CONNECT WITH US  

ವಿತ್ತ ವರ್ಷದ ಕೊನೆ; ಮಾಡಲು ಇನ್ನೇನು ಬಾಕಿ?

ಹಲವು ಬಾರಿ ನಾವು ಮೂಲದಲ್ಲಿಯೇ ಕರ ಕಡಿಸಿಕೊಳ್ಳುತ್ತೇವೆ. ಆದರೆ, ಎಷ್ಟೋ ಆದಾಯಗಳ ಸಂದರ್ಭಗಳಲ್ಲಿ ಮೂಲದಲ್ಲಿಯೇ ಕರ ಕಡಿಯುವ ಟಿಡಿಎಸ್‌ ಸೌಲಭ್ಯ ಇರುವುದಿಲ್ಲ.

ಇನ್ನೇನು ಈ ವಿತ್ತ ವರ್ಷ (2017-18) ಮಾರ್ಚ್‌ 31ಕ್ಕೆ ಮುಗಿಯುತ್ತದೆ. ಎಪ್ರಿಲ್‌ 1 ರಿಂದ ಹೊಸ ವಿತ್ತ ವರ್ಷ. ಹಾಗಾಗಿ ಈ ವರ್ಷಕ್ಕೆ ಸಂಬಂಧಿಸಿದಂತೆ ಕರ ವಿಚಾರವಾಗಿ ಏನೇನು ಬಾಕಿ ಇದೆ ಎನ್ನುವುದರ ಬಗ್ಗೆ ಎಲ್ಲರ ಆಸಕ್ತಿ ಇದ್ದೇ ಇದೆ. ಕಳೆದ ಕೆಲ ವಾರಗಳಲ್ಲಿ ಕರ ಉಳಿತಾಯಕ್ಕೆ ಸಂಬಂಧ ಪಟ್ಟಂತೆ ಹೂಡಿಕೆಗಳ ಬಗ್ಗೆ ಸಾಕಷ್ಟು ಕೊರೆದಿದ್ದೇನೆ. ಉಳಿದಂತೆ ಈಗ ಕರ ಪಾವತಿ ಹಾಗೂ ರಿಟರ್ನ್ಸ್ ಸಲ್ಲಿಕೆಯ ವಿಧಿ ವಿಧಾನಗಳ ಬಗ್ಗೆ ಒಂದಿಷ್ಟು ಕೊರೆಯೋಣ.

ಟಿಡಿಎಸ್‌
ಹಲವು ಬಾರಿ ನಾವು ಮೂಲದಲ್ಲಿಯೇ ಕರ ಕಡಿಸಿಕೊಳ್ಳುತ್ತೇವೆ. ಅದಕ್ಕೆ, ಟ್ಯಾಕ್ಸ್‌ ಡಿಡಕ್ಟೆಡ್‌ ಅಟ್‌ ಸೋರ್ಸ್‌ ಅಥವಾ ಟಿಡಿಎಸ್‌ ಎಂದು ಹೆಸರು. ಆದರೆ, ಎಷ್ಟೋ ಆದಾಯಗಳ ಸಂದರ್ಭಗಳಲ್ಲಿ ಮೂಲದಲ್ಲಿಯೇ ಕರ ಕಡಿಯುವ ಟಿಡಿಎಸ್‌ ಸೌಲಭ್ಯ ಇರುವುದಿಲ್ಲ. ಇದ್ದರೂ ಎಷ್ಟೋ ಎಡೆಗಳಲ್ಲಿ ಅದು ಪೂರ್ತಿ ತೆರಿಗೆಯ ಪ್ರಮಾಣ ದಲ್ಲಿ ಇರುವುದಿಲ್ಲ. ಭಾಗಶಃ ಮಾತ್ರ ಆಗಿರು ತ್ತದೆ. ಉದ್ಯೋಗಸ್ಥರ ಸಂಬಳದ ಆದಾಯದಲ್ಲಿ ಮಾತ್ರ ಅದು ಪೂರ್ತಿ ಪ್ರಮಾಣದಲ್ಲಿ ಕಡಿತವಾಗುತ್ತದೆ. ಅವರ ವಿಷಯದಲ್ಲೂ ಕೂಡಾ ಅವರ ಸಂಬಳೇತರ ಆದಾಯದ ಮೇಲೆ ಸಂಪೂರ್ಣ ಟಿಡಿಎಸ್‌ ಕಡಿತವಾಗಿರಲಾರದು. ಒಟ್ಟಾಗಿ ನೋಡಿದರೆ ಟಿಡಿಎಸ್‌ ಕಡಿತವನ್ನೂ ಮೀರಿ ಕರ ಕಟ್ಟುವುದು ಬಾಕಿ ಇರುತ್ತದೆ.
ಹಾಗಾದರೆ ಅಂತಹ ಸಂದರ್ಭಗಳಲ್ಲಿ ಕರ ಕಟ್ಟುವುದು ಹೇಗೆ? ಕಟ್ಟದಿದ್ದರೆ ಏನಾಗುತ್ತದೆ?

