CONNECT WITH US  

ನಿಮ್ಮ ಮನೆ ತಿಪ್ಪೆಗುಂಡಿ ಆಗೋದು ಬೇಡವೇ ಬೇಡ

ಇದನ್ನು ಯಾರನ್ನೂ ಬೇಸರಿಸಲಿಕ್ಕೆಂದು ಬರೆದದ್ದಲ್ಲ. ಆದರೆ ಕೆಲವರ ಮನೆಯನ್ನು ಗಮನಿಸಿದ್ದೀರಾ? ಇಡೀ ಮನೆ ಪೂರ್ತಿಯಾಗಿ ಬೊಬ್ಬಿರಿದ ತಿಪ್ಪೆಗುಂಡಿಯಂತಾಗಿರುತ್ತದೆ. ಒಂದು ರೂಮಿನಲ್ಲಿ ಹಳೆಯ ಪೇಪರು, ಅರ್ಧರ್ಧ ತುಂಬಿದ ಪ್ಲಾಸ್ಟಿಕ್‌ ಚೀಲಗಳು ಎಲ್ಲಿಂದಲೋ ಬಂದ ಪತ್ರಗಳು ಉಪಯೋಗಿಸಲು ಮನ ಬಾರದೆ ಉಪಯೋಗಿಸಬೇಕು ಎಂಬ ಮನಸನ್ನು ಬಿಟ್ಟೂ ಬಿಡದೆ ಎಷ್ಟೆಷ್ಟೋ ವಸ್ತುಗಳು ಎಷ್ಟೋ ವರ್ಷಗಳಿಂದ ಒಂದೆಡೆ ಕಿಕ್ಕಿರಿದು ತುಂಬಿಕೊಂಡಿರುತ್ತದೆ. ಮೋಕ್ಷ ಕಾಣದ ಆತ್ಮಗಳಂತೆ ಇವು ಎನ್ನಬಹುದು.

ಪಂಕ್ಚರ್‌ ಆದ ಟಯರು ಹಳೆ ಸೈಕಲ್ಲು, ಹಳೇ ಚಪ್ಪಲಿಗಳು ಖಾಲಿಯಾದ ಹಾಲಿನ ಪ್ಯಾಕೆಟ್‌ ಗಳು  ಹಳೆ ಬೆಂಕಿ ಪೊಟ್ಟಣಗಳು ಅಂಗಡಿಯಲ್ಲಿದ್ದಾಗ ಚೆನ್ನಾಗಿ ಕಂಡಿದ್ದಕ್ಕೆ ಖರೀದಿಸಿ ತಂದಿಟ್ಟುಕೊಂಡ ಪ್ಲಾಸ್ಟಿಕ್‌ ಹೂಗಿಡಗಳು, ಹೂಬಳ್ಳಿಗಳು ಹಸಿರು ತರುಲತೆಗಳು ಜೀವವಿಲ್ಲದ ಧೂಳಲೇಪನದಲ್ಲಿ ಎಷ್ಟೋ ವರ್ಷಗಳಿಂದ ಹೊರಳಾಡಿಕೊಂಡಿರುತ್ತದೆ. ಯಾರೋ ಕೊಟ್ಟ ಗಿಪ್ಟ್ಗಳನ್ನು ಬಿಡಿ ಗಿಫ್ಟಗಳನ್ನು ಕೊಟ್ಟ ಪ್ಯಾಕಿಂಗ್‌ ಕಾಗದಗಳು ಕೂಡಾ ಹಾಗೇ ಬಿದ್ದಿರುತ್ತದೆ. ಬೇಗಡೆಗಳು, ಸುತ್ತಿದ್ದ ಕಲರ್‌ ಸ್ಪ್ರಿಂಗ್‌ಗಳು ಹಳತಾದ ಪೋಟೋ ಆಲ್ಬಮ್‌ಗಳ ಉಳಿದ ಹಳೇ ಫೋಟೋಗಳು ಕೆಸೆಟ್‌ಗಳು ಕೆಸೆಟ್‌ ಪ್ಲೇಯರ್‌ಗಳು ಚತ್ರಿಗಳು ಹಳೇ ವಾಚುಗಳು ಎಷ್ಟು ಹಳತೆಂದರೆ ಇನ್ನು ರಿಪೇರಿಯಾಗಲು ಸಾಧ್ಯವಿಲ್ಲದಷ್ಟು ಹಳತಾಗಿ ಕರಕಲಾದವುಗಳು ಇತ್ಯಾದಿ. ಸಾವಿರ ವಸ್ತುಗಳು ಮನೆಯಲ್ಲಿ ಬಿದ್ದಿರುತ್ತವೆ. ಭಾವನಾತ್ಮಕ ಅಂಶಗಳೊಡನೆ ಅವು ನೆಲೆ ಪಡೆದಿರುತ್ತದೆ. ಅನೇಕ ಸಲ ಇವೆಲ್ಲಾ ಉಪಯೋಗಕ್ಕೆ ಬರಲಿವೆ ಎಂದು ಯೋಚಿಸಿಕೊಂಡೇ ದಶಕವೇ ಕಳೆದಿರುತ್ತದೆ. ಹಳೆ ಬಟ್ಟೆಗಳ ವಿಷಯದಲ್ಲೂ ಇದೇ ಅನುಭವ. ಹಳೆ ಪುಸ್ತಕಗಳಿಗೂ ಇದೇ. ಬಿಸಾಡಲಾಗದು ಇಟ್ಟುಕೊಳ್ಳಲಾಗದು ಇಬ್ಬಗೆಯ ದ್ವಂದ್ವ. ಎರಡು ಅಲಗಿನ ಚೂರಿಯಂತೆ ಚೂಪಾದ ವರ್ತಮಾನದ ನೆತ್ತಿಗೆ ತೂಗುವ ಈ ತಿಪ್ಪೆ ಎಂಬ ಮಾಯೆ ಬಹುತೇಕ ಜನರಿಗೆ ಒಂದು ಪ್ರಾರಬ್ಧದ ಬೇತಾಳ. ಬೆನ್ನು ಹತ್ತಿಕೊಂಡೇ ಇರುತ್ತದೆ.

