CONNECT WITH US  

ನಿಮ್ಮ ಔಟ್‌ ಹೌಸ್‌ನಲ್ಲಿ ಇವೆಲ್ಲಾ ಮಾಡಬೇಡಿ...

ಮನೆಯ ಅವಶ್ಯಕತೆಗಳಲ್ಲಿ ಔಟ್‌ ಹೌಸ್‌ ಕೂಡಾ ಮಹತ್ವದ್ದು. ಆದರೆ ಈ ಔಟ್‌ ಹೌಸಿಗೂ ಕೂಡ ಒಂದು ವಿಶಿಷ್ಠ ಸಂಧಾನ ಇರಬೇಕು. ಮುಖ್ಯ ಕಟ್ಟಡದ ಹೊರವಲಯದ ಯಾವುದಾದರೂ ಒಂದು ಮೂಲೆಯಲ್ಲಿ ಮಾತ್ರ ಈ ಔಟ್‌ ಹೌಸ್‌ ಕಟ್ಟಲ್ಪಡಬೇಕು. ಮುಖ್ಯ ಕಟ್ಟಡಕ್ಕೋ ಮನೆಗೋ ತಾಗಿ ಈ ಔಟ್‌ ಹೌಸ್‌ ಇರಲೇ ಕೂಡದು. ಅಂತರದ ವಿಷಯದಲ್ಲಿ ಅವಶ್ಯಕವಾದ ಅಳತೆಯೊಂದು ನಿಗದಿಯಾಗಿರಲ ಏನು ಬೇಕು. ಸುಮಾರು ಮೂರರಿಂದ ಐದು ಅಡಿಗಳ ತನಕ ಅಂತರ ಸುರಕ್ಷಿತವಾದದ್ದು. ಸೂಕ್ತವೂ ಕೂಡ. 

ಔಟ್‌ ಹೌಸ್‌ ಮುಂಬಾಗಿಲು ಪೂರ್ವವನ್ನೋ ಅಥವಾ ಉತ್ತರವನ್ನೋ ಮುಖ ಮಾಡಿರಬೇಕು. ಈ ಔಟ್‌ಹೌಸ್‌ನ ಚಾವಣಿಯ ಇಳಿಜಾರು ಬಾಗಿಲಿನ ಕಡೆಗೆ ವಾಲಿರಬೇಕು. ಇದರಿಂದ ಮನೆಯ ವಾಸ್ತು ಸ್ವಾಸ್ಥ್ಯಕ್ಕೆ ಒಂದು ವಿಶೇಷ ಸ್ನಿಗ್ನತೆ ದೊರಕಲು ಅವಕಾಶವಾಗುತ್ತದೆ. ಬಚ್ಚಲು ಮನೆಯು ಪಶ್ಚಿಮ ದಿಕ್ಕಿನಲ್ಲಿ ಇದ್ದರೂ ಸರಿ. ದಕ್ಷಿಣವಾದರೂ ಅಡ್ಡಿ ಇಲ್ಲ. ಈ ಎರಡೂ ದಿಕ್ಕುಗಳೂ ಸರಿಯಾದ್ದದು. 

