CONNECT WITH US  

ಸ್ಯಾಲರಿಮ್ಯಾನ್‌ ಮತ್ತು ಕರಮುಕ್ತ ಆದಾಯ 

ನನಗೂ ನಮ್ಮ ದೇಶದ ಪ್ರಧಾನಿಯವರಿಗೂ ಹೆಚ್ಚು ವ್ಯತ್ಯಾಸ ಇಲ್ಲ ಎಂದು ಹಲವಾರು ಬಾರಿ ನನಗೆ ಅನಿಸಿದ್ದುಂಟು. ನಾಗಾನಾಥ್‌ ಇದ್ದಿದ್ರೆ ನಾನು ಹಾಗಂದ ಕೂಡಲೇ ಕ್ಷಣಾರ್ಧದಲ್ಲಿ ನನಗೊಂದು ಬಿಳಿಗಡ್ಡ ಅಂಟಿಸಿ, ತಲೆಗೆ ಒಂದು ಹಳೇ ಲುಂಗಿ ಸುತ್ತಿ , ಮುಖಕ್ಕೆ ಹ್ಯಾಪ ಕಳೆಯ ಲೇಪ ಕೊಟ್ಟು ಇಲ್ಲೇ  ಕೆಳಗೆ ಆಗಿನ ಪ್ರಧಾನಿಯ ಶೈಲಿಯಲ್ಲಿ ನನ್ನ ಕಾರ್ಟೂನ್‌  ಗೀಚಿ ಹಾಕ್ತಿದ್ರು. ಸಾಲದ್ದಕ್ಕೆ ಅಲ್ಲೇ  ಹಿಂದೆ ಗೋಡೆಯಲ್ಲಿ ಸೋನಿಯಾಜಿಯವರ ಉದ್ದ ಮೂಗಿನ ಪಟ ಕೂಡಾ ತೂಗು ಹಾಕ್ತಿದ್ರು ಅಥವಾ ಈ ಕಾಲಕ್ಕೆ ಅನ್ವಯಿಸುವುದಾ ದರೆ ಸ್ವಲ್ಪ ಗಡ್ಡ ಅಂಟಿಸಿ ಸೂಟ್‌ ಬೂಟ್‌ ತೊಡಿಸಿ ಒಂದು ಕೈಯನ್ನು ಆಕಾಶದಲ್ಲಿ ತೇಲಿಸಿ ಮೈಕ್‌ ಎದುರುಗಡೆ ಎದೆಯುಬ್ಬಿಸಿ ನಿಲ್ಲಿಸುತ್ತಿದ್ದರು. ಅದು ಬಿಡಿ, ನಾನೂ ನಮ್ಮ ದೇಶದ ಪ್ರಧಾನಿಯವರೂ ಒಂದೇ ರೀತಿ ಇರುವುದು ಲುಕ್ಕಿನಲ್ಲಿ ಅಲ್ಲ. ಸ್ಥಾನ ಮಾನಗಳಲ್ಲೂ ಅಲ್ಲ. ಒಂದೇ ಇರುವುದು ನಮ್ಮ ಪರಿಸ್ಥಿತಿಯಲ್ಲಿ!

