CONNECT WITH US  

ಮುಟ್ಟಿದರೆ Money!

ಸುಳ್ಳು ಸುಳ್ಳೇ ಹೇಳಿ ಸುಲಿಗೆ ಮಾಡೋ ಫೇಸ್‌ಬುಕ್‌

ಹಿಂದಿನ ಜನ್ಮದಲ್ಲಿ ನೀವು ಏನಾಗಿದ್ರಿ? ನೀವು ಹೀರೋ ಆದ್ರೆ ಹೀರೋಯಿನ್‌ ಯಾರಾಗಿರ್ತಾರೆ? ನೀವು ಯಾವ ಪ್ರಾಣೀನ ಹೋಲುತ್ತೀರಿ? ನೀವು ಯಾವಾಗ/ಹೇಗೆ ಸಾಯುತ್ತೀರಿ?... ಇಂಥವೇ ಕುತೂಹಲದ ಪ್ರಶ್ನೆಗಳು ಫೇಸ್‌ಬುಕ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ನಾವೆಲ್ಲಾ ಅಂಥ ಪ್ರಶ್ನೆಗಳ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ಕಾಣುವ ಸುಳ್ಳು ಸುಳ್ಳೇ ಉತ್ತರಗಳನ್ನು ಓದಿ ಸಂಭ್ರಮಿಸುತ್ತೇವೆ. ನಮ್ಮ ಈ ಕೆಟ್ಟ ಕುತೂಹಲ ಹಾಗೂ ಮನೋದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ಫೇಸ್‌ಬುಕ್‌ ಆ್ಯಪ್‌ಗಳು ದಿನವೂ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿವೆ! 

