ನುತ್ತಿದ್ದಂತೆಯೇ ಅಲ್ಲಿದ್ದವರ ಕಿವಿ ನೆಟ್ಟಗಾಯಿತು. ಕಾಯ್ಕಿಣಿ ಅವರ ಸಣ್ಣ ಕಥೆಗಳನ್ನು ಓದಿ, ಹಾಡುಗಳನ್ನು ಕೇಳಿ ಮೆಚ್ಚಿದ್ದವರಿಗೆ, ಅವರು ಒಂದು ಕಾದಂಬರಿ ಬರೆಯುತ್ತಾರೆ ಎಂದಾಗ ಕುತೂಹಲ ಸಹಜ. ಅದೇ ಕುತೂಹಲದಿಂದ, ಯಾವಾಗ, ಏನು, ಎತ್ತ ... ಎಂಬ ಪ್ರಶ್ನೆಗಳು ಒಂದೇ ಸಮ ಬಂತು.

"ಒಂದು ಕಾದಂಬರಿ ಬರೆಯಬೇಕು ಅಂತ ಬಹಳ ದಿನಗಳಾಸೆ ದೆ. ಕಾದಂಬರಿ ಆದರೆ ಸತತವಾಗಿ ಬರೆಯಬೇಕು. ಸಣ್ಣ ಕಥೆ ಹಾಗಲ್ಲ. ನನ್ನ ಸಮಕಾಲೀನ ಎಲ್ಲಾ ಕಥೆಗಾರರು ಸಹ ಕಾದಂಬರಿ ಬರೆದಿದ್ದಾರೆ. ನಾನೊಬ್ಬ ಬರೆದಿಲ್ಲ. ನಾನು ಬರೀಲಿಲ್ಲವಲ್ಲಾ ಅಂತ ನನಗೂ ಹೊಟ್ಟೆಕಿಚ್ಚು. ಅದೇ ತರಹ, ಇವನು ಕಾದಂಬರಿ ಬರೆಯದೆ ಆರಾಮಾಗಿ ಓಡಾಡಿಕೊಂಡಿದ್ದಾನಲ್ಲ ಎಂದು ಅವರಿಗೂ ಹೊಟ್ಟೆಕಿಚ್ಚು' ಎಂದು ನಗುತ್ತಾರೆ ಜಯಂತ್‌ ಕಾಯ್ಕಿಣಿ.

ಹಾಗಂತ, ಕಾದಂಬರಿ ಬರೆಯದಿರುವುದಕ್ಕೂ ಒಂದು ಕಾರಣವಿದೆಯಂತೆ. "ನಾನು ಸ್ವಲ್ಪ ಸೋಮಾರಿ. ಮೇಲಾಗಿ ರೆಸ್ಟ್‌ಲೆಸ್‌. ಬರೆಯೋಣ ಅಂತ ಶುರು ಮಾಡಿ, ಒಂದು ಅಧ್ಯಾಯ ಬರೆದು ಮುಗಿಸಿ, ಕೊನೆಗೆ ಅದನ್ನು ವಿಶೇಷಾಂಕಕ್ಕೆ ಸಣ್ಣ ಕಥೆಯಾಗಿ ಕಳಿಸಿದ್ದೂ ಇದೆ. ಮತ್ತೆ ಬರೆದರಾಯ್ತು ಅಂತ ಸುಮ್ಮನಾಗಿದ್ದೂ ಇದೆ. ಹೀಗಾಗಿ ಬರೆಯೋಕೇ ಆಗಿಲ್ಲ. ಒಂದು ಕಾದಂಬರಿ ಬರೆಯಬೇಕು' ಎನ್ನುತ್ತಾರೆ ಅವರು.