ಮುಂಗಡ ಕರ
ಆದಾಯ ತೆರಿಗೆ ಕಾನೂನು ಪ್ರಕಾರ ಟಿಡಿಎಸ್‌ ಕಳೆದು ವಾರ್ಷಿಕ ರೂ. 10,000 ಮೀರಿದ ಕರಬಾಕಿ ಇರುವವರು ವರ್ಷಾಂತ್ಯಕ್ಕೆ ಕಾಯದೆ ಆದಾಯ ಸಂಭವಿಸಿದಂತೆÇÉಾ ಮುಂಗಡವಾಗಿಯೇ ತೆರಿಗೆ ಕಟ್ಟುವುದು ಕಡ್ಡಾಯ. ಟಿಡಿಎಸ್‌ ಕಡಿತ ಯಾವುದಾದರೂ ಮೂಲದಲ್ಲಿ ಆಗಿದ್ದರೆ ಒಟ್ಟು ಕರದಿಂದ ಅದನ್ನು ಕಳೆದು ಉಳಿದ ಕರವನ್ನು ಲೆಕ್ಕ ಹಾಕಿ ಮುಂಗಡ ತೆರಿಗೆಯಾಗಿ ಕಟ್ಟತಕ್ಕದ್ದು. ಆದರೂ 2012ರ ಬಜೆಟ್‌ ಅನುಸಾರ ಬಿಸಿನೆಸ್‌ ಆದಾಯ ಇಲ್ಲದ
ಹಿರಿಯ ನಾಗರಿಕರಿಗೆ ಮುಂಗಡ ತೆರಿಗೆ ಕಟ್ಟುವುದರಿಂದ ಮುಕ್ತಿ ನೀಡಲಾಗಿದೆ ಎಂಬುದನ್ನು ಗಮನಿಸಿ.

ವೇಳಾಪಟ್ಟಿ
ಒಬ್ಬ ವ್ಯಕ್ತಿಯು ಮುಂಗಡ ತೆರಿಗೆಯನ್ನು ವರ್ಷದುದ್ದಕ್ಕೂ ಒಟ್ಟು ನಾಲ್ಕು ಕಂತುಗಳಾಗಿ ಈ ಕೆಳಗಿನಂತೆ ಕಟ್ಟತಕ್ಕದ್ದು. (ಅನ್ವಯ: ಸದ್ರಿ ವಿತ್ತ ವರ್ಷ 2017-18 ಅಂದರೆ, ಅಸೆಸೆ¾ಂಟ್‌ ವರ್ಷ 2018-19)

