CONNECT WITH US  

ಶೇರು, ಮಾರುಕಟ್ಟೆ ನಮೂನೆಗಳು-ಪ್ರಾಥಮಿಕ ಜ್ಞಾನ

ಸಾಮಾನ್ಯವಾಗಿ ಶೇರು ಎಂದು ಕರೆಯುವುದು ಈ ಪಬ್ಲಿಕ್‌ ಲಿಮಿಟೆಡ್‌ ಕಂಪೆನಿಗಳ ಶೇರುಗಳನ್ನೇ. ಇದರಲ್ಲಿ ಸಾವಿ ರಾರು, ಲಕ್ಷಾಂತರ ಜನರು ಮೂಲಧನ ಹೂಡಿ ಶೇರು ಕೊಳ್ಳುತ್ತಾರೆ. ಎಲ್ಲಾ ಶೇರುಗಳೂ ಸಮಾನ ಮುಖ ಬೆಲೆ ಮತ್ತು ಸಮಾನ ಹಕ್ಕು ಹೊಂದಿರುತ್ತವೆ. ಬಂದ ಲಾಭಾಂಶದಲ್ಲಿ ಪ್ರತಿಯೊಂದು ಶೇರು ಕೂಡಾ ಸಮಾನ ಹಕ್ಕುದಾರ ಆಗಿರುತ್ತದೆ. ಒಬ್ಬರು ಅಂತಹ ಎಷ್ಟು ಶೇರುಗಳನ್ನೂ ಕೂಡಾ ಹೊಂದಿರಬಹುದು.

ಶೇರು - ಇದು ನಾವು ಪ್ರತಿದಿನ ಕೇಳಿಸಿಕೊಳ್ಳುವ ಪದ. ಪೇಪರ್‌, ಟಿವಿ, ಇಂಟರ್‌ನೆಟ್‌ ಎಲ್ಲೆಂದರಲ್ಲಿ ವಿವಿಧ ಕಂಪೆನಿಗಳ ಶೇರುಗಳ ದೈನಂದಿನ ಬೆಲೆ ಪ್ರಸಾರವಾಗುತ್ತಲೇ ಇರುತ್ತದೆ. ಜನ ಅಲ್ಲಲ್ಲಿ ಗುಂಪು ಗುಂಪಾಗಿ ಶೇರು ಬೆಲೆಗಳ ಅಧ್ಯಯನ ಮಾಡುತ್ತಾ, ಚರ್ಚೆ ಮಾಡುತ್ತಾ ಇರುತ್ತಾರೆ. ಇಮೈಲ್, ಮೊಬೈಲ್, ಟಿವಿ ಸೀರಿಯಲ್ಲುಗಳಂತೆ ಶೇರು ಮಾರುಕಟ್ಟೆಯೂ ಇತ್ತೀಚೆಗೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗುತ್ತಾ ಬಂದಿದೆ. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಮ್ಯೂಚುವಲ್‌ ಫ‌ಂಡ್‌ ಮೂಲಕ ವಾದರೂ ಶೇರುಗಳಲ್ಲಿ ಅಲ್ಪಸ್ವಲ್ಪವಾದರೂ ದುಡ್ಡು ತೊಡಗಿಸದ ವರು ಪ್ರಾಯಶಃ ಇಂದಿನ ದಿನದಲ್ಲಿ ಯಾರೂ ಇರಲಾರರು.

ಆದರೂ ಹೆಚ್ಚಿನ ಜನಸಾಮಾನ್ಯರಿಗೆ ಈ ಶೇರುಗಳ ಬಗ್ಗೆ ಸ್ಪಷ್ಟವಾದ ಪ್ರಾಥಮಿಕ ಮಾಹಿತಿ ಕೂಡಾ ಇಲ್ಲ. ಅದೇನೋ ಜೂಜಾಟ, ದುಡ್ಡು ಕಮಾಯಿಸುವ ಅಥವಾ ಕಳೆದುಕೊಳ್ಳುವ ಸುಲಭ ವ್ಯಸನ ಎಂಬ ಭಾವನೆ ಪ್ರಚಲಿತವಾಗಿದೆ. ಆದರೆ ಶೇರು ವಹಿವಾಟಿನ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲ, ಆಸಕ್ತಿ ಎಲ್ಲರಲ್ಲೂ ಖಂಡಿತವಾಗಿಯೂ ಇದೆ.

