CONNECT WITH US  

ನದಿ ದಾಟಲು ಹೊರಟ ಗುರುಗಳು ಮತ್ತು ಸರಾಸರಿ ವ್ಯಾಮೋಹ 

ನಿವೃತ್ತರು ಹಲವರು ತಮ್ಮ ಅಲ್ಪ ಸ್ವಲ್ಪ ಪಿಂಚಣಿ, ಎಫ್ಡಿ ಮೇಲಿನ ಬಡ್ಡಿಯಲ್ಲಿ ಹೆದರಿ ಹೆದರಿ ಖರ್ಚು ಮಾಡುತ್ತಾ ತಮ್ಮ ಜೀವನ ಸಾಗಿಸುವ ಮತ್ತು ಮೊಮ್ಮಕ್ಕಳು ಮನೆಗೆ ಬಂದಾಗ ಮಾತ್ರ ಧಾರಾಳವಾಗಿ ಪರ್ಸ್‌ ಬಿಚ್ಚುವ ಹೃದಯವಂತರು. ಶೇರಿನ ರಿಸ್ಕ್ ಬೇಡ ಎಂಬವರು. ಅವರ ಆಸಕ್ತಿ, ನಿರ್ಧರಿತ ಹಾಗೂ ಭದ್ರ ಹೂಡಿಕೆಯಲ್ಲಿ. ಕಡಿಮೆಯಾದರೂ, ನಿಗದಿತ ಪ್ರತಿಫ‌ಲ ನೀಡುವ ಬಡ್ಡಿದರದ ಆಧಾರದಲ್ಲಿಯೇ ಜೀವನ ಸಾಗಿಸುವ ಇಂತಹ ನಿವೃತ್ತರ, ಆರ್ಥಿಕ ದುರ್ಬಲರ ಒಂದು ದೊಡ್ಡ ವರ್ಗವೇ ಇದೆ. ಅವರುಗಳಿಗೆ ಈ ಏರುತ್ತಿರುವ ಬೆಲೆ ಮತ್ತು ಇಳಿಯುತ್ತಿರುವ ಬಡ್ಡಿ ಒಂದು ಅತಿ ಗಂಭೀರವಾದ ಸಮಸ್ಯೆಯೇ ಸರಿ.

What has destroyed every previous civilization has been the tendency to the unequal distribution of wealth and power. 
Henry George

ಹಿಂದಿನ ಪ್ರತಿಯೊಂದು ನಾಗರಿಕತೆಯನ್ನು ನಾಶ ಪಡಿಸಿದ್ದು ಯಾವುದೆಂದರೆ ಸಂಪತ್ತು ಮತ್ತು ಬಲದ ಅಸಮಾನ ಹಂಚೋಣದ ಪ್ರವೃತ್ತಿ. 
ಹೆನ್ರಿ ಜಾರ್ಜ್‌ 

 "ಕಾಸು ಕುಡಿಕೆ'ಯ ಕಳೆದ ಎಪಿಸೋಡಿನಲ್ಲಿ ನನ್ನೊಡನೆ ಕುಳಿತು ಒಂದು ಕೋಟಿ ರೂಪಾಯಿಗಳ ಜಿಜ್ಞಾಸೆ ನಡೆಸಿ ಅನಂತರ ಬಿರಬಿರನೆ ಹೊರಟೇಹೋದ ಕೋಟಿಗೊಬ್ಬ ಖ್ಯಾತಿಯ ಗುರುಗುಂಟಿರಾಯರು ಆಮೇಲೆ ನನಗೆ ಸಿಗಲೇ ಇಲ್ಲ! ನಾನೂ ಕೂಡಾ ಆಮೇಲೆ ಕರ್ನಾಟಕ ರಾಜಕೀಯ, ಗುಜರಾತ್‌ ಇಲೆಕ್ಷನ್‌ ಇತ್ಯಾದಿ ಪ್ರಸಂಗಗಳಲ್ಲಿ ಮುಳುಗಿಹೋಗಿದ್ದೆ. ಆದರೂ ನಿಗದಿತ ಆದಾಯ (Fixed Income)ಹೂಡಿಕೆಯ ಬಗ್ಗೆ ಅಗಾಗ್ಗೆ ಯೋಚನೆ ತಲೆಹೊಕ್ಕಾಗಲೆಲ್ಲ ಗುರುಗುಂಟಿರಾಯರು ನೆನಪಾಗದೆ ಇರುತ್ತಿರಲಿಲ್ಲ.

