CONNECT WITH US  

ಕಿರಿಕಿರಿಯ ರಸ್ತೆ ಉಬ್ಬು ತಗ್ಗುಗಳು: ಅನುಕೂಲಕ್ಕಿಂತ ಅಪಾಯ ಜಾಸ್ತಿ!

ನಾವು ಅಂದುಕೊಂಡಿದ್ದೇ ನಿಜ ಎಂದುಕೊಳ್ಳುತ್ತೇವೆ. ಕನ್ನಡದ ಜನಪ್ರಿಯ ಚಲನಚಿತ್ರ ಗೀತೆ "ನೋಡಿದ್ದೂ ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು. ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು' ಎಂಬ ಸಾಲುಗಳು ಸತ್ಯವನ್ನಷ್ಟೇ ಹೇಳುತ್ತದೆ. ರಸ್ತೆಯ ಉಬ್ಬುಗಳು, ಕನ್ನಡದ ಬಳಕೆ ಭಾಷೆಯಲ್ಲಿ "ಹಂಪ್ಸ್‌' ಎಂಬ ಅಸ್ತ್ರದ ಮೂಲಕ ವಾಹನಗಳ ವೇಗವನ್ನು ನಿಯಂತ್ರಿಸಬಹುದು.

ಆ ಮೂಲಕ ರಸ್ತೆ ಅಪಘಾತಗಳಿಗೆ ತಡೆ ಒಡ್ಡಬಹುದು. ಹಾಗಾಗಿ ಜನನಿಬಿಡ ಪ್ರದೇಶ, ಜನವಸತಿ ಪ್ರದೇಶಗಳ ರಸ್ತೆಗಳಲ್ಲಿ ಹಂಪ್‌ಗ್ಳನ್ನು ಅಳವಡಿಸುವುದರಿಂದ ಕ್ಷೇಮ ಎಂಬ ನಂಬಿಕೆ ಇದೆ. ಒಂದು ಪ್ರದೇಶದಲ್ಲಿ ಜನ ರಸ್ತೆಯ ಹಂಪ್‌ ತಪ್ಪಿಸಿಕೊಳ್ಳಲು ಡಾಂಬರು ರಸ್ತೆಯ ಪಕ್ಕದಲ್ಲಿ ಹೋಗುತ್ತಾರೆ ಎಂಬ ಹಿನ್ನೆಲೆಯಲ್ಲಿ ರಸ್ತೆಯ ಹೊರಗೂ ಮೂರು ಅಡಿ ಉದ್ದಕ್ಕೆ ಕೇವಲ ಹಂಪ್‌ಅನ್ನು ಮಾತ್ರ ಹಾಕಿದ್ದೂ ಇದೆ!

ರೋಡ್‌ ಹಂಪ್‌ಗ್ಳು ಕೂಡ ಜೀವ ತೆಗೆಯುತ್ತಿವೆ. 2014ರ ಸಾಲಿನ ರಸ್ತೆ ಅಪಘಾತ ವರದಿಯ ಪ್ರಕಾರ 6,672 ಜೀವಗಳು ಹಂಪ್‌ ಕಾರಣದಿಂದ ಆದ ಅಪಘಾತದಿಂದ ಹಾಗೂ 4726 ಮಂದಿ ಸ್ಪೀಡ್‌ ಬ್ರೇಕರ್‌ ಕಾರಣದಿಂದ ಉರುಳಿಬಿದ್ದು ಜೀವ ಕಳೆದುಕೊಂಡಿದ್ದಾರೆ. 2017ರ ಸಂದರ್ಭದಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಿರಲೇಬೇಕು. ಅವೈಜ್ಞಾನಿಕ ಹಾಗೂ ಅನಗತ್ಯ ಹಂಪ್‌ಗ್ಳ ಕಾರಣದಿಂದ ಆಗುತ್ತಿರುವ ಹೆಚ್ಚಿನ ಇಂಧನ ಅಪವ್ಯಯ ಹಾಗೂ ವಾಹನಗಳಿಗಾಗುವ ಧಕ್ಕೆಯ ಮೌಲ್ಯವನ್ನು ಅಂದಾಜಿಸಿದವರಿಲ್ಲ.