ಅರ್ಧ ತಿಂದ ಬಿಸ್ಕೆಟ್‌ ಪ್ಯಾಕ್‌ನ ಕಥೆ
ಹಾಗೆ ನೋಡಿದರೆ, ಸಣ್ಣ ಕಥೆಗಳು ಕಿರುಚಿತ್ರಗಳಿಗೆ ಹೇಳಿ ಮಾಡಿಸಿದಂತಿರುತ್ತವೆ ಎನ್ನುತ್ತಾರೆ ಅವರು. "ಇದು ಸಣ್ಣ ಸಿನಿಮಾಗಳ ಕಾಲ. ತುಂಬಾ ಜನ ಕಿರುಚಿತ್ರ ಮಾಡೋಕೆ ಮುಂದೆ ಬರುತ್ತಿದ್ದಾರೆ. ಸ್ಮಾರ್ಟ್‌ಫೋನ್‌ನಲ್ಲೇ ಒಂದೊಂದು ಸಿನಿಮಾ ಮಾಡುತ್ತಿದ್ದಾರೆ. ಅಂಥವರಿಗೆ  ಸಣ್ಣ ಕಥೆಗಳು ಬಹಳ ಪ್ರಶಸ್ತವಾಗಿರುತ್ತವೆ. ಇತ್ತೀಚೆಗೆ "ಚೂರಿಕಟ್ಟೆ' ಚಿತ್ರಕ್ಕೆ ಹಾಡು ಬರೆಸುವುದಕ್ಕೆ ವಾಸುಕಿ ವೈಭವ್‌ ಬಂದಿದ್ದರು. ಬಂದ ಸಂದರ್ಭಲ್ಲಿ, ಹಾಡು ಕೇಳಿಸಬೇಕು ಅಂತ ಬ್ಯಾಗ್‌ ತೆಗೆದರು. ಅದರಲ್ಲೊಂದು ಗ್ಲೋಕೋಸ್‌ ಬಿಸ್ಕೆಟ್‌ ಪ್ಯಾಕ್‌ ಇತ್ತು. ನೋಡಿದರೆ, ಅವರ ಬ್ಯಾಗ್‌ ಬದಲಾಗಿತ್ತು.

ನೋಡಿ, ಒಂದು ಕಿರುಚಿತ್ರಕ್ಕೆ ಈ ತರಹದ ಕಥೆಗಳು ಎಷ್ಟು ಚೆನ್ನಾಗಿರುತ್ತವೆ ಅಂತ. ಅರ್ಧ ತಿಂದ ಬಿಸ್ಕೆಟ್‌ ಪ್ಯಾಕ್‌ ಒಂದು ಕಥೆ ಹೇಳುತ್ತದೆ. ಅಷ್ಟೇ ಸಾಕು. ಹಿಂದೊಮ್ಮೆ ಹೃಷಿಕೇಶ್‌ ಮುಖರ್ಜಿ ಅವರ ಸಿನಿಮಾ ನೋಡಿದ್ದೆ. ಅದರಲ್ಲಿ ಒಬ್ಬ ಗುಜರಿ ಅಂಗಡಿಯಿಂದ ಒಂದು ಕಪಾಟು ತರುತ್ತಾನೆ. ಅದನ್ನು ತೆಗೆದು ನೋಡಿದರೆ, ಅದರಲ್ಲಿ ಸಾಮಾನು ಇರುತ್ತದೆ. ಈ ಕಥೆ ಒಂದು ಕಿರುಚಿತ್ರಕ್ಕೆ ಅದ್ಭುತವಾಗಿರುತ್ತದೆ. ಅದಕ್ಕೆ ಹೇಳಿದ್ದು, ಸಣ್ಣ ಕಥೆಗಳು, ಕಿರುಚಿತ್ರಗಳಿಗೆ ದೊಡ್ಡ ವರದಾನ ಎಂದು. ನನ್ನ ಒಂದೆರೆಡು ಕಥೆಗಳನ್ನು ಅರವಿಂದ್‌ ಕುಪ್ಪೀಕರ್‌ ಅವರು ಕಿರುಚಿತ್ರ ಮಾಡಿದ್ದಾರೆ' ಎನ್ನುತ್ತಾರೆ ಜಯಂತ್‌ ಕಾಯ್ಕಿಣಿ.