ಮೊನ್ನೆ ಶನಿವಾರ, ಸಂಜೆಯ ಸುಮಾರು ಎಂಟು ಗಂಟೆ. ಮನೆಯಲ್ಲಿ ಉದಯವಾಣಿ ಓದುತ್ತಾ ಕುಳಿತಿದ್ದೆ. ಅಚಾನಕ್ಕಾಗಿ ಗುರುಗುಂಟಿರಾಯರ ಫೋನ್‌ ಬಂತು. Afterಉಭಯಕುಶಲೋಪರಿ, ರಾಯರ ದನಿ ಸೀರಿಯಸ್ಸಾಯಿತು. ನಿಮ್ಮ ಕೋಟಿ ರುಪಾಯಿಯ ಕತೆ ಕೇಳಲಿಕ್ಕೆ ತುಂಬಾ ಖುಶಿಯಾಗ್ತದೆ ಮಾರಾಯೆ. ಹಿಂದೊಮ್ಮೆ ಇದೇ ರೀತಿ ಹೂಡಿಕೆಯ ಬಗ್ಗೆ ಜಿಲೇಬಿ, ಕಾಫಿ ಅಂತೆಲ್ಲ ಕತೆ ಹೇಳಿದ್ರಿ. ನಮ್ಮಂತ ಡಯಾಬಿಟೀಸ್‌ ಕೇಸುಗಳು ಏನ್‌ ಮಾಡ್ಬೇಕು? ನಮ್ಮ ಬಗ್ಗೆ ಕೂಡಾ ಸ್ವಲ್ಪ ಬರೀರಿ. ನಮಗೆ ಚಿನ್ನ, ಶೇರು ಎಲ್ಲ ಹಿಡಿಸುವುದಿಲ್ಲ. ಗೊತ್ತಾಯ್ತಾ? ನಾವು ಇರುವ ದುಡ್ಡನ್ನೆಲ್ಲ ಭಕ್ತಿಯಿಂದ ಕೊಂಡು ಹೋಗಿ ಬ್ಯಾಂಕಿನಲ್ಲಿ ಎಫ್ಡಿ ಮಾಡುವುದು. ಅದರಲ್ಲಿ ಬರುವ ಬಡ್ಡಿಯಲ್ಲಿ ಮಾತ್ರ ನಮಗೆ ಇಂಟರೆಸ್ಟ್‌. ಗೊತ್ತಾಯ್ತಾ?

ಹುØಂ.. 
ನಿಮ್ಮ ಸುಡುಗಾಡು ಶೇರು ಮಾರ್ಕೆಟ್‌ ಎಲ್ಲ ನಮ್ಗೆ ಬೇಡ. ನಾವು ಅದ್ರಲ್ಲಿ ದುಡ್ಡು ಹಾಕುವುದೂ ಬೇಡ. ಮನೆಮಠ ಎಲ್ಲ ಕಳೆದುಕೊಳ್ಳುವುದೂ ಬೇಡ. ನಮ್ಮಂತವರಿಗಾಗಿಯೂ ಬರೀಬೇಕು ನೀವು. ಅಂತ ತುಸು ಖಾರವಾಗಿಯೇ ಶುರು ಮಾಡಿದರು.
ಬರ್ಯೋಣ ಅದಕ್ಕೇನಂತೆ. ಏನು ಬರಿಬೇಕು? ನೀವೇ ಹೇಳಿ ಸಾರ್‌, ಅಂದೆ.

