CONNECT WITH US  

ಬೆಳಗಾವಿಯ ಈ ಸುವರ್ಣ ಮಂದಿರಕ್ಕೆ ಬನ್ನಿ: ತಿಂಡಿ ತಿನುಸು ತಿನ್ನಿ...

 ಮೀಸೆ ಮಾವನ ಒಂದ್‌ ಪೈಸೆ, ಬಿಳಿ ಕೋಟ್‌ ಅಜ್ಜಾಂದು ಮೂರ್‌ ಪೈಸೆ, ಟೋಪಿ ಕಾಕಾ ದೋನ್‌ ಪೈಸೆ, ಹಾಪ್‌ ಚಡ್ಡಿ ದಾದಾಂಚ ಚಾರಾಣೆ, ಛತ್ರಿ ಮಾಮಾಂದು ನಾಕಾಣೆ ತಗೋರ್ರಿ- ಎಂಬ ವೇಟರ್‌ನ ಧ್ವನಿಯನ್ನು ನಮ್ಮ ಹಿಂದಿನ 2-3 ಪೀಳಿಗೆಯ ಜನ ಕೇಳಿಯೇ ಇಲ್ಲ. ಆದರೆ ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಕೆಲವು ವರ್ಷ ಬದುಕಿದ ಪ್ರತಿಯೊಬ್ಬರೂ ಈ ಧ್ವನಿ ಕೇಳಿರಲೇಬೇಕಾಗುತ್ತದೆ. 

ಹೋಟೆಲ್‌ಗ‌ಳಲ್ಲಿ ತಿಂಡಿ, ತಿನಿಸು ತಿಂದವರು ಬಿಲ್‌ ನೀಡುವ  ಸಂದರ್ಭದಲ್ಲಿ ವೇಟರುಗಳು ಬಳಸುತ್ತಿದ್ದ ಭಾಷೆ ಇದಾಗಿತ್ತು. ಬಹು ಸಂಸ್ಕೃತಿಯ ಹಾಗೂ ಕನ್ನಡ-ಮರಾಠಿ ಭಾಷೆಯ ಸಮ್ಮಿಲನಗೊಂಡ ಬೆಳಗಾವಿ ನಗರದ ಉದ್ಯಮದಲ್ಲಿ ಹೋಟೆಲ್‌ನ ಪಾಲು ಕೂಡ ದೊಡ್ಡದು. ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಿಂದ ಬಂದವರೇ ಬೆಳಗಾವಿಯಲ್ಲಿ ಹೋಟೆಲ್‌ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. 30ರ ದಶಕದಿಂದಲೂ ಅಲ್ಲಿರುವ ಹೋಟೆಲ್‌ಗ‌ಳು ಉದರ ಪೋಷಣೆಗೆ ಕಾರಣವಾಗಿವೆ. 

 ಆಗಿನ ಹೊಟೇಲ್‌ಗ‌ಳು ಲಕ್ಸುರಿ, ಡಿಲಕ್ಸ್‌ ಆಗಿರುತ್ತಿರಲಿಲ್ಲ. ಹೋಟೆಲ್‌ಗ‌ಳೂ ಮನೆಯಂತೆಯೇ ಇದ್ದವು. ಕಟ್ಟಿಗೆ ಟೇಬಲ್‌, ಕುರ್ಚಿಗಳನ್ನು ಹಾಕಿ ಗಿರಾಕಿಗಳಿಗೆ ವ್ಯವಸ್ಥೆ ಮಾಡಲಾಗುತ್ತಿತ್ತು. ಕಟ್ಟಿಗೆ ಒಲೆಯ ಮೇಲೆಯೇ ಊಟ, ತಿಂಡಿ ತಯಾರಿಸುವ ಪದ್ಧತಿ ಇತ್ತು. ಉತ್ತರ ಕನ್ನಡ ಜಿಲ್ಲೆ ಕುಮುಟಾದ ಕಾಗಾಲದಿಂದ ಬೆಳಗಾವಿಗೆ ಬಂದ  ಶಂಕರ ಪೈ ಅವರು 1936ರಲ್ಲಿ ಸೀತಾರಾಮ ನಿವಾಸ ಎಂಬ ಹೆಸರಿನಡಿ ಹೊಟೇಲ್‌ ಆರಂಭಿಸಿದ್ದರು. 