ಶೇರು ಹಾಗಂದರೇನು? 
ಯಾವುದೇ ಉದ್ಯಮಕ್ಕೆ ಅಥವಾ ಬಿಸಿನೆಸ್‌ಗೆ ಬಂಡವಾಳದ ಅಗತ್ಯ ಇದೆ ಅಲ್ಲವೆ? ಈ ಬಂಡವಾಳ ಹಲವಾರು ರೀತಿಯಿಂದ ಬರಬಹುದು. ಒಬ್ಬ ಮಾಲಿಕ ತನ್ನ ಸ್ವಂತ ಹಣವನ್ನು ಮೂಲ ಧನವಾಗಿ ಹೂಡಿ ಒಂದು ಬಿಸಿನೆಸ್‌ ಅರಂಭಿಸಬಹುದು. ಈ ರೀತಿಯ "ಏಕ ಮಾಲಿಕತ್ವ'ದ ಸಂಸ್ಥೆಯಲ್ಲಿ ಏಕಾಂಗಿಯಾಗಿ ಆತ ಹೂಡಿದ ಮೂಲಧನ ಸಂಪೂರ್ಣವಾಗಿ ಶೇ.100 ಆತನದ್ದೇ ಶೇರು ಆಗಿರುತ್ತದೆ. ಹೀಗೆ ಸಾಧ್ಯವಿದ್ದಷ್ಟು ಮೂಲಧನವನ್ನು ಸ್ವಂತ ಕೈಯಿಂದ ಹಾಕಿ ಉಳಿದ ಅಗತ್ಯದ ದುಡ್ಡನ್ನು ಸಾಲ (ಲೋನ್‌/ಡೆಟ್‌) ಆಗಿ ತೆಗೆದುಕೊಂಡು ಬಿಸಿನೆಸ್‌ ನಡೆಸಬಹುದಾಗಿದೆ. 

ಇನ್ನು ಕೆಲವೆಡೆ ಒಬ್ಬನೇ ಅಲ್ಲ, ಕೆಲವು ಹೂಡಿಕೆದಾರರು ಒಟ್ಟಿಗೆ ಸೇರಿ ಮೂಲಧನವನ್ನು ಒಟ್ಟಾಗಿಸುತ್ತಾರೆ. ಇದು "ಪಾಲುದಾರಿಕೆ' ಅಥವಾ ಪಾಟ್ನìರ್‌ಶಿಪ್‌ ಉದ್ದಿಮೆಗಳು. ಉಳಿದ ದುಡ್ಡನ್ನು ಬ್ಯಾಂಕು ಅಥವಾ ಇತರ ವ್ಯಕ್ತಿಗಳಿಂದ ಸಾಲ ರೂಪವಾಗಿ ಪಡೆದುಕೊಳ್ಳಬಹುದು. ಇಲ್ಲಿ ಪ್ರತಿಯೊಬ್ಬ ಪಾಲುಗಾರನೂ ಒಟ್ಟು ಬಂಡವಾಳದಲ್ಲಿ ಆತ ಹೂಡಿದ ದುಡ್ಡಿನ ಶೇಖಡಾನುಸಾರ ಶೇರುಗಳನ್ನು ಹೊಂದಿರುತ್ತಾನೆ.