ಬಾಲು, ಪಿಚ್ಚು, ಆಟ ಎಲ್ಲವೂ ಹೊಸದು
ಜಯಂತ್‌ ಕಾಯ್ಕಿಣಿ ಅವರಿಂದ ಹಾಡು ಬರೆಸೋಕೆ ಬರುವವರು, ಅವರ ಹಳೆಯ ಹಾಡುಗಳ ಗುಂಗಲ್ಲೇ ಬರುತ್ತಾರಾ ಅಥವಾ ಏನಾದರೂ ಹೊಸ ಯೋಚನೆಯೊಂದಿಗೆ ಬರುತ್ತಾರಾ ಎಂಬ ಪ್ರಶ್ನೆಯೊಂದು ಬಂತು. ಮೆಲೋಡಿ ಗುಂಗಲ್ಲೇ ಬರುತ್ತಾರೆ ಎಂದು ಜಯಂತ್‌ ಕಾಯ್ಕಿಣಿ ಹೇಳಿಕೊಂಡರು. "ವಿದ್ಯಾರ್ಥಿ ಭವನಕ್ಕೆ ಹೋಗೋರು ಸಹಜವಾಗಿ ದೋಸೆ ತಿನ್ನೋಕೆ ಹೋಗುತ್ತಾರೆ. ಅಲ್ಲಿ ಬಿರಿಯಾನಿ ಕೇಳ್ಳೋಕ್ಕಾಗಲ್ಲ. ಹಾಗೆಯೇ ನನ್ನ ಹತ್ತಿರ ಮೆಲೋಡಿಗೆ ಬರುತ್ತಾರೆ.

ನನ್ನ ಹಳೆಯ ಹಾಡುಗಳನ್ನು ಉದಾಹರಿಸಿ, ಆ ತರಹ ಬೇಕು ಎನ್ನುತ್ತಾರೆ. ಅವರಿಗೆ ನಾನು ಹೇಳ್ಳೋದು ಒಂದೇ. "ಅದೇ ತರಹ ಬೇಕು ಎನ್ನಬೇಡಿ. ಅದೇ ತರಹ ಆದರೆ, ಬೇರೆ ಹುಟ್ಟುವುದಿಲ್ಲ. ನಿನ್ನೆ ಮ್ಯಾಚ್‌ನಲ್ಲಿ ಸೆಂಚ್ಯುರಿ ಹೊಡೆದಿರಬಹುದು. ಆದರೆ, ಇವತ್ತು ಬಾಲು, ಪಿಚ್ಚು, ಆಟ ಎಲ್ಲವೂ ಹೊಸದು. ಹಾಗಾಗಿ ಹಳೆಯ ಹಾಡಿನ ಗುಂಗಿನಲ್ಲಿ ಬಂದರೂ, ಅವರಿಗೆ ಅರ್ಥ ಮಾಡಿಸಬೇಕು. ಇನ್ನು ಸ್ಕ್ರಿಪ್ಟ್ ಓದೋದು ಒಂದು ಕಲೆ. ಕೇಳುವಾಗ ದೃಶ್ಯಗಳು ಕಾಣಿಸಬೇಕು.