ಈಶಾನ್ಯ ದಿಕ್ಕಿನಲ್ಲಿ ಔಟ್‌ ಹೌಸ್‌ ಕಟ್ಟುವುದು ಬೇಡ. ಮುಖ್ಯ ಕಟ್ಟಡಕ್ಕೆ ಮುಖ್ಯ ಸೌಧಕ್ಕೆ ಇದರಿಂದ ಸ‌ಕಾರಾತ್ಮಕ ಸ್ಪಂದನ ಒದಗದೆ ಸಮತೋಲನ ಶಕ್ತಿಗೆ ಸವಕಳಿ ಯಾಗುವ ಸಾಧ್ಯತೆಗಳಿವೆ. ವಾಯುವ್ಯಕ್ಕೆ ಬರುವಂತೆ ಔಟ್‌ ಹೌಸನ್ನು ಕಟ್ಟುವುದಾದರೆ ಕೆಲವು ಮುಖ್ಯ ವಿಚಾರಗಳನ್ನು ಗಮನದಲ್ಲಿಡಿ. ಮೂರರಿಂದ ಐದು ಅಡಿಗಳು ಮುಖ್ಯ ಕಟ್ಟಡದ ಅಂಚುಗಳಿಂದ ಅಂತರ ಕಾಯ್ದುಕೊಂಡಿರಲಿ. ಚಾವಣಿಯ ಇಳಿಜಾರು ಪೂರ್ವಕ್ಕಿರಲಿ. ಹೀಗಿರುವಾಗ ಬಚ್ಚಲು ಮನೆ ಮಾತ್ರ ಪಶ್ಚಿಮ ದಿಕ್ಕಿಗೇ ಇರಲಿ. ಆದರೆ ವಾಯುವ್ಯ ದಿಕ್ಕಿನ ಔಟ್‌ ಹೌಸ್‌ ಮಾತ್ರ ಗ್ಯಾರೇಜಾಗಿ ಉಪಯೋಗಕ್ಕೆ ಬಳಸಬೇಡಿ. ಹೀಗೇನಾದರೂ ಬಳಸಿದರೆ ಉತ್ತಮ ಬೆಳವಣಿಗೆಗೆ ಧಕ್ಕೆ ಉಂಟಾಗುತ್ತದೆ. ಜಾತಕದಲ್ಲಿ ಆಕ್ಸಿಡೆಂಟ್‌, ದೀರ್ಘ‌ವ್ಯಾಧಿ, ಅವಘಡ, ಕೋರ್ಟ್‌ ವ್ಯಾಜ್ಯಗಳಂತ ವಿಷಯ ಸಂಭವಿಸುವುದಿದ್ದರೆ ಗ್ಯಾರೇಜ್‌ ಇಂಥ ವಿಷಯಕ್ಕೆ ಅವಕಾಶ ಮಾಡಿಕೊಡುತ್ತದೆ. ಹೀಗಾಗಿ ಈ ಎಲ್ಲಾ ವಿಚಾರಗಳಲ್ಲಿ ಎಚ್ಚರ ಇರಲಿ. ಔಟ್‌ ಹೌಸಿನಲ್ಲಿ ದೇವರ ಕೋಣೆ ಇಡುವುದು ಬೇಡ. ಮುಖ್ಯವಾದ ಪೂಜಾಸ್ಥಳ ಮುಖ್ಯ ಕಟ್ಟಡದಲ್ಲೇ ಇರಬೇಕು. ಮುಖ್ಯ ಕಟ್ಟಡದ ಬೆಳಕು ಔಟ್‌ ಹೌಸಿನಿಂದ ಧಕ್ಕೆಗೊಳಗಾಗಬಾರದು. ಇದು ಬಹುಮುಖ್ಯ ನೆನಪಿನಲ್ಲಿಡಿ. ಪ್ರತ್ಯೇಕವಾದ ಬಾವಿ ಅಥವಾ ಸಂಪು ಇರಬಾರದು.
ಮನೆಯ ಯಜಮಾನ ಔಟ್‌ಹೌಸಿನಲ್ಲಿ ವಿಶ್ರಾಂತಿ ಪಡೆಯಕೂಡದು. ಮುಖ್ಯವಾಗಿ ಒಳಿತನ್ನು ಹರಸುವ ಮುಖ್ಯ ಶಕ್ತಿಯೊಂದು ಅನುಚಿತವಾದ ಧಕ್ಕೆಗೋ, ಇರಿತಕ್ಕೋ ಬಾಹ್ಯವಾದ ನಕಾರಾತ್ಮಕ ಶಕ್ತಿಗಳಿಂದ ತುತ್ತಾಗುವ ಸಾಧ್ಯತೆ ಇರುತ್ತದೆ. ನೀರಿನ ಎಲ್ಲಾ ರೀತಿಯ ಸರಬರಾಜುಗಳು ಮುಖ್ಯ ಕಟ್ಟಡದಿಂದಲೇ ಔಟ್‌ ಹೌಸಿಗೆ ಒದಗುವಂತಿರಬೇಕು. ಇಲ್ಲಿ ಮನೆಯ ಯಜಮಾನ ಅತಿಥಿಗಳೊಂದಿಗೆ ಸಮಾಲೋಚನೆ ಮಾಡಲು ಅಡ್ಡಿ ಇಲ್ಲ. ಅತಿಥಿಗಳು ಬೇಕಾದರೆ ಔಟ್‌ ಹೌಸಿನಲ್ಲಿ ವಿಶ್ರಾಂತಿ ಪಡೆಯಬಹುದು. 

ಓದುವ ಕೋಣೆ ಬರೆಯುವ ಕೋಣೆಯನ್ನು ಮುಖ್ಯ ಕಟ್ಟಡದಲ್ಲೇ ಸಂಯೋಜಿಸುವುದು ಸೂಕ್ತ. ಆದರೆ ಇದನ್ನು ಬಿಗಿ ನಿಯಮವನ್ನಾಗಿ ಪರಿಗಣಿಸಬೇಕಾಗಿಲ್ಲ. ಎಲ್ಲೋ ಬಿಡಿಬಿಡಿಯಾದ ಪುಸ್ತಕಗಳನ್ನು ಔಟ್‌ಹೌಸಿನಲ್ಲಿ ತಂದು ಓದುವುದು ಸೂಕ್ತ. ಹಣಕಾಸಿನ ವಿಚಾರಗಳು ಚರ್ಚೆಯಾಗಲು ಔಟ್‌ಹೌಸನ್ನು ಬಳಸಿಕೊಳ್ಳಿ. ಆದರೆ ಆಖೈರಾದ ಕಾಗದ ಪತ್ರಗಳನ್ನು ಇಲ್ಲಿ ಪೂರೈಸುವುದು ಅಥವಾ ರೂಪಿಸಿಕೊಳ್ಳುವುದು, ಅಂಕಿತವನ್ನೋ ನೀಡುವುದನ್ನು ನಿಷೇಧಿಸಿ.

ಅನಂತಶಾಸ್ತ್ರಿ

Trending videos

Back to Top