15 ಜೂನ್‌  2017ರ ಒಳಗೆ : ಒಟ್ಟು ತೆರಿಗೆಯ ಕನಿಷ್ಠ ಶೇ.15

15 ಸೆಪ್ಟೆಂಬರ್‌ 2017ರ ಒಳಗೆ : ಒಟ್ಟು ತೆರಿಗೆಯ ಕನಿಷ್ಠ ಶೇ.45

15 ಡಿಸೆಂಬರ್‌  2017ರ ಒಳಗೆ: ಒಟ್ಟು ತೆರಿಗೆಯ ಕನಿಷ್ಠ ಶೇ.75

15 ಮಾರ್ಚ್‌ 2018ರ ಒಳಗೆ :ಒಟ್ಟು ತೆರಿಗೆಯ ಶೇ.100

ಆದಾಯವನ್ನು ಮುಂಗಡವಾಗಿಯೇ ಊಹಿಸುವುದು ಹಲವು ಬಾರಿ ಕಷ್ಟವಾದ ಕಾರಣ ಈ ಲೆಕ್ಕಾಚಾರದ ಕನಿಷ್ಟ ಶೇ. 90 ಆದರೂ ವೇಳಾಪಟ್ಟಿ ಪ್ರಕಾರ ಕಟ್ಟುವುದು ಕಡ್ಡಾಯ.

ಉಳಿದ ಶೇ.10 ತೆರಿಗೆಯನ್ನು ವರ್ಷ ಮುಗಿದು ಆದಾಯ ಖಚಿತವಾಗಿ ತಿಳಿದ ಬಳಿಕ ರಿಟರ್ನ್ಸ್ ಸಲ್ಲಿಸುವ ಜುಲೈ 31, 2018 ಸಮಯಕ್ಕೆ ಕಟ್ಟಿದರೂ ಸಾಕು ಬಡ್ಡಿಗಿಡ್ಡಿ ಇಲ್ಲದೆ. ಈ ಅಂತಿಮ ಕಂತಿಗೆ "ಸೆಲ#… ಅಸೆಸೆ¾ಂಟ್‌ ಟ್ಯಾಕ್‌'Õ ಅನ್ನುತ್ತಾರೆ.

ಕರಕಟ್ಟುವುದು ಹೇಗೆ?
ಮುಂಗಡ ಕರವನ್ನು ಆದಾಯ ತೆರಿಗೆ ಇಲಾಖೆಯ ಜಾಲತಾಣಕ್ಕೆ ಹೋಗಿ ಇಂಟರ್ನೆಟ್‌ ಬ್ಯಾಂಕಿಂಗ್‌/ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಸೌಲಭ್ಯದ ಮೂಲಕ ಚಲನ್‌ ನಂ. 280 ಬಳಸಿ ಪಾವತಿ ಮಾಡಬಹುದು. ಜಾಲತಾಣ ನೀಡುವ ರಶೀದಿ ಸಂಖ್ಯೆಯನ್ನು ನಿಮ್ಮ ರಿಟರ್ನ್ಸ್ ಸಲ್ಲಿಕೆಯ ಸಮಯದಲ್ಲಿ ನಮೂದಿಸಬೇಕು. ಕರವನ್ನು ಬ್ಯಾಂಕುಗಳಿಗೆ ಹೋಗಿ ಭೌತಿಕವಾದ ಚಲನ್‌ ಮೂಲಕವೂ ಸಲ್ಲಿಸಬಹುದು. ಇಲಾಖೆಯು ಇವೆಲ್ಲವನ್ನೂ ಪಾನ್‌ ನಂಬರ್‌ ಮೂಲಕ ತಳಕು ಹಾಕುತ್ತದೆ.

ಮಾರ್ಚ್‌ 31, 2018ರಂದು ವಿತ್ತ ವರ್ಷ ಮುಗಿದ ಬಳಿಕ ಬಾಕಿ ಉಳಿದಿದ್ದರೆ ಅಂತಹ ಉಳಿಕೆಯಾದ ಸೆಲ#… ಅಸೆಸೆ¾ಂಟ್‌ ಟ್ಯಾಕ್ಸ್‌ ಜುಲೈ 2018ರ ಅಂತ್ಯದೊಳಗೆ ಕಟ್ಟಬಹುದು. ಬಾಕಿ ಟ್ಯಾಕ್ಸ್‌ ಲೆಕ್ಕಾಚಾರವನ್ನು ಇಲಾಖೆಯ ರಿಟರ್ನ್ಸ್ ತಯಾರಿ ತಂತ್ರಾಂಶ ಸ್ವಯಂ ಲೆಕ್ಕ ಹಾಕಿ ನಿಮಗೆ ಹೇಳುತ್ತದೆ.

