CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಓನ್ಲಿ ಪ್ಲಸ್‌ ನೋ ಮೈನಸ್‌ ! ಗಣಿತ ಮೇಷ್ಟ್ರ ಕೃಷಿ ಲೆಕ್ಕಾಚಾರ

ಮಲ್ಯ ಮೇಸ್ಟ್ರೆ ಎಂದೇ ಮಂಗಳೂರಿನಲ್ಲಿ ಹೆಸರಾಗಿರುವ ಎಸ್‌. ಗಣೇಶ್‌ ಮಲ್ಯರು ಸಾವಿರಾರು ವಿದ್ಯಾರ್ಥಿಗಳಿಗೆ ತಮ್ಮ ಸರಳ ಪಾಠಗಳ ಮೂಲಕ ಗಣಿತದ ಸಾಗರದಲ್ಲಿ ಈಜಲು ಕಲಿಸಿದವರು. ಮೂವತ್ತಮೂರು ವರ್ಷ ಮಂಗಳೂರಿನ ಎರಡು ಶಾಲೆಗಳಲ್ಲಿ ಗಣಿತದ ಪಾಠ ಮಾಡಿ ನಿವೃತ್ತರಾಗಿ ಈಗ ಪೂರ್ಣಾವಧಿ ಕೃಷಿಯಲ್ಲಿ ತೊಡಗಿದವರು.

ಮಂಗಳೂರು - ಕಾರ್ಕಳ ಹೆ¨ªಾರಿಯಲ್ಲಿ ಸಾಗುವಾಗ, ಗುರುಪುರ - ಕೈಕಂಬ ದಾಟಿದಾಗ ಸಿಗುವ ತೆಂಕ ಎಡಪದವು ಗ್ರಾಮದ ರಸ್ತೆ ಪಕ್ಕದÇÉೇ ಇದೆ ಅವರ 37 ಸೆಂಟ್ಸ್‌ ಜಮೀನು. ಅಲ್ಲಿ ಅವರು 1996ರಲ್ಲಿ ಜಮೀನು ಖರೀದಿಸಿದಾಗ ಹುಬ್ಬೇರಿಸಿದವರು ಹಲವರು. ಮಂಗಳೂರಿನ ಕದ್ರಿಯ ಸ್ವಂತ ಮನೆಯಲ್ಲಿ ನೆಮ್ಮದಿಯಾಗಿ ಇರುವುದು ಬಿಟ್ಟು, ಇಲ್ಲಿಗೆ ಬಂದು ಕಷ್ಟ ಪಡುವುದು ಏಕೆಂದು ಪ್ರಶ್ನೆ ಮಾಡಿದವರು ಕೆಲವರು.

ಈಗ ಮಲ್ಯರಿಗೆ ಕೃಷಿಯೇ ವೃತ್ತಿ. ಪ್ರತಿ ದಿನ ಮುಂಜಾನೆ ಐದು ಗಂಟೆಗೆ ಎದ್ದು, ಏಳು ಗಂಟೆಗೆ ಮುಂಚೆ ತಮ್ಮ ಆಹಾರ ಸಿದ್ಧಪಡಿಸಿಕೊಳ್ಳುತ್ತಾರೆ. ಅನಂತರ, ಮಧ್ಯಾಹ್ನ ಊಟದ ಹೊತ್ತಿನ ತನಕ ತೋಟದಲ್ಲಿ ಕೆಲಸ. ಅವರು ಬೀಜ ಬಿತ್ತಿ, ಗಿಡ ನೆಟ್ಟು ಅದರ ಪಾಡಿಗೆ ಅದನ್ನು ಬಿಡುವವರಲ್ಲ. ಪ್ರತಿಯೊಂದು ಮೊಳಕೆಯನ್ನೂ ಗಿಡವನ್ನೂ ಕಾಳಜಿಯಿಂದ ಬೆಳೆಸುವವರು.