ಏಕ ಮಾಲಿಕತ್ವ ಮತ್ತು ಪಾಟ್ನìರ್‌ಶಿಪ್‌ - ಈ ಎರಡೂ ಮಾದ ರಿಯ ಬಿಸಿನೆಸ್‌ಗಳಲ್ಲಿ ಹೂಡಿಕೆದಾರರು ಸಂಪೂರ್ಣವಾಗಿ ಬಿಸಿನೆ ಸ್ಸಿನ ಮಾಲಿಕರಾಗಿದ್ದು ಅದರ ಎಲ್ಲಾ ಲಾಭ ನಷ್ಟಗಳಿಗೆ ಅವರೇ ಹೊಣೆಯಾಗುತ್ತಾರೆ. ಬಂದ ಲಾಭ ಸಂಪೂರ್ಣವಾಗಿ ಮಾಲಿ ಕರಿಗೆ ಸಲ್ಲುತ್ತದಲ್ಲದೆ ಬಿಸಿನೆಸ್‌ನಲ್ಲಿ ನಷ್ಟವಾದರೆ ಅದನ್ನೂ ಸಹ ಅವರು ತಮ್ಮ ಸ್ವಂತ ಸಂಪನ್ಮೂಲದಿಂದ ಭರಿಸಬೇಕಾಗುತ್ತದೆ. ಎಷ್ಟೋ ಬಾರಿ ಇಂತಹ ಸಣ್ಣ ಸಂಸ್ಥೆಗಳು ನಷ್ಟದಲ್ಲಿ ಮುಳುಗಿ ಪಡಕೊಂಡ ಸಾಲವನ್ನು ಮಾಲಿಕರ ಸ್ವಂತ ಆಸ್ತಿಪಾಸ್ತಿಗಳಿಂದ ಭರಿಸಬೇಕಾಗಿ ಬಂದು ಅವರುಗಳು ದಿವಾಳಿಯೆದ್ದು ಹೋದದ್ದೂ ಇದೆ.

ಈ ರೀತಿ ಬಿಸಿನೆಸ್‌ನಲ್ಲಿ ಲಾಭ-ನಷ್ಟಗಳ ರಿಸ್ಕ್ ಪ್ರಬಲವಾಗಿ ಇರುವ ಪರಿಸ್ಥಿತಿಯಲ್ಲಿ ದೊಡ್ಡ ದೊಡ್ಡ ಉದ್ದಿಮೆಗಳನ್ನು ಹೇಗೆ ಹುಟ್ಟು ಹಾಕಲು ಸಾಧ್ಯ? ಯಾವ ವ್ಯಕ್ತಿ ತಾನೇ ಇಂತಹ ರಿಸ್ಕ್ ಉಳ್ಳ ಸಂಸ್ಥೆಗಳಲ್ಲಿ ದುಡ್ಡು ಹೂಡಿ ಮನೆಮಠ ಮಾರುವಂತಹ ಪರಿಸ್ಥಿತಿಗೆ ತನ್ನನ್ನು ತಾನು ತಂದಿರಿಸಿಕೊಳ್ಳಬಲ್ಲ? ಹಾಗಾದರೆ ಬೃಹತ್‌ ಬಂಡವಾಳದ ಅಗತ್ಯಕ್ಕೆ ಉತ್ತರವೇನು? ಇದಕ್ಕಾಗಿ ಕ್ಯಾಪಿಟಲಿಸ್ಟ್‌ ಸೂತ್ರಗಳನ್ನು ಅಳವಡಿಸಿಕೊಂಡಿರುವ ಎಲ್ಲಾ ದೇಶಗಳಲ್ಲೂ, ಕಾನೂನು "ಲಿಮಿಟೆಡ್‌ ಕಂಪೆನಿ' ಅಥವ "ನಿಯಮಿತ ಕಂಪೆನಿ'ಗಳನ್ನು ಸ್ಥಾಪಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿವೆ. ಹಾಗಾಗಿ ಕಾನೂನು ರೀತ್ಯಾ ಒಂದು "ಲಿಮಿಟೆಡ್‌ ಕಂಪೆನಿ'ಯಲ್ಲಿ ದುಡ್ಡು ಹೂಡಿದ ವ್ಯಕ್ತಿಯ ನಷ್ಟ ತಾನು ಹೂಡಿದ ಮೂಲಧನಕ್ಕೆ ಮಾತ್ರ ಲಿಮಿಟ್‌ ಅಥವಾ ಸೀಮಿತವಾಗಿರುತ್ತದೆ. ಬಿಸಿನೆಸ್‌ ನಷ್ಟ ಹೊಂದಿದಲ್ಲಿ ಅತಿ ಹೆಚ್ಚೆಂದರೆ ತಾನು ಹೂಡಿದ ಮೊತ್ತವನ್ನು ಮಾತ್ರವೇ ಕಳೆದುಕೊಳ್ಳಬೇಕಾದೀತೇ ಹೊರತು, ತನ್ನ ಮನೆಮಠಗಳನ್ನು ಹರಾಜು ಹಾಕಿಸಿಕೊಳ್ಳುವ ಪರಿಸ್ಥಿತಿ ಇರುವುದಿಲ್ಲ. ಬದಲಾಗಿ ಆ ಉದ್ದಿಮೆಗೆ ಸಾಲ ಕೊಟ್ಟ ಬ್ಯಾಂಕು/ವ್ಯಕ್ತಿಗಳು/ಕಂಪೆನಿಗಳು ದುಡ್ಡು ಕಳೆದುಕೊಳ್ಳುತ್ತವೆ. 