ರಸ್ತೆ ನಿಯಮ ಪಾಲನೆ ಮಾಡದಿದ್ದವರೇ ಕ್ಷೇಮ!: ಒಂದು ವಿಶ್ಲೇಷಣೆಯ ಪ್ರಕಾರ, ಹಂಪ್‌ಗ್ಳು ವೇಗವನ್ನು ಕಡಿತಗೊಳಿಸುವ ವಿಷಯ ಸಂಶಯಾತೀತ. ಆದರೆ ಅಪಘಾತ ತಡೆಗೆ ಇದು ನೆರವು ನೀಡುವುದರ ಬಗ್ಗೆ ಸಂಶಯಗಳಿವೆ. ವಾಹನ ಚಾಲಕರು ರಸ್ತೆ ನಿಯಮಗಳನ್ನು ಪಾಲಿಸಿದರೆ ಬಹುಪಾಲು ಅಪಘಾತಗಳನ್ನು ತಡೆಯಬಹುದು. ಹಲವು ನೇರ ರಸ್ತೆಗಳಲ್ಲಿ ಅಡ್ಡ ದಾಟುವವರಿಗೆ ಅನುಕೂಲಕ್ಕಾಗಿ ಹಾಕುವ ಹಂಪ್‌ಗ್ಳು ಸಹಕಾರಿ.

ಚಿಕ್ಕಪುಟ್ಟ ರಸ್ತೆಗಳ ನಡುವೆ ಹಾಕುವ ಹಂಪ್‌ಗ್ಳು ವಾಹನ ಚಾಲಕರಿಗೆ ಕಿರಿಕಿರಿ, ಆ ಭಾಗದ ನಿವಾಸಿಗಳಿಗೆ ಸಮಾಧಾನವಾಗುತ್ತದೆ ಎಂಬುದನ್ನು ಬಿಟ್ಟರೆ ಪರಿಣಾಮ ಶೂನ್ಯ. ಎಲ್ಲಕ್ಕಿಂತ ಮುಖ್ಯವಾಗಿ, ಹಂಪ್‌ಗ್ಳನ್ನು ವೈಜ್ಞಾನಿಕವಾಗಿ ರಚಿಸಬೇಕು ಎಂಬ ಮನೋಧರ್ಮವನ್ನೇ ಕಾಣುತ್ತಿಲ್ಲ. ಹಂಪ್‌ ನಿರ್ಮಾಣ ರಸ್ತೆ ಕಾಮಗಾರಿಯ ಕ್ರಿಯಾಯೋಜನೆಯ ಭಾಗವಾಗಿರುವ ಸಾಧ್ಯತೆ ಕಡಿಮೆ.

ಅಂದರೆ ನಿರ್ಮಿಸಿರುವ ಹಂಪ್‌ಗ್ಳನ್ನು ಬೇಕಾಬಿಟ್ಟಿ ಮಾಡಲಾಗಿರುತ್ತದೆಯೇ ವಿನಃ ಕಾನೂನು ಮಾರ್ಗದರ್ಶಕ ಮಾನದಂಡಗಳಿಗೆ ಅನುಸಾರ ಅಲ್ಲ. ಒಂದು ಹಂಪ್‌ 3.7 ಮೀಟರ್‌ ಅಗಲಕ್ಕಿರಬೇಕು. 0.10 ಮೀಟರ್‌ ಮಾತ್ರ ಎತ್ತರ ಇರಬೇಕು. ಸತತವಾಗಿ ಒಂದರ ಪಕ್ಕದಲ್ಲಿ ಒಂದರಂತೆ ಹಂಪ್‌ ಮಾಡುವಾಗ ಅವುಗಳ ನಡುವಿನ ಅಂತರ 100ರಿಂದ 120 ಮೀಟರ್‌ ಇರತಕ್ಕದ್ದು.