ನಮ್ಮಲ್ಲಿ ಯಾವುದೇ ಪ್ರಧಾನಿ ಅಧಿಕಾರಕ್ಕೆ ಬರಲಿ, ಅವರು ಜಿಡಿಪಿ ಹೆಚ್ಚಳ ಮಾಡಿ ಅಭಿವೃದ್ಧಿ ತಂದ್ರೆ ಬೆಲೆಯೇರಿಕೆ ಸಿಕ್ಕಾಪಟ್ಟೆ ಅಯ್ತು ಸಾರ್‌ ಅಂತ ವಿರೋಧ ಪಕ್ಷದವರು ಗಲಾಟೆ ಮಾಡ್ತಾರೆ. ಬೆಲೆಯಿಳಿಕೆಗೆ ತೊಡಗಿದ್ರೆ ಗ್ರೋತೇ ಇಲ್ಲ ಅಂತ ಇಂಡಸ್ಟ್ರಿಯವ್ರು ಗಲಾಟೆ ಮಾಡ್ತಾರೆ, ಕೆಲ್ಸಾ ಇಲ್ಲ ಅಂತ ಜನ ಗಲಾಟೆ ಮಾಡ್ತಾರೆ. ಅಮೇರಿಕ ಯುರಪ್ಪುಗಳು ಎದ್ವೋ ... ಬಚಾವ್‌. ರುಪೀ, ಶೇರು ಗಟ್ಟೆಗಳು ನಳನಳಿಸುತ್ತವೆ. ಅವು ಬಿದ್ವೋ , ರುಪೀ ಲಾಗಾ ಹೊಡ್ದು ತೈಲದೊಂದಿಗೆ ಹಣದುಬ್ಬರವನ್ನೂ ಕೂಡಾ ಉಚಿತವಾಗಿ ಇಂಪೋರ್ಟ್‌ ಮಾಡಬೇಕಾಗಿ ಬರುತ್ತೆ. ಡೀಸಿಲ್‌,ರೇಶನ್‌,ಗೊಬ್ಬರ ಸಬ್ಸಿಡಿ ಕೊಡದಿದ್ರೆ ಮಮ್ತಾ ದೀದಿ ಕೋಪಿಸ್ಕೊಳ್ತಾರೆ, ಸರಕಾರಾನೇ ಉರುಳುತ್ತೆ, ಸಬ್ಸಿಡಿ ಕೊಟ್ರೋ ಸರಕಾರವೇ ಬೀದಿ ಬದಿ ನಿಂತು ಸಾಲ ಬೇಡೋ ಪರಿಸ್ಥಿತಿ ನಿರ್ಮಾಣ ಆಗತ್ತೆ. 

ನಂಗೂ ಅಷ್ಟೆ, ಈ ಕುಡಿಕೆ ಪುರಾಣ ಆರಂಭ ಮಾಡಿದಾಗಿನಿಂದ ನನ್ನ ಪರಿಸ್ಥಿತಿಯೂ ತೋಡಾ ಬಹುತ್‌ ಹಾಗೆಯೇ ಆಗಿದೆ. ಕಾಕುನಲ್ಲಿ ಒಂದಿನ ರಾಯರು ಇಲ್ದಿದ್ರೆ ಸಾರ್‌ ಇವತ್ತು ಗುರು ಗುಂಟಿರಾಯರು ಯಾಕೆ ಬರ್ಲಿಲ್ಲ? ಬಂದ್ರೆ,"ಎಲ್ಲಿ ಬಹೂರಾನಿ ಕಾಣಿಸ್ತಾನೆ ಇಲ್ವಲ್ಲ ಕೆಲವು ವಾರಗಳಿಂದ?' ಇಬ್ರೂ ಬಂದ್ರೆ ಇವತ್ತು ಮ್ಯಾಟರ್‌ ಸ್ವಲ್ಪ ತೆಳುವಾಯೆ¤àನೋ? ಮ್ಯಾಟರ್‌ ಉದ್ದ ಎಳ್ದೆ  ಇದೇನ್ಸಾರ್‌ ಇವತ್ತು ನೇರವಾಗಿ ವಿಷಯಕ್ಕೆ ಬಂದಿದೀರಾ? ಇಂಟ್ರೊಡಕ್ಷನ್ನೇ ಇಲ್ಲ ಈ ಬಾರಿ? ಹೀಗೆ ಹತ್ತು ಹಲವರಿಂದ ಹನ್ನೊಂದು ಹಲವು ಫೀಡ್‌ ಬ್ಯಾಕ್‌ .

