CONNECT WITH US  

ಥರ್ಟಿ ಡೇಸ್‌ ಗ್ಯಾರೆಂಟಿ ಎಂಬ ಕಿರಿಕಿರಿ

ಕೆಲ ತಿಂಗಳ ಹಿಂದೆ ನಡೆದ ಘಟನೆ. ನನ್ನಾಕೆಗೆ ಕೊಂಚ ಮಂಡಿನೋವು ಶುರುವಾಗಿತ್ತು. ಪರೀಕ್ಷಿಸಿದ ವೈದ್ಯರು ಬೇರೆ ಉಪಚಾರದ ಜೊತೆಗೆ ಈಗ ಮಾಮೂಲಿಯಾಗಿ ತೊಡುವ ಚಪ್ಪಲಿ ಬೇಡವೆಂತಲೂ, ಸೂಕ್ತವಾದ (ವೈದ್ಯಕೀಯ ಪ್ರಮಾಣಿತ) ಪಾದರಕ್ಷೆ ಧರಿಸಬೇಕೆಂತಲೂ ಸಲಹೆ ಕೊಟ್ಟರು.ಸರಿ ಅಂತ ನಮ್ಮ ಏರಿಯಾದ (ಈ ಭಾಗದ ಅತ್ಯಂತ ದೊಡ್ಡ ಹಾಗೂ ಹೆಸರುವಾಸಿ ಎಂದು ಹಣೆಪಟ್ಟಿ ಅಂಟಿಸಿಕೊಂಡ) ಮೆಡಿಕಲ್ ಶಾಪ್‌ಗೆ ಹೋಗಿ ಸೂಕ್ತವಾದ ಚಪ್ಪಲಿ ಕೊಂಡು, ರಸೀದಿ ಪಡೆದು ಬಂದೆ.

 ಕೊಳ್ಳುವಾಗ ಆತ ಮೂವತ್ತು ದಿನಗಳಲ್ಲಿ ಏನೇ ಆದ್ರೂ..., ರೀಪ್ಲೇಸ್‌ ಗ್ಯಾರಂಟಿ ಸಾರ್‌...! ಏನಿ ಟೈಂ ಬೇಕಾದ್ರೂ ಬನ್ನಿ... ಎಂದು ಹೇಳಿದ್ದ. ಅದು ಬರೀ ಬೊಗಳೆ ಅಂತ ಗೊತ್ತಾದದ್ದು ಆಮೇಲೆ. ಚಪ್ಪಲಿ ತಂದು ಕೆಲ ದಿನಕ್ಕೆ ತೊಂದರೆ ಕಾಣಿಸಿಕೊಂಡಿತು. ನನ್ನಾಕೆಯ ಪಿರಿಪಿರಿ ಶುರುವಾಯಿತು. ನಾನು ಅಂಗಡಿ ಹೇಗೂ ನಿಂಗೆ ಗೊತ್ತು; ನೀನೇ ಹೋಗು..., ಹೇಗೂ ಆತ ಗ್ಯಾರಂಟಿ ಕೊಟ್ಟಿದ್ದಾನಲ್ಲ...!ಎಂದೆ. ನನ್ನಾಕೆ ಹೋದಾಗ ಅಂಗಡಿಯಲ್ಲಿದ್ದಾತ ಇಲ್ಲ..., ಸಾಧ್ಯವಿಲ್ಲ...!

ಅಂತ ಕಡ್ಡಿ ಮುರಿದಂತೆ ಹೇಳಿ ಕಳುಹಿಸಿದ್ದ.  ಸರಿ...  ಸಂಜೆ ನಾನೇ ಆ ಅಂಗಡಿಗೆ ಹೋದೆ. ಅಂದು ಖರೀದಿ ಮಾಡುವಾಗ ಇದ್ದ ವ್ಯಕ್ತಿ ಇರಲಿಲ್ಲ. ಇದ್ದ ಹೊಸಬ ಕೂಡಾ ಬೇರೆ ಗಿರಾಕಿಯತ್ತ ಗಮನ ಹರಿಸಿದ್ದ. ಕೆಲ ಸಮಯದ ನಂತರ ನಾನು ಅಲ್ಲಿ ಕೊಂಡಿದ್ದ ಚಪ್ಪಲಿಯನ್ನೂ, ಬಿಲ್ಲನ್ನೂ ಪ್ರದರ್ಶಿಸುತ್ತಾ, ನೋಡಿ...! ನಿಮ್ಮಲ್ಲೇ ಕೊಂಡಿದ್ದು, ವಾರ ಕಳೆಯುವಷ್ಟರಲ್ಲೇ ಇದರ ಪಟ್ಟಿ ಸುರುಳಿಯಾಗುತ್ತಿದೆ.