ಅದೇ ತರಹ ಬರೀ ಸಾಹಿತ್ಯವಷ್ಟೇ ಅಲ್ಲ, ಅದನ್ನು ಅರ್ಥಪೂರ್ಣವಾಗಿ ಹಾಡಿದಾಗಲಷ್ಟೇ ಅರ್ಥ ಆಗೋದು. ಬರೆಯುವಾಗ, ಒಂದು ಶಬ್ಧ ಚೆನ್ನಾಗಿದೆ ಅನಿಸಬಹುದು. ಉದಾಹರಣೆಗೆ, ನಿಟ್ಟುಸಿರು ಎಂಬ ಪದ ಕೇಳ್ಳೋದಕ್ಕೆ ಚೆನ್ನಾಗಿರಬಹುದು. ಆದರೆ, ಹಾಡುವಾಗ ಕಷ್ಟ. ಹಾಗಾಗಿ ಹಾಡಿದಾಗಲೇ ಅರ್ಥ ಆಗೋದು. ಅದೇ ಕಾರಣಕ್ಕೆ ನಾನು ಎಲ್ಲರಿಗೂ ಹಾಡಿಸಿ ಕಳಿಸಿ ಎನ್ನುತ್ತೀನಿ. ಆಗ ಸೌಂಡಿಂಗ್‌ ಸರಿ ಹೋಗಲಿಲ್ಲ ಎಂದರೆ ಅದನ್ನು ತಿದ್ದುಪಡಿ ಮಾಡಬಹುದು' ಎಂಬುದು ಅವರ ಅಭಿಪ್ರಾಯ.

ನಾನು ಯೋಗರಾಜ್‌ ಭಟ್‌ ಅವರ ಫ್ಯಾನು
ಮೆಲೋಡಿಗೆ ಜಯಂತ್‌ ಕಾಯ್ಕಿಣಿ ಅವರ ಜನಪ್ರಿಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅವರಿಗೆ ವೈಯಕ್ತಿಕವಾಗಿ ಯಾವ ತರಹದ ಹಾಡು ಬರೆಯಬೇಕು ಅಂತ ಆಸೆ ಇದೆ ಎಂಬ ಪ್ರಶ್ನೆ ಸಹಜ. "ನನ್ನ ಜಾನರ್‌ನಲ್ಲೇ ನಾನಿನ್ನೂ ಸರಿಯಾಗಿ ಬರೆದಿಲ್ಲ. ಇನ್ನು ಬೇರೆ ಜಾನರ್‌ ಬಗ್ಗೆ ಹೇಗೆ ಹೇಳಲಿ? ನಾನು ಯೋಗರಾಜ್‌ ಭಟ್‌ ಅವರ ಫ್ಯಾನು. ಅವರು ಬಹಳ ಚೆನ್ನಾಗಿ ಬರೆಯುತ್ತಾರೆ. ಕೆಲಸವು ಸಾಲುಗಳು ಸರಿ ಬರದೆ ಇರಬಹುದು.

ಅದರಿಂದ ಒಳ್ಳೆಯ ಕೆಲಸವನ್ನು ಮರೆಯಬಾರದು. ಯುವಜನಾಂಗದ ಹತಾಶೆಯನ್ನು ಬಹಳ ಚೆನ್ನಾಗಿ ಹಿಡಿದಿಟ್ಟವರು ಅವರು. ಇವತ್ತು ಯುವಕರಿಗೆ ದೊಡ್ಡ ಹತಾಶೆ ಇದೆ. ಅವರಿಗೆ ಏನು ಮಾಡಬೇಕು ಅಂತ ಗೊತ್ತಿಲ್ಲ. ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರು ಭಟ್ಟರು. "ಜಾಕಿ' ಚಿತ್ರದಲ್ಲೊಂದು ಹಾಡು ಇದೆ. ಅದು ಸುಮ್ಮನೆ ಫಿಲ್‌ ಇನ್‌ ದಿ ಬ್ಲಾಂಕ್ಸ್‌ ಅಲ್ಲ. ಅಲ್ಲಿ ದೊಡ್ಡ ಹತಾಶೆ ಇದೆ. ಕನ್ನಡ ಓದಿದವರು ಇಲ್ಲಿಗೆ ವಲಸೆ ಬಂದು ಏನು ಮಾಡಬೇಕು ಅಂತ ಅವರಿಗೆ ಗೊತ್ತಾಗುತ್ತಿಲ್ಲ.