ಈ ಕಾನೂನೀಯ ಅವಕಾಶ ತೆರೆದುಕೊಂಡದ್ದೇ ಕೈಗಾರಿ ಕೋದ್ಯಮದ ವಿಕಾಸಕ್ಕೆ ಮುಖ್ಯ ಕಾರಣ. ಭಾರೀ ಸಂಖ್ಯೆಗಳಲ್ಲಿ ಲಿಮಿಟೆಡ್‌ ಕಂಪೆನಿಗಳು ಹುಟ್ಟಿಕೊಂಡು ಉದ್ಯಮವನ್ನು ಆರಂಭಿ ಸತೊಡಗಿದವು. ಸಣ್ಣ ಗುಂಪುಗಳಲ್ಲಿ ಸ್ನೇಹಿತರು, ಬಂಧು ಮಿತ್ರರು ಒಂದು ಕಂಪೆನಿಯನ್ನು ಹುಟ್ಟು ಹಾಕಿದರೆ ಅದಕ್ಕೆ "ಪ್ರೈವೇಟ್‌ ಲಿಮಿಟೆಡ್‌ ಕಂಪೆನಿ' ಎಂದೂ ದೊಡ್ಡ ಸಂಖ್ಯೆಗಳಲ್ಲಿ ಸಾರ್ವಜನಿಕರು ದುಡ್ಡು ಹೂಡಿ ಕಂಪೆನಿ ಹುಟ್ಟಿ ಹಾಕಿದಲ್ಲಿ ಅದಕ್ಕೆ "ಪಬ್ಲಿಕ್‌ ಲಿಮಿಟೆಡ್‌ ಕಂಪೆನಿ' ಎಂದೂ ಕರೆಯುತ್ತಾರೆ. 

ನಾವು ಸಾಮಾನ್ಯವಾಗಿ ಶೇರು ಎಂದು ಕರೆಯುವುದು ಈ ಪಬ್ಲಿಕ್‌ ಲಿಮಿಟೆಡ್‌ ಕಂಪೆನಿಗಳ ಶೇರುಗಳನ್ನೇ. ಇದರಲ್ಲಿ ಸಾವಿ ರಾರು, ಲಕ್ಷಾಂತರ ಜನರು ಮೂಲಧನ ಹೂಡಿ ಶೇರು ಕೊಳ್ಳುತ್ತಾರೆ. ಎಲ್ಲಾ ಶೇರುಗಳೂ ಸಮಾನ ಮುಖ ಬೆಲೆ ಮತ್ತು ಸಮಾನ ಹಕ್ಕು ಹೊಂದಿರುತ್ತವೆ. ಬಂದ ಲಾಭಾಂಶದಲ್ಲಿ ಪ್ರತಿಯೊಂದು ಶೇರು ಕೂಡಾ ಸಮಾನ ಹಕ್ಕುದಾರ ಆಗಿರುತ್ತದೆ. ಒಬ್ಬರು ಅಂತಹ ಎಷ್ಟು ಶೇರುಗಳನ್ನೂ ಕೂಡಾ ಹೊಂದಿರಬಹುದು.