 ತಂದೆಯ ನಿಧನಾನಂತರ ಶಂಕರ ಅವರ ಸಹೋದರ ವಿಶ್ವನಾಥ ನರಸಿಂಹ ಪೈ  ಕೂಡ  1936ರಲ್ಲಿ ಬೆಳಗಾವಿಗೆ ಬಂದರು. ಸಹೋದರ ಶಂಕರ ಅವರ ಮಾರ್ಗದರ್ಶನದಲ್ಲಿ ಕೆಲಸ ಕಲಿತು, ಹಗಲಿರುಳು ದುಡಿದು ಹೋಟೆಲ್‌ ಕಟ್ಟುವ ಕನಸು ಕಂಡರು.   1948 ಅಗಸ್ಟ್‌ 24ರಂದು ಸುವರ್ಣ ಮಂದಿರ ಎಂಬ ಹೋಟೆಲ್‌ ಆರಂಭಿಸುವ ಮೂಲಕ ಗಿರಾಕಿಗಳಿಗೆ ಮತ್ತಷ್ಟು ಹತ್ತಿರಾದರು. ಈಗ ಸದ್ಯ 94ರ ಇಳಿ ವಯಸ್ಸಿನಲ್ಲೂ ವಿಶ್ವನಾಥ ಅವರು ಇದನ್ನು ಮುಂದುವರಿಸಿದ್ದಾರೆ.

ಫೇಮಸ್‌ ತಿಂಡಿ-ತಿನಿಸು
 ವಿಶ್ವನಾಥ ಪೈ ಅವರು,  ರುಚಿಕಟ್ಟಾದ ತಿಂಡಿ-ತಿನಿಸು ತಯಾರಿಸುವಲ್ಲಿ ಫೇಮಸ್‌ ಆಗಿದ್ದರು. ಬೆಳಗಾವಿಯಲ್ಲಿ ಕನ್ನಡ ಹಾಗೂ ಮರಾಠಿ ಭಾಷೆ ಮುಖ್ಯವಾಗಿದ್ದರಿಂದ ವಿಶ್ವನಾಥ ಅವರು ಎರಡನ್ನೂ ಕರಗತ ಮಾಡಿಕೊಂಡರು. ಆಗ ಹೊಟೇಲ್‌ಗ‌ಳಲ್ಲಿ ಇಡ್ಲಿ, ದೋಸೆ, ಉಪ್ಪಿಟ್ಟು, ಶೀರಾ, ಫುರಿ ಭಾಜಿ ಬಹಳ ಫೇಮಸ್‌ ತಿಂಡಿಗಳಾಗಿದ್ದವು.  ಆಗ ಆರಂಭಿಸಿದ ಹೋಟೆಲ್‌ ಇನ್ನೂವರೆಗೆ ಅದೇ ಹೆಸರಿನಲ್ಲಿಯೇ ಮುಂದುವರಿದಿದೆ. ಈಗ ವಿಶ್ವನಾಥ ಅವರತ ಒಡೆತನದಲ್ಲಿ ಬೆಳಗಾವಿ ಕೇಂದ್ರ ಬಸ್‌ ನಿಲ್ದಾಣದ ಬಳಿ ಪೈ ರೆಸ್ಟೋರೆಂಟ್‌, ಕೋಟೆ ಕೆರೆ ಬಳಿಯ ಪೈ ರೆಸಾರ್ಟ್‌ ಇವೆ. ಇವರ ಮಕ್ಕಳಾದ ಬಾಲಕೃಷ್ಣ ಪೈ, ಅಶೋಕ ಪೈ, ಶ್ರೀಪಾದ ಪೈ, ಗಿರೀಶ ಪೈ ಹೋಟೆಲ್‌ ಉದ್ಯಮವನ್ನೇ ಮೈಗೂಡಿಸಿಕೊಂಡು ನಡೆಸುತ್ತಿದ್ದಾರೆ. 