"ಮರಳು ದಿಣ್ಣೆ, ಬಾಳೆಹಣ್ಣು, ಪಂಕ್ಚರ್‌ ಅಂಗಡಿ, ಪಾನೀಪುರಿ, ರಾಗಿ ಮಿಷನ್‌, ಬಡ್ಡಿ ಸಾಲ, ರಿಯಲ್‌ ಎಸ್ಟೇಟ್‌, ಮೋರಿ ಕ್ಲೀನು ...' ಅನ್ನೋ ಸಾಲುಗಳಲ್ಲಿ ಹಳ್ಳಿಯಿಂದ ಬಂದವರು ಅದೆಷ್ಟು ಕಷ್ಟಪಡುತ್ತಿದ್ದಾರೆ ಅಂತ ಸೂಕ್ಷ್ಮವಾಗಿ ಹೇಳಿದ್ದಾರೆ. ಆ ಮೂಲಕ ಆ ಯುವಕರ ಹತಾಶೆಯನ್ನು ತೋರಿಸುತ್ತಿದ್ದಾರೆ. ನನ್ನ ಪ್ರಕಾರ ಇದು ನಿಜವಾದ ಬಂಡಾಯ ಕಾವ್ಯ. ಹಾಗಂತ ನಾನು ಅವರನ್ನು ಬರೀ ಹೊಗಳುತ್ತಿಲ್ಲ. ಒಬ್ಬ ಕನ್ನಡದ ವಿದ್ಯಾರ್ಥಿಯಾಗಿ ಹೇಳುತ್ತಿದ್ದೀನಿ.

ಇನ್ನೊಂದು ಕಡೆ ಅವರು ಬರೆಯುತ್ತಾರೆ, "ಹೃದಯ ಎಂಬ ಮಚೂರೀಲಿ ಕಟ್ಟಿ ಇಡ್ತೀನಿ ...' ಅಂತ. ಎಂಥಹ ಫ್ರೆಶ್‌ ಇಮೇಜ್‌ ಅದು. "ಜನ್ಮಜನ್ಮಕೂ ನಾ ನಿನ್ನ ಚರಣದಾಸಿ ...' ಅಂತ ಕೇಳಿಕೇಳಿ ಸಾಕಾಗಿದೆ. ಅದಕ್ಕೆಲ್ಲಾ ಹೊಸ ಇಮೇಜು ಕೊಟ್ಟವರು ಅದು. ಅದನ್ನೆಲ್ಲಾ ಹೇಗೆ ತೆಗೆದುಕೊಳ್ಳುತ್ತೀವೆ ಅನ್ನೋದು ಮುಖ್ಯ ಅಷ್ಟೇ' ಎನ್ನುತ್ತಾರೆ ಅವರು.

ಯಾವುದು ಸೇರಿಸುತ್ತೋ ಅದು ಆಧ್ಯಾತ್ಮ!
"ಕಲೆ ಎನ್ನುವುದು ಜನರನ್ನು ಸೇರಿಸಬೇಕೇ ಹೊರತು, ಒಡೆಯಬಾರದು' ಎಂಬುದು ಜಯಂತ್‌ ಕಾಯ್ಕಿಣಿ ಅವರ ಸ್ಪಷ್ಟ ಅಭಿಪ್ರಾಯ. "ಯಾವುದು ಸೇರಿಸುತ್ತದೋ ಅದೇ ಆಧ್ಯಾತ್ಮ. ಯಾವುದು ವಿಂಗಡಿಸುತ್ತದೋ ಅದಲ್ಲ. ಕಲೆ, ಶಿಕ್ಷಣ, ಹಬ್ಬ ಜನರನ್ನು ಸೇರಿಸುತ್ತದೆ. ನಮ್ಮ ತಂದೆ ಹೇಳ್ಳೋರು. ಭಾರತ ಬರೀ ದೇಶವಲ್ಲ, ಸಾವಿರ ಕಂಬಗಳ ಚಪ್ಪರ ಅಂತ. ನಮ್ಮ ದೇಶ ಅನ್ನೋದು ಸಾವಿರ ಕಂಬಗಳ ಮೇಲೆ ನಿಂತಿದೆ. ನಾವೆಲ್ಲಾ ಒಟ್ಟಗಿರುವುದೇ ನಿಜವಾದ ಧರ್ಮ.