ವಿನೋದವೆಂದರೆ ನಿರಂತರವಾಗಿ ಮೂರು ವರ್ಷಗಳ ಕಾಳ ಒಂದು ದಿನವೂ ಉಪಯೋಗಕ್ಕೆ ಬಂದಿರದ ವಸ್ತುನಿಂದ ಉಪಯೋಗವೂ ಇಲ್ಲವೆಂಬುದನ್ನು ಗಮನಿಸಬೇಕು. ಮನೆಯ ವರ್ತಮಾನದಲ್ಲೂ ಅನಾವಶ್ಯಕವಾದ ವಸ್ತುಗಳಿಗೆ ಒದಗಿಸಲೇ ಬೇಕಾದ ಆದ್ರìತೆಯ ಪರಿಮಾಣ ಜಾಸ್ತಿಯಾಗುತ್ತ ಹೋದರೆ ಅವಶ್ಯಕ ವಸ್ತುಗಳಿಗೆ ಇದು ಬೇಕಾದಷ್ಟು ಪ್ರಮಾಣದಲ್ಲಿ ಹಿತಕರವಾಗಿ ಆರೋಗ್ಯಕರವಾಗಿ ಸಿಗುವುದಿಲ್ಲ. 

ಕ್ಷೀಣ ಚಂದ್ರನ ಉಪಟಳದಿಂದಾಗಿ ಈ ತಿಪ್ಪೆಗುಂಡಿಯನ್ನು ಮನೆಯಲ್ಲಿ ಯಾರಾದರೊಬ್ಬರು ನಿರ್ಮಿಸುತ್ತಿರುತ್ತಾರೆ. ಕ್ಷೀಣ ಚಂದ್ರನು ಇವರ ಜಾತಕದಲ್ಲಿ ಸುಖಸ್ಥಾನವನ್ನೂ, ಭಾಗ್ಯ, ಲಾಭ, ಕುಟುಂಬ ಸ್ಥಾನಗಳನ್ನು ನಿಯಂತ್ರಿಸಿ ಇಡೀ ಬದುಕನ್ನು ಧನಾತ್ಮಕವಲ್ಲದ ಸ್ಪಂದನಗಳಿಂದಲೇ ಗೋಳುಗಳಿಂದಲೇ ತುಂಬಿಸಿಬಿಡುತ್ತಾನೆ. ಇದೇ ಚಂದ್ರನಿಂದ ಶನಿಕಾಟ ಸಂದರ್ಭದಲ್ಲಿ ಶನೈಶ್ಚರನಿಂದ ಅನೇಕ ತೊಂದರೆಗಳು ಎದುರಾಗುತ್ತದೆ. ಹಳೆಯ ವಸ್ತುಗಳನ್ನು ಶಿಸ್ತಿನಿಂದ ಒಂದೆಡೆ ಜೋಡಿಸಿ ಯಾವುದೋ ಶತಮಾನದ ತುಣುಕೊಂದನ್ನು ಪ್ರಗಲ#ತೆಯಿಂದ ಬಿಂಬಿಸುವುದು ಬೇರೆ. ಆದರೆ ಇಂದು ಎಂಬುದು ಎಂದೋ ದೂರದೊಂದು ಕಾಲದಲ್ಲಿ ಭೂತಕಾಲವಾಗಿದ್ದ ಭಾಗದ ವಿಚಾರವೊಂದನ್ನು ವಸ್ತುವೊಂದನ್ನು ಹದಗಟ್ಟಿಸುವುದು ಬೇರೆ. ಆದರೆ ಅದೇ ಇಂದು ಹೊಸ ಹೊಸ ಡಿವಿಡಿ, ಸಿಡಿಗಳ ಕಾಲದಲ್ಲಿ ಬೂದು ಹಿಡಿದ ಕಗ್ಗಂಟಾದ ಕೆಸೆಟ್‌ಗಳನ್ನು ಒಂದು ಹಳೆ ಪೆಟ್ಟಿಗೆಯಲ್ಲಿ ಧೂಳಿನ ಕಲ್ಪದಲ್ಲಿ ಕಟ್ಟಿಟ್ಟುಕೊಂಡ ದಿನಾ ತುಂಬಿದ ಬಸುರಿಯಂತೆ ಉಸಿರು ಬಿಡುತ್ತಿದ್ದರೆ, ಅದು ನರಕ ಸದೃಶವಾದ ವಿಚಾರ.  ಅರಿಷ್ಟಗಳ ನಡುವಿನ ಆವರಣದಲ್ಲಿ ಚಿತ್ತವಿರಲ್ಲ. ಮನಸ್ಸಿಗೆ ಸುಖವಿಲ್ಲ. ಹಳತರಿಂದ ಹೊರಬರಲಾಗದೆ ಹೊಸತನ್ನು ಕಟ್ಟುವ ವಿಚಾರದಲ್ಲಿ ನಕಾರಾತ್ಮಕ ವಿಚಾರಗಳು ಉಸಿರುಗಟ್ಟಿಸುತ್ತ ವರ್ತಮಾನವನ್ನು ಬೇಟೆಯಾಡುತ್ತಿರುತ್ತದೆ.

ಅನಂತಶಾಸ್ತ್ರಿ


Trending videos

Back to Top