ಈ ರೀತಿ ಟಿಡಿಎಸ್‌, ಅಡ್ವಾನ್ಸ್‌ ಟ್ಯಾಕ್ಸ್‌ ಹಾಗೂ ಸೆಲ#… ಅಸೆಸೆ¾ಂಟ್‌ ಟ್ಯಾಕ್ಸ್‌ - ಈ ಮೂವರೊಳಗೆ ನಿಮ್ಮ ಕರಭಾರ ಸಂಪೂರ್ಣವಾಗಿ ನಿವೃತ್ತಿಯಾಗಬೇಕು. ಒಂದು ವೇಳೆ ಈ ಸಮಯ ಪಟ್ಟಿಗೆ ಅನುಸಾರವಾಗಿ ಕರ ಕಟ್ಟದಿದ್ದರೆ ಏನಾಗುತ್ತದೆ? ಇದು ನಿಮ್ಮ ಮುಂದಿನ ಪ್ರಶ್ನೆ. ಹಾಗಾಗದಿದ್ದಲ್ಲಿ ಬಡ್ಡಿಗಳ ಸರಮಾಲೆಯೇ ಇದೆ.

ವಿಳಂಬ ದಂಡ
ಸೆಕ್ಷನ್‌ 234ಬಿ ಅಡಿಯಲ್ಲಿ ಮುಂಗಡ ಕರದ ಕನಿಷ್ಟ ಶೇ. 90 ಆದರೂ ವರ್ಷಾಂತ್ಯದ (ಮಾರ್ಚ್‌ 31, 2018) ಒಳಗೆ ಕರ ಪಾವತಿ ಮಾಡದಿದ್ದಲ್ಲಿ ವಿಳಂಬಾವಧಿಯ ಮೇಲೆ ಮಾಸಿಕ ಶೇ. 1ಬಡ್ಡಿ ವಿಧಿಸಲಾಗುತ್ತದೆ. ಈ ಬಡ್ಡಿಯನ್ನು ತೆರಿಗೆ ಬಾಕಿ ಮೊತ್ತದ ಶೇ. 1 ಪ್ರತಿ ತಿಂಗಳ ಅಥವಾ ಅದರ ಭಾಗದ ಲೆಕ್ಕದಲ್ಲಿ ವಿಧಿಸಲಾಗುತ್ತದೆ. ಇದು ಬಾಕಿ ಮೊತ್ತದ ಮೇಲೆ ನಾಲ್ಕು ತಿಂಗಳುಗಳಿಗೆ (ಜುಲೈ 31, 2018 ವರೆಗೆ) ಶೇ. 4 ಆಗಬಹುದು. ಇದು ಸರಳ ಬಡ್ಡಿ, ಚಕ್ರಬಡ್ಡಿ ಅಲ್ಲ.

ಅದಲ್ಲದೆ ಸೆಕ್ಷನ್‌ 234ಸಿ ಅಡಿಯಲ್ಲಿ ಮೇಲ್ಕಾಣಿಸಿದ ವೇಳಾ ಪಟ್ಟಿಯನ್ನು ಅನುಸರಿಸದೇ ತಡವಾಗಿ ತೆರಿಗೆ ಕಟ್ಟಿದಲ್ಲಿ ವಿಳಂಬದ ಕಾಲಕ್ಕೆ ಮಾಸಿಕ ಅಥವಾ ಅದರ ಭಾಗಕ್ಕೆ ಶೇ.1 ಹೆಚ್ಚುವರಿ ಬಡ್ಡಿ ಯನ್ನೂ ಕೂಡಾ ವರ್ಷಾಂತ್ಯದ (ಮಾರ್ಚ್‌ 31) ವರೆಗೆ ವಿಧಿಸ ಲಾಗುತ್ತದೆ. ಈ ಲೆಕ್ಕಾಚಾರವನ್ನು ಪ್ರತಿ ಕಂತಿಗೆ ಪ್ರತ್ಯೇಕವಾಗಿ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಮಾಡಲಾಗುತ್ತದೆ.ಅಂದರೆ ಏನೂ ಕಟ್ಟದೆ ಸುಖಾಸುಮ್ಮನೆ ಕಾಲಕಳೆದು ಜುಲೈಯಲ್ಲಿ ಎಚ್ಚೆತ್ತವರಿಗೆ ಎರಡೂ ಸೆಕ್ಷನ್‌ ಅಡಿಯಲ್ಲಿ ಈ ದಂಡ ಆಗುತ್ತದೆ.