ಮೀಟರ್‌ಗಿಂತ ಅಡಿ ಲೆಕ್ಕದಲ್ಲಿ ನಮಗೆ ಸುಲಭ ಅರ್ಥವಾಗುತ್ತದೆ. ಅಡಿಗಳಲ್ಲಿ, ಅಗಲವನ್ನು 12.13 ಎಂತಲೂ, ಎತ್ತರವನ್ನು 0.32 ಅಡಿ ಎಂದೂ, ಎರಡು ಹಂಪ್‌ ನಡುವಿನ ಕಾನೂನುಬದ್ಧ ಅಂತರವನ್ನು 328 ಅಡಿ ಎಂದೂ ಹೇಳಲಾಗಿದೆ. ಕೆಲ ವರ್ಷಗಳ ಹಿಂದೆ ಶಿವಮೊಗ್ಗ ಸಾಗರ ನಡುವಿನ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಚೋರಡಿ ಎಂಬಲ್ಲಿ ಒಂದಕ್ಕೆ ಇನ್ನೊಂದು ಅಂಟಿಕೊಂಡಂತೆ ಸತತ 21 ಹಂಪ್ಸ್‌ ನಿರ್ಮಿಸಿ ದಾಖಲೆ ಸೃಷ್ಟಿಸಲಾಗಿತ್ತು!

ಇಷ್ಟಕ್ಕೇ ಮುಗಿಯುವುದಿಲ್ಲ. ಈ ರೀತಿಯ ವೇಗ ನಿಯಂತ್ರಕಗಳನ್ನು ಹಾಕಿದ ಸ್ಥಳದಿಂದ 40 ಮೀಟರ್‌ ಮುಂಚಿತವಾಗಿ ಹೀಗೊಂದು ಸ್ಪೀಡ್‌ ಬ್ರೇಕರ್‌ ಇದೆ ಎಂಬ ಸೂಚನಾ ಫ‌ಲಕವನ್ನು ಹಾಕಬೇಕು. ಈ ನಡುವೆ ಸುಪ್ರೀಂಕೋರ್ಟ್‌ ರಾಷ್ಟ್ರೀಯ ಹೆದ್ದಾರಿಗಳು ಹಂಪ್‌ಗ್ಳಿಂದ ಮುಕ್ತವಾಗಿರಬೇಕು ಎಂಬ ಸೂಚನೆ ಕೊಟ್ಟಿರುವುದರಿಂದ ಹೊಸ ಹೊಸದಾಗಿ ಡಾಂಬರೀಕರಣ ಮಾಡುವಾಗ ಈ ಹಂಪ್‌ ನಿರ್ಮಿತಿಗಳು ಮಾಯವಾಗುತ್ತಿವೆ. ಅಷ್ಟಕ್ಕೂ ಹಂಪ್‌ಗ್ಳ ನಿರ್ಮಾಣದ ಅನುಮತಿ ಅವಕಾಶ ಇರುವುದು ಟ್ರಾಫಿಕ್‌ ಪೊಲೀಸ್‌ ಅಥವಾ ನಗರದ ಸ್ಥಳೀಯ ಸಂಸ್ಥೆಗಳ ಸಾರಿಗೆ ವಿಭಾಗಗಳಿಗೆ ಮಾತ್ರ.

ಕೋರ್ಟ್‌ನಿಂದ ಪರಿಹಾರ ಸಾಧ್ಯ!: ಹಂಪ್‌ಗ್ಳ ಅವೈಜ್ಞಾನಿಕ ನಿರ್ಮಾಣ ಕುರಿತು ಸ್ಥಳೀಯ ಆಡಳಿತಗಳಿಗೆ ಸಲ್ಲಿಸುವ ದೂರಿಗೆ ಅವು ಕಿವಿ ಕೊಡುತ್ತಿಲ್ಲ. ಒಂದೆಡೆ ರಸ್ತೆ ತೆರಿಗೆಗಳನ್ನು ಪಾಲಿಸುವ ಈ ದೇಶದ ಜನ ಕಾನೂನು ಬಾಹಿರ ಹಂಪ್‌ಗ್ಳಿಂದ ಆಗುವ ಅನಾಹುತಗಳಿಗೆ ಕೂಡ ಪರಿಹಾರ ಪಡೆಯಬಹುದು. ಹೀಗೆ ಹಂಪ್‌ ಕಾರಣದಿಂದ ಸಂತ್ರಸ್ತರಾದ ಜನ ಸೂಕ್ತ ನ್ಯಾಯಾಂಗ ವ್ಯವಸ್ಥೆಯಲ್ಲಿ ದೂರು ದಾಖಲಿಸಿ ದೊಡ್ಡ ಮೊತ್ತದ ಪರಿಹಾರಗಳನ್ನು ಪಡೆಯಲಾರಂಭಿಸಿದರೆ ಆಗ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳುತ್ತದೇನೋ ! 