ಕಳೆದ ವಾರದ "ಚಾಪ್ಟರ್‌ 6' ಬಗ್ಗೆ ಕೊರೆತ ಓದಿದ ತಿಂಬಕ್ಟು ವಿನ ತಿಮ್ಮಕ್ಕ "ರೀ ಸ್ವಾಮೀ ಮೊಳೆ ರಾಯರೇ, ಬರೇ ಹೂಡಿಕೆ ಆಧಾರಿತ ಕರ ವಿನಾಯತಿಯ ಬಗ್ಗೆ ಮಾತ್ರ ಬರ್ದಿದೀರಲ್ಲ? ಒಬ್ಬ ಸಾಮಾನ್ಯ ಸ್ಯಾಲರಿ ಮ್ಯಾನ್‌ಗೆ ಸಂಬಳದಲ್ಲೇ  ಸಿಗುವ ಕರ ವಿನಾಯತಿಯ ಬಗ್ಗೆ ಯಾಕೆ ಬರೆದಿಲ್ಲ? ಸೆಕ್ಷನ್‌ 80 ಬಗ್ಗೆ ಕೊರೆತ ಕೇಳಿ ಕೇಳಿ ನನ್ನ ಈ ಇಕ್ಲೋತಾ ತಲೆ ಪೂರ್ತಿ ಕುಂಬಾಗಿದೆ. ಆ ಹಳೆ ಪ್ಲೇಟ್‌ ಬಿಟ್ಟು ತಾಕತ್ತಿದ್‌ರೆ  ಒಬ್‌ಬಾತನ ಸಂಬಳದ ಯಾವ ಯಾವ ಭಾಗಕ್ಕೆ ಕರ ವಿನಾಯತಿ ಸಿಗುತ್ತೆ ಅನ್ನೋದರ ಬಗ್ಗೆ ಮೊಳೆ ಹೊಡೀರಿ ನೋಡ್ವಾ? ಅಂತ ಒಂದು ಡೋಸ್‌ ಚುಚ್ಚಿದ್ದಾಳೆ. ಯಪ್ಪಾ.. ಯೆಂಡೆ ಭಗವಾನೆ..!! ಈ ತಿಂಬಕ್ಟು ತಿಮ್ಮಕ್ಕ ಒರುಪಾಡು ಶಲ್ಯವ. . .!!'

***
ಒಬ್ಬ ಸಂಬಳ ಪಡೆಯುವ ವ್ಯಕ್ತಿಯ ಆದಾಯದಲ್ಲಿ ಬಹುತೇಕ ಈ ಕೆಳಗಿನ ಭಾಗಗಳು ಇರುತ್ತವೆ. ಅದರಲ್ಲಿ ಕೆಲವದರ ಮೇಲೆ ಕರ ಇದ್ದರೆ ಇನ್ನು ಕೆಲವದರ ಮೇಲೆ ಕರ ವಿನಾಯತಿ ಇರುತ್ತದೆ. ಕರ ವಿನಾಯತಿ ಎಂದರೆ ಕರಮುಕ್ತ ಆದಾಯ . ಅಂತಹ ಮೊತ್ತವನ್ನು ನೇರವಾಗಿ ಆದಾಯದಿಂದ ಕಳೆಯುವುದು ಎಂದು ಅರ್ಥ. ಇದನ್ನು ಸದ್ರಿ ವಿತ್ತ ವರ್ಷ 2017 18 (ಅಂದರೆ ಅಸೆಸೆ¾ಂಟ್‌ ವರ್ಷ 2018 19) ಕ್ಕೆ ಅನ್ವಯಿಸಿಕೊಂಡು ಬರೆಯಲಾಗಿದೆ. (ಈ ಸಂದರ್ಭದಲ್ಲಿ ವಿತ್ತ ವರ್ಷ ಮತ್ತು ಅಸೆಸ್‌ಮೆಂಟ್‌ ವರ್ಷಗಳನ್ನು ಸಜ್ಜಿಗೆ ಬಜಿಲ್‌ ಮಾಡಿಕೊಳ್ಳದೆ ಶಾಂತಚಿತ್ತರಾಗಿ ಇರಬೇಕೆಂಬುದು ಯಾವತ್ತಿನಂತೆ ನಮ್ಮ ವಿನಮ್ರ ಕೋರಿಕೆ)