ಶೇರಿನಿಂದ ಲಾಭ 
ನಾವು ಶೇರುಗಳ ಮೂಲಕ ಹಣ ಹೂಡಿದ ಕಂಪೆನಿಗಳು ಸಂಪಾದಿಸಿದ ಲಾಭಗಳಲ್ಲಿ ಬಹು ಪಾಲು ಅದೇ ಕಂಪೆನಿಯ ಬೆಳವಣಿಗೆಯ ಪ್ರಯುಕ್ತ ಮರು ಹೂಡಲ್ಪಡುತ್ತದೆ. ಇದರಿಂದ ಕಂಪೆನಿಯ ಮೌಲ್ಯ ವೃದ್ಧಿಯಾಗಿ ಶೇರು ಬೆಲೆ ಏರೀತು. ಮಾರುಕಟ್ಟೆಯಲ್ಲಿ ಶೇರುಗಳ ಮಾರಾಟ ಮಾಡುವಾಗ ಕ್ಯಾಪಿಟಲ್‌ ಗೈನ್ಸ್‌ ಲಾಭ ಉಂಟಾಗುತ್ತದೆ. ಪೂರ್ತಿ ಲಾಭವನ್ನು ಮರುಹೂಡದೆ ಒಂದಂಶ ಲಾಭಾಂಶವನ್ನು ಆಗಾಗ ಹೂಡಿಕೆದಾರರಿಗೆ ಅವರವರ ಶೇರುಗಳ ಪ್ರಮಾಣ ಹೊಂದಿಕೊಂಡು ಪಾವತಿಸುವ ಸಂಪ್ರದಾ ಯವಿದೆ. ಅದನ್ನು "ಡಿವಿಡೆಂಡ್‌' ಅನ್ನುತ್ತಾರೆ. ಇದು ಶೇರಿನ ಮುಖಬೆಲೆಯ ಮೇಲೆ ಶೇಖಡಾವಾರು ಲೆಕ್ಕದಲ್ಲಿ ಘೋಷಿಸಲ್ಪ ಡುತ್ತದೆ. ಕ್ಯಾಪಿಟಲ್‌ ಗೈನ್‌ ಆದಾಯ ಮತ್ತು ಡಿವಿಡೆಂಡ್‌ ಆದಾಯ - ಈ ಎರಡು ರೀತಿಯ ಪ್ರತಿಫ‌ಲಕ್ಕಾಗಿ ಜನರು ಶೇರು ಗಳಲ್ಲಿ ವ್ಯವಹರಿಸುತ್ತಾರೆ.

ಪ್ರೈಮರಿ ಮಾರುಕಟ್ಟೆ (ಐಪಿಓ)
ಮೊತ್ತ ಮೊದಲ ಬಾರಿಗೆ ಒಂದು ಕಂಪೆನಿ ಹುಟ್ಟು ಹಾಕುವ ಹಂತದಲ್ಲಿ ಮುಂದಾಳತ್ವ ವಹಿಸಿ ಆಡಳಿತದ ಚುಕ್ಕಾಣಿ ಹಿಡಿದವರ ಬಂಡವಾಳಕ್ಕೆ "ಪ್ರಮೋಟರ್ಸ್‌ ಶೇರ್‌' ಎಂದು ಹೆಸರು. ಬಳಿಕ ಸಾರ್ವಜನಿಕರಿಗಾಗಿ ಬಿಡುಗಡೆಯಾದ ಹೊಸ ಶೇರುಗಳಿಗೆ ಐ.ಪಿ.ಓ (ಇನಿಶಿಯಲ್‌ ಪಬ್ಲಿಕ್‌ ಆಫ‌ರ್‌) ಎಂದು ಹೆಸರು. ಖಾಸಗಿಯಾಗಿ ಕೆಲವು ಆಯ್ದ ಸಂಸ್ಥೆಗಳಿಗೆ/ಧನಿಕರಿಗೆ ಮಾತ್ರ ಬಿಡುಗಡೆ ಮಾಡಿದರೆ ಅದಕ್ಕೆ "ಪ್ರೈವೇಟ್‌ ಪ್ಲೇಸ್‌ಮೆಂಟ್‌' ಎನ್ನುತ್ತಾರೆ. ಈ ರೀತಿಯ ಮೊತ್ತ ಮೊದಲ ಬಾರಿಯ ಹೊಸ ಶೇರು ಬಿಡುಗಡೆಯನ್ನು ಪ್ರೈಮರಿ ಮಾರುಕಟ್ಟೆ ಎಂದು ಕರೆಯುತ್ತಾರೆ. 