ಆದ್ದರಿಂದಲೇ, ಸಾಮಾನ್ಯವಾಗಿ ಒಂದು ಎಕರೆ (100 ಸೆಂಟ್ಸ್‌)ಯಲ್ಲಿ ಬೆಳೆಸುವಷ್ಟು ಗಿಡಮರಗಳನ್ನು ಕೇವಲ 37 ಸೆಂಟ್ಸ್‌ ಜಾಗದಲ್ಲಿ ಬೆಳೆಸಲು ಅವರಿಗೆ ಸಾಧ್ಯವಾಗಿದೆ. ಹದಿನೆಂಟು ಹಲಸಿನ ಮರಗಳು ಮತ್ತು ಹತ್ತು ಮಾವಿನ ಮರಗಳು ಇವರ ತೋಟದ ದೊಡª ಮರಗಳು. ತೆಂಗು, ಪುನರ್ಪುಳಿ ಮರಗಳು, ಪಪ್ಪಾಯಿ, ಕೊಕ್ಕೋ ಗಿಡಗಳು, ಬಿದಿರು ಮತ್ತು ಬೆತ್ತ ಅಲ್ಲಲ್ಲಿ ಇವೆ. ಹಲವು ಮರಗಿಡಗಳಿಗೆ ಹಬ್ಬಿವೆ ಕರಿಮೆಣಸಿನ ಬಳ್ಳಿಗಳು. ಹರಿವೆ, ಬಸಳೆ, ಬದನೆ, ತೊಂಡೆ, ಬೆಂಡೆ, ನುಗ್ಗೆ, ಪಾಲಕ್‌ ಇತ್ಯಾದಿ ತರಕಾರಿಗಳು ಸೊಂಪಾಗಿ ಬೆಳೆದಿವೆ.

ಅವರ ಪುಟ್ಟ ತೋಟದಲ್ಲಿ ಎತ್ತ ನೋಡಿದರೂ ದಟ್ಟ ಹಸುರು. ಇದಕ್ಕೆ ಮುಖ್ಯ ಕಾರಣ ಮರಗಿಡಬಳ್ಳಿಗಳಿಗೆ ಅವರು ಒದಗಿಸುವ ಗೊಬ್ಬರ. 37 ಸೆಂಟ್ಸ್‌ ಜಾಗದಲ್ಲಿವೆ ಹತ್ತು ಕಾಂಪೋಸ್ಟ್‌ ಡ್ರಮ್ಮುಗಳು. ಅವರು ಕಾಂಪೋಸ್ಟ್‌ ಮಾಡುವ ವಿಧಾನ: ಹಣ್ಣು, ತರಕಾರಿಗಳ ಸಿಪ್ಪೆ, ಕಳೆಗಿಡಗಳು, ಕಸಕಡ್ಡಿ ಇವನ್ನೆಲ್ಲ ಡ್ರಮ್ಮಿಗೆ ಹಾಕಿ, ಅನಂತರ ಬೆವೇರಿಯ ಹಾಕುವುದು. ಹೀಗೆ ತಯಾರಾದ ಕಾಂಪೋಸ್ಟನ್ನು ಪ್ರತಿಯೊಂದು ಮರ ಹಾಗೂ ಗಿಡಕ್ಕೆ ಹಾಕುತ್ತಾರೆ. ಇದಲ್ಲದೆ, ಪ್ರತಿಯೊಂದು ತೆಂಗಿನಮರಕ್ಕೆ  ಅವರು ಹಾಕುವ ಬೇವಿನಹಿಂಡಿಯ ಪ್ರಮಾಣ ವರುಷಕ್ಕೆ ನಾಲ್ಕು ಕಿಲೋಗ್ರಾಮ…. 
ಗಣೇಶ ಮಲ್ಯರು ಖರೀದಿಸಿದ ಜಮೀನಿನಲ್ಲಿ ನೀರಿನಾಸರೆ ಇರಲಿಲ್ಲ. ಮರಗಿಡಗಳಿಗೆ ನೀರುಣಿಸಲಿಕ್ಕಾಗಿ 45 ಅಡಿ ಆಳ, 9 ಅಡಿ ವ್ಯಾಸದ ಬಾವಿ ತೋಡಿಸಿದರು. ಆದರೆ ಬೇಸಿಗೆಯಲ್ಲಿ ಆ ಬಾವಿಯಲ್ಲಿಯೂ ನೀರಿಲ್ಲದೆ ಪರದಾಡುವಂತಾಯಿತು. ಅದು ವರ್ಷಕ್ಕೆ 3,500 ಮಿಮೀ ಮಳೆ ಬೀಳುವ ಜಾಗ. ಹಾಗಾಗಿ ಅಲ್ಲಿ ಮಳೆನೀರು ಇಂಗಿಸಲು ಗಣೇಶ ಮಲ್ಯ ನಿರ್ಧರಿಸಿದರು. ಅವರ ಜಮೀನಿನ ಪಕ್ಕದಲ್ಲಿಯೇ ಶಾಲೆಯೊಂದಿತ್ತು. ಆ ಶಾಲೆಯ ಬಯಲಿನಲ್ಲಿ ಸುರಿಯುವ ಮಳೆ ನೀರನ್ನೂ ಇಂಗಿಸಲು ಮಲ್ಯರು ತಮ್ಮದೇ ವೆಚ್ಚದಲ್ಲಿ ವ್ಯವಸ್ಥೆ ಮಾಡಿದರು. ಆ ಮಳೆಗಾಲದಲ್ಲಿ ಭಾರೀ ಮಳೆ ಸುರಿದಾಗ, ಗಣೇಶ ಮಲ್ಯರ ಕಾಂಪೌಂಡು ಗೋಡೆಯೇ ಕುಸಿದು, ಬಹಳ ನಷ್ಟ ಅನುಭವಿಸಿದರು. ಅನಂತರ 2001ರಲ್ಲಿ ತಮ್ಮ ಜಮೀನಿನಲ್ಲಿ ಇಂಗುಗುಂಡಿಗಳನ್ನು ಮಾಡಿದರು. ಮನೆಯ ಟೆರೇಸಿನ ನೀರನ್ನು ಅವಕ್ಕೆ ಇಂಗಿಸಿದರು.