ದಿನೇ ದಿನೆ ಬದುಕು ಬದಲಾಗುತ್ತಿದೆ. ಬದುಕು ನಾವು ಎಣಿಸಿದಂತೆ ಸಾಗುವುದಿಲ್ಲ. ಎಲ್ಲವೂ ಅನಿರೀಕ್ಷಿತ. ಹಲವು ಬಾರಿ ನಮ್ಮ ವಾಸ್ತವ ಜೀವನ ಬೇಸರವೆನಿಸಿ ಕಾಲ್ಪನಿಕ ಜಗತ್ತನ್ನು ಅರಸುತ್ತೇವೆ. ಹಾಗೆಂದು ವಾಸ್ತವ ಜೀವನದಿಂದ ಪಾರಾಗುವುದಿಲ್ಲ. ಕೆಲ ಕ್ಷಣಗಳ ಕಾಲ ನೈಜವಲ್ಲದ ಜೀವನ ಕಂಡು, ಅರೆಕ್ಷಣದ ಮಟ್ಟಿಗಾದರೂ ಅದೇ ನಿಜವೆಂದು ಭಾವಿಸಿ ಖುಷಿಪಡುತ್ತೇವೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಲ್ಪನಿಕ ಜಗತ್ತನ್ನೇ ಸೃಷ್ಟಿಸಿಕೊಡುವ ಕೆಲವು ಅಪ್ಲಿಕೇಶನ್‌ಗಳಿವೆ. ಕುತೂಹಲ ಮೂಡಿಸುವ ಹಲವು ಕಲ್ಪನೆಗಳು, ನಮ್ಮನ್ನು ಕ್ಷಣಕಾಲ ವಾಸ್ತವ ಜಗತ್ತಿನಿಂದ ದೂರ ಕರೆದೊಯ್ಯುತ್ತವೆ. ನಮಗೆ ನಮ್ಮ ಬಗ್ಗೆ ಮತ್ತು ಇತರರ ಬಗ್ಗೆ ತಿಳಿಯಲು ಬಹಳ ಕುತೂಹಲ ಹಾಗೂ ಇತರರು ನಮ್ಮ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ತಿಳಿಯುವ ಆತುರ. ಇದನ್ನೇ ಗೇಮ್‌ಪ್ಲಾನ್‌ ಮತ್ತು ಆದಾಯದ ಮೂಲವಾಗಿಸಿಕೊಂಡ ಫೇಸುºಕ್‌ ಆಧಾರಿತ ಅಪ್ಲಿಕೇಶನ್‌ಗಳು ನಮ್ಮ ಮುಂದೆ ಕುತೂಹಲ ಕೆರಳಿಸುವ ಪ್ರಶ್ನೆಗಳನ್ನು ಇಡುತ್ತವೆ. ಉದಾಹರಣೆಗೆ:  
- ಹಿಂದಿನ ಜನ್ಮದಲ್ಲಿ ನೀವು ಏನಾಗಿದ್ದೀರಿ? 
- ಯಾರು ನಿಮ್ಮನ್ನು ಸಾಯಿಸುತ್ತಾರೆ? 
- ನೀವು ಹೇಗೆ ಸಾಯುತ್ತಿರಿ? 
- ನೀವು ಯಾವ ಹೀರೋ/ ಹೀರೋಯಿನ್‌ ಅನ್ನು ಹೋಲುತ್ತೀರಿ? 
- ನೀವು ಹೀರೋ/ ಹೀರೋಯಿನ್‌ ಆಗಬೇಕಾದ ಸಿನಿಮಾ ಯಾವುದು? ಅದರ ನಿರ್ದೇಶಕರು ಯಾರು? ನಾಯಕ/ನಟಿ, ವಿಲನ್‌, ನಿರ್ಮಾಪಕರು ಯಾರು? 
- ನಿಮ್ಮನ್ನು ಯಾರು ಕದ್ದುಮುಚ್ಚಿ ಪ್ರೀತಿಸುತ್ತಿದ್ದಾರೆ?
- ನಿಮ್ಮ ಗ್ಯಾಂಗ್‌ಸ್ಟರ್‌ ಗ್ಯಾಂಗ್‌ ಯಾವುದು? 
- ನಿಮಗೆ ಎಷ್ಟು ಜನ ಶತ್ರುಗಳಿದ್ದಾರೆ? 
- ನೀವು ಸ್ವರ್ಗಕ್ಕೆ ಹೋಗುತ್ತೀರಾ ಅಥವಾ ನರಕಕ್ಕೆ ಹೋಗುತ್ತೀರಾ? 
- ನಿಮ್ಮ ಲವ್‌ ಪರ್ಸೆಂಟೇಜ್‌ ಎಷ್ಟು? 
- ಯಾವ ಪದವು ನಿಮ್ಮ ಜೀವನವನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ? 
- ನಿಮ್ಮನ್ನು ಯಾರು ಹೆಚ್ಚು ಪ್ರೀತಿಸುತ್ತಾರೆ? 
- ಯಾವ ಸಪ್ರೈಸ್‌ ನಿಮಗೋಸ್ಕರ ಮುಂದಿನ ವರ್ಷ ಕಾಯುತ್ತಿದೆ?
- ನೀವು ಯಾವ ಪ್ರಾಣಿಯನ್ನು ಹೋಲುತ್ತೀರಿ?
- ನೀವು ಮುಖ್ಯಮಂತ್ರಿಯಾದರೆ ನಿಮ್ಮ ಮಂತ್ರಿ ಮಂಡಲದಲ್ಲಿ ಯಾರು ಯಾರು ಸದಸ್ಯರು ಇರುತ್ತಾರೆ?