ಸೆಕೆಂಡರಿ ಮಾರುಕಟ್ಟೆ (ಸ್ಟಾಕ್‌ ಎಕ್ಸ್‌ಚೇಂಜ್‌)
ಆ ಬಳಿಕ ಈ ಕಂಪೆನಿಯ ಶೇರುಗಳು ಶೇರು ಮಾರುಕಟ್ಟೆಯಲ್ಲಿ (ಸ್ಟಾಕ್‌ ಎಕ್ಸ್‌ಚೇಂಜ್‌) ನೋಂದಾಯಿಸಲ್ಪಟ್ಟು ಸಾರ್ವಜನಿಕವಾಗಿ ಮಾರಾಟವಾಗುತ್ತಿರುತ್ತವೆ. ಇದು ಸೆಕೆಂಡರಿ ಮಾರ್ಕೆಟ್‌.

ಈ ಸೆಕೆಂಡರಿ ಮಾರುಕಟ್ಟೆಗಳಲ್ಲಿ ಶೇರುಗಳಿಗೆ ಒಂದು ಬೆಲೆ ಬಂದು ಹೂಡಿಕೆದಾರರು ತಮಗೆ ಬೇಕೆಂದಾಗ ಮಾರಿ ಹಣ ಪಡೆದುಕೊಳ್ಳುವ ಸಾಧ್ಯತೆಯೇ (ಲಿಕ್ವಿಡಿಟಿ) ಈ ಶೇರುಗಳ ಹೆಗ್ಗಳಿಕೆ. ಸೆಕೆಂಡರಿ ಮಾರುಕಟ್ಟೆಯ ಆಕರ್ಷಣೆಯಿಂದಾಗಿಯೇ ಇಂದು ಲಿಮಿಟೆಡ್‌ ಕಂಪೆನಿಗಳ ಮೂಲಕ ಸಾರ್ವಜನಿಕರು ಉಳಿತಾಯದ ದುಡ್ಡನ್ನು ಪ್ರೈಮರಿ ಹೂಡಿಕೆಯಲ್ಲಿ ಕ್ರೋಡೀಕರಿಸಿ ಕೈಗಾರೀಕರಣ ವನ್ನು ಸಾಧ್ಯವಾಗಿಸುತ್ತಾರೆ. ಒಂದು ಪ್ರಬುದ್ಧ ಆರ್ಥಿಕತೆಯ ಲಕ್ಷಣ ಒಂದು ಉತ್ತಮ ಶೇರು ಮಾರುಕಟ್ಟೆ ಅನ್ನುತ್ತಾರೆ. 

ಶೇರು ವಿಶೇಷಣಗಳು
ಮಾರುಕಟ್ಟೆಯಲ್ಲಿರುವ ಶೇರುಗಳನ್ನು ವಿವಿಧ ವಿಶೇಷಣಗಳ ಮೂಲಕ ವಿವರಿಸಲಾಗುತ್ತದೆ. ಇವತ್ತು ಸೈಕ್ಲಿಕಲ್ಸ್‌ ಮೇಲೇರಿದೆ, ಇವತ್ತು ಪಿವೋಟಲ್ಸ… ಕುಸಿದಿದೆ ಇತ್ಯಾದಿ. ವಿಶ್ಲೇಷಕರು ಬಹುವಾಗಿ ಉಪಯೋಗಿಸುವ ಈ ವಿಶೇಷಣಗಳ ಅರ್ಥವೇನು? ಬನ್ನಿ, ಒಂದು ನೋಟ ಹಾಯಿಸೋಣ:

ಸೈಕ್ಲಿಕಲ್ಸ್
ಆರ್ಥಿಕ ಸ್ಥಿತಿಗತಿಗಳನ್ನು ಹೊಂದಿಕೊಂಡು ಏರಿಳಿಯುವ ಶೇರು ಗಳನ್ನು ಸೈಕ್ಲಿಕಲ್ಸ…ಎಂದೆನ್ನುತ್ತಾರೆ. ಆರ್ಥಿಕ ಸ್ಥಿತಿ ಉತ್ತಮವಿರುವಾಗ ಒಳ್ಳೆಯ ಸಾಧನೆಯನ್ನು ತೋರಿಸುವ ಹಾಗೂ ಸ್ಥಿತಿ ಇಳಿಮುಖ ವಾದಾಗ ಕುಸಿಯುವ ಶೇರುಗಳು ಇವು. ಉದಾಹರಣೆಗೆ, ಸ್ಟೀಲ್, ಸಿಮೆಂಟ್‌, ಮೆಟಲ್, ಅಟೋ ಇತ್ಯಾದಿ. ಆರ್ಥಿಕ ಪ್ರಗತಿಯ ಸಮಯದಲ್ಲಿ ಇವುಗಳ ಬೇಡಿಕೆ ಮೇಲೇರುತ್ತದೆ ಹಾಗೂ ರಿಸೆಶನ್‌ ಸಮಯದಲ್ಲಿ ಬೇಡಿಕೆ ಕಡಿಮೆಯಾಗುತ್ತದೆ. ಬೆಲೆಯೂ ಅದೇ ರೀತಿ ಏರಿಳಿಯುತ್ತದೆ.