ಬರೀತೀರಾ, ಬರೀರಿ ಹಾಗಿದ್ರೆ. . , ಕಳೆದ ಒಂದು ವರ್ಷದಲ್ಲಿ ಎಲ್ಲದಕ್ಕೂ ಕ್ರಯ ಡಬ್ಬಲ್‌ ಆಗಿದೆ, ಬಡ್ಡಿ ದರ ಮಾತ್ರ ಸರೀ ಅರ್ಧ ಆಗಿದೆ. ಹಾಗಾದ್ರೆ, ನಾವೆಲ್ಲ ಬದುಕುವುದು ಹೇಗೆ? ಇದಕ್ಕೆ ನಿಮ್ಮ "ಕಾಸು ಕುಡಿಕೆ'ಯಲ್ಲಿ ಏನಾದ್ರು ಉತ್ತರ ಉಂಟಾ? ಅದೊಂದು ಬರೀರಿ ನೋಡ್ವ. ಪ್ರಶ್ನೆ ನೇರವಾಗಿ ತಲೆ ಮೇಲೆಯೇ ಏರಿ ಬಂತು. 

ಈ ಬಾರಿ ರಿಸರ್ವ್‌ ಬ್ಯಾಂಕ್‌ ಬಡ್ಡಿ ದರ ಹಾಗೆಯೇ ಇಟ್ಟಿದೆ. ಏರಿಕೆ ಇಲ್ಲ. ಇನ್ನು ಫೆಬ್ರವರಿಯಲ್ಲಿ ರಿಸರ್ವ್‌ ಬ್ಯಾಂಕ್‌ ಮೀಟಿಂಗ್‌ ಉಂಟಲ್ವಾ, ಬಡ್ಡಿ ದರದ ಮೇಲೆ? ನಾವೆಲ್ಲ ಅದನ್ನೇ ನಂಬಿ ಬದುಕುವವರು. ಅವಾಗಲಾದ್ರೂ ಬಡ್ಡಿ ದರ ಜಾಸ್ತಿ ಮಾಡ್ತಾರಂತಾ? ರಾಯರು ಜೋರಾಗಿಯೇ ಹೇಳಿದರು. 

ಹಿಂದೊಮ್ಮೆ ಮಡುಗಟ್ಟಿದ ಜಿಲೇಬಿ,ಕಾಫಿ ಸಮಸ್ಯೆಗೆ ಗಂಡ ಹೆಂಡಿರೊಳಗೆ ಹೇಗೋ ಹೊಂದಾಣಿಕೆ ಮಾಡಿಸಿ ಅವರನ್ನು ಸಾಗಹಾಕಿ¨ªಾಯಿತು. ಈಗ ಈ ಗುರುಗುಂಟಿರಾಯರನ್ನು ಏನಪ್ಪಾ ಮಾಡೋದು? ಅಂತ ಗಾಢವಾದ ಯೋಚನೆಯಲ್ಲಿ ಮುಳುಗಿದೆ. ಸಮಸ್ಯೆ ಗಂಭೀರದ್ದೇ! ಗುರುಗುಂಟಿರಾಯರಂತಹ ನಿವೃತ್ತರು ಹಲವರು ತಮ್ಮ ಅಲ್ಪ ಸ್ವಲ್ಪ ಪಿಂಚಣಿ, ಎಫ್ಡಿ ಮೇಲಿನ ಬಡ್ಡಿಯಲ್ಲಿ ಹೆದರಿ ಹೆದರಿ ಖರ್ಚು ಮಾಡುತ್ತಾ ತಮ್ಮ ಜೀವನ ಸಾಗಿಸುವ ಮತ್ತು ಮೊಮ್ಮಕ್ಕಳು ಮನೆಗೆ ಬಂದಾಗ ಮಾತ್ರ ಧಾರಾಳವಾಗಿ ಪರ್ಸ್‌ ಬಿಚ್ಚುವ ಹೃದಯವಂತರು. ಶೇರಿನ ರಿಸ್ಕ್ ಬೇಡ ಎಂಬವರು. ಅವರ ಆಸಕ್ತಿ, ನಿರ್ಧರಿತ ಹಾಗೂ ಭದ್ರ ಹೂಡಿಕೆಯಲ್ಲಿ. ಕಡಿಮೆಯಾದರೂ, ನಿಗದಿತ ಪ್ರತಿಫ‌ಲ ನೀಡುವ ಬಡ್ಡಿದರದ ಆಧಾರದಲ್ಲಿಯೇ ಜೀವನ ಸಾಗಿಸುವ ಇಂತಹ ನಿವೃತ್ತರ, ಆರ್ಥಿಕ ದುರ್ಬಲರ ಒಂದು ದೊಡ್ಡ ವರ್ಗವೇ ಇದೆ. ಅವರುಗಳಿಗೆ ಈ ಏರುತ್ತಿರುವ ಬೆಲೆ ಮತ್ತು ಇಳಿಯುತ್ತಿರುವ ಬಡ್ಡಿ ಒಂದು ಅತಿ ಗಂಭೀರವಾದ ಸಮಸ್ಯೆಯೇ ಸರಿ.