ಆದರೆ ಈ ದಂಡಗಳು ಬಿಸಿನೆಸ್‌ ಆದಾಯ ಇಲ್ಲದ ಹಿರಿಯ ನಾಗರಿಕರಿಗೆ ಅನ್ವಯಿಸುವುದಿಲ್ಲ. ಹಾಗಾಗಿ 60 ದಾಟಿದ ಹಿರಿಯ ನಾಗರಿಕರು ಜುಲೈ 31ರ ಒಳಗೆ ಯಾವುದೇ ದಂಡ ಇಲ್ಲದೆ ಆದಾಯ ಕರ ಲೆಕ್ಕ ಹಾಕಿ ಬಾಕಿ ಮೊತ್ತ ಕಟ್ಟಿದರೆ ಸಾಕು.

ರಿಟರ್ನ್ ಸಲ್ಲಿಕೆಯಲ್ಲಿ ವಿಳಂಬ
ಕೆಲವೊಮ್ಮೆ ರಿಟರ್ನ್ ಫೈಲಿಂಗಿನ ಜುಲೈ 31ರ ಕೊನೆಯ ದಿನಾಂಕ ತಪ್ಪಿ ಹೋಗುತ್ತದೆ. ಸಕಾಲಕ್ಕೆ ಜುಲೈ 31ರಂದು ಕರ ಹೇಳಿಕೆ/ರಿಟರ್ನ್ ಫೈಲಿಂಗ್‌ ಮಾಡದಿದ್ದಲ್ಲಿ ಏನಾಗುತ್ತದೆ? ಇದು ಸಹಜವಾದ ಪ್ರಶ್ನೆ. ಇದರಲ್ಲಿ ಎರಡು ವಿಚಾರಗಳಿವೆ. ಕರ ಪಾವತಿ ಬಾಕಿ ಇಟ್ಟುಕೊಂಡು ಹೇಳಿಕೆ ಸಲ್ಲಿಸದೆ ಇರುವುದು ಮತ್ತು ಕರ ಬಾಕಿ ಇಲ್ಲದೆ ಕೇವಲ ಹೇಳಿಕೆ ಸಲ್ಲಿಕೆ ಬಾಕಿ ಇರುವಂತದ್ದು.

ಕರ ಬಾಕಿ ಇರುವವರು
ಜುಲೈ 31, 2018ರ ಬಳಿಕವೂ ಕರ ಬಾಕಿಯನ್ನು ಕಟ್ಟದೇ ಇದ್ದರೆ ಪ್ರತಿ ತಿಂಗಳ ವಿಳಂಬಕ್ಕೆ ಸೆಕ್ಷನ್‌ 234ಎ ಪ್ರಕಾರ ಬಾಕಿ ಮೊತ್ತದ ಮೇಲೆ ಶೇ.1 ಬಡ್ಡಿ ಹೆಚ್ಚುವರಿಯಾಗಿ ಸೇರಿಸಲ್ಪಡುತ್ತದೆ. (ಇದು ಮೇಲಿನ ಎರಡು ಸೆಕ್ಷನ್ನುಗಳ ದಂಡದ ಹೊರತಾಗಿ) ಅದು ಮುಂದಿನ ವರ್ಷದ 2019 ಮಾರ್ಚ್‌ 31 ರವರೆಗೆ ಮುಂದುವರಿಯಬಹುದು.