ಪಿವೊಟಲ್ಸ್
ಯಾವ ಕಂಪೆನಿಯ ಶೇರುಗಳ ಮೇಲೆ ಮಾರುಕಟ್ಟೆಯ ಗತಿ ನಿರ್ಧರಿತವಾಗಿದೆಯೋ, ಯಾವುದರ ಏರಿಳಿತದಿಂದ ಇಡೀ ಮಾರುಕಟ್ಟೆ ಏರಿಳಿಯುವುದೋ ಅವುಗಳನ್ನು ಸಾಧಾರಣವಾಗಿ ಪಿವೊಟಲ್ಸ…ಎನ್ನುತ್ತಾರೆ. ರಿಲಯನ್ಸ್‌, ಇನ್ಫೋಸಿಸ್‌, ಟಿಸ್ಕೊ, ಟೆಲ್ಕೊ, ವಿಪ್ರೊ ಇತ್ಯಾದಿಗಳು ಕೆಲ ಉದಾಹರಣೆಗಳು. ಇವು ಅತ್ಯಂತ ಬೆಲೆಯುಳ್ಳ ಹಾಗೂ ಜಾಸ್ತಿ ಸಂಖ್ಯೆಯಲ್ಲಿ ಮಾರಾಟವಾಗುವ ಶೇರುಗಳು ಮತ್ತು ಹಾಗಾದ ಕಾರಣ ಇಡೀ ಮಾರುಕಟ್ಟೆಯ ಗತಿಯನ್ನು ನಿರ್ಧರಿಸಬಲ್ಲವು. 

ಹೆವಿ ವೈಟ್ಸ್‌ 
ತನ್ನ ಗುಂಪಿನಲ್ಲಿ ಯಾವ ಶೇರು ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಹೊಂದಿಕೊಂಡು ಆ ಗುಂಪಿನ ಗತಿಯನ್ನು ನಿರ್ಧರಿಸುತ್ತದೆಯೋ ಅವುಗಳನ್ನು ಹೆವಿವೈಟ್ಸ್‌ ಎನ್ನುತ್ತಾರೆ. ಇಂಡಸ್ಟ್ರಿ ಹೆವಿವೈಟ್ಸ್‌, ಇಂಡೆಕ್ಸ್‌ ಹೆವಿವೈಟ್ಸ್‌ ಇತ್ಯಾದಿ ಪದಗಳು ಆಯಾ ಗುಂಪಿನ ಬಹುತೂಕದ ಶೇರುಗಳಾಗಿರುತ್ತವೆ. ಉದಾ: ರಿಲಯನ್ಸ್‌ ಒಂದು ಮಾರ್ಕೆಟ್‌ ಹೆವಿವೈಟ್‌ ಎನ್ನಬಹುದು. ಅದು ಇಂಡೆಕ್ಸ್‌ ಹೆವಿವೈಟ್‌ ಕೂಡಾ ಹೌದು. ಸ್ಟೇಟ್‌ ಬ್ಯಾಂಕ್‌ ಒಂದು ಬ್ಯಾಂಕಿಂಗ್‌ ಹೆವಿವೈಟ್‌ ಹಾಗೆಯೇ, ಇಂಡೆಕ್ಸ್‌ ಹೆವಿವೈಟ್‌ ಕೂಡಾ ಹೌದು.