1 ಬೇಸಿಕ್‌/ಡಿಎ/ಪೆನ್ಷನ್‌ ಇತ್ಯಾದಿ
ಒಬ್ಬ ವ್ಯಕ್ತಿಯ ಬೇಸಿಕ್‌ ಸ್ಯಾಲರಿ ಮತ್ತು ಅದರ ಮೇಲೆ ಸಿಗುವ ಡಿಯರೆ°ಸ್‌ ಅಲೋವನ್ಸ್‌ ಮಾತ್ರವಲ್ಲದೆ ಕಮಿಶನ್‌, ಬೋನಸ್‌, ಸಿಟಿ ಕಂಪೆನ್ಸೇಟರಿ ಅಲೋವನ್ಸ್‌, ಸ್ಪೆಷಲ್‌ ಅಲೋವನ್ಸ್‌, ಓವರ್‌ಟೈಮ್‌ 
 ಇತ್ಯಾದಿ ಎಲ್ಲಾ  ರೀತಿಯ ಆದಾಯಗಳೂ ಸಂಪೂರ್ಣ ವಾಗಿ ಕರಾರ್ಹವಾಗುತ್ತವೆ. ಪ್ರತಿ ತಿಂಗಳು ಸಿಗುವ ಪೆನ್ಷನ್‌ ಕೂಡಾ ಸಂಪೂರ್ಣವಾಗಿ ಕರಾರ್ಹವಾಗಿ ಸ್ಯಾಲರಿ ತರಗತಿಯಲ್ಲಿಯೇ ಬರುತ್ತದೆ.

2 ಎಚ್‌ಆರ್‌ಎ (ಹೌಸ್‌ ರೆಂಟ್‌ ಅಲೋವನ್ಸ್‌) 
ಇದು ಸಂಪೂರ್ಣವಾಗಿ ಕರಾರ್ಹವಲ್ಲ. ಭಾಗಶಃ ವಿನಾಯತಿ ಇದರಲ್ಲಿ ದೊರೆಯುತ್ತದೆ. ಇದರಲ್ಲಿ ಕರ ವಿನಾಯತಿ ಈ ಕೆಳಗಿನ ಸೂತ್ರದಂತೆ ಇರುತ್ತದೆ. 

1. ಕಂಪೆನಿಯಿಂದ ಪಡೆದ ಎಚ್‌ಆರ್‌ಎ
2. ಬೇಸಿಕ್‌ ಸ್ಯಾಲರಿಯ ಶೇ.40 (4 ಮೆಟ್ರೋಗಳಲ್ಲಿ ಶೇ.50)
3. ಬೇಸಿಕ್ಕಿನ ಶೇ. 10ಕ್ಕಿಂತ ಜಾಸ್ತಿ ನೀಡಿದ ಮನೆ ಬಾಡಿಗೆ 
ಈ ಮೂರರಲ್ಲಿ ಯಾವುದು ಕನಿಷ್ಠವೋ ಅಷ್ಟು ಮೊತ್ತದ ಮೇಲೆ ಕರ ವಿನಾಯಿತಿ ಇರುತ್ತದೆ. ಅಂದರೆ, ಅಷ್ಟು ಬಿಟ್ಟು ಬಾಕಿ ಎಚ್‌ಆರ್‌ಎ ಮೊತ್ತದ ಮೇಲೆ ತೆರಿಗೆ ಇರುತ್ತದೆ. 

ಮೇಲಿನ ಸೂತ್ರವನ್ನು ಅತ್ಯಂತ ತಾಳ್ಮೆ ಮತ್ತು ಪುರುಸೊತ್ತಿನಿಂದ ಇನ್ನೊಂದೆರಡು ಬಾರಿ ಓದಬೇಕಾಗಿ ವಿನಂತಿ. ಹಾಗೆ ಪಾರಾಯಣ ಮಾಡಿದ ಮೇಲೂ ಅರ್ಥವಾಗದಿದ್ದರೆ ಬಿಟ್ಟು ಬಿಡಿ. ಜಾಸ್ತಿ ವರಿ ಮಾಡ್ಕೊàಬೇಡಿ. ಹೆಚ್ಚು ವರಿಗೆ ಹೆಚ್ಚುವರಿ ವಿನಾಯತಿ ಸಿಗುವು ದಿಲ್ಲ. ಸುಮ್ನೆ ಯಾಕೆ ಮಂಡೆ ಬಿಸಿ ಮಾಡ್ತೀರಿ, ಸುಮ್ನೆ ಲೆಕ್ಕಾಚಾರ ಹಾಕಿದ್ರೆ ಸಾಕು. ಅದ್ರ ಹಿಂದಿನ ಲಾಜಿಕ್‌ ಗೀಜಿಕ್‌ ಎಲ್ಲ ಯಾವೋ ನಿಗೆ ಬೇಕು ಸಾರ್‌? (ಅದನ್ನು ತಯಾರು ಮಾಡಿದವರಿಗೆ ಅರ್ಥ ಆಗಿದ್ದಿದ್ರೆ ನನಗದೇ ಸಂತೋಷ) ಇದಕ್ಕೆ ಬಾಡಿಗೆ ರಶೀದಿಗಳು ಬೇಕು. ಬಾಡಿಗೆ ಏರ್ಪಾಡು ಪತಿ ಪತ್ನಿಯರ ನಡುವೆ ಬಿಟ್ಟು ಬೇರಾರೊಂದಿಗೂ ಓಕೆ. ರೂ. 1 ಲಕ್ಷ ಮೀರಿದ ವಾರ್ಷಿಕ ಬಾಡಿಗೆ ನೀಡುತ್ತಿದ್ದಲ್ಲಿ ಹೌಸ್‌ ವಾನರನ ಪಾನ ನಂಬರ ಬೇಕು. 