ಈ ರೀತಿಯ ಪ್ರಶ್ನೆಗಳು ಎಲ್ಲರ ಕುತೂಹಲ ಹೆಚ್ಚಿಸುತ್ತವೆ. ಇದರಲ್ಲಿ ಏನೋ ವಿಶೇಷ ಇದೆ ಅನಿಸುತ್ತದೆ. ಈ ಪ್ರಶ್ನೆಗಳಿಗೆ ಉತ್ತರ ಪಡೆಯಲು ಬೇರೇನೂ ಮಾಡಬೇಕಿಲ್ಲ. ಆ ಪ್ರಶ್ನೆಯ ಮೇಲೆ ಒಮ್ಮೆ ಟಚ್‌ ಮಾಡಿದರೆ ಸಾಕು: ಉತ್ತರ ಬರುತ್ತದೆ! ಸಕಾರಾತ್ಮಕವಾದ ಉತ್ತರ ಬಂದರಂತೂ ನಮ್ಮ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಇನ್ನು ಕೆಲವು ಬಾರಿ, ನಮಗೆ ತೃಪ್ತಿಯಾಗದ ಉತ್ತರ ದೊರೆತರೆ "ಟ್ರೈ ಅಗೇನ್‌' ಆಯ್ಕೆಯನ್ನು ಬಳಸುತ್ತೇವೆ. ಆಗ ಸಮಾಧಾನಕರ ಉತ್ತರ ದೊರೆತರೆ ಅದು ಸತ್ಯವಲ್ಲ ಎಂದು ಗೊತ್ತಿದ್ದರೂ ಸಹ ಖುಷಿ ಪಡುತ್ತೇವೆ. ಅದನ್ನು ಫೇಸ್‌ಬುಕ್‌, ವಾಟ್ಸಪ್‌ಗಳಲ್ಲಿ ಶೇರ್‌ ಮಾಡುತ್ತೇವೆ. ಅದಕ್ಕೆ ಬರುವ ಕಮೆಂಟ್‌ಗಳು, ಲೈಕÕ…, ಹೊಗಳಿಕೆ ಇವೆಲ್ಲವೂ ನಮಗೆ ಖುಷಿ ಕೊಡುತ್ತವೆ. ಇನ್ನು, ಯಾರು ನಿಮ್ಮನ್ನು ಕೊಲೆ ಮಾಡುತ್ತಾರೆ? ನಿಮ್ಮ ಹೃದಯದಲ್ಲಿ ಯಾರು ನೆಲೆಸಿದ್ದಾರೆ? ಯಾರು ನಿಮ್ಮನ್ನು ಗುಟ್ಟಾಗಿ ಪ್ರೀತಿಸುತ್ತಿದ್ದಾರೆ? ಈ ರೀತಿಯ ಪ್ರಶ್ನೆಗಳಿಗೆ ಉತ್ತರವಾಗಿ ಬರುವಂಥವರ ಹೆಸರುಗಳನ್ನು ಟ್ಯಾಗ್‌ ಮಾಡಿ ತಮಾಷೆ ಮಾಡುತ್ತೇವೆ, ನಗುತ್ತೇವೆ. ಕಾಲ್ಪನಿಕ ಕಲ್ಪನೆಗಳು ನೀಡುವ ಸಂತೋಷವನ್ನು ಅನುಭವಿಸುತ್ತೇವೆ. ನಾವು, ನೀವೆಲ್ಲಾ ಇಷ್ಟರ ಮಟ್ಟಿಗೆ ಭ್ರಮಾಲೋಕವನ್ನು ಆನಂದಿಸುತ್ತೇವೆ ಎಂದರೆ ಎಲ್ಲೋ ಒಂದು ಕಡೆ ವಾಸ್ತವವನ್ನು ನಮ್ಮ ನೈಜ ವ್ಯಕ್ತಿತ್ವವನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲವಾ ಎನ್ನುವ ಪ್ರಶ್ನೆ ಕಾಡುತ್ತದೆ? ಇಷ್ಟಲ್ಲದೇ ಕವಿಗಳು ಹೇಳಿದ್ದಾರೆಯೇ "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ' ಎಂದು. ಏನೇ ಆಗಲಿ, ಕ್ಷಣಕಾಲವಾದರೂ ಮನಸ್ಸು ವಾಸ್ತವ ಮರೆತು, ಸಮಸ್ಯೆಗಳನ್ನು ಮರೆತು, ಕಾಲ್ಪನಿಕ ಜಗತ್ತಿನಲ್ಲಿ ವಿಹರಿಸಿ ಆನಂದಿಸುತ್ತದೆ. ಹೀಗೆ ನಾವು ಕಲ್ಪನೆಯ ಜಗತ್ತಿನಲ್ಲಿ ಖುಷಿಪಡುತ್ತಿರುವಾಗಲೇ, ನಮ್ಮ ಈ ಹುಡುಗಾಟಿಕೆಯ ಗುಣವನ್ನೇ ಮುಂದಿಟ್ಟುಕೊಂಡು ಕೆಲವು ಆ್ಯಪ್‌ಗ್ಳು ಕೈ ತುಂಬಾ ದುಡ್ಡು ಮಾಡಿಕೊಳ್ಳುತ್ತಿವೆ. 