ಈಗ ಒಂದು ಪುಟ್ಟ ಕತೆ ಕೇಳಿ:
ಒಂದಾನೊಂದು ಕಾಲದಲ್ಲಿ, ಒಂದಾನೊಂದು ಊರಿನಲ್ಲಿ ಒಬ್ಬ ಸನ್ಯಾಸಿ ಇದ್ದ. ಧಾರ್ಮಿಕ ಪ್ರವಚನ ಮಾಡುತ್ತಾ ಊರೂರು ತಿರುಗುತ್ತಾ ಇರುತ್ತಿದ್ದ. ಒಂದು ದಿನ ರಾತ್ರಿ ಒಂದು ಚಿಕ್ಕ ಹಳ್ಳಿಯಲ್ಲಿ ಪ್ರವಚನ ನಡೆಯಿತು. ಮರುದಿನ ಬೆಳಗ್ಗೆ ಅಲ್ಲಿಂದ ಒಂದು ನದಿ ದಾಟಿ ಇನ್ನೊಂದೂರಿಗೆ ಹೋಗುವ ಪ್ರೋಗ್ರಾಂ ಇತ್ತು. ದಿನದ ಪ್ರವಚನ ಮುಗಿಸಿ ಮಲಗಿದ ಗುರುವಿಗೆ ಸಡನ್‌ ಆಗಿ ನಡುರಾತ್ರಿಯಲ್ಲಿ ಒಂದು ಡೌಟೋದಯವಾಯಿತು - ಆ ನದಿಯ ಆಳ ಎಷ್ಟು? ದಾಟಲು ದೋಣಿಯೇ ಬೇಕೇ? ಅಲ್ಲ, ಹಾಗೆಯೇ ನಡೆದುಕೊಂಡೇ ದಾಟಬಹುದೇ? ಸರಿ, ಕೂಡಲೇ ಅವರ ಸೇವೆಗಾಗಿ ನಿಯುಕ್ತನಾಗಿದ್ದ ಹುಡುಗನೊಬ್ಬನಿಗೆ ಬೆಳಗ್ಗೆ ಬೇಗ ಹೋಗಿ ನದಿಯ ಆಳವನ್ನು ತಿಳಿದು ಬರುವಂತೆ ಆರ್ಡರ್‌ ಕೊಟ್ಟ. ಆ ಹುಡುಗನಾದರೋ ಮಹಾ ಮೇಧಾವಿ! ಬೆಳಗ್ಗೆ ಆದಷ್ಟು ಬೇಗ ಎದ್ದು ನದಿಯ ಬಳಿಗೆ ಹೋಗಿ ಯಾರನ್ನೋ ವಿಚಾರಿಸಿದ. ನದಿಗೆ ಒಂದೊಂದು ಕಡೆ ಒಂದೊಂದು ಆಳ ಎಂದು ತಿಳಿದು ಬಂತು. 