ಜೊತೆಗೆ ಇದರ ಅಂಟು ಪಟ್ಟಿ ಕೂಡಾ ಸರಿಯಾಗಿ ಅಂಟಿಕೊಳ್ಳುತ್ತಿಲ್ಲ ಏನಾಗಿದೆ ನೋಡಿ..., ಸಾಧ್ಯವಾದ್ರೆ ಬೇರೆಯದನ್ನೇ ಕೊಡಿ  ಎಂದೆ....! ಚಪ್ಪಲಿಯನ್ನು ಕೈಗೆ ತೆಗೆದುಕೊಂಡವನೇ ಅದನ್ನು ಕೆಲ ಹೊತ್ತು ಹಿಂದೆ ಮುಂದೆ ತಿರುಗಿಸಿ ನೋಡಿದ. ಕೆಲ ಸಮಯ ಕಳೆದು ನನ್ನತ್ತ ಮುಖ ತಿರುಗಿಸಿ, ಚೂಪು ನೋಟದಿಂದ ಸಾರ್, ಅದು ಎಕ್ಸ್ಚೇಂಜ್  ಕಷ್ಟ...! ಈಗ ಕೊಟ್ಟು ಹೋಗಿ, ಸಪ್ಲೇಯರ್‌ ಕೇಳಿ ನಿಮಗೆ ತಿಳಿಸ್ತೀನಿ ಎಂದ ಉಡಾಫೆಯಾಗಿ.  

ಅಲ್ಲಯ್ಯ..., ನಿನ್ನ ಸಮಜಾಯಿಷಿ ಉತ್ತರ ನಂಗೆ ಬೇಕಿಲ್ಲ; ನೀವು ಕೊಡುವಾಗ ಒಂದು ಮಾತು....,  ತೆಗೆದುಕೊಳ್ಳುವಾಗ ಒಂದು ಮಾತಾ...! ಅವತ್ತು ಗ್ಯಾರೆಂಟಿ ಅಂತ ಕೊಟ್ಟಿದ್ದಲ್ಲವೇ...? ಅವತ್ತು ಕೊಡುವಾಗ ಇದ್ದದ್ದು ಯಾರು..?  ಅಂತ ಕೇಳಿದೆ. ಬಡ ಪಟ್ಟಿಗೆ ಒಪ್ಪುವ ಅಸಾಮಿ ಇದಲ್ಲ ಅನ್ನಿಸಿರಬೇಕು. ಅವ್ರು ನಮ್ಮೆಜಮಾನ್ರು ಸಾ..., ಅಂದ. ಸರಿ ನಾನು ಇಲ್ಲೇ ಇತೇನೆ..., ನಿಮ್ಮ ಯಜಮಾನ್ರಿಗೆ ಪೋನ್ ಮಾಡಿ ಕೇಳು..., ಇಲ್ಲಾ ನನಗೆ ಕೊಡು ನಾನೇ ಮಾತಾಡ್ತೀನಿ ಅಂದೆ.  ಇದ್ಯಾವುದೋ ಅಂಟು ಗಿರಾಕಿ ಅನ್ನಿಸಿರಬೇಕು. 