3 ಕನ್ವೆಯನ್ಸ್‌ ಅಲೋವನ್ಸ್‌ 
ಈ ತಲೆಯಡಿಯಲ್ಲಿ ಮಾಸಿಕ ರೂ.1600ರ ವರೆಗೆ ಮಾತ್ರ ಕರ ವಿನಾಯತಿ. ಉಳಿದ ಮೊತ್ತ ಕರಾರ್ಹ. ಇದಕ್ಕೆ ಪ್ರತ್ಯೇಕ ಬಿಲ್ಲು ಬಾಣ ಗಳ ಅಗತ್ಯವಿರುವುದಿಲ್ಲ. ಅಷ್ಟು ಮೊತ್ತವನ್ನು ನೇರವಾಗಿ ಆದಾಯ ದಿಂದ ಕಳೆಯ ಬಹುದಾಗಿದೆ. ಮುಂದಿನ ವಿತ್ತ ವರ್ಷದಿಂದ (ಎಪ್ರಿಲ್‌ 2018  ಮಾರ್ಚ್‌ 2019) ಈ ರಿಯಾಯಿತಿ ಇರುವು ದಿಲ್ಲ. ಈ ಬಜೆಟ್ಟಿನಲ್ಲಿ ಘೋಷಿತವಾದ ಸ್ಟಾಂಡರ್ಡ್‌ ಡಿಡಕ್ಷನ್‌ ರೂ. 40,000ದ ಒಳಗಡೆ ಇದನ್ನು ವಿಲೀನಗೊಳಿಸಲಾಗಿದೆ. 

4 ಎಲ್‌ಟಿಎ (ಲೀವ್‌ ಟ್ರಾವೆಲ್‌ ಅಲೋವನ್ಸ್‌) 
ನಾಲ್ಕು ಕ್ಯಾಲೆಂಡರ್‌ ವರ್ಷಗಳ ಅವಧಿಯಲ್ಲಿ ಯಾವುದೇ 2 ರಜಾ ಪ್ರಯಾಣಗಳ ಊಟ ವಸತಿ ಇತ್ಯಾದಿ ಹೊರತುಪಡಿಸಿ ಬರೇ ಪ್ರಯಾಣ ವೆಚ್ಚಗಳಿಗೆ (ಸ್ವಂತ ಮತ್ತು ಆಶ್ರಿತ ಕುಟುಂಬದವ ರಿಗೆ) ಕರ ವಿನಾಯತಿ ಸಿಗುತ್ತದೆ. ಸದ್ರಿ ಕಾಲಾವಧಿ 2014 17. ಮುಂದಿನ ಕಾಲಾವಧಿ 2018 2021. ಇದರಲ್ಲಿ ರೈಲ್ವೇ, ಬಸ್‌, ಟ್ಯಾಕ್ಸಿ, ವಿಮಾನ ಯಾನಗಳ ಟಿಕೆಟ್ಟುಗಳನ್ನು ತೋರಿಸಬಹುದು. ಒಂದು ಸಿಟಿಯೊಳಗಡೆ ಸುತ್ತಾಡಿದ ವೆಚ್ಚವನ್ನು ಇದರಲ್ಲಿ ತೋರಿಸ ಲಾಗದು. ಬಿಂದುವಿನಿಂದ ಬಿಂದುವಿನ (point to point ) ನೇರ ಪ್ರಯಾಣ ಮಾತ್ರ ಇಲ್ಲಿ ಸಿಂಧು; ಅದೂ ಕೂಡಾ ಅತಿ ಹತ್ತಿರದ ಮಾರ್ಗವಾಗಿ. ಕೊಂಕಣ ಸುತ್ತಿ ಮೈಲಾರಕ್ಕೆ ಬಂದದ್ದಕ್ಕೆ ಕರ ವಿನಾ ಯಿತಿ ಸಿಗಲಾರದು. ನೇರ ಮಾರ್ಗದ ವೆಚ್ಚಕ್ಕೆ ಮಾತ್ರ ರಿಯಾಯಿತಿ. 