ಕರ ಇಲಾಖೆಯು ವಿಳಂಬ ಬಡ್ಡಿಯ ಹೊರತಾಗಿಯೂ ವಿಳಂಬ ದಂಡ (ಪೆನಾಲ್ಟಿ) ವಿಧಿಸುವ ಹಕ್ಕು ಉಳ್ಳ¨ªಾಗಿರುತ್ತದೆ. ಡಿಸೆಂಬರ್‌ ಅಂತ್ಯದವರೆಗೆ ಉಂಟಾದ ರಿಟರ್ನ್ಸ್ ಫೈಲಿಂಗ್‌ನಲ್ಲಿನ ವಿಳಂಬಕ್ಕೆ ರೂ. 5,000 ಹಾಗೂ ಮುಂದಿನ ಮಾರ್ಚ್‌ 31ರವರೆಗಿನ ವಿಳಂಬಕ್ಕೆ ರೂ. 10,000 ವರೆಗೆ ದಂಡ ಹಾಕುವ ಅಧಿಕಾರ ಇಲಾಖೆಗೆ ಇರುತ್ತದೆ. ಆದರೂ ವಾರ್ಷಿಕ ಆದಾಯ ರೂ 5 ಲಕ್ಷದ ಒಳಗಿರುವವರಿಗೆ ಗರಿಷ್ಟ ದಂಡ ರೂ. 1,000 ಮಾತ್ರ!

ಕರಬಾಕಿ ಇಲ್ಲದವರು
ಆದರೆ, ಕರ ಕಟ್ಟಲು ಯಾವುದೇ ಬಾಕಿ ಇಲ್ಲದೆ ಕೇವಲ ಹೇಳಿಕೆ ಸಲ್ಲಿಕೆಯಲ್ಲಿ ಮಾತ್ರ ವಿಳಂಬವಾದರೆ ಯಾವುದೇ ವಿಳಂಬ ಬಡ್ಡಿ ವಿಧಿಸಲಾಗುವುದಿಲ್ಲ. ಹಾಗೆ ಹೇಳಿದರೂ ಕೂಡಾ ಅದಕ್ಕೂ ಕೆಲ ಸಾಧಕ ಬಾಧಕಗಳಿವೆ.
ಮೊತ್ತ ಮೊದಲನೆಯದಾಗಿ, ಕರ ಹೇಳಿಕೆಯಲ್ಲಿ ರಿಫ‌ಂಡ್‌ ಕೇಳಿದವರಿಗೆ ರಿಫ‌ಂಡ್‌ ಬರುವುದು ತಡವಾಗುತ್ತದೆ. ಅಷ್ಟೇ
ಅಲ್ಲದೆ ನಿಮಗೆ ಬರಬೇಕಾದ ರಿಫ‌ಂಡ್‌ ಮೊತ್ತದ ಮೇಲೆ ಸಿಗುವ ಬಡ್ಡಿಯ ಮೊತ್ತದಲ್ಲಿ ಕಡಿತವಾಗುತ್ತದೆ. ಸಮಯಕ್ಕೆ ಸರಿಯಾಗಿ ಹೇಳಿಕೆ ಸಲ್ಲಿಸಿ ರಿಫ‌ಂಡ್‌ ಕೇಳಿದವರಿಗೆ 1 ಎಪ್ರಿಲ್‌ 2018 ರಿಂದ ಆರಂಭಗೊಂಡಂತೆ ರಿಫ‌ಂಡ್‌ ಬರುವವರೆಗಿನ ಅವಧಿಗೆ ಮಾಸಿಕ ಶೇ. 0.5 ಬಡ್ಡಿ ಸಿಗುತ್ತದೆ. ಕರ ಹೇಳಿಕೆ ಸಲ್ಲಿಕೆಯಲ್ಲಿ ವಿಳಂಬವಾದರೆ ಆ ಬಡ್ಡಿ ಹೇಳಿಕೆ ಸಲ್ಲಿಕೆಯ ತಿಂಗಳಿನಿಂದ ಮಾತ್ರ ಸಿಗುತ್ತದೆ. ಹಾಗಾಗಿ ರಿಫ‌ಂಡ್‌ ಉಳ್ಳವರು ರಿಟರ್ನ್ ಫೈಲಿಂಗಿನಲ್ಲಿ ವಿಳಂಬ ಮಾಡಲೇಬಾರದು.