ಫೇಸ್‌ಬುಕ್‌ನಲ್ಲಿನ ಆ್ಯಪ್‌ ಗಳು ಹೇಗೆ ದುಡ್ಡು ಗಳಿಸುತ್ತವೆ ಗೊತ್ತೇ? ಇಲ್ಲಿ ಸಿಪಿಎಂ ಮತ್ತು ಸಿಪಿಸಿ ಎಂಬ ವಿಧಾನಗಳಿವೆ. ಸಿಪಿಎಂ ವಿಧಾನದಲ್ಲಿ ಪ್ರತಿ ಸಾವಿರ ಬಾರಿ ಕಾಣಿಸಿಕೊಳ್ಳುವ ಜಾಹೀರಾತಿಗೆ ಕಂಪನಿಗಳು ಇಂತಿಷ್ಟು ಹಣ ಎಂದು ನಿರ್ಧರಿಸಿರುತ್ತವೆ. ಇದನ್ನು "ಕಾಸ್ಟ್  ಪರ್‌ ಮಾಡೆಲ್‌' ಎಂದು ಕರೆಯುತ್ತಾರೆ. ಸಿಪಿಸಿ ಎಂದರೆ ಪ್ರತಿ ಬಾರಿಯೂ ಬಳಕೆದಾರರು ಜಾಹೀರಾತುಗಳ ಮೇಲೆ ಕ್ಲಿಕ್‌ ಮಾಡಿದಾಗ ಇಂತಿಷ್ಟು ಹಣವೆಂದು ನಿಗದಿ ಪಡಿಸಲಾಗಿರುತ್ತದೆ. ಇದನ್ನು "ಕಾಸ್ಟ್  ಪರ್‌ ಕ್ಲಿಕ್‌' ಎಂದು ಕರೆಯುತ್ತಾರೆ. ಕೆಲವೊಮ್ಮೆ ಯುಗಾದಿ, ದೀಪಾವಳಿ, ಕ್ರಿಸ್ಮಸ್‌ ಈ ರೀತಿಯ ಹಬ್ಬಗಳ ದಿನಗಳಂದು ಅಥವಾ ಹೊಸ ವರ್ಷಗಳೆಂದು ಇದರ ಬೆಲೆಯೂ ತುಂಬಾ ಜಾಸ್ತಿಯೇ ಆಗಿರುತ್ತದೆ. ಇವುಗಳ ಒಟ್ಟು ಆದಾಯ ಊಹಿಸಲು ಆಗದಷ್ಟಿದೆ. ಇವುಗಳ ಲಾಭದ ಮೌಲ್ಯವನ್ನು ಸಹ ಅಷ್ಟೇ ಗೌಪ್ಯವಾಗಿ ಇಡಲಾಗುತ್ತದೆ.