ಈ ವ್ಯವಸ್ಥೆಯಿಂದ 2014ರವರೆಗೆ ಅವರ ನೀರಿನ ಸಮಸ್ಯೆಗೆ ಪರಿಹಾರ ದೊರೆಯಿತು.  ಆದರೆ 2015ರ ಬಿರುಬೇಸಿಗೆಯಲ್ಲಿ ಬಾವಿಯ ನೀರು ಕೇವಲ ಐದಡಿಗೆ ಇಳಿದಾಗ ಮಲ್ಯರಿಗೆ ಆತಂಕ ಶುರುವಾಯಿತು.  ಅನಂತರ, ಗುಜರಾತಿನಿಂದ ತರಿಸಿದ ಮಳೆನೀರಿನ ಫಿಲ್ಟರ್‌ ಅನ್ನು 2016ರ ಮಳೆಗಾಲದಲ್ಲಿ ಜೋಡಿಸಿ, ಟೆರೇಸಿನ ಮಳೆನೀರನ್ನೆಲ್ಲ ಬಾವಿಗೆ ಇಂಗಿಸಿ¨ªಾರೆ. 

ಗಣೇಶ ಮಲ್ಯರದ್ದು ಅಪ್ಪಟ ಸಾವಯವ ಕೃಷಿ. ರಾಸಾಯನಿಕಗಳು ಮಹಾವಿಷಗಳೆಂದು ತಿಳಿದಿರುವ ಅವರು, ತಮ್ಮ ಜಮೀನಿನಲ್ಲಿ ಸಸ್ಯಗಳಿಗೆ ಪೋಷಕಾಂಶ ಒದಗಿಸಲು, ಕೀಟಬಾಧೆ ಹಾಗೂ ರೋಗ ನಿಯಂತ್ರಿಸಲು ಯಾವುದೇ ರಾಸಾಯನಿಕ ಬಳಸುತ್ತಿಲ್ಲ. ಸಾವಯವ ಕೃಷಿಯ ಹಣ್ಣು ತರಕಾರಿಗಳು ಬಹಳ ರುಚಿ ಎಂಬುದು ಅವರ ಅನುಭವ. ತರಕಾರಿಗಳು ಸಮೃದ್ಧವಾಗಿ ಬೆಳೆದಾಗ ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗವು ನಡೆಸುವ ಭಾನುವಾರದ ಸಂತೆಗಳಲ್ಲಿ ಮಾರಾಟ ಮಾಡುತ್ತಾರೆ.  