5 ಮೆಡಿಕಲ್‌ ಅವೋವನ್ಸ್‌ 
ವರ್ಷಕ್ಕೆ ರೂ.15,000ದ ವರೆಗೆ ಸ್ವಂತ ಮತ್ತು ಕುಟುಂಬದ ವರಿಗಾಗಿ ಮಾಡಿದ ಮೆಡಿಕಲ್‌ ವೆಚ್ಚದ ಮರು ಪಾವತಿಗೆ ಕರ ವಿನಾಯತಿ ಲಭ್ಯ. ಇದಕ್ಕೆ ಬಿಲ್ಲುಗಳನ್ನು ಉಳಿಸಿ ಕಂಪೆನಿಗೆ ಕೊಡಬೇಕಾಗುತ್ತದೆ. ಇದರಲ್ಲಿ ಸಾಮಾನ್ಯವಾಗಿ ಬಿಡಿ ಬಿಡಿಯಾಗಿ ಖರೀದಿಸಿದ ಔಷಧಗಳ ಬಿಲ್ಲುಗಳನ್ನು ತೋರಿಸಬಹುದು. ಮುಂದಿನ ವಿತ್ತ ವರ್ಷದಿಂದ (ಎಪ್ರಿಲ್‌ 2018  ಮಾರ್ಚ್‌ 2019) ಈ ರಿಯಾಯಿತಿ ಇರುವುದಿಲ್ಲ. ಈ ಬಜೆಟ್ಟಿನಲ್ಲಿ ಘೋಷಿತವಾದ ಸ್ಟಾಂಡರ್ಡ್‌ ಡಿಡಕ್ಷನ್‌ ರೂ.40,000ದ ಒಳಗಡೆ ಇದನ್ನು ವಿಲೀನಗೊಳಿಸಲಾಗಿದೆ. 

6 ಸೌಲಭ್ಯಗಳು
ಕಂಪೆನಿ ವತಿಯಿಂದ ಕಾರ್‌, ಮನೆ, ಸುಲಭ ದರದ ಸಾಲ ಇತ್ಯಾದಿ ಎÇÉಾ ರೀತಿಯ ಪರ್ಕ್ಸ್ ಅಥವಾ ಸೌಲಭ್ಯಗಳ ಮೌಲ್ಯ ವನ್ನು ಆದಾಯಕ್ಕೆ ಸೇರಿಸಿ ಅದರ ಮೇಲೆ ಕರ ಲೆಕ್ಕಾಚಾರ ಹಾಕಲಾಗುತ್ತದೆ. 