ಬ್ಲೂಚಿಪ್‌
ಉತ್ತಮ ಆರ್ಥಿಕ ಬುನಾದಿಯುಳ್ಳ, ಕಾಲ ಕಾಲಕ್ಕೆ ಸರಿಯಾಗಿ ಉತ್ತಮ ಡಿವಿಡೆಂಡ್‌ ನೀಡುವ ನಂಬಿಕಸ್ಥ, ದೊಡ್ಡ, ಭದ್ರ ಕಂಪೆನಿಗಳನ್ನು ಬ್ಲೂಚಿಪ್‌ ಶೇರುಗಳು ಎನ್ನುತ್ತಾರೆ. ಅವುಗಳಲ್ಲಿ ಹಣ ಹೂಡುವುದು ಅತ್ಯಂತ ಕಡಿಮೆ ಅಪಾಯದು ªಎಂದು ಭಾವಿಸ ಲಾಗುತ್ತದೆ ಹಾಗೂ ದೀರ್ಘ‌ ಕಾಲಕ್ಕೆ ಉತ್ತಮ ಹೂಡಿಕೆ ಎಂದು ಹೇಳಲಾಗುತ್ತದೆ. ಹಿಂದುಸ್ತಾನ್‌ ಲಿವರ್‌, ರಿಲಯನ್ಸ್‌, ಇನ್ಫೋಸಿಸ್‌ ಇತ್ಯಾದಿ ಪ್ರಸಿದ್ಧ ಕಂಪೆನಿಗಳನ್ನು ಬ್ಲೂಚಿಪ್‌ ಕಂಪೆನಿಗಳು ಎಂದು ಕರೆಯುತ್ತಾರೆ. 

ಮೊಮೆಂಟಮ… 
ತನ್ನ ಏರುಗತಿಯಲ್ಲಿ ಶೇರುಗಳು ಇನ್ನಷ್ಟು ಮೇಲಕ್ಕೆ ಏರುತ್ತವೆ, ಏಕೆಂದರೆ ಎಲ್ಲರೂ ಅವುಗಳು ಇನ್ನೂ ಏರುತ್ತವೆ ಎಂದೇ ಭಾವಿ ಸುತ್ತಾರೆ. ಇಳಿಕೆಯ ಹಾದಿಯಲ್ಲೂ ಹಾಗೇನೇ. ತನ್ನ ಇಳಿಕೆಯ ಭರದಲ್ಲೇ ಇನ್ನಷ್ಟು ಇಳಿಯುತ್ತವೆ. ಭೌತಶಾಸ್ತ್ರದ 
ಪ್ರಕಾರ ಒಂದು ಚೆಂಡನ್ನು ಒಮ್ಮೆ ದೂಡಿ ಬಿಟ್ಟಾದ ಮೇಲೆ ತನ್ನ ಓಟದ ಬಲದಿಂದಲೇ ಆ ಚೆಂಡು ಮುಂದೆ ಮುಂದೆ ಓಡು
ತ್ತದೆ, ಬೇರಾವ ಶಕ್ತಿ ಇಲ್ಲ ದಿದ್ದರೂ. ಅದು ಮೊಮೆಂಟಮ…. ಶೇರುಗಳಲ್ಲೂ ಅದೇ ಪರಿಕಲ್ಪನೆ ಯನ್ನು ಅಳವಡಿಸಿ¨ªಾರೆ. ಆ ರೀತಿ ಏರಿಳಿಯುವ ಶೇರುಗಳನ್ನು ಮೊಮೆಂಟಮ್‌ ಶೇರುಗಳು ಎಂದು ಕರೆಯುತ್ತಾರೆ. ಹೆಚ್ಚಾಗಿ ಡೇಟ್ರೇಡಿಂಗ್‌ನಲ್ಲಿ ಬಳಸಲ್ಪಡುವ ಶೇರುಗಳು ಈ ವರ್ಗದಲ್ಲಿ ಬರುತ್ತವೆ. ಸಾಧನೆಯನ್ನನುಸರಿಸಿ ಬೇರೆ ಬೇರೆ ಕಾಲಕ್ಕೆ ಬೇರೆ ಬೇರೆ ಶೇರುಗಳು ಮೊಮೆಂಟಮ್‌ ವರ್ಗಕ್ಕೆ ಬರುತ್ತವೆ.


Trending videos

Back to Top