ಆ ನಿಟ್ಟಿನಲ್ಲಿ ನನಗೆ ರಶ್‌ ಅಂದ ಬಹಳ ಇಷ್ಟ. ಆದರಿಂದ, ನಾವೆಷ್ಟು ಜನ ಇದ್ದೀವಿ ಅಂತ ಗೊತ್ತಾಗುತ್ತದೆ. ಸಿನಿಮಾ, ನಾಟಕ ಎಲ್ಲಾ ಜೊತೆಗೆ ನೋಡಬೇಕು. ಒಬ್ಬರೇ ಕೂತು ಮೊಬೈಲ್‌ನಲ್ಲಿ ನೋಡುವುದರಲ್ಲಿ ಮಜಾ ಇರುವುದಿಲ್ಲ. ಜನರ ಜೊತೆಗೆ ಸೇರಿದಾಗಲಷ್ಟೇ ಅರ್ಥ ಬರೋದು. ಕಲೆ ಎನ್ನುವುದು ಜಾತಿ, ಮತವನ್ನು ಮೀರಿದ್ದಂತದ್ದು. ಕಲೆ ಮಾಡಬೇಕಾದ ಕೆಲಸ ಎಂದರೆ ಜನರನ್ನು ಒಟ್ಟಾಗಿಸುವುದು' ಎಂದರು ಜಯಂತ್‌ ಕಾಯ್ಕಿಣಿ.

ಜೀವನ ಅರೆಯೋದಕ್ಕೆ ಕಲೆ ಬೇಕು!
ಏನೇ ಆದರೂ ಓದು ಬಹಳ ಮುಖ್ಯ ಎನ್ನುತ್ತಾರೆ ಅವರು. "ನಾನೇನು ಓದಿದೆ, ನೀವೇನು ಓದಿದಿರಿ ಎನ್ನುವುದಕ್ಕಿಂತ ಎಲ್ಲರೂ ಓದಬೇಕು ಮತ್ತು ಓದುವುದಕ್ಕೆ ಪ್ರೇರೇಪಿಸುವುದು ಬಹಳ ಮುಖ್ಯ. ಒಬ್ಬ ಸಂಗೀತಗಾರ ಸಾಹಿತ್ಯವನ್ನು ಓದೋದರಿಂದ ಇನ್ನಷ್ಟು ಬೆಟರ್‌ ಆಗುತ್ತಾರೆ. ಒಬ್ಬ ವಿಜ್ಞಾನದ ವಿದ್ಯಾರ್ಥಿ ಇದ್ದರೆ, ಅವನಿಗೆ ಕಲೆಯಲ್ಲಿ ಆಸಕ್ತಿ ಇರಬಾರದೆಂದೇನೂ ಇಲ್ಲ.

ಅಂಥವರನ್ನು ಓದುವುದಕ್ಕೆ ಪ್ರೇರೇಪಿಸಬೇಕು. ನಮ್ಮಗಿರುವುದು ಒಂದೇ ಬದುಕು. ನಾವು ಅದನ್ನಷ್ಟೇ ಜೀವಿಸುತ್ತಿರುತ್ತೀವಿ. ಆದರೆ, ಓದಿನಿಂತ ಹಲವು ಬದುಕುಗಳನ್ನು ಬದುಕಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯನಿಗೆ ಒಂದು ದೊಡ್ಡ ಎಕ್ಸ್‌ಪೋಷರ್‌ ಸಿಗುವುದು ಓದಿನಿಂದ. ಜೀವನವನ್ನ ಅರೆಯೋದಕ್ಕೆ ಕಲೆ ಬಳಸಿದರೆ, ಆಗ ಜೀವನಕ್ಕೊಂದು ಅರ್ಥ ಸಿಗುತ್ತದೆ' ಎನ್ನುತ್ತಾರೆ ಅವರು. 

Trending videos

Back to Top