ಗುರುಗಳಿಗೆ ಏನೆಂದು ಹೇಳುವುದು? ಸರಿಯಾದ ಒಂದು ಉತ್ತರ ಕೊಡಬೇಕಲ್ಲವೇ? ಅದಕ್ಕೆ ಒಂದು ಅಳತೆಗೋಲು ಹಿಡಿದುಕೊಂಡು ಒಂದು ಮರದ ಬೊಡ್ಡೆಯ ಮೇಲೆ ಏನೆಲ್ಲಾ ಕಸರತ್ತು ಮಾಡಿಕೊಂಡು ನದಿಯ ಹಲವು ಕಡೆಗಳಲ್ಲಿ ಆಳವನ್ನು ಅಳೆದ. ಆಮೇಲೆ ಯಾವುದೇ ಕ್ಯಾಲ್ಕುಲೇಟರ್‌ ಸಹಾಯ ಇಲ್ಲದೆ ತಲೆಯೊಳಗೇ ಏನೇನೋ ಮಣ ಮಣ ಮಾಡಿಕೊಂಡು ಆಳದ ಸರಾಸರಿ ಲೆಕ್ಕ ಹಾಕಿದ. ವಾಪಾಸು ಬಂದು ಗುರುವನ್ನು ಎಬ್ಬಿಸಿ ನದಿಯ ಆಳ 4 ಅಡಿ ಗುರುಗಳೇ ಎಂದು ತನ್ನ ಸರ್ವೆ ರಿಪೋರ್ಟ್‌ ಒಪ್ಪಿಸಿದ. ಬಾಲಕನ 4 ಅಡಿ ಆಳದ ರಿಪೋರ್ಟ್‌ ನಂಬಿ ನಿಶ್ಚಿಂತೆಯಿಂದ ನದಿ ದಾಟ ಹೋದ ಆರಡಿಯ ಗುರುಗಳು ಈ ಜಗತ್ತನ್ನೇ ದಾಟಿ ಪರಲೋಕವನ್ನು ಸೇರಿದರು. 

ಇದೇ ರೀತಿ ನಮ್ಮ ಭಾರತ ಸರಕಾರದ ಬಳಿಯೂ ಒಂದು ಅಳತೆಗೋಲು ಇದೆ- ಸರಾಸರಿ ಮಾಪನ. ದೇಶದ ಪ್ರಗತಿ, ಬೆಲೆಯೇರಿಕೆ ಇತ್ಯಾದಿ ಅಂಕಿ ಅಂಶಗಳನ್ನು ಕರಾರುವಕ್ಕಾಗಿ ಕಾಲ ಕಾಲಕ್ಕೆ ಬೇರೆ ಬೇರೆ ಆರ್ಥಿಕ ಕ್ಷೇತ್ರಗಳಲ್ಲಿ, ಬೇರೆ ಬೇರೆ ಜಾಗಗಳಲ್ಲಿ ಅಳತೆ ಮಾಡಿ; ಹಾಗೆ ಸಂಗ್ರಹಿಸಿದ ಬೆಟ್ಟದಷ್ಟು ಗಾತ್ರದ ಅಂಕೆ ಸಂಖ್ಯೆಗಳನ್ನು ಕಂಪ್ಯೂಟರ್‌ಗಳ ಸಹಾಯದಿಂದ ಸರಾಸರಿ ತೆಗೆಯುತ್ತಾರೆ. ವಾಸ್ತವದಲ್ಲಿ ಈ ಅಂಕಿ ಅಂಶಗಳು ಕೆಲವೆಡೆ ಜಾಸ್ತಿ, ಕೆಲವೆಡೆ ಕಡಿಮೆ, ಕೆಲವೆಡೆ ಏರು, ಕೆಲವೆಡೆ ತಗ್ಗು. ಕೆಲವೆಡೆ ಪ್ರಗತಿ, ಕೆಲವೆಡೆ ದುರ್ಗತಿ, ಕೆಲವೆಡೆ ದುಡ್ಡು, ಕೆಲವೆಡೆ ಬರೇ ಮಡ್ಡು. ಹುಡುಗನ ಅತ್ಯದ್ಭುತ ಮೇಧಾಶಕ್ತಿಯ ಸರಾಸರಿಯನ್ನು ನಂಬಿ ನದಿ ದಾಟಿದ ಗುರುವಿನಂತೆ ನಮ್ಮ ಸರಕಾರವೂ ಈ ಸರಾಸರಿ ಅಂಕಿಗಳನ್ನು ಹಿಡಿದುಕೊಂಡು ಪ್ರಗತಿ ಪಥದಲ್ಲಿ ಮುನ್ನಡೆಯುತ್ತದೆ. ಜೊತೆಗೆ ನಮ್ಮನ್ನೂ ಕೈಹಿಡಿದು ಮುನ್ನಡೆಸುತ್ತದೆ.