ಒಂದು ಪೈಸೆಗೆ ಚಹಾ
 ಸುವರ್ಣ ಮಂದಿರದ  ಬಿಸಿ, ಬಿಸಿ ಉಪ್ಪಿಟ್ಟು, ದೋಸೆ ಹಾಗೂ ಪೂರಿ ಭಾಜಿ, ಚಹಾ ಭಾರೀ ಫೇಮಸ್‌. ಹಲ್ವಾ, ಕುಂದಾ, ಮೈಸೂರು ಪಾಕ್‌, ಅವಲಕ್ಕಿಯನ್ನು ಇಲ್ಲಿ ತಯಾರಿಸಲಾಗುತ್ತಿತ್ತು. ಮೊದಲು ಒಂದು ಪೈಸೆಗೆ ಚಹಾ ಮಾರಾಟ ಮಾಡಲಾಗುತ್ತಿತ್ತು. 100 ಕಪ್‌ ಚಹಾ ಮಾರಿದಾಗ ಒಂದು ರೂಪಾಯಿ ವ್ಯಾಪಾರವಾಗುತ್ತಿತ್ತು. ಅಬ್ಬಬ್ಟಾ ಎಂದರೆ ಒಂದು, ಎರಡು ರೂಪಾಯಿ ವ್ಯಾಪಾರ ಆಗುತ್ತಿತ್ತು. ಸಂತೆ ದಿನಗಳಲ್ಲಿ ಬೇರೆ ಊರುಗಳಿಂದ ಜನ ಬಂದಾಗ ಮಾತ್ರ ಹೆಚ್ಚಿನ ವ್ಯಾಪಾರ ಭರಾಟೆ ಭಾರೀ ಆಗಿರುತ್ತಿತ್ತು. ಆಗಿನ ಕಾಲದಲ್ಲಿ ಪೈಸೆ ಲೆಕ್ಕದಲ್ಲಿಯೇ ಜನ ವ್ಯವಹಾರ ಮಾಡುತ್ತಿದ್ದರು. ಗಿರಾಕಿಗಳನ್ನು ದೇವರೆಂದು ಭಾವಿಸಿ ಗೌರವ ಆದರದಿಂದ ನೋಡಿಕೊಳ್ಳುವ ಜಾಯಮಾನ ಹೊಟೇಲ್‌ ಮಾಲೀಕರಿಗಿತ್ತು ಎನ್ನುತ್ತಾರೆ ವಿಶ್ವನಾಥ ಪೈ. 

ನೆಹರು-ಇಂದಿರಾ-ವಾಜಪೇಯಿಗೆ ಸುವರ್ಣ ಮಂದಿರದ್ದೇ ಊಟ
ಬೆಳಗಾವಿಗೆ ಆಗಿನ ಪ್ರಧಾನಿ ಜವಾಹರ ಲಾಲ್‌ ನೆಹರು, ಇಂದಿರಾ ಗಾಂಧಿ ಆಗಮಿಸಿದರೆ ಅವರಿಗೆ ಸುವರ್ಣ ಮಂದಿರದ್ದೇ ಊಟ.  ಇಂದಿರಾ ಗಾಂಧಿ ಸಮಾವೇಶಕ್ಕೆ 10 ಸಾವಿರಕ್ಕೂ ಹೆಚ್ಚು ಜನರಿಗೆ ಈ ಹೊಟೇಲ್‌ನಲ್ಲೇ ಊಟ ತಯಾರಿಸಲಾಗಿತ್ತು.  ಅಟಲ್‌ ಬಿಹಾರಿ ವಾಜಪೇಯಿ ಅವರು ಜನಸಂಘದಲ್ಲಿದ್ದಾಗ  ಮಂದಿರಕ್ಕೆ ಬಂದು ಚಹಾ ಕುಡಿದಿದ್ದರು. ಎಚ್‌.ಡಿ. ದೇವೇಗೌಡ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚಗಲಾ ಹೀಗೆ ಅನೇಕರು ಈ ಹೋಟೆಲಿಗೆ ಭೇಟಿ ನೀಡಿದ್ದಾರೆ. 

ಕೈ-ಕಾಲು ತೊಳೆಯಲು ಬಿಸಿ ನೀರು
ಹೊಟೇಲ್‌ಗ‌ಳಿಗೆ ಬರುವ ಗಿರಾಕಿಗಳಿಗೆ ಸಾಮಾನ್ಯವಾಗಿ ಬಿಸಿ ನೀರು ತುಂಬಿದ ಬಕೆಟ್‌ ಇಡಲಾಗುತ್ತಿತ್ತು. ಗಿರಾಕಿಗಳು ಕೈ, ಕಾಲು, ಮುಖ ತೊಳೆದುಕೊಂಡು ಒಳ ಬರುತ್ತಿದ್ದರು. ಆಗಿನ ಕಾಲದ ಜನರ ಸಂಚಾರ ಕಾಲ್ನಡಿಗೆಯೇ ಆಗಿರುತ್ತಿತ್ತು. ಹೀಗಾಗಿ ಆಯಾಸಗೊಂಡು ಬರುವ ಗಿರಾಕಿಗಳನ್ನು ಸಂತೃಪ್ತಿಗೊಳಿಸುವ ಕೆಲಸವನ್ನು ಹೊಟೇಲ್‌ನವರು ಮಾಡುತ್ತಿದ್ದರು.
ವಿಶ್ವನಾಥ ಪೈ, ಸುವರ್ಣ ಮಂದಿರ ಮಾಲೀಕ

ಭೈರೋಬಾ ಕಾಂಬಳೆ

Trending videos

Back to Top