ಅತ್ತಲಿಂದ ಮಾಲೀಕನ ಧ್ವನಿ. ನಾನು ಇರುವ ವಿಚಾರ ತಿಳಿಸಿ, ಎರಡೇ ದಿನಕ್ಕೇ ಅದರ ಬಣ್ಣ ಬಯಲಾಗಿದೆ. ನೀವು ಹೇಳಿದಂತೆ ವಾಪಾಸ್‌ ತಗೊಂಡು ಬೇರೇದು ಕೊಡಿ. ನೀವು ಹೇಳಿದಷ್ಟೇ ಕೊಟ್ಟಿದ್ದೇನೆ, ಒಂದ್ಪ್ಯೆಸ ಚೌಕಾಶಿ  ಕೂಡಾ ಮಾಡಿಲ್ಲ ಎಂದೆ.  ಆತನೂ ಮೊದಲೂ ಕಂಯ್ನಾ....! ಪಿಯ್ನಾ ಅಂತೇನೋ ಹೇಳ ಹೊರಟ. ನನಗೆ ಎಲ್ಲಿಲ್ಲದ ಸಿಟ್ಟು ನೆತ್ತಿಗೇರಿತು....! ನೀವು 30 ಡೇಸ್‌ ಗ್ಯಾರೆಂಟಿ  ಅಂತ ಹೇಳಿ ಕೊಟ್ಟಿದ್ದಲ್ಲವೇ...?

ಹೌದೋ ಅಲ್ಲವೋ ಹೇಳಿ ಎಂದವ, ಮುಂದುವರಿದು ನೋಡ್ರಿ.... ನಿಮ್ಮ ಮಾತಿಗೆ ನೀವು ಮುಟ್ಟಿಕೊಳ್ಳಿ, ಚಪ್ಪಲಿ ನಿಮಗೆ ವ್ಯಾಪಾರ ಇರಬಹುದು....! ಆದ್ರೆ ನಮಗೆ ಇದು ಜೀವದ ವಿಷಯ ತಿಳ್ಕೊ...! ಅಂದೆ. ಮರು ಮಾತಾಡಲು ಪದಗಳಿಗೆ ತಡಕಾಡಿದ ಆತನಿಗೆ ಇದ್ಯಾವ ಉಪದ್ಯಾಪಿ...! ಎನ್ನಿಸಿರಬೇಕು. ನಂತರ ನಿಧಾನವಾಗಿ ಪ್ಲೇಟ್‌ ಬದಲಿಸಿದ, ಸಾರ್‌..., ಅದು ಕಂಪನಿಯ ಗ್ಯಾರೆಂಟಿ, ಒಂದ್ಕೆಲ್ಸ ಮಾಡಿ, ಚಪ್ಪಲಿ ಅಲ್ಲೇ ಬಿಟ್ಟು ಹೋಗಿ.

ಈಗ ನಾನು ಎಲ್ಲೋ ಹೊರಗಡೆ ಇದ್ದೇನೆ...., ನಾನೇ ನಾಳೆ ಖುದ್ದು ಕಂಪನಿಗೆ ಹೋಗಿ ಬದಲಾಯಿಸಿಕೊಂಡು ಬಂದು ಕೊಡುತ್ತೇನೆ. ನನ್ನನ್ನು ನಂಬಿ, ಪ್ಲೀಸ್‌ ನಂಬಿ ಸಾರ್‌...! ಅಂತ ನಾಟಕೀಯವಾಗಿ ಏನೇನೋ ಬಡಬಡಿಸಿದ. ನಾನು ಆತನನ್ನು ನಂಬಿ ಕೂತೆ, ಇಂದು ನಾಳೆಯಾಯ್ತು..., ನಾಳೆ ಮತ್ತೆ ನಾಳೆಗೆ ಗ್ಯಾರೆಂಟಿ ಕೊಡುತ್ತಾ, ದಿನಗಳೂ ಉರುಳಿ ತಿಂಗಳುಗಳೇ ಕಳೆದು ಹೋದವು. ನನ್ನ ಚಪ್ಪಲಿಯೂ ಸವೆದು, ಈಗ ನಾನು ನನ್ನಾಕೆಯೊಟ್ಟಿಗೆ ಹೊಸ ಚಪ್ಪಲಿ ಭಾಗ್ಯದ ಫ‌ಲಾನುಭವಿಯಾದೆ...!    

* ಹೊಸ್ಮನೆ ಮುತ್ತು

Trending videos

Back to Top