ನಮ್ಮ ದೇಶದ ಹಣಕಾಸು ವ್ಯವಸ್ಥೆಯ ಹೊಣೆ ರಿಸರ್ವ್‌ ಬ್ಯಾಂಕ್‌ (ಆರ್‌.ಬಿ.ಐ) ನ ತಲೆಯ ಮೇಲಿದೆ. ಬಡ್ಡಿ ದರ, ಹಣದ ಹರಿವು ಇವೆರಡು ಅದರ ಕೈಯಲ್ಲಿ ಇರುವ ಅಸ್ತ್ರಗಳು. ಆರ್ಥಿಕ ಪ್ರಗತಿ ಬೇಕೆಂದಾಗ ಹಣದ ಹರಿವು ಜಾಸ್ತಿ ಮಾಡಿ ಬಡ್ಡಿದರ ಕಡಿಮೆ ಮಾಡೋದು. ಪ್ರಗತಿಯೊಡನೆ ಬೆಲೆಯೇರಿಕೆ ಜಾಸ್ತಿಯಾದಾಗ ಬಡ್ಡಿದರ ಏರಿಸಿ ಹಣದ ಹರಿವನ್ನು ಕಡಿಮೆ ಮಾಡುವುದು, ಇದೊಂದು ಸಿದ್ಧ ಮಾದರಿ. ಫೆಬ್ರವರಿಯಲ್ಲಿ ಆರ್‌.ಬಿ.ಐ. ತನ್ನ ಕ್ರೆಡಿಟ್‌ ಪಾಲಿಸಿಯ ತ್ತೈಮಾಸಿಕ ಅವಲೋಕನ ಮಾಡುತ್ತದೆ. ಸರಾಸರಿ ಬೆಲೆಯೇರಿಕೆ, ಸರಾಸರಿ ಪ್ರಗತಿಯನ್ನು ಗಮನದಲ್ಲಿ ಇಟ್ಟುಕೊಂಡು ತನ್ನ ಬಡ್ಡಿ ದರವನ್ನು ಅಗತ್ಯ ಕಂಡಲ್ಲಿ ಪರಿಷ್ಕರಿಸುತ್ತದೆ. 

ಯಾವುದೇ ಅಂತಹ ಸರಾಸರಿ' ಪಾಲಿಸಿ ಬದಲಾವಣೆಯೂ ಎಲ್ಲರಿಗೂ ಸರಾಸರಿಯಾಗಿ ತಟ್ಟುವುದಿಲ್ಲ. ಒಂದೊಂದು ವರ್ಗದವರಿಗೆ ಒಂದೊಂದು ರೀತಿಯಲ್ಲಿ ತಟ್ಟುತ್ತದೆ. ಈ ಬಾರಿ ಬಡ್ಡಿ ದರವನ್ನು ಯಾವುದೇ ಬದಲಾವಣೆಯಿಲ್ಲದೆ ಹಾಗೆಯೇ ಇಟ್ಟಲ್ಲಿ ಅಥವ ಇನ್ನೂ ಇಳಿಸಿದಲ್ಲಿ ಉದ್ಯಮದವರಿಗೆ ಒಳಿತು. ಬೆಲೆಯೇರಿಕೆಯಿಂದ ಬಳಲುತ್ತಿರುವ ಗ್ರಾಹಕರಿಗೆ ಬಡ್ಡಿದರವನ್ನು ಏರಿಸಿ ಬೆಲೆಯೇರಿಕೆ ನಿಯಂತ್ರಿಸಿದರೆ ಒಳಿತು. ಗುರುಗುಂಟಿರಾಯರಂತಹ ನಿವೃತ್ತರಿಗೂ, ಇನ್ನೆಷ್ಟೋ ಮಂದಿ ಆರ್ಥಿಕ ದುರ್ಬಲ ಮಹಿಳೆಯರಿಗೂ ಮತ್ತು ಠೇವಣಿಯನ್ನೇ ನಂಬಿ ಬದುಕುವ ಇನ್ನಿತರ ಆರ್ಥಿಕ ಅಲ್ಪಸಂಖ್ಯಾತ ವರ್ಗದವರಿಗೂ ಬಡ್ಡಿ ದರ ಆದಷ್ಟು ಜಾಸ್ತಿಯಾಗಬೇಕಾಗಿರುವುದು ಬರೇ ಆಗ್ರಹ ಮಾತ್ರವಲ್ಲ ಅಗತ್ಯ ಕೂಡಾ. 