ಇದೇನೂ ಗೊತ್ತಿಲ್ಲದ ನಾವು ಇಂಟರ್ನೆಟ್‌ನ ಮಾಯಾ ಲೋಕದಲ್ಲಿ ವಿಹರಿಸುತ್ತಾ ನಮ್ಮ ವೈಯಕ್ತಿಕ ದತ್ತಾಂಶಗಳನ್ನು ಕಳೆದುಕೊಳ್ಳುತ್ತೇವೆ. ನಮ್ಮ ಇಮೇಲ್‌ ಐಡಿ, ಹುಟ್ಟುಹಬ್ಬ, ವಯಸ್ಸು, ವ್ಯಾಸಂಗ ಮಾಡಿದ ವಿದ್ಯಾಲಯಗಳ ಹೆಸರು ಮತ್ತು ನಮ್ಮ ಸ್ನೇಹಿತರ ಪಟ್ಟಿ, ನಮ್ಮ ಟೈಮ್‌ಲೈನ್‌ನಲ್ಲಿರುವ ದಿನನಿತ್ಯದ ಚಟುವಟಿಕೆಗಳನ್ನೆಲ್ಲಾ ದಾಖಲಿರಿಸುತ್ತೇವೆ. ನಮ್ಮ ಈ ವೈಯಕ್ತಿಕ ಮಾಹಿತಿಯನ್ನು "ಕೇಂಬ್ರಿಜ್‌  ಅನಾಲಿಟಿಕಾ'ದಂಥ ಕಂಪನಿಗಳು ದುರುಪಯೋಗಪಡಿಸಿಕೊಳ್ಳಬಹುದು. ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಭಾರತೀಯರ ಪ್ರೊಫೈಲ್‌ಗ‌ಳು ಈ ಕಂಪನಿಯ ಅಕ್ರಮ ಕೆಲಸಗಳಿಗೆ ಉಪಯೋಗಿಸಲ್ಪಟ್ಟಿವೆ. ಏನೇ ಆಗಲಿ ನಾವು ಫೇಸ್‌ಬುಕ್‌ನಲ್ಲಿ ಯಾವುದೇ ಆ್ಯಪ್‌ಗ್ಳನ್ನು ಬಳಸುವ ಮುಂಚೆ ಇವುಗಳಿಗೆ ಎಷ್ಟರ ಮಟ್ಟಿಗೆ ನಾವು ಆಕ್ಸಸ್‌ ನೀಡಬೇಕು ಎನ್ನುವುದರ ಬಗ್ಗೆ ಯೋಚಿಸಬೇಕಾಗುತ್ತದೆ. ಫೇಸ್‌ಬುಕ್‌ನಲ್ಲಿರುವ ಪ್ರೈವೆಸಿ ಸೆಟ್ಟಿಂಗ್‌ನಲ್ಲಿ ನಾವು ಇವುಗಳೆಲ್ಲವನ್ನೂ ನಿಯಂತ್ರಿಸಬಹುದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ದತ್ತಾಂಶಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಮತ್ತು ಆಯ್ಕೆ ನಮ್ಮ ಕೈಯಲ್ಲೇ ಇದೆ. 