ಎರಡನೆಯದಾಗಿ ದಿನಾಂಕ ಕಳೆದು ಮಾಡಿದ ರಿಟರ್ನ್ ಫೈಲಿಂಗನ್ನು ಪರಿಷ್ಕರಿಸುವಂತಿಲ್ಲ. ಕೆಲವು ಬಾರಿ ನಾವು ಸಲ್ಲಿಸಿದ ಹೇಳಿಕೆಯಲ್ಲಿ ತಪ್ಪುಗಳು ನುಸುಳಿವೆ ಎಂದು ನಮಗೆ ಆಮೇಲೆ ಗೋಚರಿಸುತ್ತವೆ. ಅಂತಹ ಸಂದರ್ಭಗಳಲ್ಲಿ ಆ ಹೇಳಿಕೆಗಳನ್ನು ಪರಿಷ್ಕರಿಸಿ ರಿವೈಸ್ಡ್ ರಿಟರ್ನ್ ಫೈಲಿಂಗ್‌ ಮಾಡುವ ಅವಕಾಶ ಯಾವತ್ತೂ ಇರುತ್ತವೆ. ಆದರೆ, ತಡವಾಗಿ ಫೈಲಿಂಗ್‌ ಮಾಡಿದ ಪ್ರಭೃತಿಗಳಿಗೆ ಆ ಅವಕಾಶ ಇರುವುದಿಲ್ಲ.

ಮೂರನೆಯದಾಗಿ ತಡವಾಗಿ ಕರ ಹೇಳಿಕೆ ಫೈಲಿಂಗ್‌ ಮಾಡುವ ಮಹನೀಯರಿಗೆ ತಮ್ಮ ಯಾವುದೇ ನಷ್ಟಗಳನ್ನು ಮನೆಮಟ್ಟು ಆದಾಯ/ನಷ್ಟಗಳನ್ನು ಹೊರತಾಗಿ ಮುಂದೊಯ್ಯಲು (ಕ್ಯಾರಿ ಫಾರ್ವರ್ಡ್‌) ಅಥವಾ ಹೊಂದಾಣಿಕೆ (ಸೆಟ್‌-ಆಫ್) ಮಾಡಲು ಸಾಧ್ಯವಿಲ್ಲ. ಸಕಾಲಕ್ಕೆ ಸಲ್ಲಿಕೆ ಮಾಡಿದವರು ಸೆಟ್‌- ಆಫ್ ಹಾಗೂ ಮುಂದಿನ 8 ವರ್ಷಗಳ ಕಾಲ ನಷ್ಟಗಳನ್ನು ಮುಂದೊಯ್ಯಬಹುದು.