 ಸುಮಾರು 9 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆ. 2008ರ  ಫೆಬ್ರವರಿ ಒಂದನೇ ತಾರೀಖೀನ ರಾತ್ರಿ ಸಾಫ್ಟ್ವೇರ್‌ ಎಂಜಿನಿಯರ್‌ ಸೂರ್ಯ ಪ್ರಕಾಶ್‌ ಎಂಬುವವರು ಬಿಟಿಎಂ ಲೇಔಟ್‌ ರಸ್ತೆಯಲ್ಲಿ ಅವೈಜ್ಞಾನಿಕ ಹಂಪ್‌ ಕಾರಣದಿಂದ ಬೈಕ್‌ನಿಂದ ಬಿದ್ದು ತೀವ್ರ ಗಾಯಗೊಂಡು ಸಾವನ್ನಪ್ಪಿದರು. ಇದರಿಂದ ಕ್ಷುದ್ರರಾದ ಆ ಯುವಕನ ತಂದೆ ಜಿ.ಎಂ.ಚವನ್‌ ಬೆಂಗಳೂರಿನ ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು.

ಕಳೆದ ಮೇನಲ್ಲಿ ತೀರ್ಪು ಪ್ರಕಟಿಸಿರುವ ನ್ಯಾಯಾಲಯ, ನಗರಪಾಲಿಕೆ, ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ಹಾಗೂ ನಗರಾಭಿವೃದ್ಧಿ ಇಲಾಖೆ ಜಂಟಿಯಾಗಿ ಕಾನೂನುಬಾಹಿರ ಹಂಪ್‌ ಕಾರಣದಿಂದ ಯುವಕ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮೃತನ ತಂದೆಗೆ ಸುಮಾರು 22 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಸೂಚಿಸಿದೆ. 12.7 ಲಕ್ಷ ರೂ. ಮೂಲ ಪರಿಹಾರ ಹಾಗೂ ಈ ಒಂಬತ್ತು ವರ್ಷಗಳ ಅವಧಿಗೆ ಆ ಮೊತ್ತಕ್ಕೆ ಶೇ. 8ರ ಬಡ್ಡಿಯಾಗಿ 9.14 ಲಕ್ಷ ರೂ. ಪರಿಹಾರ ಕೊಡಲೇಬೇಕು ಎಂದಿದೆ.

ಈ ಕಾನೂನು ಪಾಲಿಸದ, ಹಂಪ್‌ ಕಾರಣದಿಂದಲೇ ಸಾವು ಸಂಭವಿಸಿದೆ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯದ ತೀರ್ಪು ಉಳಿದವರಿಗೆ ಮಾರ್ಗದರ್ಶಕವಾಗಬಹುದು. ಈಗ ಹಂಪಿನ ಕಾರಣದಿಂದಲೇ ಬೆಂಗಳೂರಿನಲ್ಲಿ ದಿನಕ್ಕೆ ಎರಡು ಸಾವು ಹಾಗೂ 12 ಗಂಭೀರ ಗಾಯಗಳಾಗುತ್ತಿವೆ ಎಂದು ಅಂಕಿಅಂಶ ಹೇಳುತ್ತಿದೆ. 