ಪ್ಲಸ್‌ ಅಂಡ್‌ ಮೈನಸ್‌...
ಮೊಬೈಲ್‌ ಆ್ಯಪ್‌ನ ಮೇಲೆ ಒಮ್ಮೆ ಟಚ್‌ ಮಾಡುವುದರಿಂದ ಆಗುವ ಪಾಸಿಟಿವ್‌ ಮತ್ತು ನೆಗೆಟಿವ್‌ ಬೆಳವಣಿಗೆಗಳು ಏನೇನೆಂದರೆ- ನಾವು ಭೇಟಿ ಕೊಟ್ಟಂಥ ರೆಸ್ಟೋರೆಂಟ್‌ಗಳು, ಹೋಟೆಲ್‌ಗ‌ಳು, ಜೊತೆಗೆ ಆ ಸ್ಥಳದ ಜಿಪಿಎಸ್‌ ಲೊಕೇಶನ್‌.. ಹೀಗೆ ಹಲವಾರು ಮಾಹಿತಿಗಳನ್ನು ನಾವು ನಮಗೇ ಗೊತ್ತಿಲ್ಲದಂತೆ ನೀಡಿ ಬಿಡುತ್ತೇವೆ. ಇದನ್ನು ಡಾಟಾ ಮೈನಿಂಗ್‌ ಮಾಡುವ ಕಂಪನಿಗಳು ನಿಮಗೆ ಇಷ್ಟವಾಗಬಲ್ಲ ರೆಸ್ಟೋರೆಂಟ್‌ಗಳು ಯಾವುವು ಎಂದು ಕಂಡುಹಿಡಿಯುತ್ತವೆ. ನೀವು ಸಸ್ಯಾಹಾರಿಯೋ? ಮಾಂಸಾಹಾರಿಯೋ? ಎಂಬುದನ್ನು ಅಂದಾಜಿಸುತ್ತವೆ ಮತ್ತು ಆ ಸ್ಥಳದಲ್ಲಿ ಹತ್ತಿರ ಇರುವ ರೆಸ್ಟೋರೆಂಟ್‌ಗಳ ಮಾಹಿತಿಗಳನ್ನು ನಿಮಗೆ ಜಾಹೀರಾತುಗಳಿಗಾಗಿ ನೀಡಲು ಪ್ರಾರಂಭಿಸುತ್ತವೆ. ಯಾವುದಾದರೂ ಒಂದು ಇಂಟರ್‌ನ್ಯಾಷನಲ್‌ ಹೋಟೆಲ್‌ ಆ ಸ್ಥಳದಲ್ಲಿ ಹೊಸದಾಗಿ ತೆರೆಯುತ್ತಿದೆ ಎಂದಾದರೆ ಅಂಥ ಹೋಟೆಲ್‌ಗ‌ಳು ಈ ಮಾಹಿತಿಗಳನ್ನು ಲಕ್ಷಾಂತರ ದುಡ್ಡಿಗೆ ಕೊಂಡುಕೊಳ್ಳಲೂಬಹುದು. ಆ ಮೂಲಕ ಕಾಲ್‌ಸೆಂಟರ್‌, ಇಮೇಲ್‌ ಮೆಸೇಜ್‌ಗಳ ಮೂಲಕ ನಿಮ್ಮನ್ನು ತಲುಪಿ ಅವರು ತಮ್ಮ ವ್ಯಾಪಾರ ವೃದ್ಧಿಸಿಕೊಳ್ಳಲು ಇದು ಸಹಕಾರಿಯಾಗುತ್ತದೆ! 

ಇನ್ನು ದುರ್ಬಳಕೆ ಆಗುವುದಕ್ಕೆ ಒಂದು ಉದಾಹರಣೆ ನೀಡಬೇಕೆಂದರೆ, ಇಂಥ ಡಾಟಾಗಳನ್ನು ಪಡೆದುಕೊಂಡ ಡಾಟಾ ಮೈನಿಂಗ್‌ ಕಂಪನಿಗಳು, ನೀವು ಬರೆಯುವ ಪೋಸ್ಟ್ಗಳು, ಶೇರ್‌ ಮಾಡುವ ಪೋಸ್ಟ್ಗಳು ಮತ್ತು ಎಂಥ ವ್ಯಕ್ತಿಗಳನ್ನು ನೀವು ಫಾಲೋ ಮಾಡುತ್ತಿದ್ದೀರಿ ಎಂಬ ಮಾಹಿತಿಗಳ ಮೇಲೆ ರಚನಾತ್ಮಕ ತಂತ್ರಗಳನ್ನು ರೂಪಿಸಿ ನೀವು ಯಾವ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುತ್ತೀರಿ ಎಂಬ ಮಾಹಿತಿಗಳನ್ನೂ ಸಹ ರಾಜಕೀಯ ಪಕ್ಷಗಳಿಗೆ ಈ ಮಾಹಿತಿಗಳನ್ನು ಸೋರಿಕೆ ಮಾಡುತ್ತವೆ. ಇತ್ತೀಚೆಗೆ ಕ್ಯಾಂಬ್ರಿಜ್‌ ಅನಾಲಿಟಿಕಾ ಕಂಪನಿ ಮಾಡಿರುವುದು ಇದನ್ನೇ. 

- ಪ್ರವೀಣ ದಾನಗೌಡ


Trending videos

Back to Top