ಬಹುತೇಕ ಜನರು ಆದಾಯ ಕರದ ಬಗ್ಗೆ ಜುಲೈ ತಿಂಗಳಲ್ಲಿ ಎಚ್ಚೆತ್ತುಕೊಳ್ಳುತ್ತಾರೆ. ಕರ ಪಾವತಿಯನ್ನೂ ರಿಟರ್ನ್ ಫೈಲಿಂಗ್‌ ಅನ್ನೂ ಒಟ್ಟಾಗಿ ಮಾಡಿದರೆ ಸಾಕು ಅನ್ನುವ ಉದಾಸೀನ ಭಾವ ಹಲವರಿಗೆ. ಆದರೆ ಮೇಲೆ ತಿಳಿಸಿದ ವೇಳಾಪಟ್ಟಿಯ ಪ್ರಕಾರ ಕರಪಾವತಿ ಮಾಡದೆ ಇದ್ದಲ್ಲಿ ವಿಳಂಬ ಬಡ್ಡಿ ಬರುತ್ತದೆ ಎನ್ನುವ ವಿಚಾರವನ್ನು ಮರೆ ಯುತ್ತಾರೆ. ಪ್ರತಿ ವರ್ಷವೂ ಅನ್ಯಾಯವಾಗಿ ಬಡ್ಡಿಪಾವತಿ ಮಾಡುತ್ತಾರೆ. ಶಿಸ್ತು ಬದ್ಧವಾಗಿ ಕರಪಾವತಿ ಮಾಡುತ್ತಾ ಬಂದಲ್ಲಿ ಬಡ್ಡಿ ಕಟ್ಟುವ ಪ್ರಮೇಯ ಬರುವುದಿಲ್ಲ.

ಕಟ್ಟ ಕಡೆಯ ದಿನಾಂಕ
ಕರ ಬಾಕಿ ಇರಲಿ, ಇಲ್ಲದೆ ಇರಲಿ, ಹೊಸ ಕಾನೂನು ಪ್ರಕಾರ ತಡವಾಗಿ ರಿಟರ್ನ್ಸ್ ಫೈಲಿಂಗ್‌ ಮಾಡಲು ಆಯಾ ಅಸೆಸೆ¾ಂಟ್‌ ವರ್ಷದ ಮಾರ್ಚ್‌ 31 ಕಟ್ಟ ಕಡೆಯ ದಿನಾಂಕ. ಹಳೆ ಕಾನೂನಿನಲ್ಲಿ ಆ ಅವಧಿ ಇನ್ನೂ ಒಂದು ವರ್ಷ ಜಾಸ್ತಿ ಇತ್ತು. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಇದೇ ಮಾರ್ಚ್‌ 31, 2018, ವಿತ್ತ ವರ್ಷ 2016-17 ಹಾಗೂ ವಿತ್ತ ವರ್ಷ 2015-16 ಇವೆರಡಕ್ಕೂ ಕೊನೆಯ ದಿನಾಂಕ. ಈ ಬಗ್ಗೆ ಹಲವರಿಗೆ ಎಸ್ಸೆಮ್ಮೆಸ್‌ ಈಗಾಗಲೇ ಬಂದಿರ ಬಹುದು. ಈ ಗಡು ದಾಟಿದರೆ ತಡವಾದ ರಿಟರ್ನ್ಸ್ ಫೈಲಿಂಗ್‌ (ಬಿಲೇಟೆಡ್‌) ಮಾಡಲು ಬರುವುದಿಲ್ಲ. ಅಮೇಲೆ ಏನಿದ್ದರೂ ಇಲಾಖೆಯನ್ನು ಸಂಪರ್ಕಿಸುತ್ತಲೋ, ಅವರ ನೋಟೀಸಿಗೆ ಉತ್ತರಿಸುತ್ತಲೋ ಕಾನೂನನ್ನು ಎದುರಿಸುವುದು ಮಾತ್ರ ಉಳಿದ ಉಪಾಯ. ಈಗೀಗ ಕರ ಇಲಾಖೆ ಜನ ಸಾಮಾನ್ಯರ ಸಾಮಾನ್ಯ ಅಪರಾಧಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದೆ. ವೃಥಾ ಕಾನೂನಿನ ಕೈಗೆ ಸಿಕ್ಕಿ ಹಾಕಿಕೊಳ್ಳಬೇಡಿ. ಸಮಯಕ್ಕೆ ಸರಿಯಾಗಿ ಬಾಕಿ ಕರ ಕಟ್ಟಿ ರಿಟರ್ನ್ಸ್ ಫೈಲಿಂಗ್‌ ಮಾಡಿ.

- ಜಯದೇವ ಪ್ರಸಾದ ಮೊಳೆಯಾರ

Back to Top