ತಮ್ಮ ಪುಟ್ಟ ತೋಟದಲ್ಲಿ ಎಲ್ಲ ಕೃಷಿ ಕೆಲಸಗಳಿಗೆ ಬೇಕಾದ ಸಾಧನ ಸಲಕರಣೆಗಳನ್ನು ಗಣೇಶ ಮಲ್ಯರು ಖರೀದಿಸಿ¨ªಾರೆ. ಚೈನ್‌, ಗರಗಸ ಸಹಿತ ಈ ಯಾವುದೇ ಸಾಧನಕ್ಕೆ ಅವರು ಸರಕಾರದ ಸಬ್ಸಿಡಿ ಪಡೆದಿಲ್ಲ. ಆ ಸಬ್ಸಿಡಿ ಪಡೆಯಬೇಕಾದರೆ ಹಲವಾರು ದಾಖಲೆಗಳನ್ನು ಜೋಡಿಸಿಕೊಳ್ಳಬೇಕು, ಕೃಷಿ ಇಲಾಖೆ ಅಥವಾ ತೋಟಗಾರಿಕೆ ಇಲಾಖೆಗೆ ಮತ್ತೆಮತ್ತೆ ಭೇಟಿ ನೀಡಬೇಕು; ಅದೆಲ್ಲ ಸತಾಯಿಸುವಿಕೆ ಅನುಭವಿಸುವ ಬದಲಾಗಿ, ಸಾಧನ ಸಲಕರಣೆಗಳನ್ನು ನೇರವಾಗಿ ಖರೀದಿಸುವುದು ಉತ್ತಮ ಎನ್ನುತ್ತಾರೆ ಗಣೇಶ ಮಲ್ಯ. 

ಈಗಲೂ ಶನಿವಾರ ಮತ್ತು ಭಾನುವಾರ ಮಂಗಳೂರಿನ ರಾಮಕೃಷ್ಣ ಮಠದ ವಿದ್ಯಾರ್ಥಿಗಳಿಗೆ ಗಣೇಶ ಮಲ್ಯರಿಂದ ಗಣಿತ ಪಾಠ ನಡೆಯುತ್ತದೆ.  ಅದು ಅವರು ಸೇವಾ ಮನೋಭಾವದಿಂದ ನಡೆಸುವ ಉಚಿತ ಪಾಠ. ಇತ್ತ ಗಣಿತ ಕಲಿಸುತ್ತಾ ತಮ್ಮ ಪರಿಣತಿಯ ಧಾರೆ ಎರೆಯುತ್ತಾರೆ. ಅತ್ತ ಪುಟ್ಟ ತೋಟದ ಪ್ರತಿಯೊಂದು ಗಿಡಮರದ ಕಾಳಜಿ ವಹಿಸುವ ಕೃಷಿ ಕಾಯಕ. ಇದು ಮಲ್ಯರ ನೆಮ್ಮದಿಯ ಬದುಕಿನ ಸೂತ್ರ. ಮಣ್ಣಿನ ಕಾಯಕದಿಂದ ದೇಹಕ್ಕೆ ಸಿಗುವ ವ್ಯಾಯಾಮಕ್ಕೆ ವಿಷರಹಿತ ಆಹಾರ ಕೂಡಿಸಿದಾಗ ಆರೋಗ್ಯ ವೃದ್ಧಿ ಎಂಬುದು ಅವರ ಸಿದ್ಧಾಂತ. ಮಣ್ಣಿನ ಮತ್ತು ಸಸ್ಯಗಳ ಅಗೋಚರ ಲೋಕದ ವಿದ್ಯಮಾನಗಳು ಎಲ್ಲೂ ಗಣಿತ ಲೆಕ್ಕಾಚಾರಗಳನ್ನು ಮೀರಿದ ಪ್ರಕೃತಿಯ ವಿಸ್ಮಯಗಳನ್ನೂ ಎಂಬುದು ಅವರ ನಂಬಿಕೆ.  

- ಅಡ್ಕೂರು ಕೃಷ್ಣ ರಾವ್‌

Back to Top