7 ನೌಕರರ ಭದ್ರತೆ 
ಕಂಪೆನಿಯು ನೌಕರರ ಭದ್ರತೆಗಾಗಿ ಸಂಸ್ಥೆಯ ವತಿಯಿಂದ ನೀಡುವ ಕೆಲ ದೇಣಿಗೆಗಳು ಸಂಪೂರ್ಣವಾಗಿ ಕರ ವಿನಾಯಿತಿಗೆ ಅರ್ಹವಾಗಿರುತ್ತದೆ. ಉದಾ: ಕಂಪೆನಿಯು ನಿಮ್ಮ ಪಿಎಫ್, ಪೆನ್ಶನ್‌, ಎನ್‌ಪಿಎಸ್‌, ಗ್ರೂಪ್‌/ಮೆಡಿಕಲ್‌ ಇನ್ಶೂರೆನ್ಸ್‌ ಇತ್ಯಾದಿ ನಿಧಿಗಳಿಗೆ ನೀಡಿದ ಪ್ರೀಮಿಯಂ/ದೇಣಿಗೆಗಳ ಮೇಲೆ ನೌಕರರು ಕರ ತೆರಬೇಕಾಗಿಲ್ಲ. ಅವನ್ನು ನಿಮ್ಮ ಆದಾಯಕ್ಕೆ ಸೇರಿಸಿ ಲೆಕ್ಕ ತೋರಿಸುವ ಅಗತ್ಯವೂ ಇಲ್ಲ. ಅವನ್ನು ಹಾಗೆಯೇ ಬಿಟ್ಟರಾಯಿತು. (ಆದರೆ ಸಂಬಳದಿಂದ ಕಡಿತವಾದ ನಿಮ್ಮ ಪಾಲಿನ ಪಿಎಫ್ ಮತ್ತು ಎನ್‌ಪಿಎಸ್‌ ದೇಣಿಗೆಗಳನ್ನು ಕಳೆದ ವಾರ ತಿಳಿಸಿದಂತೆ ನಿಮ್ಮ ಸೆಕ್ಷನ್‌ 80 ಅಡಿಯಲ್ಲಿ ಕಳೆಯಬಹುದು) 

8 ಪ್ರೊಫೆಶನಲ್‌ ಟ್ಯಾಕ್ಸ್‌ 
ಇದನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ವಿಧಿಸಲಾಗುತ್ತದೆ. ಕರ್ನಾಟಕದಲ್ಲಿ ಇದು ಮಾಸಿಕ ರೂ.200 ಅಂದರೆ ವಾರ್ಷಿಕ ರೂ.2400. ಇದನ್ನು ಒಟ್ಟು ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ. ಹಾಗೆ ಮಾಡುವುದರಿಂದ ಒಂದು ಕರದ ಮೇಲೆ ಇನ್ನೊಂದು ಕರ ಕಟ್ಟುವ ಪ್ರಮೇಯ ಇಲ್ಲದಾಗುತ್ತದೆ. 

9 ಎರಿಯರ್ಸ್‌
ಕೆಲ ಬಾರಿ ಉದ್ಯೋಗಿಗಳಿಗೆ ಎರಿಯರ್ಸ್‌ ಅಥವಾ ಹಿಂಬಾಕಿ ಸಂಬಳ ಬರುತ್ತದೆ. ಪೇ ರಿವಿಜನ್‌ ಹಿಂದಿನಿಂದ ಲಾಗೂ ಆಗುವಂತೆ ಬರುವಾಗ ಸ್ವಾಭಾವಿಕವಾಗಿ ಹಿಂಬಾಕಿ ಸಂಬಳ ನಿಮ್ಮ ಖಾತೆಗೆ ಏಕಗಂಟಿನಲ್ಲಿ ಬಂದು ಬೀಳುತ್ತದೆ. ಹೀಗೆ ಹಿಂದಿನ ಬಾಕಿ ಒಟ್ಟಿಗೇ ಬಂದರೆ ನಿಮ್ಮ ಆದಾಯ ತೆರಿಗೆಯ ಸ್ಲಾéಬ್‌ ಏಕಾಏಕಿ ಏರಿಬಿಟ್ಟು ಅದರ ಮೇಲೆ ಹೆಚ್ಚಿನ ದರದಲ್ಲಿ ಕರ ಕಟ್ಟಬೇಕು ಎನ್ನುವುದು ಅಲ್ಲಿನ ಸಮಸ್ಯೆ. ಕಾಲ ಕಾಲಕ್ಕೆ ಸಿಕ್ಕಿದ್ದರೆ ಕಡಿಮೆ ದರದಲ್ಲಿ ತೆರಿಗೆ ಬೀಳು ತ್ತಿತ್ತು. ಈ ಸಮಸ್ಯೆ ಹೋಗಲಾಡಿಸಲು ತೆರಿಗೆ ಕಾನೂನಿನಲ್ಲಿ ಒಂದು ಅವಕಾಶವಿದೆ. ಸೆಕ್ಷನ್‌ 89(1) ಎಂಬ ಬಹುಶ್ರುತ ಸೆಕ್ಷನ್‌ ಈ ಸಮಸ್ಯೆ ಯನ್ನು ಪರಿಹರಿಸುತ್ತದೆ. ಅದರ ಬಗ್ಗೆ ವಿವರವಾಗಿ ಇನ್ನೊಂದು ಬಾರಿ ಚರ್ಚಿಸೋಣ. ಸಧ್ಯಕ್ಕೆ ಕರಶಾಸ್ತ್ರದಲ್ಲಿ ಅಂತಹ ಒಂದು ಪರಿಹಾರ ಸೂಚಿತವಾಗಿದೆ ಎಂದು ತಿಳಿದಿದ್ದರೆ ಸಾಕು. 