ಇಂಥವರೆಲ್ಲ ದೂರು ದಾಖಲಿಸಲಾರಂಭಿಸಿದರೆ ಮತ್ತು ದೊಡ್ಡ ಮೊತ್ತದ ಪರಿಹಾರದ ತೀರ್ಪು ಸಿಗುತ್ತದೆಂದಾದರೆ ನಗರಪಾಲಿಕೆ, ಟ್ರಾಫಿಕ್‌ ಪೊಲೀಸ್‌ ತರಹದ ವ್ಯವಸ್ಥೆಗಳು ಎಚ್ಚೆತ್ತುಕೊಳ್ಳುತ್ತವೆ. ವಾಸ್ತವವಾಗಿ, ಶಾಲೆಗಳು, ಆಸ್ಪತ್ರೆಗಳು ಇರುವಲ್ಲಿ ವಾಹನ ಸಂಚಾರ ನಿಧಾನ ಗತಿಗೆ ಇಳಿದು ಮಕ್ಕಳು, ವೃದ್ಧರು ರಸ್ತೆಯನ್ನು ಸುಲಲಿತವಾಗಿ ದಾಟಲು ಅನುಕೂಲವಾಗುವಂತೆ ವೇಗ ನಿಯಂತ್ರಕಗಳ ರಚನೆ ಅಗತ್ಯವಾಗಬಹುದು. ನಿಯಂತ್ರಕಗಳು ಬೇಡ ಎನ್ನುವುದು ಬೇರೆ. ಸ್ಪೀಡ್‌ ಬ್ರೇಕರ್‌ ವೈಜ್ಞಾನಿಕವಾಗಿರಬೇಕು ಎಂಬುದು ಸಂಪೂರ್ಣ ಭಿನ್ನ.

ಎಷ್ಟೋ ಬಾರಿ ಹಂಪ್‌ ಕಾರಣದಿಂದ ಉಂಟಾಗುವ ಕಂಪನಗಳ ಕಾರಣ ಹತ್ತಿರದ ಮನೆಗಳು ಬಿರುಕು ಬಿಡಬಹುದು. ಯುಕೆಯಲ್ಲಿ ಸಬ್‌ವೇ, ಸೇತುವೆ, ಕಣಿವೆ ಮಾರ್ಗಗಳ ಆರಂಭದ 25 ಮೀಟರ್‌ ಒಳಗೆ ಹಂಪ್‌ಗ್ಳ ನಿರ್ಮಾಣವನ್ನೇ ನಿಷೇಧಿಸಲಾಗಿದೆ. ಯುಕೆಯಲ್ಲಿ ಕ್ರಾಷ್‌ http://www.joincrash.com ಎಂಬ ವೆಬ್‌ಸೈಟ್‌ ಅನ್ನು ಈ ಕುರಿತು ಮಾಹಿತಿ ಕೊಡಲೆಂದೇ ರೂಪಿಸಿದೆ.  

ಒಂದು ಆಂದೋಲನವೇ ಬೇಕು!: ಮತ್ತೆ ಅಂಕಣದ ಮೊದಲ ಕೆಲವು ಸಾಲುಗಳಿಗೆ ಬರಬೇಕು. ಸದ್ಯ ನಾವೂ ಕೂಡ ಹಂಪ್‌ಗ್ಳು ವೇಗ ನಿಯಂತ್ರಕವಾಗಿವೆ ಎಂತಲೇ ಭಾವಿಸಿದ್ದೇವೆ. ಇಂದಿನ ನ್ಪೋರ್ಟ್ಸ್ ಬೈಕ್‌ಗಳ ಯುಗದಲ್ಲಿ ಆ ಮಾತು ಸುಳ್ಳು ಎಂಬುದನ್ನು ಹಲವು ವಿಶ್ಲೇಷಕರು ಹೇಳುತ್ತಾರೆ. ಹಂಪ್‌ಗ್ಳು ಉಂಟುಮಾಡುತ್ತಿರುವ ದೈಹಿಕ ಆಘಾತಗಳ ದೂರಗಾಮಿ ಪರಿಣಾಮ ನಮಗರ್ಥವಾಗಿಲ್ಲ. ಹಂಪ್‌ಗ್ಳು ವಾಹನದ ತಳಕ್ಕೆ ಜಜ್ಜಿ ಉಂಟಾಗುವ ನಷ್ಟವೂ ನಮ್ಮನ್ನು ಚಲಿತಗೊಳಿಸುತ್ತಿಲ್ಲ ಎಂತಾದರೆ ಕಷ್ಟ. ಅವೈಜ್ಞಾನಿಕ ಹಂಪ್‌ಗ್ಳ ವಿರುದ್ಧ ಒಂದು ಹೋರಾಟ ಆರಂಭವಾಗಲೇಬೇಕಾದ ಕಾಲವಿದು.
        
* ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Trending videos

Back to Top