CONNECT WITH US  

ಗಾಂಧೀಜಿ ಭಯ ನೀಗಿಕೊಂಡ ಕತೆ

ನಮಗೆಲ್ಲ ಒಂದಷ್ಟು ಭಯಗಳಿರುತ್ತವೆ. ಅವುಗಳಿಂದ ಹೊರಬರಲು ಸುಲಭ ದಾರಿಯೆಂದರೆ ಯಾವುದಾದರೊಂದು
ಶಕ್ತಿಯಲ್ಲಿ ಅಚಲ ನಂಬಿಕೆಯಿಡುವುದು. ಹೆದರಿಕೆಯಾದಾಗೆಲ್ಲ ಅದನ್ನು ನೆನೆಯುತ್ತ ಮುನ್ನುಗ್ಗಿದರೆ ಯಾವ ಭಯವೂ
ಇರುವುದಿಲ್ಲ.

ಚಿಕ್ಕವರಿದ್ದಾಗ ಗಾಂಧೀಜಿಗೆ ಕತ್ತಲೆಯೆಂದರೆ ಬಹಳ ಹೆದರಿಕೆ. ಕತ್ತಲೆಯಲ್ಲಿ ದೆವ್ವಗಳಿರುತ್ತವೆ, ಅವು ಮೂಲೆಯಲ್ಲಿ ಹೊಂಚು ಹಾಕುತ್ತಾ ನಿಂತಿದ್ದು ನಮ್ಮ ಮೇಲೆ ಧಿಗ್ಗನೆ ಎರಗುತ್ತವೆ ಎಂದು ಗಾಂಧೀಜಿಗೆ ಯಾವಾಗಲೂ ಅನ್ನಿಸುತ್ತಿತ್ತು.
ಅವರದು ದೊಡ್ಡ ಮನೆ. ಒಂದು ರಾತ್ರಿ ಕಡುಗತ್ತಲೆಯಲ್ಲಿ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಪುಟ್ಟ
ಮೋಹನಚಂದ್‌ ಹೋಗಬೇಕಿತ್ತು. ಆದರೆ, ಹೆದರಿಕೆಯಿಂದ ನಿಂತಲ್ಲೇ ನಿಂತಿದ್ದರು. ಕೋಣೆಯಿಂದ ಹೊರಗೆ ಕಾಲಿಡಬೇಕು
ಎಂದು ಗಟ್ಟಿ ಮನಸ್ಸು ಮಾಡಿದಾಗಲೆಲ್ಲ ಕೈಕಾಲು ನಡುಗಿ ಅಲ್ಲೇ ನಿಲ್ಲುತ್ತಿದ್ದರು.

ಅಷ್ಟರಲ್ಲಿ ಕತ್ತಲೆಯಲ್ಲೇ ತಡಕಾಡುತ್ತ ಅವರ ಮನೆಯ ಕೆಲಸದಾಕೆ ಅಲ್ಲಿಗೆ ಬಂದಳು.
ಏನಾಯ್ತು ಮೋಹನ್‌?
ತುಂಬಾ ಹೆದರಿಕೆಯಾಗ್ತಿದೆ.
ಯಾವುದರ ಹೆದರಿಕೆ?
ಕತ್ತಲೆ. ದೆವ್ವಗಳ ಹೆದರಿಕೆ.
ಒಂದು ಉಪಾಯ ಮಾಡು. ಇನ್ಮುಂದೆ ದೆವ್ವಗಳ ಬಗ್ಗೆ ಹೆದರಿಕೆಯಾದಾಗ್ಲೆಲ್ಲ ರಾಮ ರಾಮ ಎನ್ನುತ್ತ ಮುಂದೆ ಹೋಗು. ಯಾವ ದೆವ್ವವೂ ನಿನ್ನತ್ತ ಬರುವ ಧೈರ್ಯ ಮಾಡೋದಿಲ್ಲ. ರಾಮ ನಿನ್ನನ್ನು ಕಾಪಾಡ್ತಾನೆ. ಕೆಲಸದಾಕೆಯ ಮಾತುಗಳಿಂದ ಪುಟ್ಟ ಗಾಂಧೀಜಿಗೆ ಧೈರ್ಯ ಬಂತು. ರಾಮನ ಹೆಸರು ಹೇಳುತ್ತ ಧೈರ್ಯವಾಗಿ ಕೋಣೆಗೆ ಹೋದರು. ನಂತರ ಅವರು ಬದುಕಿರುವವರೆಗೂ ಹೆದರಿಕೆಯಾದಾಗಲೆಲ್ಲ ರಾಮಜಪ ಮಾಡುತ್ತ ಧೈರ್ಯ ತಂದುಕೊಳ್ಳುತ್ತಿದ್ದರು. ರಾಮನಲ್ಲಿನ ನಂಬಿಕೆಯೇ ಅವರಿಗೆ ಎಲ್ಲ ಕೆಲಸಕ್ಕೂ ಧೈರ್ಯ ಕೊಡುತ್ತಿತ್ತು. ಸಾಯುವಾಗ ಕೂಡ ಅವರ ತುಟಿಯಲ್ಲಿ ರಾಮನಾಮವೇ ಇತ್ತು! ಇದರರ್ಥ ಇಷ್ಟೆ. ನಾವೆಲ್ಲ ಅಧೀರರಾದಾಗ ರಾಮಜಪವನ್ನೇ ಮಾಡಬೇಕು ಎಂದಲ್ಲ. ನಮಗೆ ಧೈರ್ಯ ತುಂಬುವ ಯಾವುದಾದರೊಂದು ಶಕ್ತಿಯಲ್ಲಿ ನಮಗೆ ಅಚಲ ನಂಬಿಕೆಯಿರಬೇಕು. ಆ ಶಕ್ತಿಯಲ್ಲಿ ನಂಬಿಕೆಯಿಟ್ಟು,
ಯಾವಾಗ ಹೆದರಿಕೆಯಾದರೂ ಅದನ್ನು ನೆನೆಯುತ್ತ, ಬೇರೆಲ್ಲವನ್ನೂ ಮನಸ್ಸಿನಿಂದ ಹೊರಹಾಕಿ ಮುನ್ನುಗ್ಗಬೇಕು.
ಆಗ ಎಲ್ಲ ಹೆದರಿಕೆಗಳನ್ನೂ ಮೀರಿ ಬೆಳೆಯಲು ಸಾಧ್ಯ. ಮನಸ್ಸಿನಲ್ಲಿ ಹೆದರಿಕೆಯಿದ್ದರೆ ನಾವು ಯಾವತ್ತೂ ಮೇಲೇರಲು
ಸಾಧ್ಯವಿಲ್ಲ. 

- ಸೀಮ

Trending videos

Back to Top