10 ಇತರ ಆದಾಯ ಮತ್ತು ಟಿಡಿಎಸ್‌
ಎಲ್ಲರೂ ತಿಳಿದಿರುವಂತೆ ಟಿಡಿಎಸ್‌ ಅಂದರೆ ಟ್ಯಾಕ್ಸ್‌ ಡಿಡಕ್ಟೆಡ್‌ ಅಟ್‌ ಸೋರ್ಸ್‌ ಅಂದರೆ ಮೂಲದಲ್ಲಿ ಮಾಡಿದ ಕರ ಕಡಿತ. ಸಂಬಳ ಪಡೆಯುವ ಉದ್ಯೋಗಿಗಳಿಗೆ ನೂರಕ್ಕೆ ನೂರು ಅಂದರೆ ಸಂಪೂರ್ಣ ಕರ ಮೂಲದಲ್ಲಿಯೇ ಕಡಿತವಾಗಬೇಕು. ಆದರೆ ಕಂಪೆನಿಗಳಿಗೆ ಸಂಬಳದ ಹೊರತಾದ ನಿಮ್ಮ ಇತರ ಆದಾಯದ ಬಗ್ಗೆ ಅರಿವಿರುವುದಿಲ್ಲ. ಮನೆಮಟ್ಟುವಿನಿಂದ ಆದಾಯ, ಬಿಸಿನೆಸ್‌ ಆದಾಯ, ಕ್ಯಾಪಿಟಲ್‌ ಗೈನ್ಸ್‌, ಬಡ್ಡಿ ಮತ್ತಿತರ ಆದಾಯಗಳ ಮೇಲಿನ ಆದಾಯ ಕರವನ್ನು ಮುಂಗಡ ತೆರಿಗೆ ಸಹಿತ ಲೆಕ್ಕ ವೇಳಾಪಟ್ಟಿ ಪ್ರಕಾರ ಹಾಕಿ ನೀವೇ ಸರಕಾರಕ್ಕೆ ಕಟ್ಟತಕ್ಕದ್ದು. ಅದು ಉದ್ಯೋಗದಾತರ ಸುಪರ್ದಿಗೆ ಬರುವುದಿಲ್ಲ. 

ವಿ.ಸೂ: ಭಾರತದ ಆದಾಯ ಕರ ಕಾನೂನು ತುಂಬಾ ಕ್ಲಿಷ್ಟವಾಗಿದ್ದು, ಒಂದು ಹಂತವನ್ನು ಮೀರಿ ಸರಳೀಕರಿಸಲು ಬರುವುದಿಲ್ಲ. ಕಾಸು ಕುಡಿಕೆಯಲ್ಲಿ ಎಲ್ಲಾ ನಿರ್ದಿಷ್ಟ ಸಂದರ್ಭಗಳಿಗೂ ಅನ್ವಯಿಸು
ವಂತಹ ಕರ ಸಲಹೆಯನ್ನು ನೀಡಲು ಸಾಧ್ಯವಾಗುವುದಿಲ್ಲ. ಇಲ್ಲಿ ನೀಡುವ ಸ್ಥೂಲ ಕರ ವಿಚಾರಗಳು ಮಾಹಿತಿ ಮತ್ತು ಚರ್ಚೆಗೆ ಸಹಾಯಕ. ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಿಎ ಗಳ ಸಹಾಯ ತೆಗೆದುಕೊಳ್ಳುವುದು ಒಳ್ಳೆಯದು.

Trending videos

Back to Top