ಆದರೆ ಪ್ರಗತಿಯ ಹೆಸರಿನಲ್ಲಿ ಬಡ್ಡಿದರ ಕಡಿಮೆ ಮಾಡುತ್ತಾ ಹೋಗಿ ಜೊತೆ ಜೊತೆಗೆ ಹಣದುಬ್ಬರಕ್ಕೂ ಉತ್ತೇಜನ ನೀಡಿದರೆ, ಬಡ್ಡಿದರವನ್ನೇ ನಂಬಿ ಬದುಕುವ ಠೇವಣಿದಾರರ ಗತಿಯೇನು? ಇದನ್ನು ಅರ್‌.ಬಿ.ಐ. ಆಗಲಿ, ಅಥವ ವಿತ್ತ ಮಂತ್ರಾಲಯವಾಗಲಿ ವಿಶೇಷವಾಗಿ ಗಮನಕ್ಕೆ ತೆಗೆದುಕೊಳ್ಳುವುದೇ ಇಲ್ಲ. ಹಿರಿಯ ನಾಗರಿಕರಿಗೆ ಅರ್ಧ ಶೇಕಡಾ ಜಾಸ್ತಿ ಬಡ್ಡಿದರ ಕೊಟ್ಟ ಮಾತ್ರಕ್ಕೆ ಈ ಸಮಸ್ಯೆಗೆ ಸಮಗ್ರ ಪರಿಹಾರ ಕಂಡುಕೊಂಡಹಾಗೆ ಆಗುವುದಿಲ್ಲ ತಾನೇ? ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಂ ಹಾಗೂ ವಯ ವಂದನದಂತಹ ಯೋಜನೆಗಳು ಇದ್ದರೂ ಅದು ಎಲ್ಲಿಗೂ ಸಾಲುವುದಿಲ್ಲ ಎನ್ನುವುದು ಎಲ್ಲರ ದೂರು. 

ಆರ್ಥಿಕ ಪ್ರಗತಿಗಿಂತ ಮಹತ್ವದ್ದು ಅದರ ಸಮಾನ ಹಂಚಿಕೆ (equitable distribution). ಹಾಗಾದರೆ ಎಲ್ಲರೂ ಬದುಕಿಯಾರು. ಬರೇ ಪ್ರಗತಿ, ಪ್ರಗತಿ ಎಂದು ಸರಾಸರಿ ಲೆಕ್ಕದಲ್ಲಿ ನದಿದಾಟ ಹೊರಟರೆ ಹಲವರು ಅದರ ಪ್ರವಾಹದಲ್ಲಿ ಕೊಚ್ಚಿ ಹೋಗುವ ಅಪಾಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ದೇಶದ ಪ್ರಗತಿ ಕೆಲವೆಡೆ ಮಾತ್ರ ಮಡುಗಟ್ಟಿದ್ದು, ಸರಕಾರದ ದೃಷ್ಟಿಯು ಅಭಿವೃದ್ಧಿಯನ್ನು ಎಲ್ಲಾ ಆರ್ಥಿಕ ವರ್ಗಗಳಲ್ಲೂ ಸಮಾನವಾಗಿ ಪಸರಿಸುವೆಡೆ ಇರಬೇಕಾದ್ದು ಅತಿಮುಖ್ಯ. 

ಜಯದೇವ ಪ್ರಸಾದ ಮೊಳೆಯಾರ

Trending videos

Back to Top